Asianet Suvarna News Asianet Suvarna News

ಕಲ್ಯಾಣ ನಾಡಿನಲ್ಲಿ ಕಣ್ಮನ ಸೆಳೆಯುತಿದೆ ಬೃಹತ್ ರಾಷ್ಟ್ರ ಧ್ವಜ, ರೈತನ ರಾಷ್ಟ್ರಭಕ್ತಿಗೆ ಸಾರ್ವಜನಿಕರ ಸಲಾಂ..!

  • ಕಲ್ಯಾಣ ನಾಡಿನಲ್ಲಿ ಕಣ್ಮನ ಸೆಳೆಯುತಿದೆ ಬೃಹತ್ ರಾಷ್ಟ್ರ ಧ್ವಜ, ರೈತನ ರಾಷ್ಟ್ರಭಕ್ತಿಗೆ ಸಾರ್ವಜನಿಕರ ಸಲಾಂ.!.
  • ಬೃಹತ್ ಧ್ವಜ ನೋಡಲು ಬರುತ್ತಿದೆ ಜನಸಾಗರ!
A huge national flag is attracting attention   Kalyan karnataka kalaburagi rav
Author
Bangalore, First Published Aug 13, 2022, 12:53 PM IST

ವರದಿ :- ಶರಣಯ್ಯ ಹಿರೇಮಠ ಏಷ್ಯಾನೆಟ್ ಸುವರ್ಣ ನ್ಯೂಸ್ ಕಲಬುರಗಿ

ಕಲಬುರಗಿ ಆ.13:- ಬಿಸಿಲೂರು ಕಲಬುರಗಿಯಲ್ಲಿ ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಅಂಗವಾಗಿ ಬರೋಬ್ಬರಿ 3750 ಚದರ ಅಡಿ ವಿಸ್ತಿರ್ಣದ ಬೃಹತ್ ರಾಷ್ಟ್ರಧ್ವಜ ಪ್ರತಿಷ್ಠಾಪಿಸಲಾಗಿದೆ. ಇದು ರೈತರೊಬ್ಬರು ತಮ್ಮ ಸ್ವಂತ ಖರ್ಚಿನಿಂದ ರೆಡಿ ಮಾಡಿಸಿ ತಮ್ಮ ಹೊಲದಲ್ಲಿಯೇ ಪ್ರತಿಷ್ಠಾಪಿಸಿದ್ದು ವಿಶೇಷ.  ಕಲಬುರಗಿ(Kalaburagi ಜಿಲ್ಲೆಯ ಕಮಲಾಪೂರ(Kamalaapur) ಪಟ್ಟಣದ ಹೊರವಲಯದಲ್ಲಿ ಬೀದರ - ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ(Bidar-Shrirangapattan National Highway)ಗೆ ಹೊಂದಿಕೊಂಡಂತಿರುವ ಹೊಲದಲ್ಲಿ ರೈತರೊಬ್ಬರು ಈ ವಿಶಾಲ ರಾಷ್ಟ್ರಧ್ವಜ(National Flag) ಪ್ರತಿಷ್ಠಾಪಿಸಿದ್ದಾರೆ. ಖಾದಿಯಿಂದ ತಯಾರಿಸಲಾದ ದೇಶದ ಎರಡನೇ ದೊಡ್ಡ ರಾಷ್ಟ್ರ ಧ್ವಜ ಎನ್ನುವ ಹಿರಿಮೆ ಇದಾಗಿದೆ ಎನ್ನಲಾಗಿದೆ. 50*75 ಸುತ್ತಳತೆಯ ರಾಷ್ಟ್ರ ಧ್ವಜ ಒಟ್ಟು 3750 ಚದರ ಅಡಿ ವಿಸ್ತಿರ್ಣ ಹೊಂದಿದೆ. ಒಟ್ಟು 144 ಕೆಜಿ ಭಾರ ಇದಾಗಿದೆ. 

ಚಿಕ್ಕಮಗಳೂರು: ಮಾಜಿ ಯೋಧನ ಜತೆ ಮಲೆನಾಡಿಗರ ತಿರಂಗಾ ಸಂಭ್ರಮ..!

ತಯಾರಾಗಿದ್ದು ಎಲ್ಲಿ?
ಇಂತಹ ವಿಶಾಲ ಆಕಾರದ ಖಾದಿ ರಾಷ್ಟ್ರ ಧ್ವಜ ತಯಾರಾಗಿದ್ದು ಧಾರವಾಡ(Dharwad) ಜಿಲ್ಲೆಯ ಗರಗ ಕ್ಷೇತ್ರೀಯ ಸೇವಾ ಸಂಘದಲ್ಲಿ. ಈ ಸಂಘದ ಮುನ್ನೂರಕ್ಕೂ ಹೆಚ್ಚು ಮಹಿಳೆಯರು 45 ದಿನಗಳ ಕಾಲ ಶ್ರಮವಹಿಸಿ ಈ ರಾಷ್ಟ್ರ ಧ್ವಜ ತಯಾರು ಮಾಡಿದ್ದಾರೆ.‌ 

ಪ್ರತಿಷ್ಠಾಪಿಸಿದ್ದು ಯಾರು? ಎಲ್ಲಿ?:
ಇಂತಹ ಅಪರೂಪದ ರಾಷ್ಟ್ರಧ್ವಜ ಪ್ರತಿಷ್ಠಾಪಿಸಿದ್ದು ಕಮಲಾಪೂರದ ರೈತ ರೇವಪ್ಪ ಬೊಮ್ಮಣ್(Revappa Bommanna) ಎನ್ನುವ ರೈತ. ರಾಷ್ಟ್ರಪ್ರೇಮದ ತುಡಿತ ಹೊಂದಿರುವ ರೇವಪ್ಪ ಬೊಮ್ಮಣ್ , ಬೀದರ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ತಮ್ಮ ಸ್ವಂತ ಜಮೀನಲ್ಲಿ ಮೆಟಲ್ ಫ್ರೇಮ್ ಮಾಡಿಸಿ ಈ ರಾಷ್ಟ್ರಧ್ವಜವನ್ನು ಫಿಕ್ಸ ಮಾಡಿಸಿದ್ದಾರೆ. ಕಮಲಾಪೂರ ದಿಂದ ತುಸು ದೂರದಲ್ಲಿರುವ ಕುದುರೆಮುಖ ಬೆಟ್ಟದ ಬಳಿಯ ಕಣ್ಮನ ಸೆಳೆಯುವ ಆಕರ್ಷಕ ಸ್ಥಳದಲ್ಲಿ ರಾಷ್ಟ್ರಧ್ವಜ ಪ್ರತಿಷ್ಠಾಪಿಸಲಾಗಿದೆ.

 

ಹರಿದು ಬರುತ್ತಿದೆ ಜನಸಾಗರ:
ಈ ವಿಶಾಲ ರಾಷ್ಟ್ರ ಧ್ವಜ ವೀಕ್ಷಣೆಗೆ ಜನಸಾಗರವೇ ಹರಿದು ಬರುತ್ತಿದೆ. ಬೀದರ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹೊಲದಲ್ಲಿ ಈ ವಿಶಾಲ ರಾಷ್ಟ್ರಧ್ವಜ ಸ್ಥಾಪಿಸಲಾಗಿದ್ದು, ವಾಹನಗಳಲ್ಲಿ ಸಂಚರಿಸುವವರು ಸರಿ ಸುಮಾರು ಒಂದು ಕಿಲೋಮೀಟರ್ ವರೆಗೆ ಪ್ರಯಾಣಿಸುತ್ತಲೇ ಇದನ್ನು ಕಣ್ ತುಂಬಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಸ್ವಂತ ವಾಹನ ಹೊಂದಿರುವವರು ವಾಹನ ನಿಲ್ಲಿಸಿ ಈ ಸ್ಥಳಕ್ಕೆ ಆಗಮಿಸಿ ಇದನ್ನು ಕಣ್ತುಂಬಿಕೊಳ್ಳುವುದು ಅಷ್ಟೇ ಅಲ್ಲದೆ, ಫೋಟೋ ಸೆಲ್ಫಿ ಕ್ಲಿಕಿಸಿಕೊಂಡು ಆನಂದ ಪಡುತ್ತಿದ್ದಾರೆ. ಈ ರಾಷ್ಟ್ರ ಧ್ವಜ ವೀಕ್ಷಣೆಗಾಗಿಯೇ ವಿವಿಧ ಸರ್ಕಾರಿ ಶಾಲೆಯ ಶಿಕ್ಷಕರು, ತಮ್ಮ ಶಾಲೆಯ ವಿದ್ಯಾರ್ಥಿ ಸಮೂಹವನ್ನು ಈ ಸ್ಥಳಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಹಾಗಾಗಿ ನಿತ್ಯ ಈ ಸ್ಥಳದಲ್ಲಿ ಜನ ಜಾತ್ರೆಯ ಕಂಡುಬರುತ್ತದೆ. 

ಬಿಜಪಿಗೆ ರಾಷ್ಟ್ರಧ್ವಜದ ಬಗ್ಗೆ ಗೌರವವಿಲ್ಲ, ಹರ್ ಘರ್ ತಿರಂಗಾ ದೊಡ್ಡ ನಾಟಕ: ಸಿದ್ದರಾಮಯ್ಯ

ರಾಷ್ಟ್ರ ಪ್ರೇಮದ ಕಿಚ್ಚೆಬ್ಬಿಸುವ ಧ್ವಜ:

3750 ಚದರ ಅಡಿಗಳಷ್ಟು ವಿಸ್ತೀರ್ಣದ ಈ ಬೃಹತ್ ಖಾದಿ ರಾಷ್ಟ್ರಧ್ವಜ, ನೋಡುವವರ ಎದೆಯಲ್ಲಿ ರಾಷ್ಟ್ರ ಪ್ರೇಮ ಇಮ್ಮಡಿಗೊಳಿಸುವಂತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ಸಂದರ್ಭದಲ್ಲಿ ಇಂತಹ ವಿಶಾಲ ರಾಷ್ಟ್ರಧ್ವಜ ಸ್ಥಾಪಿಸಿರುವುದು ಕಲ್ಬುರ್ಗಿ ಭಾಗದ ಜನರ ಹೆಮ್ಮೆ ಪಡುವಂತಾಗಿದೆ. 

ರೈತ ರೇವಪ್ಪ ಬೊಮ್ಮಣ್ ಹಿನ್ನಲೆ:

ಇಂತಹ ವಿಶಾಲ ರಾಷ್ಟ್ರಧ್ವಜ ಸ್ಥಾಪಿಸಿರುವ ರೈತ ರೇವಪ್ಪ ಬೊಮ್ಮಣ್ ಮೂಲತಃ ಸರ್ಕಾರಿ ನೌಕರರು, ನಿವೃತ್ತಿಯ ನಂತರ ಕಮಲಾಪುರದಲ್ಲಿ ಕೃಷಿಯನ್ನೇ ಕಾಯಕವನ್ನಾಗಿ ಮಾಡಿಕೊಂಡು ಭೂತಾಯಿಯ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮಕ್ಕಳು ಅಳಿಯಂದಿರು ಬೇರೆ ಬೇರೆ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಸ್ವಾವಲಂಬಿಯಾಗಿ ಜೀವನ ನಡೆಸುತ್ತಿದ್ದಾರೆ. ರಾಷ್ಟ್ರಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎನ್ನುವ ತುಡಿತವುಳ್ಳ ರೇವಪ್ಪ , ಈ ಬಾರಿ ಸ್ವಾತಂತ್ರದ ಅಮೃತ ಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ, ವಿಶಾಲವಾದ ರಾಷ್ಟ್ರ ಧ್ವಜ ಸ್ಥಾಪಿಸುವ ನಿರ್ಣಯ ಕೈಗೊಂಡು ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ. 

ಹಣ ಎಷ್ಟು ಖರ್ಚಾಯ್ತು ಎನ್ನಬೇಡಿ.. ದೇಶಪ್ರೇಮಕ್ಕೆ ಬೆಲೆ ಕಟ್ಟಲಾಗದು:

ಈ ರಾಷ್ಟ್ರ ಧ್ವಜ ತಯಾರಿಸುವುದಕ್ಕೋಸ್ಕರ ಮತ್ತು ಅದನ್ನು ಇಲ್ಲಿ ಪ್ರತಿಷ್ಠಾಪಿಸುವುದಕ್ಕೋಸ್ಕರ ಇವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಇದಕ್ಕೆ ಒಟ್ಟು ತಗಲಿರುವ ಖರ್ಚು ಎಷ್ಟು ಎಂದು ಯಾರಾದ್ರೂ ಕೇಳಿದರೆ, ದಯವಿಟ್ಟು ಈ ಪ್ರಶ್ನೆ ಕೇಳಬೇಡಿ. ಇದು ನನಗಿರುವ ರಾಷ್ಟ್ರೀಯ ಪ್ರೇಮದ ಪ್ರತಿಕ. ರಾಷ್ಟ್ರ ಪ್ರೇಮಕ್ಕೆ ಬೆಲೆ ಕಟ್ಟಲಾಗದು. ಹಾಗಾಗಿ ಇದರ ಖರ್ಚು ವೆಚ್ಚದ ವಿವರ ಹೇಳಲಾರೆ. ಎಷ್ಟೇ ಖರ್ಚು ಮಾಡಿದ್ದರು ನನ್ನ ಸ್ವಂತ ದುಡ್ಡು ಖರ್ಚು ಮಾಡಿದ್ದೇನೆ. ಇದರಿಂದ ನನಗೆ ಆತ್ಮ ಆತ್ಮ ತೃಪ್ತಿ ಸಿಕ್ಕಿದೆ. ಜನ ಇದನ್ನು ಕಂಡು ಆನಂದಿಸುತ್ತಿದ್ದಾರೆ. ಸಂಭ್ರಮಿಸುತ್ತಿದ್ದಾರೆ. ಇಷ್ಟು ಸಾಕು ನನಗೆ ಎನ್ನುತ್ತಾರೆ ರೈತ ರೇವಪ್ಪ. 

ಸೈನಿಕರೇ ನನಗೆ ಸ್ಪೂರ್ತಿ:

ಎರಡು ವರ್ಷಗಳ ಹಿಂದೆ. ಮಹಾತ್ಮ ಗಾಂಧೀಜಿ ಜನ್ಮದಿನದ ಅಂಗವಾಗಿ, ಭಾರತೀಯ ಸೇನಾ ಯೋಧರು ಲೇಹನಲ್ಲಿ ಇದಕ್ಕಿಂತಲೂ ವಿಶಾಲವಾದ ಖಾದಿಯ ರಾಷ್ಟ್ರಧ್ವಜ ಇದೇ ರೀತಿ ಪ್ರತಿಷ್ಠಾಪಿಸಿದ್ದರು. ಇದನ್ನು ಪತ್ರಿಕೆಗಳಲ್ಲಿ ಓದಿದ್ದ ರೈತ ರೇವಪ್ಪಗೆ, ತಾನು ಈ ರೀತಿ ಮಾಡಬೇಕು ಎನ್ನುವ ಹಂಬಲ ಆಗಿನಿಂದಲೂ ಮನದಲ್ಲಿತ್ತು. ಆದರೆ ಇದನ್ನ ಎಲ್ಲಿ ತಯಾರಿಸಬೇಕು ? ಪ್ರತಿಷ್ಠಾಪಿಸಲು ಇರುವ ನಿಯಮಗಳೇನು ಎನ್ನುವ ಬಗ್ಗೆ ಮಾಹಿತಿ ಇರಲಿಲ್ಲ. ನಂತರ ತಮ್ಮ ಮಕ್ಕಳು ಮತ್ತು ಅಳಿಯಂದಿರ ಸಹಾಯ ಸಹಕಾರದೊಂದಿಗೆ ತಮ್ಮ ಕನಸನ್ನ ನನಸು ಮಾಡಿಕೊಂಡಿದ್ದಾರೆ ರೈತ ರೇವಪ್ಪ ಬೊಮ್ಮಣ್. ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಷ್ಟ್ರಾಭಿಮಾನ ಪುಟಿದೇಳುವಂತೆ ಮಾಡಿರುವ ರೈತ ರೇವಪ್ಪ ಬೊಮ್ಮಣ್ಣ ಅವರಿಗೆ ನಮ್ಮದು ಒಂದು ಸಲಾಂ..

Follow Us:
Download App:
  • android
  • ios