Vijayapura: ಆಜಾದಿ ಕಾ ಅಮೃತ ಮಹೋತ್ಸವ: ಡಿಸಿ ಪೂರ್ವಭಾವಿ ಸಭೆ!

• ರಾಷ್ಟ್ರಮಟ್ಟದ 75 ನಗರಗಳ ಪೈಕಿ ವಿಜಯಪುರ ಜಿಲ್ಲೆ ಆಯ್ಕೆ..!
• ಬೀದಿ ಬದಿ ವ್ಯಾಪಾರಿಗಳ ಯಶೋಗಾಥೆಯ ಸ್ಮರಣೆ..!
• ಜಿಲ್ಲಾ ರಂಗಮಂದಿರದಲ್ಲಿ ಸತತ 4 ಗಂಟೆಗಳವರೆಗೆ ಕಾರ್ಯಕ್ರಮಕ್ಕೆ ನಿರ್ಧಾರ..!

dc preliminary meeting for azadi ka amrit mahotsav in vijayapura gvd

ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಜು.12): 75ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ ಸ್ವಾ-ನಿಧಿ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಸಂಬಂಧಿಸಿದಂತೆ ಚರ್ಚಿಸಲು ಪೂರ್ವಭಾವಿ ಸಿದ್ಧತಾ ಸಭೆಯು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರ ಅಧ್ಯಕ್ಷತೆಯಲ್ಲಿ ಜುಲೈ 11ರಂದು ನಡೆಯಿತು. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, ವಿಜಯಪುರ ಮಹಾನಗರ ಪಾಲಿಕೆಯಿಂದ ಅನುಷ್ಠಾನಗೊಳಿಸುತ್ತಿರುವ ಬೀದಿಬದಿ ವ್ಯಾಪಾರಿಗಳಿಗೆ ಬೆಂಬಲ ಉಪಘಟಕದಡಿ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ ಸ್ವಾ-ನಿಧಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬೀದಿ ವ್ಯಾಪಾರಸ್ಥರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು.

ಬೀದಿ ನಾಟಕ, ಆರೋಗ್ಯ ತಪಾಸಣೆ, ವಿವಿಧ ಸ್ಪರ್ಧೆಗಳ ಆಯೋಜನೆಗೆ ನಿರ್ಧಾರ: ಈ ಮಹೋತ್ಸವದಲ್ಲಿ ಬೀದಿ ಬದಿ ವ್ಯಾಪಾರಿಗಳ ಯಶೋಗಾಥೆಯ ಬೀದಿ ನಾಟಕ, ವಿಡಿಯೋ ಕಿರು ಚಿತ್ರ, ಉಚಿತ ಆರೋಗ್ಯ ತಪಾಸಣೆ, ರಂಗೋಲಿ ಸ್ಪರ್ಧೆ, ಡಿಜಿಟಲ್ ವಹಿವಾಟಿನ ಉಪಯೋಗಗಳ ತರಬೇತಿ, ಆಹಾರ ಉತ್ಪನ್ನಗಳ ಹಾಗೂ ಇತರೆ ವಸ್ತಗಳ ಪ್ರದರ್ಶನ ಮತ್ತು ಮಾರಾಟ ನಲ್ಮ ಯೋಜನೆಯ ಫಲಾನುಭವಿಗಳಿಗೆ ಸಾಲ ಮೇಳ ಹಾಗೂ ಮನರಂಜನೆ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಜುಲೈ 21ರಂದು ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಆಲಮಟ್ಟಿ ಡ್ಯಾಂನಿಂದ 75,000 ಕ್ಯುಸೆಕ್‌ ನೀರು ಬಿಡುಗಡೆ: ನದಿಪಾತ್ರದ ಜನರಲ್ಲಿ ಮುಂಜಾಗೃತೆಗೆ ಸೂಚನೆ

ಪೂರ್ವಭಾವಿ ಸಭೆ ಉದ್ದೇಶಿಸಿ ಡಿಸಿ ಮಾತು: ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಭಾರತ ದೇಶವು ತನ್ನ ಸ್ವಾತಂತ್ರ‍್ಯದ 75ನೇ ವರ್ಷಾಚರಣೆಯನ್ನು ಆಚರಿಸುತ್ತಿದೆ. ಈ ಮಹೋನ್ನತ ಹಾಗೂ ಗೌರವಯುತ ಕಾಲದಲ್ಲಿ ದೇಶದ ಜನರು ನೀಡಿದ ಸಾಂಸ್ಕೃತಿಕ ಕೊಡುಗೆಗಳು ಹಾಗೂ ಸಾಧನೆಗಳ ವೈಭವದ ಸ್ಮರಣಾರ್ಥವಾಗಿ ಆಜಾದಿ ಕಾ ಅಮೃತ ಮಹೋತ್ಸವವನ್ನು ವಿವಿಧ ರೀತಿಗಳಲ್ಲಿ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದ ಅಂಗವಾಗಿ ಸ್ವಾ-ನಿಧಿ ಮಹೋತ್ಸವ ಆಚರಿಸಲಾಗುತ್ತಿದೆ. ಇಂತಹ ಮಹತ್ವದ ಕಾರ್ಯಕ್ರಮಕ್ಕೆ ರಾಷ್ಟ್ರಮಟ್ಟದ 75 ನಗರಗಳ ಹಾಗೂ ಕರ್ನಾಟಕ ರಾಜ್ಯ ಮಟ್ಟದ 3 ನಗರಗಳ ಪೈಕಿ ವಿಜಯಪುರ ನಗರ ಸಹ ಆಯ್ಕೆಯಾಗಿದ್ದು ವಿಜಯಪುರ ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

ಬೀದಿ ವ್ಯಾಪಾರಿಗಳ ಕೊಡುಗೆ ಅಪಾರ: ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಪುರಾತನ ಕಾಲದಿಂದಲೂ ಬೀದಿ ಬದಿ ವ್ಯಾಪಾರಿಗಳ ಕೊಡುಗೆಯು ಅವಿಸ್ಮರಣೀಯವಾಗಿದೆ, ದಿನದ 14 ಗಂಟೆಗಳ ಕಾಲ ಚಳಿ, ಮಳೆ, ಗಾಳಿ, ಬಿಸಿಲು ಲೆಕ್ಕಿಸದೆ ಹಲವಾರು ಜನ ಬೀದಿ ಬದಿಯ ವ್ಯಾಪಾರಸ್ಥರು ವಹಿವಾಟು ನಡೆಸುತ್ತಾರೆ. ಈಗ ಭಾರತದ ನಗರ ಪ್ರದೇಶಗಳಲ್ಲಿ ಅಂದಾಜು 60 ಲಕ್ಷ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ದೇಶದ ಆರ್ಥಿಕ ವಹಿವಾಟಿನ ಒಟ್ಟು ಶೇ.14 ಅವರ ಕೊಡುಗೆಯಾಗಿದೆ. ಅದರ ಪ್ರಯುಕ್ತ ಬೀದಿ ವ್ಯಾಪಾರಸ್ಥರು ನೀಡಿರುವ ಸಹಯೋಗ ಮತ್ತು ಅವಿಸ್ಮರಣೀಯ ಕೊಡುಗೆಯನ್ನು ಸ್ಮರಿಸಲು ಹಾಗೂ ಅವರನ್ನು ಗೌರವಿಸುವ ಉದ್ದೇಶದಿಂದ ಭಾರತ ಘನ ಸರ್ಕಾರ ಹಾಗೂ ಕರ್ನಾಟಕ ಘನ ಸರ್ಕಾರಗಳು ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಬೀದಿ ಬದಿ ವ್ಯಾಪಾರಿಗಳು ಮತ್ತು ಅವರ ಕುಟುಂಬದ ಸದಸ್ಯರುಗಳಿಗೆ ಈ ಸ್ವಾ-ನಿಧಿ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.

ಸಾಧನೆ ಮಾಡಿದ ವಿದ್ಯಾರ್ಥಿಗಳ ಅಭಿನಂದನೆಗೆ ಕ್ರಮ: ಈ ಕಾರ್ಯಕ್ರಮದ ಮೂಲಕ ನಿಯಮಿತವಾಗಿ ಸಾಲ ಮರು ಪಾವತಿ ಡಿಜಿಟಲ್ ವಹಿವಾಟು ಮತ್ತು ವ್ಯವಹಾರದ ಕುಷಾಗ್ರಮತಿ ಪ್ರದರ್ಶಿಸುವ ವ್ಯವಸ್ಥೆಯಾಗಬೇಕು. ಪಿಎಮ್ ಸ್ವಾ-ನಿಧಿ ಯೋಜನೆಯ ಫಲಾನುಭವಿಗಳನ್ನು ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ ಗೌರವಿಸಬೇಕು. ಅವರ ಮಕ್ಕಳು ಶೇ.85 ಅಂಕಗಳೊಂದಿಗೆ 10ನೇ ತರಗತಿಯಲ್ಲಿ ಹಾಗೂ ಶೇ.80 ಅಂಕಗಳೊಂದಿಗೆ ಪಿಯುಸಿ ಎರಡನೇ ವರ್ಷದಲ್ಲಿ ತೇರ್ಗಡೆ ಹೊಂದಿದ್ದಲ್ಲಿ ವಿದ್ಯಾರ್ಥಿಗಳನ್ನು ಅಭಿನಂಧಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

Vijayapura: ಶಾಲಾ ಪಠ್ಯದಲ್ಲಿ ಇಂಚಗೇರಿ ಮಠದ ಇತಿಹಾಸ ಸೇರಿಸಲು ಒತ್ತಾಯ!

ಸಭೆಯಲ್ಲಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವೆಂಕಣ್ಣ ಹೊಸಮನಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮ ಅರಸಿದ್ಧಿ, ಮಹಾನಗರ ಪಾಲಿಕೆಯ ಆಯುಕ್ತರಾದ ವಿಜಯಕುಮಾರ ಮೆಕ್ಕಳಕೆ, ಉಪ ಆಯುಕ್ತರಾದ ಮಹಾವೀರ ಬೋರಣ್ಣನವರ, ಯೋಜನಾ ನಿರ್ದೇಶಕರಾದ ರಾಜಶೇಖರ ಡಂಬಳ, ಜಿಲ್ಲಾ ಕೌಶಲ ಮಿಷನ್ ಅಧಿಕಾರಿ ಗುರುಪಾದಯ್ಯ ಹಿರೇಮಠ, ಸಂಘಟನಾಧಿಕಾರಿಗಳಾದ ಭಾರತಿ ಕೌಜಲಗಿ, ಸಾವಿತ್ರಿ ತಿಪ್ಪನ್ನವರ, ಲೋಕೋಪಯೋಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಗ್ನಿಶಾಮಕ ದಳ, ನೆಹರು ಯುವ ಕೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ವಿವಿಧ ಬ್ಯಾಂಕಿನ ಪ್ರಾದೇಶಿಕ ಕಚೇರಿಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಇನ್ನೀತರ ಗಣ್ಯರು ಸಭೆಯಲ್ಲಿ ಹಾಜರಿದ್ದು ಹಲವಾರು ಸಲಹೆಗಳನ್ನು ನೀಡಿದರು.

Latest Videos
Follow Us:
Download App:
  • android
  • ios