Gadag: ಗಾಂಧಿ ತಾತನಿಗೆ ಊಟ ಉಪಚಾರ ಮಾಡಿದ್ದ ಪೋರಿ ಈಗ ಶತಾಯುಷಿ ಅಜ್ಜಿ
ಬೆಟಗೇರಿಯ ಟರ್ನಲ್ ಬಡಾವಣೆ ನಿವಾಸಿ, ಶತಾಯುಷಿ ಶಾಂತಾಬಾಯಿ ವೆರ್ಣೇಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಸಲ್ಲಿಸಿದ್ದ ಅಳಿಲು ಸೇವೆಯನ್ನ ಗುರುತಿಸಿ ಸನ್ಮಾನಿಸಲಾಗಿದೆ.
ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ
ಗದಗ (ಆ.15): ಬೆಟಗೇರಿಯ ಟರ್ನಲ್ ಬಡಾವಣೆ ನಿವಾಸಿ, ಶತಾಯುಷಿ ಶಾಂತಾಬಾಯಿ ವೆರ್ಣೇಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಸಲ್ಲಿಸಿದ್ದ ಅಳಿಲು ಸೇವೆಯನ್ನ ಗುರುತಿಸಿ ಸನ್ಮಾನಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಗ್ರಗೋಣ ಗ್ರಾಮಕ್ಕೆ ಭೇಟಿ ನೀಡಿದ್ದ ಗಾಂಧಿಜಿಯವರಿಗೆ ಶಾಂತಾಬಾಯಿ ಊಟ ನೀಡಿ ಉಪಚಾರ ಮಾಡಿದ್ರಂತೆ. ಅಗ್ರಗೋಣ ಗ್ರಾಮದವರೇ ಆಗಿದ್ದ ಶಾಂತಾಬಾಯಿ ಸದ್ಯ ಬೆಟಗೇರಿಯಲ್ಲಿ ಮಗ ಉದಯ್ ವೆರ್ಣೇಕರ್ ಅವರೊಂದಿಗೆ ವಾಸವಿದ್ದಾರೆ.
1934/42ರಲ್ಲಿ ಗಾಂಧಿಜಿ ಕಾರವಾರಕ್ಕೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಅಗ್ರಗೋಣ, ಪೂಜೆಗೆರೆ ಗ್ರಾಮಗಳಿಗೆ ಗಾಂಧಿ ಭೇಟಿ ನೀಡಿದ್ರು ಅಂತಾ ಶತಾಯುಷಿ ಶಾಂತಬಾಯಿ ಹೇಳ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಶಾಂತಾಬಾಯಿ ಕುಟುಂಬ ಸಕ್ರಿಯವಾಗಿ ಧುಮುಕಿತ್ತು. ಹೀಗಾಗಿ ಶಾಂತಮ್ಮ ಅವರ ಮನೆಯಲ್ಲೇ ಗಾಂಧಿಜಿ ಇದ್ದ ಉದಾಹರಣೆಗಳೂ ಇದೆ ಅಂತಾ ಅವ್ರು ನೆನಪಿಸಿಕೊಳ್ತಾರೆ.
ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ನರಗುಂದ ರೈತರಿಗೆ ಬಂಪರ್ ಗಿಫ್ಟ್!
ಗಾಂಧಿಜಿಯವರಿಗೆ ನೀರು ಕಾಯಿಸಿ ಕೊಡೋದು, ಊಟ ಕೊಡೋದು, ಆಗ 12 ರಿಂದ 15 ವರ್ಷದ ಪೋರಿಯಾಗಿದ್ದ ಶಾಂತಾ ಬಾಯಿಯವರದ್ದಾಗಿತ್ತಂತೆ. ಗಾಂಧಿಜಿಯವರ ಒಡನಾಟ ನೆನಪಿಸಿಕೊಂಡು ಮಾತನಾಡೋ ಹಿರಿಯ ಜೀವ, ಬ್ರಿಟಿಷರ ಕರಾಳ ದಿನಗಳನ್ನ ನೆನಪಿಸಿಕೊಳ್ತಾರೆ. ಜೊತೆಗೆ ಚಿಕ್ಕವಳಾಗಿದ್ದೆ. ಗಾಂಧಿಜಿಯವರು ಚಪಾತಿ ಅನ್ನ ಊಟ ಮಾಡ್ತಿದ್ರು, ಊಟ ಕೊಟ್ಟು ಬರೋದಷ್ಟೆ ನನ್ನ ಕೆಲಸ ಆಗಿತ್ತು ಅಂತಾ ಹೇಳುತ್ತಾರೆ.
ಸಂದೇಶ ನೀಡಿದ್ದಕ್ಕೆ ಚಿತ್ರ ಹಿಂಸೆ ನೀಡಿ ಕೊಂದಿದ್ದ ಬ್ರಿಟಿಷ್ ಅಧಿಕಾರಿಗಳು: ಅರಿವಿಲ್ಲದೇ ಆಟವಾಡುತ್ತಾ ಗಾಂಧಿಜೀ ಸೇವೆ ಮಾಡಿದ್ದ ಶಾಂತಾಬಾಯಿ ಅವರಿಗೆ ಅಕ್ಕನ ಮಗ ನಾರಾಯಣ ಅವರ ಸಾವು ತುಂಬಾ ಕಾಡುತ್ತಿದೆ. 1930 ಆಸು ಪಾಸಿನಲ್ಲೇ ನಾರಾಯಣ ಅನ್ನೋರನ್ನ ಬ್ರಿಟಿಷ್ ಚಿತ್ರಹಿಂಸೆ ನೀಡಿ ಸಾಯಿಸಿದ್ರಂತೆ. ಗಾಂಧಿಜೀ ಹೋರಾಟದ ಪತ್ರಗಳನ್ನ ನಾರಾಯಣ ಊರೂರು ತಲುಪಿಸ್ತಿದ್ರು. ಬ್ರಿಟಿಷರ ಕೈಯಲ್ಲಿ ಸಿಕ್ಕಾಗ ಭಿತ್ತಿ ಪತ್ರವನ್ನ ನುಂಗಿದ್ರಂತೆ.
ಇದರಿಂದ ಕೋಪಗೊಂಡಿದ್ದ ಬ್ರಿಟಿಷ್ ಅಧಿಕಾರಿಗಳು ನಾರಾಯಣ್ ಅವರ ದೇಹಕ್ಕೆ ಮೊಳೆಹೊಡೆದು ಸಾಯಿಸಿದ್ರಂತೆ. ನಾರಾಯಣ ಅವರು ಹುತಾತ್ಮರಾದ ಸಂದರ್ಭ ಈಗಲೂ ಶಾಂತಾಬಾಯಿಯವರನ್ನ ನಡುಗಿಸುತ್ತೆ. ಶತಾಯುಷಿ ಶಾಂತಾಬಾಯಿ ಮನೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮ ಮನೆ ಮಾಡಿದೆ. ಸ್ವಾತಂತ್ರ್ಯದ ಹುಮ್ಮಸ್ಸಿನ ಕಥೆ ಕೇಳೋದಕ್ಕೆ ಅಜ್ಜಿ ಮನೆಯ ಬಳಿ ಜನ ಬರ್ತಿದಾರೆ. ಅಜ್ಜಿ ಮೆರವಣಿಗೆ ಮಾಡ್ಬೇಕು ಅಂತಾ ಬಿಜೆಪಿ ನಾಯಕ ಅನಿಲ್ ಮೆಣಸಿನಕಾಯಿ ನಿರ್ಧರಿಸಿದ್ರಂತೆ.
Gadag; ಮಲ್ಲಸಮುದ್ರದಲ್ಲಿ ಯುವಕರ ನಡುವೆ ನಡೆದ ಗಲಾಟೆಗೆ ಕೋಮು ಬಣ್ಣ ಹಚ್ಚುವುದು ಬೇಡ: ಐಜಿಪಿ
ಆದರೆ ಅಜ್ಜಿಗೆ ಕೂತಲ್ಲೆ ಕೂರೋದು ಕಷ್ಟ ಆಗುತ್ತಂತೆ. ಹೀಗಾಗಿ ಅಜ್ಜಿಗೆ ಸನ್ಮಾನ ಮಾಡಿ, ಆಶೀರ್ವಾದ ಪಡೆಯೋಣ ಅಂತಾ ಬಂದಿದ್ದೇವೆ ಅಂತಾರೆ ಅನಿಲ್ ಮೆಣಸಿನಕಾಯಿ. ಸ್ವಾತಂತ್ರ್ಯ ಹೋರಾಟದಲ್ಲಿ ಅಳಿಲು ಸೇವೆ ಸಲ್ಲಿಸಿದ ಸಂತೃಪ್ತಿ ವೇರ್ಣೇಕರ್ ಕುಟುಂಬಕ್ಕಿದೆ. ಗಾಂಧಿಜೀಯವರನ್ನ ಹತ್ತಿರದಿಂದ ನೋಡಿ ಅವರ ಸೇವೆ ಮಾಡಿದ ಧನ್ಯತಾಭಾವ ಶಾಂತಬಾಯಿಯವರದ್ದು.