ಟೋಕಿಯೋ[ಫೆ.28]: ಸಾಮಾನ್ಯ ಮಕ್ಕಳು ಜನಿಸಿದಾಗ 1.30 ರಿಂದ 2.50 ಕಿಲೋ ಗ್ರಾಂ ತೂಕ ಹೊಂದಿರುತ್ತವೆ. ಇಂತಹ ಮಕ್ಕಳು 30 ವಾರ ಅಥವಾ 9 ತಿಂಗಳು ತಾಯಿಯ ಹೊಟ್ಟೆಯಲ್ಲಿದ್ದು, ಬಳಿಕ ಜನಿಸುತ್ತವೆ. ಆದರೆ 2018ರ ಆಗಸ್ಟ್ ನಲ್ಲಿ ಜಪಾನ್ ನಲ್ಲಿ ಜನಿಸಿದ ಮಗು ಕೇವಲ 268 ಗ್ರಾಂ ತೂಕವಿತ್ತು. ಈ ಮಗು ತನ್ನ ತಾಯಿಯ ಹೊಟ್ಟೆಯಲ್ಲಿದ್ದದ್ದು ಕೇವಲ 20 ವಾರ ಅಂದರೆ 5 ತಿಂಗಳು. ಈ ಮಗುವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದ್ದು, ಆಗಸ್ಟ್ ನಿಂದ 2019ರ ಫೆಬ್ರವರಿಯವರೆಗೆ ಆಸ್ಪತ್ರೆಯಲ್ಲೇ ಇತ್ತು. ವೈದ್ಯರ ಚಿಕಿತ್ಸೆ ಮುಂದುವರೆದಿತ್ತು. ಆದರೆ ಫೆಬ್ರವರಿ 20ರಂದು ಮಗುವನ್ನು ಡಿಸ್ಚಾರ್ಜ್ ಮಾಡಿದ್ದು, ಸದ್ಯ ಆ ಪುಟ್ಟ ಕಂದಮ್ಮ ತಾಯಿಯ ಮಡಿಲು ಸೇರಿದೆ.

ಮಗುವಿನ ಬಗ್ಗೆ ಮಾತನಾಡಿದ ತಾಯಿಯು '5 ತಿಂಗಳಲ್ಲೇ ಮಗುವಿಗೆ ಡೆಲಿವರಿಯಾಗಿದೆ. ಹೀಗಿದ್ದರೂ ನನ್ನ ಮಗು ಸಮಸ್ಯೆಗಳಿಲ್ಲದೇ ಬೆಳೆದಿದೆ ಹೀಗಾಗಿ ನನಗೆ ಬಹಳ ಖುಷಿಯಾಗಿದೆ. ಯಾಕೆಂದರೆ ಅದು ಜನಿಸುವಾಗ ಬದುಕುಳಿಯುತ್ತದೋ, ಇಲ್ಲವೋ ಎಂದು ಅಂದಾಜಿಸುವುದೇ ಕಷ್ಟವಾಗಿತ್ತು' ಎಂದಿದ್ದಾರೆ.

ಮಗುವಿಗೆ ಚಿಕಿತ್ಸೆ ನೀಡಿದ್ದ ವೈದ್ಯೆ ಡಾ. ತಕೆಶಿ ಮಾತನಾಡುತ್ತಾ 'ಇಷ್ಟು ಕಡಿಮೆ ತೂಕವಿರುವ ಮಗು ಕೂಡಾ ಯವುದೇ ಸಮಸ್ಯೆ ಇಲ್ಲದೇ, ಆರೋಗ್ಯಯುತವಾಗಿ ತಮ್ಮ ಮನೆಗೆ ಹೋಗಬಹುದು ಎಂದು ನಾನು ಜನರಿಗೆ ತಿಳಿಸಲು ಇಚ್ಛಿಸುತ್ತೇನೆ. ತಾಯಿಯ ಹೊಟ್ಟೆಯಲ್ಲಿದ್ದರೂ ಈ ಮಗುವಿನ ತೂಕ ಹೆಚ್ಚಾಗುವುದು ಸಂಪೂರ್ಣವಾಗಿ ನಿಂತು ಹೋಗಿತ್ತು. ಮಗುವಿನ ಪ್ರಾಣ ಕಾಪಾಡಲು ಸರ್ಜರಿ ಮಾಡಿ ಹೊರ ತೆಗೆದಿದ್ದೆವು. ನಾಲ್ಕು ತಿಂಗಳ ಚಿಕಿತ್ಸೆ ಬಳಿಕ ಈಗ ಮಗು 3.2 ತೂಕವಿದೆ' ಎಂದಿದ್ದಾರೆ.

ಸದ್ಯ ಈ ಮಗುವಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದನ್ನು ವಿಶ್ವದ ಅತ್ಯಂತ ಚಿಕ್ಕ ಮಗು ಎನ್ನಲಾಗುತ್ತಿದೆ.