Expiry ಆದ ಔಷಧಿ ತಗೊಂಡ್ರೆ ಏನಾಗುತ್ತೆ?
ಸಿಕ್ಕಾಪಟ್ಟೆ ತಲೆನೋವು ಅಂತ ಮೆಡಿಸಿನ್ ಬಾಕ್ಸ್ ತಡಕಾಡಿ ಮಾತ್ರೆ ಹುಡುಕುತ್ತೀರಿ. ಓಪನ್ ಮಾಡಬೇಕೆನ್ನುವಷ್ಟರಲ್ಲಿ ಮಾತ್ರೆ ಅವಧಿ ಮೀರಿದೆ ಎಂಬುದು ತಿಳಿಯುತ್ತದೆ. ಆಗ ನೀವದನ್ನು ತೆಗೆದುಕೊಳ್ಳಬಹುದೋ, ಇಲ್ಲವೋ?
ಯಾವುದಕ್ಕೂ ಮನೆಯಲ್ಲಿರಲಿ ಎಂದು ತಲೆನೋವು, ಜ್ವರ, ವಾಂತಿ, ಬೇಧಿ ಇತ್ಯಾದಿ ಇತ್ಯಾದಿ ಸಾಮಾನ್ಯ ಕಾಯಿಲೆಗಳಿಗೆ ಸಂಬಂಧಿಸಿದ ಮಾತ್ರೆಗಳನ್ನು ತಂದು ಮನೆಯಲ್ಲಿಟ್ಟುಕೊಂಡಿರುತ್ತೀರಿ. ಆ ಕಾಯಿಲೆ ಹತ್ತಿರ ಬರುವ ವೇಳೆಯಲ್ಲಿ ಮೆಡಿಸಿನ್ ಬಾಕ್ಸ್ ತಡಕಾಡಿದರೆ ಬೇಕಾಗಿದ್ದ ಮಾತ್ರೆ ಎಕ್ಸ್‌ಪೈರ್ ಆಗಿದೆ. ಹೆಚ್ಚು ಹಣ ಕೊಟ್ಟು ತಂದ ಮಾತ್ರೆ ಬಿಸಾಡಲು ಮನಸ್ಸಾಗುವುದಿಲ್ಲ. ಹಾಗಾಗಿ, ಮಾತ್ರೆಗೇನು ಡೇಟ್ ಎಲ್ಲ ಗೊತ್ತಾಗುತ್ತಾ, ಏನೂ ಆಗುವುದಿಲ್ಲ ಎಂದುಕೊಂಡು ಅದನ್ನು ನುಂಗೇಬಿಡುತ್ತೀರಿ. ಆದರೆ, ಎಕ್ಸ್‌ಪೈರಿಯಾದ ಮಾತ್ರೆ ನುಂಗಬಹುದಾ ಅಥವಾ ಎಸೆಯಬೇಕಿತ್ತಾ? ನೀವು ಸರಿಯಾದ ಕೆಲಸ ಮಾಡಿದ್ದೀರೋ ಇಲ್ಲವೋ? ಎಕ್ಸ್‌ಪೈರ್ ಆದ ಮಾತ್ರೆ ತಗೊಂಡ್ರೆ ಏನಾಗುತ್ತೆ? ತಿಳಿಯೋಣ ಬನ್ನಿ.
ಗರ್ಭಿಣಿಗೆ ಸುಖಾಸುಮ್ಮನೆ ಸಲಹೆ ಕೊಡೋ ಬದ್ಲು ಇಂಥ ಮಾತನಾಡಿ
ಎಕ್ಸ್‌ಪೈರೇಶನ್ ಡೇಟ್ ಅಗತ್ಯ
ನಮ್ಮ ದೇಶದಲ್ಲಿ ಮೆಡಿಸಿನ್ಸ್‌ನ್ನು ಡ್ರಗ್ಸ್ ಆ್ಯಂಡ್ ಕಾಸ್ಮೆಟಿಕ್ಸ್ ಕಾಯ್ದೆ 1940 ಹಾಗೂ ನಿಯಮ 1945 ನಿಯಂತ್ರಿಸುತ್ತದೆ. ಎಲ್ಲ ಮಾತ್ರೆಗಳ ಮೇಲೆ ಎಕ್ಸ್‌ಪೈರಿ ಡೇಟ್ ಸ್ಟ್ಯಾಂಪ್ ಹಾಕುವುದನ್ನು ಕೂಡಾ ಇದೇ ರೆಗುಲೇಟ್ ಮಾಡುತ್ತದೆ. ಈ ನಿಯಮಾವಳಿ ಪ್ರಕಾರ, ಪ್ರತಿಯೊಂದು ಡ್ರಗ್ ಕಂಪನಿಯೂ ತನ್ನ ಮಾತ್ರೆಗಳ ಮೇಲೆ ಎಕ್ಸ್‌ಪೈರಿ ಡೇಟ್ ನಮೂದಿಸುವುದು ಕಡ್ಡಾಯ. ಇದರಿಂದ ಮಾತ್ರೆಯೊಂದನ್ನು ಗರಿಷ್ಠ ಯಾವ ಅವಧಿವರೆಗೆ ಬಳಸಬಹುದೆಂಬುದು ಗ್ರಾಹಕರಿಗೆ ತಿಳಿಯಲಿ ಎಂಬುದು ಉದ್ದೇಶ. ಅಂದರೆ, ಅವಧಿ ಮೀರಿದ ಮಾತ್ರೆ ತೆಗೆದುಕೊಳ್ಳುವುದು ಸರಿಯಲ್ಲ ಎಂದಾಯ್ತು.
ಎಕ್ಸ್‌ಪೈರ್ಡ್ ಮಾತ್ರೆಗಳನ್ನು ಸೇವಿಸಿದರೆ ಏನಾಗುತ್ತೆ?
ಎಲ್ಲ ಎಕ್ಸ್‌ಪೈರ್ ಆದ ಮಾತ್ರೆಗಳೂ ಅಡ್ಡ ಪರಿಣಾಮ ಬೀರದಿರಬಹುದು. ಕೆಲವೊಂದು ಸರಿಯಾಗಿ ಕೆಲಸ ಮಾಡಲೂಬಹುದು. ಆದರೆ, ಯಾವುದು ಸರಿಯಾಗಿದೆ, ಯಾವುದು ಸರಿಯಿಲ್ಲ ಎಂದು ತಿಳಿಯುವುದು ಅಸಾಧ್ಯ. ಹಾಗಾಗಿ, ಅವಧಿ ಮುಗಿದ ಮಾತ್ರೆಗಳನ್ನು ತೆಗೆದುಕೊಳ್ಳುವುದು ನಿಮ್ಮ ಅನಾರೋಗ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಆಹ್ವಾನ ನೀಡಿದಂತೆ ಎಂದುಕೊಳ್ಳುವುದೇ ಉತ್ತಮ. ಒಂದು ವೇಳೆ ಮಾತ್ರೆಯು ದುಷ್ಪರಿಣಾಮ ಬೀರುತ್ತದೆ ಎಂದರೆ ಏನೆಲ್ಲ ಆಗಬಹುದು?
ಮೊದಲನೆಯದಾಗಿ ಎಕ್ಸ್‌ಪೈರ್ ಆದ ಮಾತ್ರೆ ಪರಿಣಾಮವೇ ಬೀರದಿರಬಹುದು. ಅಂದರೆ ನೀವು ಯಾವ ಸಮಸ್ಯೆಗಾಗಿ ಮಾತ್ರೆ ನುಂಗಿದಿರೋ ಅದಕ್ಕೆ ಏನೂ ಔಷಧ ಮಾಡದೆ ಕುಳಿತಂತಾಗುತ್ತದೆ.
ಎರಡನೆಯದಾಗಿ, ಮಾತ್ರೆಯು ತೆಪ್ಪಗಿರದೆ, ಸಮಸ್ಯೆ ಹೋಗಲಾಡಿಸುವ ಬದಲು ಉಲ್ಬಣಗೊಳಿಸಬಹುದು. ಮೂರನೆಯದಾಗಿ ದೇಹದಲ್ಲಿ ಇಲ್ಲದ ಸಮಸ್ಯೆಗಳನ್ನು ಕೂಡಾ ಇವು ಹುಟ್ಟು ಹಾಕುವ ಅಪಾಯವಿರುತ್ತದೆ.
ತೀರಾ ಕೆಟ್ಟ ಸಂದರ್ಭದಲ್ಲಿ, ಹೀಗೆ ಅವಧಿ ಮುಗಿದ ಮಾತ್ರೆ ಸೇವಿಸಿದ್ದರಿಂದ ನಿಮ್ಮ ಕಿಡ್ನಿಗಳು ಹಾಗೂ ಲಿವರ್ ಆರೋಗ್ಯ ಕೆಡಿಸಿಕೊಂಡು ದೊಡ್ಡ ಮಟ್ಟದ ಡ್ಯಾಮೇಜ್ ಆಗಬಹುದು. ಅದುವರೆಗೂ ಇಲ್ಲದ ಅಲರ್ಜಿಯು ಅಟಕಾಯಿಸಿಕೊಳ್ಳಬಹುದು. ಮಾತ್ರೆ ಏನಾದರೂ ನಿಮ್ಮ ಮೆಟಬಾಲಿಸಂಗೆ ತೊಂದರೆ ನೀಡಿದರೆ ರೋಗ ನಿರೋಧಕ ವ್ಯವಸ್ಥೆ ಹದಗೆಡಬಹುದು.
ಡೇಟ್ ಚೆಕ್ ಮಾಡಿ
ಅಬ್ಬಬ್ಬಾ! ನಮ್ಮ ಒಂದು ನಿರ್ಲಕ್ಷ್ಯದಿಂದ ಎಷ್ಟೆಲ್ಲ ಸಮಸ್ಯೆಗಳಿಗೆ ಆಹ್ವಾನ ನೀಡಬಹುದು ಅಲ್ಲವೇ? ಹಾಗಾಗಿಯೇ ಪ್ರತಿ ಬಾರಿ ಯಾವುದೇ ಮಾತ್ರೆ ಸೇವಿಸುವಾಗಲೂ ಎಕ್ಸ್‌ಪೈರಿ ಡೇಟ್ ಚೆಕ್ ಮಾಡಿ. ಅವಧಿ ಮುಗಿದ ಮಾತ್ರೆಗಳನ್ನು ಮರುಯೋಚನೆಗೆ ಆಸ್ಪದ ಕೊಡದೆ ಎಸೆಯಿರಿ. ಹಣ ಹೋದರೆ ಹೋಯಿತು. ಆರೋಗ್ಯವೇ ಭಾಗ್ಯ ಎಂಬುದು ನೆನಪಿರಲಿ.
ಎಕ್ಸ್‌ಪೈರ್ಡ್ ಮೆಡಿಸಿನ್ ಏನು ಮಾಡಬೇಕು?
ಅವಧಿ ಮುಗಿದ ಔಷಧಗಳನ್ನು ಎಸೆಯಬೇಕು ನಿಜ. ಆದರೆ, ಉದಾಸೀನತೆಯಿಂದ ಬೇಕಾಬಿಟ್ಟಿ ಎಸೆಯಬೇಡಿ. ಹೇಳಿಕೇಳಿ ಕೆಮಿಕಲ್ ಅದು. ಎಸೆದದ್ದು ಮಕ್ಕಳ ಕೈಗೆ ಸಿಕ್ಕಿದರೆ ಅಥವಾ ಪ್ರಾಣಿಗಳ ಹೊಟ್ಟೆ ಸೇರಿದರೆ ಅಪಾಯ. ಹಾಗಾಗಿ, ಮಾತ್ರೆಯಾದರೆ ಅದನ್ನು ಕವರ್ ಸಮೇತ ಕುಟ್ಟಿ ಪುಡಿ ಮಾಡಿ ಒಣಕಸಕ್ಕೆ ಹಾಕಿರಿ. ಸಿರಪ್ ಆಗಿದ್ದರೆ ಅದನ್ನು ಟಾಯ್ಲೆಟ್‌ನಲ್ಲಿ ಸುರಿದು ಫ್ಲಶ್ ಮಾಡಿ.
ಮಕ್ಕಳಿಗೆ ಮನಿ ಪಾಠ ಮನೆಯಲ್ಲೇ ಆಗಲಿ
ಎಕ್ಸ್‌ಪೈರ್ಡ್ ಮಾತ್ರೆ ಮಾರುವಂತಿಲ್ಲ
ಮಾತ್ರೆಗಳು ಅವಧಿ ಮುಗಿದಿದ್ದರೆ ಅಂಥವುಗಳ ಮಾರಾಟ ಕಾನೂನುಬಾಹಿರ. ಹಾಗಾಗಿ, ಮಾತ್ರೆ ಔಷಧಗಳನ್ನು ಖರೀದಿಸುವಾಗಲೇ ಅವುಗಳ ಎಕ್ಸ್‌ಪೈರಿ ಡೇಟ್ ಚೆಕ್ ಮಾಡಿ. ಕೆಲವೊಮ್ಮೆ ಡೇಟ್ ಮುಗಿದಿಲ್ಲವಾದರೂ ಮೆಡಿಕಲ್ ಶಾಪ್‌ಗಳು ಅವನ್ನು ಸರಿಯಾದ ವಾತಾವರಣದಲ್ಲಿ, ಬೇಕಾದ ಉಷ್ಣತೆಯೊಂದಿಗೆ ಸ್ಟೋರ್ ಮಾಡಿಲ್ಲವಾದರೆ ಅವು ತಮ್ಮ ಪರಿಣಾಮ ಕಳೆದುಕೊಳ್ಳುತ್ತವೆ. ಹಾಗಾಗಿ, ತಯಾರಕರು ಹೇಳಿದಂತೆ ಮೆಡಿಕಲ್ ಶಾಪ್‌ಗಳು ಅವಕ್ಕೆ ಅಗತ್ಯವಿರುವ ತಾಪಮಾನದಲ್ಲಿ ಔಷಧಗಳನ್ನು ಸ್ಟೋರ್ ಮಾಡುತ್ತಿವೆ ಎಂಬುದನ್ನು ನಿಯಂತ್ರಣ ಮಂಡಳಿ ನೋಡಿಕೊಳ್ಳಬೇಕಾಗುತ್ತದೆ.