Fitness Tips : ಹೊಟ್ಟೆ ಕರಗ್ಬೇಕೆಂದ್ರೆ ಈ ಆಸನ ಮಾಡಿ
ಹೊಟ್ಟೆ ನೋವು, ಹೊಟ್ಟೆ ಬೊಜ್ಜು, ಜೀರ್ಣಕ್ರಿಯೆ ಸಮಸ್ಯೆ ಎಲ್ಲದಕ್ಕೂ ಯೋಗ ಒಳ್ಳೆಯದು. ಒಂದೆರಡು ದಿನಗಳಲ್ಲಿ ಯೋಗ ಯಾವುದೇ ಫಲಿತಾಂಶವನ್ನು ನೀಡೋದಿಲ್ಲ ನಿಜ, ಆದ್ರೆ ನಿರಂತರವಾಗಿ ಮಾಡ್ತಿದ್ದರೆ ಬಂದ ರೋಗ ಗುಣಮುಖವಾಗುವುದಲ್ಲದೆ ಕೆಲ ರೋಗ ಬರದಂತೆ ನಮ್ಮ ದೇಹವನ್ನು ರಕ್ಷಿಸುತ್ತದೆ.
ಯೋಗ (Yoga) ದ ಬಗ್ಗೆ ಜನರ ಆಸಕ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಯೋಗ ನಮ್ಮ ದೇಹ (Body) ಕ್ಕೆ ಮಾತ್ರವಲ್ಲ ನಮ್ಮ ಆತ್ಮಕ್ಕೂ ಶಕ್ತಿ ನೀಡುತ್ತದೆ ಎಂದು ಯೋಗ ತಜ್ಞರು ಹೇಳ್ತಾರೆ. ಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ಯೋಗದಲ್ಲಿ ಅನೇಕ ಆಸನಗಳಿವೆ. ಒಂದೊಂದು ಆಸನವೂ ಹತ್ತಾರು ಲಾಭವನ್ನು ನೀಡುತ್ತದೆ. ರೋಗಗಳ ನಿಯಂತ್ರಣಕ್ಕೆ ಯೋಗ ಮದ್ದು. ಇದು ನಮ್ಮ ದೇಹಕ್ಕೆ ರೋಗ (Disease) ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಶಕ್ತಿ ನೀಡುತ್ತದೆ. ನಿಯಮಿತವಾಗಿ ಯೋಗ ಮಾಡುವುದರಿಂದ ದೇಹ ಮತ್ತು ಮನಸ್ಸು ಸದೃಢವಾಗಿರುತ್ತದೆ. ಇಂದು ನಾವು ಉತ್ತಾನಾಸನದ ಬಗ್ಗೆ ಮಾಹಿತಿಯನ್ನು ನೀಡ್ತೇವೆ. ಅದ್ರ ಪ್ರಯೋಜನವೇನು ಎಂಬುದನ್ನು ತಿಳಿಸ್ತೇವೆ.
ಉತ್ತಾನ ಪಾದಾಸನ : ಉತ್ತಾನ ಪಾದಾಸನದಲ್ಲಿ ಉತ್ತನ್ ಎಂದರೆ ಮೇಲಕ್ಕೆತ್ತಿದ ಮತ್ತು ಪಾದ ಎಂದರೆ ಕಾಲು ಎಂದರ್ಥವಾಗುತ್ತದೆ. ಈ ಭಂಗಿಯಲ್ಲಿ ಕಾಲುಗಳನ್ನು ಮೇಲಕ್ಕೆ ಎತ್ತಬೇಕು. ಆದುದರಿಂದ ಇದನ್ನು ಉತ್ತಾನಪಾದಾಸನ ಎಂದು ಕರೆಯುತ್ತಾರೆ. ಇದನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ನೀವು ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಉತ್ತಾನಪಾದಾಸನ ಮಾಡುವ ವಿಧಾನ ಹೇಗೆ? :
ಯಾವುದೇ ಆಸನ ಮಾಡುವಾಗ್ಲೂ ಸರಿಯಾದ ಜಾಗದಲ್ಲಿ ಕುಳಿತುಕೊಳ್ಳಬೇಕು. ಏರುತಗ್ಗಿರುವ ಜಾಗದಲ್ಲಿ ಆಸನಗಳನ್ನು ಮಾಡಬಾರದು. ಹಾಗಾಗಿ ಮೊದಲು ಸಮತಟ್ಟಾದ ಸ್ಥಳದಲ್ಲಿ ಮಲಗಿಕೊಳ್ಳಿ. ಯೋಗವನ್ನು ಬರೀ ನೆಲದ ಮೇಲೆ ಮಾಡಬಾರದು. ಹಾಗಾಗಿ ಮ್ಯಾಟ್ ಅಥವಾ ರಗ್ ಬಳಕೆ ಮಾಡಿ.
ಮಿತಿ ಮೀರಿದ್ರೆ ಸಾವಿಗೆ ಸನಿಹ ಮಾಡುತ್ತೆ ಜಿಮ್ ! ಎಷ್ಟು ವರ್ಕ್‌ಔಟ್ ಮಾಡಿದ್ರೆ ಒಳ್ಳೇದು ?
ನಂತರ ಎರಡೂ ಕಾಲ್ಬೆರಳುಗಳನ್ನು ಒಟ್ಟಿಗೆ ಸೇರಿಸಬೇಕು. ಉಸಿರು ತೆಗೆದುಕೊಳ್ಳುತ್ತ ಇಡೀ ದೇಹವನ್ನು ಹಗುರಗೊಳಿಸಿಕೊಳ್ಳಿ. ನಂತ್ರ ಮತ್ತೆ ದೀರ್ಘವಾಗಿ ಉಸಿರನ್ನು ತೆಗೆದುಕೊಂಡು ಕಾಲುಗಳನ್ನು ಮೇಲಕ್ಕೆತ್ತಿ. ಇಲ್ಲಿ ನೆನಪಿಡಬೇಕಾದ ವಿಷ್ಯವೆಂದ್ರೆ ಎರಡೂ ಕಾಲನ್ನು ಕೇವಲ 30 ಡಿಗ್ರಿ ಎತ್ತರಕ್ಕ ಎತ್ತಬೇಕು. ಸ್ವಲ್ಪ ಹೊತ್ತು ಕಾಲು 30 ಡಿಗ್ರಿ ಎತ್ತರದಲ್ಲಿಯೇ ಇರಲಿ. ನಿಮ್ಮ ಉಸಿರಾಟ ಕ್ರಿಯೆ ಸಹಜವಾಗಿರಲಿ. 30 ಸೆಕೆಂಡುಗಳ ನಂತರ ಆಳವಾಗಿ ಉಸಿರಾಡುತ್ತ ಕಾಲುಗಳನ್ನು ನೆಲ್ಲಕ್ಕೆ ಇಡಿ. ಇದನ್ನು ಉತ್ತಾನಪಾದಾಸನದ ಒಂದು ಚಕ್ರ ಎನ್ನಲಾಗುತ್ತದೆ. ಈ ಚಕ್ರವನ್ನು ನೀವು ಎರಡರಿಂದ ಮೂರು ಬಾರಿ ಮಾಡಬೇಕಾಗುತ್ತದೆ. ನಂತ್ರ ಆ ಸಂಖ್ಯೆಯನ್ನು ಹೆಚ್ಚಿಸಬಹುದು.
ಉತ್ತಾನ ಪಾದಾಸನದ ಪ್ರಯೋಜನಗಳು :
ಮುಖ್ಯವಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಗೆ ಈ ಆಸನ ಅತ್ಯುತ್ತಮ. ಇದ್ರಿಂದ ಸಾಕಷ್ಟು ಪ್ರಯೋಜನವಿದೆ.
Yogasanas: ಒಳ್ಳೇದು ಅಂತ ಎಲ್ಲ ಯೋಗವೂ ನಿಮ್ಮ ದೇಹಕ್ಕ ದಕ್ಕೋಲ್ಲ
ಉತ್ತಾನ ಪಾದಾಸನ ಅಭ್ಯಾಸ ಮಾಡುವುದ್ರಿಂದ ಹೊಟ್ಟೆ ನೋವಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಸದಾ ಹೊಟ್ಟೆ ನೋವಿನಿಂದ ಬಳಲುವವರು ಈ ಅಭ್ಯಾಸವನ್ನು ಮಾಡ್ಬೇಕು.
ಅಜೀರ್ಣದ ಸಮಸ್ಯೆ ಕಿರಿಕಿರಿಯುಂಟು ಮಾಡುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆಗ್ಬೇಕು ಎನ್ನುವವರು ಉತ್ತಾನಪಾದಾಸನವನ್ನು ಪ್ರತಿ ದಿನ ಮಾಡ್ಬೇಕು. ಹೊಕ್ಕುಳನ್ನು ಸಮತೋಲನಗೊಳಿಸಲು ಉತ್ತಾನಪಾದಾಸನ ನಿಮಗೆ ನೆರವಾಗುತ್ತದೆ.
ಹೊಟ್ಟೆ ಕೊಬ್ಬು ಕೂಡ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಕೊಬ್ಬು ಹೆಚ್ಚಾಗಿ ಹೊಟ್ಟೆ ಊದಿಕೊಂಡಿರುತ್ತದೆ. ಅದನ್ನು ಕರಗಿಸಲು ಉತ್ತಾನಪಾದಾಸನವನ್ನು ಪ್ರತಿ ದಿನ ಮಾಡ್ಬೇಕು. ಇದ್ರಿಂದ ಹೊಟ್ಟೆ ಕರಗುತ್ತದೆ.
ಬರೀ ಹೊಟ್ಟೆ ಸಮಸ್ಯೆಗೆ ಮಾತ್ರವಲ್ಲದೆ ಬೆನ್ನಿಗೂ ಈ ಭಂಗಿ ಒಳ್ಳೆಯದು. ಬೆನ್ನು ನೋವು ಬರಬಾರದು ಎನ್ನುವವರು ಉತ್ತಾನಪಾದಾಸನವನ್ನು ನಿಯಮಿತವಾಗಿ ಮಾಡಬೇಕು.
ಉತ್ತಾನಪಾದಾಸನ ಮಾಡುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮ : ಎಲ್ಲರೂ ಉತ್ತಾನಪಾದಾಸನ ಮಾಡಲು ಸಾಧ್ಯವಿಲ್ಲ. ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಅಂಥವರು ಇದ್ರ ಅಭ್ಯಾಸ ಮಾಡಬಾರದು. ಗರ್ಭಿಣಿಯರು ಕೂಡ ಈ ಆಸನವನ್ನು ಮಾಡಬಾರದು. ಈ ಆಸನವನ್ನು ಯಾವಾಗಲೂ ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ಒಂದ್ವೇಳೆ ನೀವು ಬೆನ್ನು ನೋವಿನಿಂದ ಬಳಲುತ್ತಿದ್ದರೆ ಈ ಆಸನವನ್ನು ಮಾಡ್ಬೇಡಿ. ಬೆನ್ನು ನೋವು ಬರದಂತೆ ಇದು ತಡೆಯುತ್ತದೆ. ಈಗಾಗಲೇ ನೋವಿದ್ದರೆ ಅದು ಹೆಚ್ಚಾಗುವ ಸಾಧ್ಯತೆಯಿರುತ್ತದೆ.