ಟೀವಿ ವೀಕ್ಷಣೆ ಸಿಗರೆಟ್‌ಗಿಂತ ಅಪಾಯಕಾರಿ: 1 ಗಂಟೆ ವೀಕ್ಷಣೆಯಿಂದ 22 ನಿಮಿಷ ಆಯಸ್ಸು ಕಡಿಮೆ!
ಟಿವಿ ವೀಕ್ಷಿಸುವವರಿಗೆ ಎಚ್ಚರಿಕೆ ಕರೆಗಂಟೆ| ಬಯಲಾಯ್ತು ಶಾಕಿಂಗ್ ಮಾಹಿತಿ| ಟೀವಿ ವೀಕ್ಷಣೆ ಸಿಗರೆಟ್‌ಗಿಂತ ಅಪಾಯಕಾರಿ: 1 ಗಂಟೆ ವೀಕ್ಷಣೆಯಿಂದ 22 ನಿಮಿಷ ಆಯಸ್ಸು ಕಡಿಮೆ| 1 ಗಂಟೆ ನಿರಂತರ ಟೀವಿ ವೀಕ್ಷಣೆಯಿಂದ 22 ನಿಮಿಷ ಆಯಸ್ಸು ಕಡಿಮೆ: ಡಾ.ಮಂಜುನಾಥ್
ಬೆಂಗಳೂರು(ಜ.11): ಗಂಟೆ ಗಟ್ಟಲೇ ಟೀವಿ ವೀಕ್ಷಿಸುವುದು ಸಿಗರೆಟ್ ಸೇವಿಸುವುದಕ್ಕಿಂತ ಆರೋಗ್ಯಕ್ಕೆ ಹೆಚ್ಚು ಹಾನಿಕಾರ. ಒಂದು ಸಿಗರೇಟು ಸೇವನೆ ಮನುಷ್ಯನ 11 ನಿಮಿಷದ ಆಯಸ್ಸು ಕಡಿಮೆ ಮಾಡಿದರೆ, ಒಂದು ಗಂಟೆ ನಿರಂತರ ಟಿವಿ ವೀಕ್ಷಣೆ 22 ನಿಮಿಷದ ಆಯಸ್ಸು ಕಡಿಮೆ ಮಾಡುತ್ತದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.
ನಗರದ ಹೆಬ್ಬಾಳ ಬಳಿಯ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಐದು ದಿನಗಳ 107ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ‘ಆಧುನಿಕ ಜೀವನಶೈಲಿ, ರೋಗಗಳು ಮತ್ತು ಹೃದಯ ವಿಜ್ಞಾನ ಕ್ಷೇತ್ರದ ಪ್ರಗತಿ’ ವಿಷಯ ಕುರಿತು ಶನಿವಾರ ವಿಶೇಷ ಉಪನ್ಯಾಸ ನೀಡಿದ ಅವರು, ಬದಲಾದ ಆಹಾರ ಪದ್ಧತಿ, ಜೀವನ ಶೈಲಿಯಿಂದಾಗಿ ಮನುಷ್ಯನ ಆಯಸ್ಸು ಕುಸಿಯುತ್ತಿದೆ. ಒಬ್ಬ ವ್ಯಕ್ತಿ ಒಂದು ಸಿಗರೆಟ್ ಸೇವಿಸುವುದರಿಂದ 11 ನಿಮಿಷದ ಆಯಸ್ಸು ಕಡಿಮೆಯಾಗುತ್ತದೆ. ಅದೇ ರೀತಿ ಒಂದು ಗಂಟೆ ಬಿಡುವಿಲ್ಲದೆ ಟಿವಿ ವೀಕ್ಷಿಸುತ್ತಾ ಕೂತರೆ 22 ನಿಮಿಷ ಆಯಸ್ಸು ಕಡಿಮೆಯಾಗುತ್ತದೆ ಎಂಬುದು ಸಂಶೋಧನೆಯಲ್ಲಿ ಬಯಲಾಗಿದೆ ಎಂದರು.
ಪ್ರತಿ ನಿಮಿಷಕ್ಕೆ 4 ಸಾವು:
ಒತ್ತಡದ ಜೀವನ ಶೈಲಿ, ಆಹಾರ ಪದ್ಧತಿಯ ಬದಲಾವಣೆಯಿಂದ ಹೃದಯಾಘಾತ ಪ್ರಕರಣಗಳೂ ಹೆಚ್ಚಾಗುತ್ತಿವೆ. ಇಂದು ದೇಶದಲ್ಲಿ ಪ್ರತಿ ನಿಮಿಷಕ್ಕೆ ನಾಲ್ವರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.
ಹಿಂದೆ 65 ವರ್ಷ ದಾಟಿದ ಬಳಿಕ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿರುತ್ತಿದ್ದವು. ಇಂದು 45 ವರ್ಷ ದಾಟಿದ ಪುರುಷರು, 55 ವರ್ಷ ದಾಟಿದ ಮಹಿಳೆಯರು ಹೃದಯಾಘಾತಕ್ಕೆ ತುತ್ತಾಗುತ್ತಿರುವುದು ಹೆಚ್ಚಾಗಿದೆ. ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರು ಹೃದಯಾಘಾತಕ್ಕೆ ತುತ್ತಾಗುವುದು ದಾಖಲೆಗಳಿಂದ ಸಾಬೀತಾಗಿದೆ. ಹೃದಯಾಘಾತದಿಂದ ಸಾವನ್ನಪ್ಪುವವರಲ್ಲಿ ಶೇ.5ರಷ್ಟುಪ್ರಕರಣಗಳು 25 ವರ್ಷದೊಳಗಿನವರಾಗಿದ್ದಾರೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.