ಈತ್ತೀಚೆಗೆ ಪ್ರತಿಷ್ಠಿತ ಶೆಲ್ ಕಂಪನಿಯಲ್ಲಿ ಸಿಎಫ್‌ಒ (ಚೀಫ್ ಫೈನಾನ್ಷಿಯಲ್‌ ಆಫೀಸರ್) ಆಗಿರುವ ಆಶಾ ಎಂಬಾಕೆ, ತನಗೆ ಬೈಪೋಲಾರ್‌ ಡಿಸಾರ್ಡರ್‌ ಇದೆ ಎಂದು ಹೇಳಿಕೊಂಡಿದ್ದಾಳೆ. ಇದೊಂದು ಮಾನಸಿಕ ಸಮಸ್ಯೆ. ಭಾರತದಂಥ ದೇಶಗಳಲ್ಲಿ ಮಾನಸಿಕ ಸಮಸ್ಯೆ ಹೊಂದಿದವರೆಲ್ಲರನ್ನೂ 'ಹುಚ್ಚ'ನೆಂದೇ ಕರೆಯುವುದು ರೂಢಿಯಾಗಿಬಿಟ್ಟಿದೆ. ಹೀಗಾಗಿ, ತಮಗೆ ಅಂಥ ಸಮಸ್ಯೆಗಳಿದ್ದರೂ ಹೊರಬಂದು ಮುಕ್ತವಾಗಿ ಹೇಳಿಕೊಳ್ಳುವವರು ತೀರಾ ತೀರಾ ಕಡಿಮೆ. ಹಾಗಾಗಿ, ಆಶಾ ತೋರಿದ ಈ ಧೈರ್ಯವನ್ನು ಮೆಚ್ಚಲೇಬೇಕು.

ಸ್ವತಃ ಬಾಲಿವುಡ್‌ನ ದೊಡ್ಡ ನಟನಾಗಿದ್ದ, ಸಲೆಬ್ರಿಟಿಯಾಗಿದ್ದ ಸುಶಾಂತ್‌ ಸಿಂಗ್‌ ರಜಪೂತ್‌ಗೂ ಈ ಕಾಯಿಲೆ ಇತ್ತು. ಆದರೆ ಆತ ಅದನ್ನು ಮುಕ್ತವಾಗಿ ಧೈರ್ಯವಾಗಿ ಹೇಳಿಕೊಂಡಿರಲಿಲ್ಲ. ಆದರೆ ಆತನ ಪ್ರೇಯಸಿ ರಿಯಾ ಚಕ್ರವರ್ತಿಗೆ ಅದು ಗೊತ್ತಿತ್ತು. ಸುಶಾಂತ್‌ನ ತಂದೆ ಹೇಳುವ ಪ್ರಕಾರ, ಸುಶಾಂತ್‌ಗೆ ಬೈಪೋಲಾರ್‌ ಡಿಸಾರ್ಡರ್ ಇದೆಯೆಂದು ಬಹಿರಂಗಪಡಿಸುತ್ತೇನೆ ಎಂದು ರಿಯಾ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಳು. ಇದರಿಂದಾಗಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ. ತಂದೆಯ ಈ ಮಾತನ್ನು ನಂಬುವುದಾದರೆ, ಸುಶಾಂತ್ ಕೂಡ ತನ್ನ ಈ ಕಾಯಿಲೆ ಬಹಿರಂಗಗೊಳ್ಳದೇ ಇರಲಿ ಎಂದು ಬಯಸಿದ್ದ. ಆತನಿಗೂ ಸಮಾಜ ಇದನ್ನು ಹೇಗೆ ಸ್ವೀಕರಿಸುವುದೋ ಎಂದು ಭಯವಿತ್ತು. ಇನ್ನುಳಿದವರಿಗೂ ಹಾಗೇ ಇದ್ದರೆ ಅದೇನೂ ತಪ್ಪಲ್ಲ.

ಶೆಲ್ ಕಂಪನಿಯ ಉದ್ಯೋಗಿ ಹೇಳುವ ಪ್ರಕಾರ, ಈ ಕಾಯಿಲೆ ಇದ್ದವರು ಅದನ್ನು ಮುಚ್ಚಿಡಬಾರದು. ಮುಕ್ತವಾಗಿ ಹೇಳಿಕೊಂಡು, ವೈದ್ಯಕೀಯ ಸಹಾಯ ಯಾಚಿಸಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಒಬ್ಬ ಫ್ಯಾಮಿಲಿ ಡಾಕ್ಟರ್, ಒಬ್ಬ ಡೆಂಟಿಸ್ಟ್, ಒಬ್ಬರು ಗೈನಕಾಲಜಿಸ್ಟ್ ಇರುವಂತೆ ಒಬ್ಬರು ಸೈಕಿಯಾಟ್ರಿಸ್ಟ್ ಕೂಡ ಇರಬೇಕು. ಸಾಮಾನ್ಯವಾಗಿ ಕಚೇರಿಗಳಲ್ಲಿ ಯಾರಿಗಾದರೂ ಮಾನಸಿಕ ಸಮಸ್ಯೆ ಇದ್ದರೆ, ಅಂಥವರನ್ನು ಕೆಲಸದಿಂದ ಬಿಡಿಸೋಣ ಎಂದು ಯೋಚಿಸುವವರೇ ಹೆಚ್ಚು. ಆದರೆ ಶೆಲ್‌ ಕಂಪನಿ ಆಶಾ ಅವರಿಗೆ ಈ ವಿಚಾರದಲ್ಲಿ ತುಂಬಾ ಸಪೋರ್ಟಿವ್ ಆಗಿದೆ. ಅವರ ಗಂಡ ಕೂಡ ಇವರನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ತನ್ನ ಮಗಳಿಗೂ ತನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಸಲು ಅವರಿಗೆ ಸಾಧ್ಯವಾಗಿದೆ. ಈ ಕಾಯಿಲೆಯಲ್ಲಿ, ಕ್ಷಣಕ್ಷಣಕ್ಕೂ ಮೂಡ್‌ ಸ್ವಿಂಗ್ ಆಗುತ್ತಿರುತ್ತದೆ. ಹಾಗಿದ್ದರೂ ದೊಡ್ಡ ಕಾರ್ಪೊರೇಟ್‌ ಕಂಪನಿಯಲ್ಲಿ ತನ್ನ ಸಾಧನೆ, ಪ್ರತಿಭೆಯಿಂಧ ಅತ್ಯುನ್ನತ ಸ್ಥಾನವನ್ನು ಆಶಾ ಸಂಪಾದಿಸಿದ್ದಾರೆ. ಅವರು ಹೇಳುವುದು ಇಷ್ಟೆ- ಸರಿಯಾದ ಸೈಕಾಲಜಿಸ್ಟ್ ಅನ್ನು ಹೊಂದಿರಿ. ಅವರ ಸಲಹೆ ಪಡೆಯುತ್ತಿರಿ. ಇತರ ದೈಹಿಕ ಸಮಸ್ಯೆಗಳಂತೆಯೇ ಇದೂ ಎಂದು ತಿಳಿದು ಕೆರಿಯರ್‌ನಲ್ಲಿ ಮುಂದೆ ಹೋಗ್ತಾ ಇರಿ. ಆಶಾ ಇತರರಿಗೆ ಹೇಳುವ ಮಾತು- ಮಾನಸಿಕ ಸಮಸ್ಯೆ ಇರುವವರನ್ನು ದೂರ ಇಡಬೇಡಿ, ಅವರಿಗೆ ಸರಿಯಾದ ಚಿಕಿತ್ಸೆ ಕೊಡಿಸಿ, ಪ್ರೀತಿ ಕೊಡಿ.

ಮಹಿಳೆಯರಿಗೆ ಮುಟ್ಟಿನ ರಜೆ ಬೇಕಾ, ಬೇಡವಾ? ಹೀಗೊಂದು ವಿಚಾರ ಮಂಥನ ...

ಬೈಪೋಲಾರ್  ಕಾಯಿಲೆಗೆ ತುತ್ತಾದವರು ಹೈ ಎನರ್ಜಿ, ಭಯಂಕರ ಚಟುವಟಿಕೆ ಪ್ರದರ್ಶಿಸುತ್ತಿರುತ್ತಾರೆ. ಇವರಿಗೆ ನಿದ್ದೆ ಹೆಚ್ಚು ಬೇಕಾಗುವುದಿಲ್ಲ ಅಥವಾ ನಿದ್ರಿಸುವುದೇ ಇಲ್ಲ. ವಾಸ್ತವದ ಸ್ಪರ್ಶವನ್ನೇ ಕಳೆದುಕೊಳ್ಳುತ್ತಾರೆ. ಸದಾ ಕನಸಿನ ಜಗತ್ತಿನಲ್ಲಿ, ಅವಾಸ್ತವಿಕ ಜಗತ್ತಿನಲ್ಲಿ ಜೀವಿಸುತ್ತಿರುತ್ತಾರೆ. ಇವರಿಗೆ ಡಿಪ್ರೆಶನ್‌ ಉಂಟಾದಾಗ ಖಿನ್ನತೆ, ಎಲ್ಲ ಚಟುವಟಿಕೆಗಳಲ್ಲಿ ನಿರಾಸಕ್ತಿ, ಸುಸ್ತು ತೋರ್ಪಡಿಸುತ್ತಾರೆ. ಮೂಡ್‌ ವ್ಯತ್ಯಾಸಗಳು ದಿನಗಳಿಂದ ತಿಂಗಳುಗಟ್ಟಲೆ ಇರಬಹುದು. ಈ ಕಾಯಿಲೆಗೆ ಜೀವನಪೂರ್ತಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಆದರೆ ಕೌನ್ಸೆಲಿಂಗ್‌ ಮತ್ತು ಔಷಧಗಳ ಮೂಲಕ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಹೀಗೆಂದರೆ ಒಂದು ಬಗೆಯ ಮಾನಸಿಕ ಸಮಸ್ಯೆ. ಇದನ್ನು ಹೊಂದಿರುವವರು ಒಂದು ಕ್ಷಣ ಇದ್ದಂತೆ ಇನ್ನೊಂದು ಕ್ಷಣ ಇರುವುದೇ ಇಲ್ಲ. ಕೆಲವೊಮ್ಮೆ ಅವರ ಮಾನಸಿಕ ಸ್ಥಿತಿ ಕೆರಳಿದಾಗ, ತಾವು ಏನು ಮಾಡುತ್ತಿದ್ದೇವೆ ಅನ್ನುವುದೂ ಅವರಿಗೆ ಗೊತ್ತಾಗುವುದಿಲ್ಲ. ಈ ಕ್ಷಣ ಮಾಡಿದ ಕೆಲಸ ಮುಂದಿನ ಕ್ಷಣದಲ್ಲಿ ಮರೆತುಹೋಗಲೂಬಹುದು.

ಖಿನ್ನತೆಯಲ್ಲಿರುವವರ ಬಳಿ ಈ ಮಾತುಗಳನ್ನಾಡಿ, ನಿಮ್ಮ ಬೆಂಬಲವೇ ಅವರ ಚಿಕಿತ್ಸೆ

ಈ ಕಾಯಿಲೆ ಹೊಂದಿದವರು ವೃದ್ಧಾಪ್ಯದಲ್ಲಿ ಪಾರ್ಕಿನ್‌ಸನ್‌, ಅಲ್ಝೀಮರ್ಸ್ ಮುಂತಾದ ಮರೆಗುಳಿ ನರವ್ಯೂಹ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಬೈಪೋಲಾರ್ ಡಿಸಾರ್ಡರ್ ಹೊಂದಿರುವವರ ಮೂಡ್ ಕ್ಷಣಕ್ಷಣಕ್ಕೂ ಅತ್ತ ಇತ್ತ ತೂಗುಯ್ಯಾಲೆ ಆಗುತ್ತಿರುತ್ತದೆ. ಒಂದು ಕ್ಷಣ ಇದ್ದಂತೆ ಇನ್ನೊಂದು ಕ್ಷಣ ಇರುವುದಿಲ್ಲ. ಸಣ್ಣ ಪುಟ್ಟ ವೈಫಲ್ಯಗಳಿಗೂ ಕೊರಗುತ್ತಾ, ಆತ್ಮಹತ್ಯೆ ಮಾಡಿಕೊಳ್ಳುವ ಲೆವೆಲ್ಲಿಗೆ ಹೋಗುತ್ತಾರೆ. ಅವರಿಗೆ ಆ ಕ್ಷಣ ಒಳ್ಳೆಯ ಮಾತು, ಪ್ರೀತಿ ಸಿಗಬೇಕು. ಈ ಕಾಯಿಲೆ ನಿಜಕ್ಕೂ ಯಾಕೆ ಬರುತ್ತದೆ ಅನ್ನುವುದು ಗೊತ್ತಿಲ್ಲ. ಆದರೆ ಹಲವು ಕಾರಣಗಳು ಒಟ್ಟಾಗಿ ಇದು ಬರಬಹುದು- ಅನುವಂಶೀಯತೆ, ಪರಿಸರದ ನೆಗೆಟಿವ್‌ ಪ್ರಭಾವ, ಮೆದುಳಿನಲ್ಲಿ ಆಗಿರುವ ಸಣ್ಣಪುಟ್ಟ ನರ ಪರಿವರ್ತನೆ ಮತ್ತು ರಾಸಾಯನಿಕ ಪ್ರಚೋದನೆಗಳು. ಇದರಲ್ಲಿ ಹಾರ್ಮೋನ್‌ ಅಸಮತೋಲನ ಕೂಡ ಸೇರಿದೆ.

ಮೆನೋಪಾಸ್ ಟೈಮಲ್ಲಿ ಕೆಲವು ಮಹಿಳೆಯರಿಗೆ ಲೈಂಗಿಕಾಸಕ್ತಿ ಕುಂದುತ್ತಾ?