ಬೆಳಗ್ಗೆ ಎದ್ದು ಕನ್ನಡಿ ಮುಂದೆ ನಿಂತಾಗ ಮುಖದ ಮೇಲೆ ಕಾಣಿಸುವ ಪುಟ್ಟ ಮೊಡವೆ ನಮ್ಮ ಇಡೀ ದಿನದ ಖುಷಿಯನ್ನೇ ಕಸಿದು ಬಿಡಬಲ್ಲದು. ಪಾರ್ಟಿಗೆ ಧರಿಸಲು ಎರಡು ತಿಂಗಳ ಹಿಂದೆ ಇಷ್ಟಪಟ್ಟು ಖರೀದಿಸಿದ್ದ ಡ್ರೆಸ್ ಟೈಟ್ ಆಗುತ್ತಿದೆ ಎಂಬುದು ಆ ಕ್ಷಣ ಕಣ್ಣಲ್ಲಿ ನೀರು ತರಿಸಬಹುದು. ಚರ್ಮದ ಬಣ್ಣ, ಕೂದಲು, ತುಟಿ, ಕಣ್ಣು....ಹೀಗೆ ನಮ್ಮ ದೇಹದ ಪ್ರತಿ ಭಾಗವೂ ನೆಮ್ಮದಿಯನ್ನು ಕಸಿಯಲು ಕಾರಣವಾಗುವ ಜೊತೆಗೆ ಆತ್ಮವಿಶ್ವಾಸಕ್ಕೂ ದೊಡ್ಡ ಪೆಟ್ಟು ನೀಡಬಲ್ಲವು. ಆದ್ರೆ ನೈಸರ್ಗಿಕವಾದ ಅಥವಾ ಹುಟ್ಟಿನೊಂದಿಗೆ ಬಂದ, ಬದಲಾಯಿಸಲಾಗದ ಸಂಗತಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ತುಂಬಾ ಸಿಲ್ಲಿ ಅನಿಸುವುದಿಲ್ಲವೆ? ಇಂಥ ಯೋಚನೆಗಳು ಅಥವಾ ಚಿಂತೆಗಳನ್ನು ನಾವು ಅನಗತ್ಯವಾಗಿ ಮನಸ್ಸಿನೊಳಗೆ ಎಳೆದು ತಂದು ನೆಮ್ಮದಿ ಕೆಡಿಸಿಕೊಳ್ಳುತ್ತೇವೆ. ಅಷ್ಟೇ ಅಲ್ಲ, ನಮ್ಮ ಮೇಲೆ ನಾವೇ ಜಿಗುಪ್ಸೆ ಪಡುತ್ತೇವೆ. ನಮ್ಮ ದೇಹದ ಬಗ್ಗೆ ನಮ್ಮ ಮನಸ್ಸಿನಲ್ಲಿ ಹೆಪ್ಪುಗಟ್ಟಿರುವ ನಕಾರಾತ್ಮಕ ಭಾವನೆಗಳು ನೆಮ್ಮದಿ ಕೆಡಿಸುವ ಜೊತೆಗೆ ಬದುಕಿಗೇ ಮುಳ್ಳಾಗಬಲ್ಲವು. ಇಂಥ ಭಾವನೆಗಳನ್ನು ಮನಸ್ಸಿನಿಂದ ಬೇರು ಸಮೇತ ಕಿತ್ತೆಸೆದು, ಇದ್ದದ್ದನ್ನು ಇದ್ದಂತೆಯೇ ಒಪ್ಪಿಕೊಂಡು, ಅಪ್ಪಿಕೊಂಡಾಗ ನಮ್ಮ ಮೇಲೆ ನಮಗೇ ಪ್ರೀತಿ ಮೂಡುತ್ತೆ. ಜೊತೆಗೆ ಆತ್ಮವಿಶ್ವಾಸ ಚಿಗುರೊಡೆಯುತ್ತದೆ. 

ಕೊರೋನಾ ವೈರಸ್‌ ಹೇಗೆ ಹರಡುತ್ತದೆ? ಇದರ ಲಕ್ಷಣಗಳೇನು?

ತಿನ್ನಬಾರದ್ದನ್ನು ತಿಂದೆ ಎಂಬ ಚಿಂತೆ ಬಿಡಿ
ಅಪರೂಪಕ್ಕೊಮ್ಮೆ ಬಾಯಿ ಚಪಲಕ್ಕೆ ರಸ್ತೆಬದಿಯಲ್ಲಿ ಹೊಟ್ಟೆ ಬಿರಿಯುವಷ್ಟು ಪಾನಿಪೂರಿ ತಿನ್ನುತ್ತೀರಿ. ಆದ್ರೆ ಆ ಬಳಿಕ ಅಯ್ಯೋ ನಾನು ಪಾನಿಪೂರಿ ತಿನ್ನಬಾರದಿತ್ತು. ಅದು ಆರೋಗ್ಯಕ್ಕೆ ಒಳ್ಳೆಯದ್ದಲ್ಲ ಎಂದು ಪದೇಪದೆ ನೆನಪಿಸಿಕೊಂಡು ಸಂಕಟ ಪಡುತ್ತೀರಿ. ಇಂಥ ಗುಣ ನಿಮ್ಮಲ್ಲಿದ್ರೆ ಮೊದಲು ಬಿಡಿ. ಈ ರೀತಿ ತಿನ್ನುವ ಪ್ರತಿ ಆಹಾರಕ್ಕೂ ಒಳ್ಳೆಯದ್ದು, ಕೆಟ್ಟದ್ದು ಎಂಬ ಹಣೆಪಟ್ಟಿ ಕಟ್ಟಿ ನೆಮ್ಮದಿ ಕೆಡಿಸಿಕೊಳ್ಳೋದು ಆರೋಗ್ಯಕ್ಕೆ ಒಳ್ಳೆಯದ್ದಲ್ಲ ಎಂಬುದು ತಜ್ಞರ ಅಭಿಮತ. ತಿಂದಿದ್ದು, ಕುಡಿದದ್ದು ಎಲ್ಲದರ ಬಗ್ಗೆ ಪದೇಪದೆ ಚಿಂತಿಸುವುದರಿಂದ ಖಿನ್ನತೆ, ಕೋಪ ಸೇರಿದಂತೆ ಇತರ ಮಾನಸಿಕ ಕಾಯಿಲೆಗಳು ಕಾಡುವ ಸಂಭವ ಇದೆ. ಆರೋಗ್ಯಕರ ತಿಂಡಿ-ತಿನಿಸುಗಳನ್ನು ತಿನ್ನುವ ಬಗ್ಗೆ ಪ್ರತಿಯೊಬ್ಬರೂ ಗಮನ ಹರಿಸಬೇಕು. ಆದ್ರೆ ಅಪರೂಪಕ್ಕೊಮ್ಮೆ ರೂಲ್ಸ್ ಬ್ರೇಕ್ ಮಾಡಿದ್ರೆ ತಪ್ಪೇನಿಲ್ಲ. ಹೀಗಾಗಿ ತಿನ್ನುವಾಗ ಹಾಗೂ ತಿಂದ ಮೇಲೆ ಜಾಸ್ತಿ ಯೋಚಿಸುವುದನ್ನು ಬಿಟ್ಟು ಎಂಜಾಯ್ ಮಾಡೋದನ್ನು ಕಲಿಯಿರಿ. 

ಬಾಡಿ ಶೇಮಿಂಗ್ ಬಿಟ್ಟುಬಿಡಿ
ಕೆಲವರಿಗೆ ನಾನು ದಪ್ಪಗಿದ್ದೇನೆ ಎಂಬ ಚಿಂತೆಯಾದ್ರೆ, ಇನ್ನೂ ಕೆಲವರಿಗೆ ತುಂಬಾ ತೆಳ್ಳಗಿದ್ದೇನೆ ಎಂಬ ತಲೆಬಿಸಿ. ಪದೇಪದೆ ಕನ್ನಡಿ ಮುಂದೆ ನಿಂತು ದಪ್ಪಗೆ, ತೆಳ್ಳಗೆ ಎಂದು ನಿಮ್ಮನ್ನು ನೀವೇ ಬಾಡಿ ಶೇಮಿಂಗ್ ಮಾಡಿಕೊಳ್ಳೋದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಇಂಥ ಭಾವನೆ ನಿಮಗರಿವಿಲ್ಲದಂತೆ ನಿಮ್ಮ ದೇಹದ ಬಗ್ಗೆ ಮನಸ್ಸಿನಲ್ಲಿ ಅಸಹನೆ ಹುಟ್ಟು ಹಾಕುತ್ತದೆ. ಕೂತರೂ, ನಿಂತರೂ ತೂಕ ಕಳೆದುಕೊಳ್ಳೋದು ಹೇಗೆ ಅಥವಾ ಹೆಚ್ಚಿಸಿಕೊಳ್ಳೋದು ಹೇಗೆ ಎಂಬ ಚಿಂತೆಯೇ ಕಾಡುತ್ತದೆ. ಇದು ನಿಮ್ಮ ಆತ್ಮವಿಶ್ವಾಸವನ್ನು ಕದಿಯುವ ಜೊತೆಗೆ ಖಿನ್ನತೆಗೆ ನೂಕುವ ಸಾಧ್ಯತೆಯೂ ಇದೆ.

ಮದ್ವೆಯಾಗೋವಾಗ ಗಂಡಿನ ಸಂಬಳ ಕೇಳಿದ್ರೆ ಸಾಲದು, ವ್ಯಕ್ತಿತ್ವದೆಡೆಗೂ ಇರಲಿ ಗಮನ

ಖುಷಿಯನ್ನು ಇನ್ನೆಲ್ಲೋ ಹುಡುಕಬೇಡಿ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ ಎಂಬಂತೆ ನಮ್ಮಲ್ಲಿ ಅದು ಇದ್ದಿದ್ರೆ ಖುಷಿಯಾಗಿರುತ್ತಿದ್ದೆವು,ನಮಲ್ಲಿ ಇದು ಇದ್ದಿದ್ರೆ ಖುಷಿಯಾಗಿರುತ್ತಿದ್ದೆವು ಎಂದು ಇಲ್ಲದೆ ಇರುವ ವಸ್ತುಗಳ ಬಗ್ಗೆ ಯೋಚಿಸಿ ಇರುವ ಖುಷಿಯನ್ನು ಕಳೆದುಕೊಳ್ಳುತ್ತೇವೆ. ಇದು ಅತ್ಯಂತ ಅಪಾಯಕಾರಿ. ಇದರಿಂದ ಗೊಂದಲಗಳುಂಟಾಗುವ ಜೊತೆಗೆ ಮಾನಸಿಕ ಆರೋಗ್ಯಕ್ಕೆ ಹಾನಿಯಾಗುತ್ತದೆ. ಆದಕಾರಣ ಗತಿಸಿ ಹೋದ ಅಥವಾ ಮುಂದೆ ಬರಲಿರುವ ಕಾಲದ ಬಗ್ಗೆ ಚಿಂತಿಸುವುದನ್ನು ಬಿಟ್ಟು ಈಗಿರುವುದನ್ನು ಅನುಭವಿಸಿ, ನಕ್ಕು ನಲಿಯಿರಿ.

ನಿಮ್ಮ ಸೌಂದರ್ಯದ ಬಗ್ಗೆ ಅಭಿಮಾನವಿರಲಿ
ನಿಮ್ಮ ತ್ವಚೆಯ ಬಣ್ಣ ಕಪ್ಪಗಿರಬಹುದು, ನಿಮ್ಮ ಎತ್ತರ ಕಡಿಮೆ ಇರಬಹುದು, ಮೂಗು ದೊಡ್ಡದಿರಬಹುದು. ಅದೇನೇ ಆಗಿರಲಿ, ನಿಮ್ಮನ್ನು ನೀವು ಪ್ರೀತಿಸುವುದನ್ನು ಕಲಿಯಿರಿ. ನಿಮಗೇ ನಿಮ್ಮ ದೇಹದ ಮೇಲೆ ಪ್ರೀತಿಯಿಲ್ಲವೆಂದರೆ ಬೇರೆಯವರು ನಿಮ್ಮನ್ನು ಮೆಚ್ಚಲು ಸಾಧ್ಯವೇ? ಆದಕಾರಣ ನಾನು ಸುಂದರವಾಗಿದ್ದೇನೆ, ನನ್ನ ಬಗ್ಗೆ ನನಗೆ ಹೆಮ್ಮೆಯಿದೆ, ಅಭಿಮಾನವಿದೆ ಎಂದು ನಿಮಗೆ ನೀವೇ ಹೇಳಿಕೊಳ್ಳಿ. ನಿಮ್ಮ ದೇಹ ಹಾಗೂ ಮನಸ್ಸು ಎರಡನ್ನೂ ಪ್ರೀತಿಸಿ.

ತುಂಬಾ ಬೆವರುತ್ತೀರಾ? ಚಿಂತಿಸಬೇಡಿ ನಿಮ್ಮಷ್ಟು ಬ್ಯೂಟಿಫುಲ್‌ ಯಾರಿಲ್ಲ!

ಹೋಲಿಕೆ ಬಿಡಿ
ಅವರು ಎಷ್ಟು ಬೆಳ್ಳಗೆ, ತೆಳ್ಳಗೆ ಇದ್ದಾರೆ. ಅವರ ಮೂಗು ಎಷ್ಟು ಚೆನ್ನಾಗಿದೆ, ಅವರ ಕೂದಲು ಎಷ್ಟು ಉದ್ದವಾಗಿದೆ. ನನಗೂ ಅಂಥ ಕೂದಲಿರಬೇಕಿತ್ತು, ಬಣ್ಣ ಇರಬೇಕಿತ್ತು ಎಂದು ಯೋಚಿಸೋದನ್ನು ಮೊದಲು ಬಿಡಿ. ಪ್ರತಿಯೊಬ್ಬರಿಗೂ ಅವರದ್ದೇ ಆದ ಐಡೆಂಟಿಟಿ ಇರುತ್ತೆ. ಅದನ್ನು ಒಪ್ಪಿಕೊಳ್ಳಬೇಕು. ಇನ್ನೊಬ್ಬರೊಂದಿಗೆ ನಮ್ಮನ್ನು ನಾವು ಹೋಲಿಸಿಕೊಳ್ಳುವುದರಿಂದ ಸುಮ್ಮನೆ ನೆಮ್ಮದಿ ಹರಣವಷ್ಟೆ.