Swelling during Pregnancy: ಗರ್ಭಿಣಿ ಕಾಲುಗಳಲ್ಲಿ ಊತಕ್ಕಿದೆ ಸಿಂಪಲ್ ಪರಿಹಾರ
ಗರ್ಭಿಣಿಯರ ಕಾಲುಗಳಲ್ಲಿ ಊತ ಉಂಟಾಗುವುದು ಸಾಮಾನ್ಯ. ಗರ್ಭಕೋಶ ಹಿಗ್ಗಿದಾಗ ಕೆಳಭಾಗದ ರಕ್ತನಾಳಗಳ ಮೇಲೆ ಒತ್ತಡವುಂಟಾಗಿ ಹೀಗಾಗುತ್ತದೆ. ಊತ ಉಂಟಾಗದಂತೆ ಕೆಲವು ಮಾರ್ಗಗಳನ್ನು ಅನುಸರಿಸಬಹುದು.
ಮಹಿಳೆಯ ಜೀವನದ ಅತಿ ಮುಖ್ಯವಾದ ಹಂತಗಳಲ್ಲಿ ಒಂದು ಗರ್ಭಧಾರಣೆ. ತನ್ನೊಳಗೆ ಇನ್ನೊಂದು ಜೀವಕ್ಕೆ ಕುಡಿಯೊಡೆಯುವ ಈ ಹಂತ ಖುಷಿಯೊಂದಿಗೆ ತನ್ನದೇ ಆದ ಆತಂಕವನ್ನೂ ತಂದೊಡ್ಡುತ್ತದೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಸವಾಲುಗಳು ಈ ಸಮಯದಲ್ಲಿ ಎದುರಾಗುತ್ತವೆ. ಎಲ್ಲರ ದೇಹ ಪ್ರಕೃತಿಯೂ ಒಂದೇ ತೆರನಾಗಿ ಇರುವುದಿಲ್ಲವಾದ್ದರಿಂದ ಗರ್ಭಿಣಿಯಾಗಿರುವಾಗಿನ ಅನುಭವಗಳು ಪ್ರತಿಯೊಬ್ಬರಿಗೂ ಭಿನ್ನ. ಕೆಲವರು ಹೆರಿಗೆಯಾಗುವವರೆಗೂ ಏನೂ ಸಮಸ್ಯೆ ಅನುಭವಿಸದೆ ಕೇವಲ ಸಂತಸ, ಸಂಭ್ರಮದಿಂದ ಸಮಯ ಕಳೆದರೆ, ಇನ್ನು ಕೆಲವರು ಆ ಸಮಯದಲ್ಲಾದ ಅನುಭವಕ್ಕೆ ಹೆದರಿ ಮತ್ತೆ ಗರ್ಭ ಧರಿಸುವುದೇ ಬೇಡ ಎನ್ನುವ ನಿರ್ಧಾರಕ್ಕೆ ಬಂದುಬಿಡುತ್ತಾರೆ. ಸಾಮಾನ್ಯವಾಗಿ ಸಣ್ಣಪುಟ್ಟ ಕಿರಿಕಿರಿಗಳು ಎಲ್ಲರಿಗೂ ಇದ್ದೇ ಇರುತ್ತವೆ. ಮೂರನೇ ತ್ರೈಮಾಸಿಕದಲ್ಲಿ ಕಾಲುಗಳಲ್ಲಿ ಸ್ವೆಲ್ಲಿಂಗ್ ಉಂಟಾಗುವ ಸಮಸ್ಯೆ ಕೆಲವರಲ್ಲಿ ಕಾಣಬಹುದು. ಅದಕ್ಕೆ ಹೆದರುವ ಅಗತ್ಯ ಇರುವುದಿಲ್ಲ. ಅನಗತ್ಯವಾಗಿ ಆತಂಕ ಪಡುವ ಅಗತ್ಯವೂ ಇಲ್ಲ. ಏಕೆಂದರೆ, ಕಾಲುಗಳಲ್ಲಿ ಊತ ಉಂಟಾಗುವುದನ್ನು “ಮಾನಸಿಕ ಊತʼ ಎಂದು ಸಹ ಪರಿಗಣಿಸಲಾಗಿದೆ. ಇದು ಅತ್ಯಂತ ಸಹಜವಾಗಿ ಆಗುವಂತದ್ದು ಅಷ್ಟೇ ಅಲ್ಲ, ಕೆಲವೇ ವಾರಗಳಲ್ಲಿ ನಿವಾರಣೆಯಾಗುತ್ತದೆ. ಆದರೆ, ತೀವ್ರತರವಾದ ಊತ ಕಂಡುಬಂದರೆ ಹೆಚ್ಚಿನ ಸಮಸ್ಯೆ ಆಗಬಹುದು. ಹೀಗಾಗಿ, ವೈದ್ಯರ ಸಲಹೆ ಪಡೆದುಕೊಳ್ಳಬೇಕು.
ಸ್ತ್ರೀ ರೋಗ ತಜ್ಞರ (Gynecologist) ಪ್ರಕಾರ, ಗರ್ಭಧಾರಣೆ (Pregnancy) ಸಮಯದಲ್ಲಿ ಕಾಲುಗಳಲ್ಲಿ ಊತ (Swelling) ಉಂಟಾಗುವುದು ಸಹಜ. ಇದನ್ನು “ಮಾನಸಿಕ ಊತʼ ಎಂದು ಪರಿಗಣಿಸಲಾಗಿದ್ದರೂ ಇದು ಕೇವಲ ಭಾವನೆ ಮಾತ್ರವಲ್ಲ. ಗರ್ಭದಲ್ಲಿ ಶಿಶುವಿದ್ದಾಗ ಗರ್ಭಕೋಶ (Uterus) ಸಹಜವಾಗಿ ಹಿಗ್ಗುತ್ತದೆ. ಗಾತ್ರದಲ್ಲಿ ದೊಡ್ಡದಾಗುತ್ತದೆ. ಇದರಿಂದಾಗಿ ದೇಹದ ಕೆಳಭಾಗದ ರಕ್ತನಾಳಗಳ (Veins) ಮೇಲೆ ಒತ್ತಡ ಉಂಟಾಗುತ್ತದೆ. ಹೃದಯದಿಂದ ಬರುವ ರಕ್ತದ ಸಹಜ ಹರಿವಿಗೆ (Blood Flow) ಸ್ವಲ್ಪ ಧಕ್ಕೆಯಾಗುತ್ತದೆ. ಹಾಗೆಯೇ ನಾಳಗಳಲ್ಲಿ ದ್ರವಾಂಶದ ಶೇಖರಣೆ ಆಗಬಹುದು. ಹೀಗಾಗಿ, ಊತ ಕಂಡುಬರುತ್ತದೆ. ಕೈಗಳೂ ಊದಿಕೊಳ್ಳಬಹುದು. ಕೆಲವು ಬಾರಿ ಹಾರ್ಮೋನ್ (Hormones) ಬದಲಾವಣೆಯಿಂದಲೂ ಹೀಗಾಗುತ್ತದೆ.
Cryptic Pregnancy: ಶಾಲೆಗೆ ಹೊರಟು ನಿಂತಾಕೆಗೆ ಹೆರಿಗೆ ಆಗಿತ್ತು! ಇದು ಕ್ರಿಪ್ಟಿಕ್ ಪ್ರೆಗ್ನೆನ್ಸಿ
ಹೃದಯದಿಂದ ದೂರ ಇರುವ ಅಂಗಾಂಗಗಳಲ್ಲಿ ಕೆಲವೊಮ್ಮೆ ದ್ರವಾಂಶ (Fluid) ಹೆಚ್ಚು ಪ್ರಮಾಣದಲ್ಲಿ ಸಂಗ್ರಹವಾಗಬಹುದು. ಆದರೆ, ಹೆರಿಗೆ (Delivery) ದಿನ ಹತ್ತಿರ ಬರುತ್ತಿದ್ದಂತೆ ಇದು ಸರಿ ಹೋಗುತ್ತದೆ. ಆದರೆ, ಕೆಲವೊಮ್ಮೆ ತೀವ್ರ ಸಮಸ್ಯೆಗಳಾಗಿ ಬದಲಾಗಬಹುದು. ಪ್ರಿ ಎಕ್ಲಮ್ಸಿಯಾ, ಡೀಪ್ ವೇನ್ ಥ್ರೊಂಬೊಸಿಸ್ ನಂತಹ ಸಮಸ್ಯೆಗೆ ಮೂಲವಾಗಬಹುದು.
ಊತ ಉಂಟಾಗುವುದನ್ನು ಕೆಲವು ಮಾರ್ಗೋಪಾಯಗಳ ಮೂಲಕ ತಡೆಯಬಹುದು, ನೋಡಿಕೊಳ್ಳಿ.
• ಅತಿಯಾದ ಸೆಖೆ (Hot) ಹಾಗೂ ತೇವಾಂಶದ (Humid) ವಾತಾವರಣಕ್ಕೆ ದೀರ್ಘಸಮಯ ಒಡ್ಡಿಕೊಳ್ಳಬಾರದು.
• ಹೆಚ್ಚು ಹೊತ್ತು ನಿಂತಿರಬಾರದು (Stand). ಇದರಿಂದ ಸಮಸ್ಯೆ ಹೆಚ್ಚಾಗುತ್ತದೆ.
• ದಿನವೂ ಮಸಾಜ್ (Massage) ಮಾಡಿಕೊಳ್ಳಬೇಕು. ರಕ್ತದ ಪರಿಚಲನೆಗೆ ಇದರಿಂದ ನೆರವಾಗುತ್ತದೆ.
• ಮಲಗಿರುವಾಗ ಕಾಲುಗಳ (Feet) ಅಡಿ ದಿಂಬನ್ನು ಇರಿಸಿಕೊಳ್ಳಿ. ಹೆಚ್ಚು ಸಮಯ ಕಾಲುಗಳನ್ನು ಇಳಿಬಿಟ್ಟು ಕುಳಿತುಕೊಳ್ಳಬೇಡಿ.
• ಉಪ್ಪನ್ನು (Salt) ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಹೆಚ್ಚು ಉಪ್ಪು ಸೇವನೆಯಿಂದ ದೇಹದಲ್ಲಿ ಹೆಚ್ಚುವರಿ ದ್ರವಾಂಶ ಸಂಗ್ರಹವಾಗುತ್ತದೆ.
• ಕೆಫೀನ್ ಸೇವನೆ ಮಿತಿಯಲ್ಲಿ ಇರಲಿ. ಇದು ದೇಹವನ್ನು ಡಿಹೈಡ್ರೇಟ್ (Dehydrate) ಮಾಡುತ್ತದೆ, ಊತ ಹೆಚ್ಚಾಗಲು ಕಾರಣವಾಗುತ್ತದೆ.
• ಸಾಕಷ್ಟು ನೀರು (Drink Water) ಕುಡಿಯಬೇಕು. ಪದೇ ಪದೆ ಮೂತ್ರ ವಿಸರ್ಜನೆಗೆ ಹೋಗಬೇಕೆಂದು ಬೇಸರಿಸಿಕೊಳ್ಳದೆ ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ಕುಡಿಯಲೇ ಬೇಕಾಗುತ್ತದೆ.
• ಕಾಲಿಗೆ ಸೂಕ್ತವಾದ ಚಪ್ಪಲಿ ಧರಿಸಿ. ಬಿಗಿಯಾದ ಬಟ್ಟೆ, ಬಿಗಿ ಚಪ್ಪಲಿ ಧರಿಸಬೇಡಿ.
• ದಿನವೂ ಬೆಳಗ್ಗೆ ಸಂಜೆ ಸ್ವಲ್ಪ ಹೊತ್ತು ವಾಕ್ (Walk) ಮಾಡಿ. ಲಘುವಾದ ವ್ಯಾಯಾಮ (Light Exercise) ಮಾಡಿ. ಹಗುರವಾದ ವ್ಯಾಯಾಮ ಮಾಡುವುದರಿಂದ ಊತ ಕಡಿಮೆ ಆಗುತ್ತದೆ. ಇದಕ್ಕೆ ವೈದ್ಯರ ಸಲಹೆ ಪಡೆದುಕೊಳ್ಳಿ.
Women Health: ಗರ್ಭಿಣಿಯರು ಸ್ಕೂಟರ್ ಓಡಿಸೋದು ಎಷ್ಟು ಸುರಕ್ಷಿತ?