Asianet Suvarna News Asianet Suvarna News

Health Tips: ಜೇಬಲ್ಲಿ ಈರುಳ್ಳಿ ಇಟ್ಕೊಂಡ್ರೆ ಹೀಟ್ ಸ್ಟ್ರೋಕ್ ಕಡಿಮೆ ಆಗುತ್ತಾ?

ಬಿಸಿಲ ಧಗೆಯಿಂದ ತಪ್ಪಿಕೊಂಡ್ರೆ ಸಾಕು ಎನ್ನುವಂತಾಗಿದೆ. ಇದಕ್ಕಾಗಿ ಜನರು ನಾನಾ ಉಪಾಯ ಹುಡುಕ್ತಿದ್ದಾರೆ. ಜೇಬಿನಲ್ಲಿ ಈರುಳ್ಳಿ ಇಟ್ಕೊಂಡು ಹೋಗೋರಿದ್ದಾರೆ. ಈ ಈರುಳ್ಳಿ ನಿಮ್ಮನ್ನು ಶಾಖದಿಂದ ರಕ್ಷಿಸೋದು ಸತ್ಯವಾ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
 

Summer Health Tips Home Remedies To Avoid Heat Stroke
Author
First Published May 19, 2023, 12:42 PM IST | Last Updated May 19, 2023, 12:42 PM IST

ಭಾರತ ಬಿಸಿಲ ಧಗೆಗೆ ಕುದಿಯುತ್ತಿದೆ. ಶಾಖ ನಿರಂತರವಾಗಿ ಏರುತ್ತಿದೆ. ಮಧ್ಯಾಹ್ನ ಮನೆಯಿಂದ ಹೊರ ಬೀಳೋದು ಕಷ್ಟವಾಗಿದೆ. ಭಾರತದ ಅನೇಕ ಕಡೆ ತಾಪಮಾನ 40 ಡಿಗ್ರಿಗಿಂತ ಹೆಚ್ಚಿದೆ. ಶಾಖ ಏರಿಕೆಯಿಂದ ಹೀಟ್ ಸ್ಟ್ರೋಕ್ ಅಪಾಯ ಹೆಚ್ಚಾಗಿದೆ. ಹೀಟ್ ಸ್ಟ್ರೋಕ್ ನಿಂದ ರಕ್ಷಣೆ ಪಡೆಯಲು ಕೆಲವರು ಜೇಬಿನಲ್ಲಿ ಈರುಳ್ಳಿ ಇಟ್ಟುಕೊಂಡು ಹೋಗ್ತಾರೆ. ಜೇಬಿನಲ್ಲಿ ಈರುಳ್ಳಿ ಇಟ್ಟುಕೊಂಡ್ರೆ ಬಿಸಿಲು ಹಾಗೂ ಹೀಟ್ ಸ್ಟ್ರೋಕ್ ನಿಂದ ಮುಕ್ತಿ ಸಿಗುತ್ತಾ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಜೇಬಿನಲ್ಲಿ ಈರುಳ್ಳಿ (Onion) ಇಟ್ರೆ ಹೀಟ್ ಸ್ಟ್ರೋಕ್ (Heat Stroke ) ಕಾಡಲ್ವಾ? : ಹಿಂದಿನ ಕಾಲದಲ್ಲಿ ವಾಹನ ಸೌಲಭ್ಯ ಇರಲಿಲ್ಲ. ತುಂಬಾ ದೂರ ನಡೆದೇ ಹೋಗ್ಬೇಕಿತ್ತು. ಈ ಕಾರಣಕ್ಕಾಗಿ ಜನರು ಬೇಸಿಗೆಯಲ್ಲಿ ತಮ್ಮ ಜೇಬಿನಲ್ಲಿ ಈರುಳ್ಳಿಯನ್ನು ಇಟ್ಟುಕೊಳ್ತಿದ್ದರು. ಈರುಳ್ಳಿ ಬಾಷ್ಪಶೀಲ ತೈಲಗಳನ್ನು ಹೊಂದಿರುತ್ತದೆ. ಇದು ದೇಹದ ಉಷ್ಣತೆಯನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ. ಅದನ್ನು ಜೇಬಿನಲ್ಲಿ ಇಟ್ಟುಕೊಂಡ್ರೆ ಶಾಖದ ಹೊಡೆತ ಕಡಿಮೆಯಾಗುತ್ತದೆ ಎಂದು ಜನರು ನಂಬಿದ್ದರು. ಆದ್ರೆ ಜೇಬಿನಲ್ಲಿ ಈರುಳ್ಳಿ ಇಡೋದ್ರಿಂದ ಯಾವುದೇ ಲಾಭವಿಲ್ಲ ಎನ್ನುತ್ತಾರೆ ತಜ್ಞರು. ಈರುಳ್ಳಿ ಇಟ್ಕೊಂಡು ಪ್ರಯಾಣ ಬೆಳೆಸಿದ್ರೆ ಹೀಟ್ ಸ್ಟ್ರೋಕ್ ಗೆ ಒಳಗಾಗೋದಿಲ್ಲ ಎಂಬುದು ತಪ್ಪು ಕಲ್ಪನೆ ಎನ್ನುವ ತಜ್ಞರು ಆಹಾರ ( Food) ದಲ್ಲಿ ಈರುಳ್ಳಿ ಸೇರಿಸುವಂತೆ ಸಲಹೆ ನೀಡ್ತಾರೆ.

Summer Health: ಬಿಸಿಲಿನ ಹೊಡೆತದಿಂದ ಕಾಡೋ ಆರೋಗ್ಯ ಸಮಸ್ಯೆಗೆ ಪರಿಹಾರವೇನು?

ಆಯುರ್ವೇದ ಹೇಳೋದೇನು? : ಈರುಳ್ಳಿ ಸೇವನೆ ಮಾಡೋದ್ರಿಂದ ಹೀಟ್ ಸ್ಟ್ರೋಕ್ ಅಪಾಯ ಕಡಿಮೆ. ಹಾಗೆಯೇ  ಬಿಸಿಲಿನಿಂದ ನಿಮ್ಮನ್ನು ರಕ್ಷಿಸಲು ಈರುಳ್ಳಿ ಸಹಾಯ ಮಾಡುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಆಯುರ್ವೇದ ವೈದ್ಯರ ಪ್ರಕಾರ, ಈರುಳ್ಳಿಯನ್ನು ಜೀರಿಗೆ ಪುಡಿ ಮತ್ತು ಜೇನುತುಪ್ಪದೊಂದಿಗೆ ತಿನ್ನುವುದ್ರಿಂದ ಹೀಟ್ ಸ್ಟ್ರೋಕ್  ತಡೆಯಬಹುದು. ಜೀರಿಗೆ ಮತ್ತು ಈರುಳ್ಳಿಯನ್ನು ಹುರಿದು ಪುಡಿ ಮಾಡಬೇಕು. ನಂತ್ರ ಅದನ್ನು ಜೇನುತುಪ್ಪದೊಂದಿಗೆ ಬೆರೆಸಿದ ತಿನ್ನಬೇಕು. ಈರುಳ್ಳಿಯಲ್ಲಿ ಸೋಡಿಯಂ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇವೆರಡೂ ನಿರ್ಜಲೀಕರಣಕ್ಕೆ ತುಂಬಾ ಸಹಕಾರಿ. ಹಸಿ ಈರುಳ್ಳಿ ಕೂಡ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ, ಇದರಿಂದಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ದೂರ ಉಳಿಯುತ್ತದೆ. ಪ್ರತಿದಿನ ಒಂದು ಮಧ್ಯಮ ಗಾತ್ರದ ಹಸಿ ಈರುಳ್ಳಿಯನ್ನು ತಿನ್ನಲು ತಜ್ಞರು ಶಿಫಾರಸು ಮಾಡುತ್ತಾರೆ.

ಹೀಟ್ ಸ್ಟ್ರೋಕ್ ನಿಂದ ರಕ್ಷಿಸಿಕೊಳ್ಳಲು ಆಹಾರ ಹೀಗಿರಲಿ : ಬೇಸಿಗೆಯಲ್ಲಿ ಹೀಟ್ ಸ್ಟ್ರೋಕ್ ನಿಂದ ತಪ್ಪಿಸಿಕೊಳ್ಳಲು ನೀವು ಸಾಧ್ಯವಾದಷ್ಟು ನೀರು ಕುಡಿಯಬೇಕು. ದಿನವಿಡೀ ಕನಿಷ್ಠ 3-4 ಲೀಟರ್ ನೀರನ್ನು ಕುಡಿಯಬೇಕು. ಸದಾ ನಿಮ್ಮ ಬಳಿ ನೀರಿರುವಂತೆ ನೋಡಿಕೊಳ್ಳಿ. 
ಬೇಸಿಗೆಯಲ್ಲಿ ಪ್ರತಿದಿನ ತಾಜಾ ಹಣ್ಣು, ತರಕಾರಿ ಮತ್ತು ಜ್ಯೂಸ್‌ಗಳನ್ನು ಸೇವಿಸಬೇಕು. ಇವುಗಳಲ್ಲಿ ನೀರಿನ ಮಟ್ಟ ಅಧಿಕವಾಗಿರುತ್ತದೆ. ದೇಹ ನಿರ್ಜಲೀಕರಣಗೊಳ್ಳುವುದನ್ನು ಇದು ತಪ್ಪಿಸುತ್ತದೆ. ಕಿತ್ತಳೆ ಹಣ್ಣು, ಅನಾನಸ್ ಹಣ್ಣು, ಕಲ್ಲಂಗಡಿ, ದ್ರಾಕ್ಷಿಯಂತಹ ಹಣ್ಣುಗಳನ್ನು ಪ್ರತಿದಿನ ಸೇವಿಸಬೇಕು.

Summer Health Tips: ಬೇಸಿಗೆಯಲ್ಲಿ ವಿಪರೀತ ಸುಸ್ತಾಗೋದು ಯಾಕೆ, ತಜ್ಞರು ಏನಂತಾರೆ?

ತರಕಾರಿಯಲ್ಲಿ ಈರುಳ್ಳಿ ಜೊತೆ ಪುದೀನಾ ಮತ್ತು ಸೌತೆಕಾಯಿ ಸೇರಿಸಬೇಕು. ನೀವು ಇವುಗಳನ್ನು ಸೇರಿದಿ ಸಲಾಡ್ ಮಾಡಿ ತಿನ್ನಬೇಕು. ಇದು ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಮೊಸರು, ಮಜ್ಜಿಗೆ ಅಥವಾ ಲಸ್ಸಿಯನ್ನು ಕೂಡ ನೀವು ಸೇವಿಸಿ. ಇದರಿಂದ ದೇಹ ತಂಪಾಗುತ್ತದೆ. ಜೀರ್ಣಕ್ರಿಯೆ ಸುಲಭವಾಗುತ್ತದೆ. ಪುದೀನಾ ಟೀಯನ್ನು ನೀವು ಡಯಟ್ ನಲ್ಲಿ ಸೇರಿಸಬೇಕು. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾದ್ರೆ ಹೀಟ್ ಸ್ಟ್ರೋಕ್ ಅಪಾಯ ಕಾಡುತ್ತದೆ. ಹಾಗಾಗಿ ನೀವು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. 

ಈ ವಿಷ್ಯಕ್ಕೂ ಆದ್ಯತೆ ನೀಡಿ : ಬಿಸಿಲು ಹೆಚ್ಚಾಗಿರುವ ಕಾರಣ ಜನರು ಆಹಾರದ ಜೊತೆ ಇನ್ನೂ ಕೆಲ ವಿಷ್ಯವನ್ನು ಗಮನದಲ್ಲಿಟ್ಟುಕೊಳ್ಳಬೇಕು.  ಖಾಲಿ ಹೊಟ್ಟೆಯಲ್ಲಿ ಮನೆಯಿಂದ ಹೊರಗೆ ಹೋಗಬಾರದು. ಬಿಳಿ ಅಥವಾ ತಿಳಿ ಬಟ್ಟೆ ಧರಿಸಿ. ಹೊರಗೆ ಹೋಗುವಾಗ ಛತ್ರಿ, ಹತ್ತಿ ಕರವಸ್ತ್ರ, ಟವೆಲ್ ಇಟ್ಟುಕೊಳ್ಳಿ.  
 

Latest Videos
Follow Us:
Download App:
  • android
  • ios