ಕೊರೋನಾ ಸೋಂಕಿನಿಂದ ರಕ್ಷಣೆ ಪಡೆಯಲು ಧರಿಸುವ ಮಾಸ್‌ಕ್ನಿಂದಾಗಿ ಹೊಸ ಚರ್ಮ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿದ್ದು, ಮುಖದ ಮೇಲೆ ‘ಮಾಸ್ಕ್ ಆಕ್ನೆ’ ಎಂಬ ಮೊಡವೆಗಳು ಸೃಷ್ಟಿಯಾಗುತ್ತಿವೆ. ಹೀಗಾಗಿ ಮಾಸ್ಕ್ ಧರಿಸುವ ವೇಳೆ ಸೂಕ್ತ ಮುನ್ನೆಚ್ಚರಿಕೆ ಪಾಲಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

"

ಸುದೀರ್ಘ ಸಮಯ ಮಾಸ್ಕ್ ಧರಿಸುವುದು ಹಾಗೂ ಅದರಿಂದ ಚರ್ಮದ ಮೇಲೆ ಉಂಟಾಗುವ ದುಷ್ಪರಿಣಾಮದಿಂದಾಗಿ ಮೂಗು, ಕೆನ್ನೆ, ಗಲ್ಲ ಹಾಗೂ ಬಾಯಿ ಸುತ್ತಲೂ ಮೊಡವೆಗಳು ಉಂಟಾಗುತ್ತಿವೆ.

 

ಮಾಸ್ಕ್ ಹಾಕಿದಾಗ ಉಸಿರಾಡಲು ಹೊರಗಡೆಯಿಂದ ಸುಲಭವಾಗಿ ಗಾಳಿ ಬರುವುದಿಲ್ಲ. ಹೀಗಾಗಿ ಹೆಚ್ಚಾಗಿ ಬೆವರು ಹೊರಹೊಮ್ಮುತ್ತದೆ. ಜೊತೆಗೆ ಮಾಸ್ಕ್ ಆ ಭಾಗದಲ್ಲಿ ಉಜ್ಜುವುದರಿಂದ ಹಾಗೂ ಮಾಸ್ಕ್ ಸ್ವಚ್ಛತೆಯಿಂದ ಕೂಡಿರದಿದ್ದರೆ ಮೊಡವೆಗಳು ಉಂಟಾಗುತ್ತವೆ.

ಇನ್ನು ಮಾಸ್ಕ್ ಬಿಗಿಯಾಗಿ ಹಾಕುವುದರಿಂದ ಮುಖದ ಮೇಲೆ ಚಿಕ್ಕ ಚಿಕ್ಕ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಎನ್-95 ಮಾಸ್‌ಕ್ ಹಾಕುವುದರಿಂದ ಮೂಗಿನ ಮೇಲಿನ ಭಾಗದಲ್ಲಿ ಚರ್ಮ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ರಾಜಾಜಿನಗರ ಇಎಸ್‌ಐ ಆಸ್ಪತ್ರೆ ಚರ್ಮರೋಗ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಎಸ್. ಗಿರೀಶ್ ಹೇಳುತ್ತಾರೆ.

ಏನು ಮಾಡಬೇಕು?:

ಚರ್ಮದ ಮೇಲಿನ ಕೊಳೆ ಸ್ವಚ್ಛಗೊಳಿಸಲು ಕ್ಲಿನ್ಸರ್ ಜೆಲ್‌ನಿಂದ ಮುಖ ತೊಳೆಯಬೇಕು. ಮಾಸ್ಕ್ ಧರಿಸುವ ಮುನ್ನ ಮೇಕಪ್ ಹಾಕಬಾರದು. ಹೊಸದಾಗಿ ಬೇರೆ ಬೇರೆ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಉಪಯೋಗಿಸಬಾರದು.

ಉತ್ತಮ ಗುಣಮಟ್ಟದ ಮಾಸ್‌ಕ್ ಬಳಸಬೇಕು. ಯಾವುದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರೂ ಕನಿಷ್ಠ ಪ್ರತಿ 4 ಗಂಟೆಗೆ 15 ನಿಮಿಷ ಮಾಸ್ಕ್ ತೆಗೆಯಬೇಕು. ಕೊರೋನಾ ಮಾರ್ಗಸೂಚಿ ಪಾಲನೆಯೊಂದಿಗೆ ಆದಷ್ಟೂ ಕಡಿಮೆ ಸಮಯ ಮಾಸ್ಕ್ ಬಳಸಬೇಕು ಎಂದು ಸಲಹೆ ನೀಡುತ್ತಾರೆ.

 

ಮಾಸ್ಕ್‌ನಿಂದ ಉಂಟಾಗುವ ಮೊಡವೆಗಳ ಚಿಕಿತ್ಸೆಗೆ ನಿತ್ಯ ಸುಮಾರು 15 ಪ್ರಕರಣಗಳು ನನ್ನ ಬಳಿ ಬರುತ್ತವೆ. ಇದನ್ನು ‘ಮಾಸ್ಕ್ ಆಕ್ನೆ’ ಎಂದೇ ಕರೆಯುತ್ತಾರೆ. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರೆ ಸಮಸ್ಯೆ ಬಾರದಂತೆ ತಡೆಯಬಹುದು. ಸಮಸ್ಯೆಯಾದರೆ ಚರ್ಮರೋಗ ತಜ್ಞರನ್ನು ಸಂಪರ್ಕಿಸಬಹುದು ಎಂದಿದ್ದಾರೆ ಹಿರಿಯ ಚರ್ಮರೋಗ ತಜ್ಞ ಡಾ.ಎಂ.ಎಸ್. ಗಿರೀಶ್.

ಮಾಸ್ಕ್ ಹೀಗೆ ಬಳಸಿ

ಬಟ್ಟೆ ಮಾಸ್ಕ್ ಬಳಸುತ್ತಿದ್ದರೆ ನಿತ್ಯ ಮಾಸ್ಕ್ ಅನ್ನು ಸ್ವಚ್ಛಗೊಳಿಸಬೇಕು. ಬಳಸಿ ಬಿಸಾಡುವ ಮಾಸ್ಕ್ ಉಪಯೋಗಿಸುತ್ತಿದ್ದರೆ ಒಂದು ಮಾಸ್ಕ್ ಅನ್ನು ಒಂದೇ ಸಲ ಉಪಯೋಗಿಸಬೇಕು. ಎನ್-95 ಮಾಸ್‌ಕ್ ಬಳಸುತ್ತಿದ್ದರೆ ಮೂಗಿನ ಭಾಗದ ಬಳಿ ಸಿಲಿಕಾನ್ ಜೆಲ್ ಸ್ಟ್ರಿಪ್ ಉಪಯೋಗಿಸಬೇಕು.