Kids Health : ಮಕ್ಕಳಿಗೆ ಬೆಸ್ಟ್ ಈ ಯೋಗಾಸನ, ತಪ್ಪದೇ ಮಾಡಿದರೆ ಸುಧಾರಿಸುತ್ತೆ ಆರೋಗ್ಯ
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಎಂಬ ಗಾದೆಯೊಂದಿದೆ. ಬಾಲ್ಯದಲ್ಲಿಯೇ ಮಕ್ಕಳಿಗೆ ಅನೇಕ ವಿಷ್ಯಗಳನ್ನು ಕಲಿಸ್ಬೇಕು. ಅದ್ರಲ್ಲಿ ಯೋಗ ಕೂಡ ಒಂದು. ಯೋಗ ಕೇವಲ ದೇಹಕ್ಕೆ ಮಾತ್ರವಲ್ಲ ಮನಸ್ಸು, ಬುದ್ಧಿಯ ವೃದ್ಧಿಗೆ ನೆರವಾಗುತ್ತದೆ. ಹಾಗಾಗಿ ಕೆಲ ಆಸನಗಳನ್ನು ಮಕ್ಕಳಿಗೆ ನಿಯಮಿತವಾಗಿ ಮಾಡಿಸುವ ಅವಶ್ಯಕತೆಯಿದೆ.
5000 ವರ್ಷಗಳ ಇತಿಹಾಸ (History) ವನ್ನು ಯೋಗ (Yoga) ಹೊಂದಿದೆ. ಹಿಂದೆ ಋಷಿ – ಮುನಿಗಳು ಯೋಗವನ್ನು ಮಾಡ್ತಿದ್ದರು. ಇತ್ತೀಚಿನ ದಿನಗಳಲ್ಲಿ ಯೋಗದ ಪ್ರಸಿದ್ಧಿ ಹೆಚ್ಚಾಗಿದೆ. ಆರೋಗ್ಯ (Health ) ಕಾಪಾಡಿಕೊಳ್ಳಲು ಜನರು ಯೋಗ ಮೊರೆ ಹೋಗ್ತಿದ್ದಾರೆ. ಸಾಮಾನ್ಯವಾಗಿ ಯುವ ಜನತೆಗೆ ಹಾಗೂ ಹಿರಿಯ ನಾಗರಿಕರಿಗೆ ಸೂಕ್ತವೆನ್ನಿಸುವ ಯೋಗಗಳನ್ನು ನಾವು ನೋಡ್ತೇವೆ. ಆದ್ರೆ ಮಕ್ಕಳು ಯಾವ ಯೋಗ ಮಾಡ್ಬೇಕು ಎಂಬುದರ ಬಗ್ಗೆ ಸರಿಯಾದ ಮಾಹಿತಿ ಪಡೆಯುವುದಿಲ್ಲ. ಮಕ್ಕಳಿಗೂ ಯೋಗ ಬಹಳ ಮುಖ್ಯ. ಮಕ್ಕಳ ಆರೋಗ್ಯ ವೃದ್ಧಿಯಾಗ್ಬೇಕು ಹಾಗೆ ಅವರ ಬುದ್ಧಿಮಟ್ಟ ಹೆಚ್ಚಾಗ್ಬೇಕು, ನೆನಪಿನ ಶಕ್ತಿ ಹೆಚ್ಚಾಗ್ಬೇಕು ಎನ್ನುವವರು ಮಕ್ಕಳಿಗೆ ಕೆಲ ಯೋಗಾಸನಗಳನ್ನು ಮಾಡಿಸ್ಬೇಕು. ಇಂದು ಮಕ್ಕಳಿಗೆ ಯೋಗ್ಯವಾದ ಯೋಗಾಸನಗಳನ್ನು ಹೇಳ್ತೇವೆ.
ಮಕ್ಕಳಿಗಾಗಿ ಸೂಕ್ತವಾದ ಯೋಗಾಸನ :
ಪ್ರಾಣಾಯಾಮ : ಪ್ರಾಣಾಯಾಮ (Pranayama) ಉಸಿರಾಟದ ಸಂಬಂಧಿತ ಯೋಗವಾಗಿದೆ. ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫರ್ಮೇಷನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪ್ರಾಣಾಯಾಮವು ಉಸಿರಾಟದ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ. ಮಕ್ಕಳಿಗೆ ಪ್ರಾಣಾಯಾಮವನ್ನು ನಿಯಮಿತವಾಗಿ ಮಾಡಿಸ್ಬೇಕು. 5 ರಿಂದ 10 ನಿಮಿಷಗಳ ಕಾಲ ಪ್ರಾಣಾಯಾಮ ಮಾಡಲು ಮಕ್ಕಳಿಗೆ ತರಬೇತಿ ನೀಡ್ಬೇಕು.
ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸೋಕೆ ಈ ಹಣ್ಣು ತಿನ್ಬೋದು
ಬಾಲಾಸನ : ಮಕ್ಕಳಿಗೆ ಮಾಡಿಸಬಹುದಾದ ಇನ್ನೊಂದು ಆಸನ ಬಾಲಾಸನ. ಇಂಗ್ಲಿಷ್‌ನಲ್ಲಿ ಈ ಆಸನವನ್ನು ಚೈಲ್ಡ್ ಪೋಸ್ ಎಂದೂ ಕರೆಯುತ್ತಾರೆ. ಈ ಯೋಗಾಸನವು ಮಕ್ಕಳ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ತಾಡಾಸನ : ಸಂಶೋಧನಾ ವರದಿಗಳ ಪ್ರಕಾರ, ಚಿಕ್ಕ ಮಕ್ಕಳಿಗೆ ಮತ್ತು ಶಾಲೆಗೆ ಹೋಗುವ ಮಕ್ಕಳಿಗೆ ತಾಡಾಸನ ಹೆಚ್ಚು ಪ್ರಯೋಜನಕಾರಿ. ಈ ಯೋಗಾಸನವು ಮಗುವಿನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ತಾಡಾಸನ ಮಾಡಿದ್ರೆ ಮಕ್ಕಳ ಹೈಟ್ ಹೆಚ್ಚಾಗುತ್ತದೆ. ತಾಡಾಸನವನ್ನು 5 ರಿಂದ 6 ಬಾರಿ ಮಾಡಬಹುದು.
ಮನೆಯಲ್ಲಿ ನೀವೇ ಕಲಿತು ಮಾಡಬಹುದಾದ ಸರಳ ಯೋಗಾಸನಗಳು
ವೃಕ್ಷಾಸನ : ವೃಕ್ಷಾಸನವನ್ನು ಇಂಗ್ಲಿಷ್‌ನಲ್ಲಿ ಟ್ರೀ ಪೋಸ್ ಎಂದು ಕರೆಯಲಾಗುತ್ತದೆ. ಈ ಯೋಗಾಸನವು ಮಕ್ಕಳಿಗೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ವೃಕ್ಷಾಸನ ಮಕ್ಕಳ ಮೆದುಳಿಗೆ ಪ್ರಯೋಜನಕಾರಿ. ಮಕ್ಕಳಿಗೆ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಹಾಗೆ ಆತಂಕ ಮತ್ತು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಭುಜಂಗಾಸನ : ಭುಜಂಗಾಸನವನ್ನು ಇಂಗ್ಲಿಷ್‌ನಲ್ಲಿ ಕೋಬ್ರಾ ಪೋಸ್ ಎಂದು ಕರೆಯಲಾಗುತ್ತದೆ. ಮಕ್ಕಳ ದೇಹವು ಮೃದುವಾಗಿರುತ್ತದೆ. ಆದರೆ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಯೋಗಾಭ್ಯಾಸ ಶುರು ಮಾಡಿದ್ರೆ ದೇಹ ಅದಕ್ಕೆ ಹೊಂದಿಕೊಳ್ಳುತ್ತದೆ. ಮಕ್ಕಳು ಭುಜಂಗಾಸನವನ್ನು 3 ರಿಂದ 4 ಬಾರಿ ಮಾಡಬಹುದು.
ಧನುರಾಸನ : ಮಕ್ಕಳ ಭುಜಗಳು, ಮೊಣಕಾಲುಗಳು, ಬೆನ್ನುಮೂಳೆ ಮತ್ತು ಕಣಕಾಲುಗಳನ್ನು ಬಲಪಡಿಸಲು ಧನುರಾಸನವನ್ನು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಮಕ್ಕಳು ಆರಾಮವಾಗಿ ಈ ಆಸನವನ್ನು ಮಾಡಬಹುದು.
ಸುಖಾಸನ : ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಈ ಯೋಗಾಸನವು ಮಕ್ಕಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರನ್ನಾಗಿಸಲು ಸಹಾಯ ಮಾಡುತ್ತದೆ. ಸುಖಾಸನದಲ್ಲಿ ಮಕ್ಕಳು 15 ರಿಂದ 20 ನಿಮಿಷಗಳ ಕಾಲ ಇರಬೇಕು.
ಆರಂಭದಲ್ಲಿ ಮಕ್ಕಳಿಗೆ ಈ ಯೋಗಾಸನಗಳು ಕಠಿಣವೆನಿಸಬಹುದು. ಆದ್ರೆ ನಿಧಾನವಾಗಿ ಇದಕ್ಕೆ ಹೊಂದಿಕೊಳ್ತಾರೆ. ಹಾಗೆಯೇ ಮಕ್ಕಳಿಗೆ ಯಾವುದೇ ಆಸನವನ್ನು ಅತಿಯಾಗಿ ಹಾಗೂ ಹೆಚ್ಚು ಒತ್ತಡ ಹಾಕಿ ಮಾಡಿಸಬಾರದು. ಶಿಕ್ಷಕರು ಅಥವಾ ಪಾಲಕರ ಮುಂದೆ ಆಸನ ಮಾಡಲು ಮಕ್ಕಳಿಗೆ ಸಲಹೆ ನೀಡ್ಬೇಕು.ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಪ್ರಕಟವಾದ ವರದಿಯ ಪ್ರಕಾರ, ಮಕ್ಕಳಿಗೆ ಯೋಗವು ಆಟವಿದ್ದಂತೆ. ಐದರಿಂದ 6 ವರ್ಷದ ಮಕ್ಕಳು ಯೋಗಾಭ್ಯಾಸ ಶುರು ಮಾಡ್ಬಹುದು. ಹೃದಯ ಸಮಸ್ಯೆ, ಮೈಗ್ರೇನ್, ತಲೆನೋವು ಅಥವಾ ನಿದ್ರಾಹೀನತೆಯಂತಹ ಸಮಸ್ಯೆಯಿದ್ದರೆ ಮೊದಲು ವೈದ್ಯರನ್ನು ಭೇಟಿಯಾಗಿ ನಂತ್ರ ಯೋಗಾಭ್ಯಾಸ ಮಾಡ್ಬೇಕು.