ಮಾರ್ಚ್‌ ಅಂತ್ಯದ ವೇಳೆಗೆ ಎಚ್‌3ಎನ್‌2 ಇಳಿಮುಖ: ಕೇಂದ್ರ ಸರ್ಕಾರ ಆಭಯ

ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಎಚ್‌3ಎನ್‌2 ವೈರಸ್‌ ಹಾವಳಿ ಮಾರ್ಚ್‌ ಅಂತ್ಯದಿಂದ ಇಳಿಮುಖವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಲ್ಲದೆ, ದೇಶಾದ್ಯಂತ ಈ ವೈರಸ್‌ ಬಗ್ಗೆ ಸರ್ಕಾರ ತೀವ್ರ ನಿಗಾ ವಹಿಸಿದೆ ಎಂದೂ ತಿಳಿಸಿದೆ. 

seasonal influenza cases to decline by march end assures union health ministry gvd

ನವದೆಹಲಿ (ಮಾ.11): ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಎಚ್‌3ಎನ್‌2 ವೈರಸ್‌ ಹಾವಳಿ ಮಾರ್ಚ್‌ ಅಂತ್ಯದಿಂದ ಇಳಿಮುಖವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಲ್ಲದೆ, ದೇಶಾದ್ಯಂತ ಈ ವೈರಸ್‌ ಬಗ್ಗೆ ಸರ್ಕಾರ ತೀವ್ರ ನಿಗಾ ವಹಿಸಿದೆ ಎಂದೂ ತಿಳಿಸಿದೆ. ‘ಎಚ್‌3ಎನ್‌2 ಪ್ರತಿ ವರ್ಷ ನಿರ್ದಿಷ್ಟ ಋುತುವಿನಲ್ಲಿ ಹರಡುವ ವೈರಸ್‌ ಆಗಿದೆ. ಬೇರೆ ಅನಾರೋಗ್ಯದ ಸಮಸ್ಯೆಯಿರುವ ಸಣ್ಣ ಮಕ್ಕಳು ಹಾಗೂ ವೃದ್ಧರು ಇಂತಹ ವೈರಸ್‌ಗಳಿಂದ ಹೆಚ್ಚು ತೊಂದರೆಗೆ ಒಳಗಾಗುತ್ತಾರೆ. ಜಗತ್ತಿನಾದ್ಯಂತ ಕೆಲ ನಿರ್ದಿಷ್ಟ ತಿಂಗಳುಗಳಲ್ಲಿ ಇಂತಹ ವೈರಸ್‌ಗಳು ಹರಡುತ್ತವೆ. 

ಭಾರತದಲ್ಲಿ ಸೀಸನಲ್‌ ಇನ್‌ಫ್ಲುಯೆಂಜಾ ವರ್ಷಕ್ಕೆ ಎರಡು ಬಾರಿ ಹರಡುತ್ತದೆ. ಜನವರಿಯಿಂದ ಮಾರ್ಚ್‌ ನಡುವೆ ಒಮ್ಮೆ ಹಾಗೂ ಮಳೆಗಾಲದ ನಂತರ ಇನ್ನೊಮ್ಮೆ ಇಂತಹ ವೈರಸ್‌ ಹಾವಳಿ ಇರುತ್ತದೆ. ಈಗ ದೇಶದಲ್ಲಿ ಹರಡುತ್ತಿರುವ ಇನ್‌ಫ್ಲುಯೆಂಜಾ ವೈರಸ್‌ ಅಬ್ಬರ ಮಾಚ್‌ರ್‍ ಅಂತ್ಯದಿಂದ ಇಳಿಮುಖವಾಗಲಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆರೋಗ್ಯ ಸಚಿವಾಲಯವು ಸಮಗ್ರ ರೋಗ ವಿಚಕ್ಷಣ ಕಾರ್ಯಕ್ರಮ (ಐಡಿಎಸ್‌ಪಿ)ದ ಮೂಲಕ ದೇಶದ ಎಲ್ಲ ರಾಜ್ಯಗಳಲ್ಲೂ ಎಚ್‌3ಎನ್‌2 ವೈರಸ್‌ ಬಗ್ಗೆ ನಿಗಾ ವಹಿಸಿದೆ ಎಂದು ಹೇಳಿದೆ.

H3N2 ವೈರಲ್​ ಸೋಂಕಿಗೆ ರಾಜ್ಯದಲ್ಲಿ ಮೊದಲ ಬಲಿ: ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ತಪಾಸಣೆ

ಈವರೆಗೆ 3038 ಇನ್‌ಫ್ಲುಯೆಂಜಾ ಕೇಸ್‌: ಈ ವರ್ಷ ಮಾ.9ರವರೆಗೆ ದೇಶದಲ್ಲಿ ಎಚ್‌3ಎನ್‌2 ವೈರಸ್‌ ಸೇರಿದಂತೆ ಇನ್ನಿತರ ಮಾದರಿಯ 3038 ಇನ್‌ಫ್ಲುಯೆಂಜಾ ವೈರಸ್‌ ಪ್ರಕರಣಗಳು ದೃಢಪಟ್ಟಿವೆ. ಜನವರಿಯಲ್ಲಿ 1245, ಫೆಬ್ರವರಿಯಲ್ಲಿ 1307, ಮಾಚ್‌ರ್‍ನಲ್ಲಿ 486 ಪ್ರಕರಣಗಳು ವಿವಿಧ ಪ್ರಯೋಗಾಲಯಗಳಲ್ಲಿ ಪತ್ತೆಯಾಗಿವೆ ಎಂದೂ ಆರೋಗ್ಯ ಸಚಿವಾಲಯ ತಿಳಿಸಿದೆ.

ಏನಿದು ಎಚ್‌3ಎನ್‌2?: ಎಚ್‌3ಎನ್‌2 ಎಂಬುದು ‘ಇನ್‌ಫ್ಲುಯೆಂಜಾ ಎ’ ವೈರಸ್‌ನ 2 ಜೀನ್‌ಗಳಿಂದ ಸೃಷ್ಟಿಯಾದ ತಳಿ. ಇದರ ಉಪತಳಿ ಈಗ ಭಾರತದಲ್ಲಿ ಕೆಮ್ಮು, ನೆಗಡಿ, ಜ್ವರಕ್ಕೆ ಕಾರಣವಾಗುತ್ತಿದೆ. 1968ರಲ್ಲೇ ಮೊದಲ ಬಾರಿ ಅಮೆರಿಕದಲ್ಲಿ ಎಚ್‌3ಎನ್‌2 ವರದಿ ಆಗಿತ್ತು.

ಲಕ್ಷಣಗಳೇನು?
ಕೆಮ್ಮು, ವಾಕರಿಕೆ, ವಾಂತಿ, ಗಂಟಲು ನೋವು, ಸ್ನಾಯುಸೆಳೆತ, ಅತಿಸಾರ

ಏನು ಮಾಡಬೇಕು?
- ಆಗಾಗ್ಗೆ ಸೋಪು, ನೀರು ಬಳಸಿ ಕೈಗಳನ್ನು ತೊಳೆಯಿರಿ
- ಮಾಸ್ಕ್ ಧರಿಸಿ. ಹೆಚ್ಚು ಜನರ ಇರುವ ಪ್ರದೇಶಗಳಲ್ಲಿ ಓಡಾಡುವುದನ್ನು ತಪ್ಪಿಸಿ
- ಪದೇ ಪದೇ ಮೂಗು, ಬಾಯಿಯನ್ನು ಮುಟ್ಟಬೇಡಿ
- ಸಾಕಾಗುವಷ್ಟು ನೀರು, ದ್ರವ ಪದಾರ್ಥ ಸೇವಿಸಿ
- ಜ್ವರ ಅಥವಾ ಮೈಕೈ ನೋವು ಇದ್ದರೆ ಪ್ಯಾರಾಸಿಟಮಾಲ್‌ ಸೇವಿಸಿ

ಏನು ಮಾಡಬಾರದು?
- ಕೈಕುಲುಕುವುದು ಅಥವಾ ಸ್ಪರ್ಶಿಸುವ ರೀತಿ ಶುಭಾಶಯ ಕೋರಬೇಡಿ
- ಸಾರ್ವಜನಿಕ ಸ್ಥಳಗಳಲ್ಲಿ ಉಗಿಯಬೇಡಿ
- ವೈದ್ಯರನ್ನು ಸಂಪರ್ಕಿಸದೆ ಸ್ವತಃ ಔಷಧಗಳನ್ನು ಸೇವಿಸಬೇಡಿ
- ಇನ್ನೊಬ್ಬರಿಗೆ ತೀರಾ ಸಮೀಪ ಕುಳಿತು ತಿನ್ನಬೇಡಿ

ಎಚ್‌3ಎನ್‌2 ತಡೆಗೆ ರಾಜ್ಯ ಸರ್ಕಾರದ ಮುನ್ನೆಚ್ಚರಿಕೆ, ಆಸ್ಪತ್ರೆ ಸಿಬ್ಬಂದಿಗೆ ಮಾಸ್ಕ್‌ ಕಡ್ಡಾಯ

ಏರುಗತಿಯಲ್ಲಿ ಕೋವಿಡ್‌, 440 ಹೊಸ ಕೇಸು, 3 ಸಾವು: ಭಾರತದಲ್ಲಿ ಹೊಸ ಕೋವಿಡ್‌ ಪ್ರಕರಣಗಳು ಏರುತ್ತಲೇ ಇದ್ದು, ಶುಕ್ರವಾರ ಒಂದೇ ದಿನ 440 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿದೆ ಹಾಗೂ ದೇಶದಲ್ಲಿ ನೂವರು ಸಾವನ್ನಪ್ಪಿದ್ದಾರೆ. ಹೊಸ ಪ್ರಕರಣಗಳ ದಾಖಲಾತಿಯು ಹೆಚ್ಚಾಗಿರುವುದರಿಂದ ಸಕ್ರಿಯ ಪ್ರಕರಣಗಳು 3294ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 4,46,89,512ಕ್ಕೆ ತಲುಪಿದೆ. ಭಾರತದ ಸಕ್ರಿಯ ಪ್ರಕರಣಗಳ ಪ್ರಮಾಣವು ಶೇ.0.01 ರಷ್ಟಿದೆ. ದೇಶದಲ್ಲಿ ಈವರೆಗೂ 220.64 ಕೋಟಿ ಡೋಸ್‌ ಕೋವಿಡ್‌ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

Latest Videos
Follow Us:
Download App:
  • android
  • ios