ಊಟದಲ್ಲಿ ಉಪ್ಪಿಲ್ಲ ಅಂದ್ರೆ ನಾಲಿಗೆಗೆ ರುಚಿ ಹತ್ತೋದಿಲ್ಲ. ಆದ್ರೆ ಈ ಉಪ್ಪು ಎಂಬ ಮೋಸ್ಟ್ ವಾಂಟೆಂಡ್ ಟೇಸ್ಟ್ ಮೇಕರ್ ಬಗ್ಗೆ ಒಳ್ಳೆಯ ಅಭಿಪ್ರಾಯವೇನೂ ಇಲ್ಲ. ಉಪ್ಪು ಸ್ವಲ್ಪ ಹೆಚ್ಚಾದ್ರೆ ಅಡುಗೆ ರುಚಿ ಕೆಡುವಂತೆಯೇ ಅಗತ್ಯಕ್ಕಿಂತ ಹೆಚ್ಚಿನ ಉಪ್ಪು ದೇಹ ಸೇರಿದ್ರೆ ಆರೋಗ್ಯ ಕೆಡುವುದು ಪಕ್ಕಾ. ಆದ್ರೆ ಅಥ್ಲೇಟ್‍ಗಳಿಗೆ ತಮ್ಮ ದೇಹದ ತಾಕತ್ತು ಹೆಚ್ಚಿಸಿಕೊಳ್ಳಲು ಉಪ್ಪು ನೆರವು ನೀಡುತ್ತದೆ ಎನ್ನುತ್ತದೆ ವಿಜ್ಞಾನ. 

ಅಥ್ಲೇಟ್‍ಗೆ ದೈಹಿಕ ಹಾಗೂ ಮಾನಸಿಕವಾಗಿ ಫಿಟ್ ಆಗಿರುವುದು ಅತೀಮುಖ್ಯ.ಇದಕ್ಕಾಗಿ ಅವರು ವರ್ಷನುಗಟ್ಟಲೆ ಪರಿಶ್ರಮ ಪಡುತ್ತಾರೆ.ನಿತ್ಯ ಅಭ್ಯಾಸ ನಡೆಸುವುದು,ಚೆನ್ನಾಗಿ ತಿನ್ನುವುದು ಹಾಗೂ ವಿಶ್ರಾಂತಿ ತೆಗೆದುಕೊಳ್ಳುವುದು ಕ್ರೀಡಾಪಟುವೊಬ್ಬ ಅಗತ್ಯವಾಗಿ ಮಾಡಲೇಬೇಕಾದ ಕಾರ್ಯಗಳು.ಬೆವರು ಸುರಿಸಿ ದೇಹ ದಂಡಿಸಿದ್ರೆ ಮಾತ್ರ ಕ್ರೀಡಾಪಟುವೊಬ್ಬ ಗೆಲುವಿನ ಮೆಟ್ಟಿಲೇರಲು ಸಾಧ್ಯ.ಬಹುದೂರದ ತನಕ ಓಡುವುದು ಅಥವಾ ಕ್ರೀಡಾಪಟುಗಳು ದೇಹ ದಂಡಿಸಲು ಯಾವುದೇ ದೈಹಿಕ ಚಟುವಟಿಕೆ ನಡೆಸಿದಾಗ ಸಾಕಷ್ಟು ಬೆವರು ಸುರಿಯುತ್ತದೆ.ಬೆವರಿನ ಮೂಲಕ ದೇಹದಿಂದ ಎಲೆಕ್ಟ್ರೋಲೈಟ್‍ಗಳು ನಷ್ಟವಾಗುತ್ತವೆ.ಇಂಥ ಸಮಯದಲ್ಲಿ ದೇಹಕ್ಕೆ ಎಲೆಕ್ಟ್ರೋಲೈಟ್‍ಗಳನ್ನು ಪೂರೈಸುವುದು ಅಗತ್ಯ.ಆಗ ಮಾತ್ರ ದೇಹ ನಿರ್ಜಲಿಕರಣಕ್ಕೊಳಗಾಗದಂತೆ ತಡೆಯಲು ಸಾಧ್ಯ. ಈ ಕೆಲಸವನ್ನು ಉಪ್ಪು ಚೆನ್ನಾಗಿ ಮಾಡುತ್ತದೆ ಎನ್ನುವುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.ಮಕ್ಕಳಿಗೆ ಭೇದಿ ಅಥವಾ ಅತಿಸಾರವುಂಟಾದಾಗ ವೈದ್ಯರು ನೀರಿಗೆ ಸ್ವಲ್ಪ ಉಪ್ಪು ಮತ್ತು ಸಕ್ಕರೆಯನ್ನು ಬೆರೆಸಿ ಆಗಾಗ ಕುಡಿಸುವಂತೆ ಸಲಹೆ ನೀಡುತ್ತಾರೆ ಅಲ್ಲವೆ, ಕಾರಣ ಉಪ್ಪು ದೇಹದಿಂದ ಎಲೆಕ್ಟ್ರೋಲೈಟ್ಸ್ ನಷ್ಟವಾಗದಂತೆ ತಡೆಯುವ ಮೂಲಕ ನಿರ್ಜಲೀಕರಣದಿಂದ ರಕ್ಷಿಸುತ್ತದೆ.ಇದೇ ಸೂತ್ರ ದೇಹ ದಂಡನೆಯಲ್ಲಿ ತೊಡಗುವ ಕ್ರೀಡಾಪಟುಗಳಿಗೂ ಅನ್ವಯಿಸುತ್ತದೆ.ಅವರ ದೇಹದಿಂದ ಬೆವರಿನ ರೂಪದಲ್ಲಿ ಸಾಕಷ್ಟು ನೀರು ಹೊರಹೋಗುತ್ತದೆ.ಎಲೆಕ್ಟ್ರೋಲೆಟ್ಸ್ ಕೂಡ ನಷ್ಟವಾಗುತ್ತವೆ.ಇದನ್ನು ತಡೆಯಲು ಉಪ್ಪು ನೆರವು ನೀಡುತ್ತದೆ. ಅಷ್ಟೇ ಅಲ್ಲ, ಓಡುವಾಗ ವೇಗ ಹೆಚ್ಚಿಸಿಕೊಳ್ಳಲು ಹಾಗೂ ನಿರ್ವಹಣೆ ಉತ್ತಮಪಡಿಸಲು ಕೂಡ ಉಪ್ಪು ನೆರವು ನೀಡುತ್ತದೆ ಎನ್ನುತ್ತದೆ ವಿಜ್ಞಾನ.

ಊಟ ಆದ್ಮೇಲೆ ಹೀಗ್ ಮಾಡ್ಬೇಡಿ ಅಂತ ಅಪ್ಪ ಅಮ್ಮ ಹೇಳಿದ್ದು ಸುಮ್ಮನೆಯಲ್ಲ

ಸ್ಕ್ಯಾಂಡಿನವಿಯನ್ ಜರ್ನಲ್ ಆಫ್ ಮೆಡಿಸಿನ್ ಆಂಡ್ ಸೈನ್ಸ್ ಇನ್ ಸ್ಪೋಟ್ಸ್ ಎಂಬ ಜರ್ನಲ್‍ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಮ್ಯಾರಥಾನ್‍ಗೆ ಸಿದ್ಧಗೊಳ್ಳುವಾಗ ಉಪ್ಪು ಹೊಂದಿರುವ ಪದಾರ್ಥ ಅಥವಾ ಉಪ್ಪಿನಂಶವಿರುವ ಒಣಹಣ್ಣುಗಳು ಅಥವಾ ಕಾಳುಗಳನ್ನು ತಿನ್ನುವುದರಿಂದ ನಿರ್ವಹಣೆಯ ಮೇಲೆ ಉತ್ತಮ ಪ್ರಭಾವ ಬೀರುತ್ತದೆಯಂತೆ.ಈ ಅಧ್ಯಯನದಲ್ಲಿ ಪಾಲ್ಗೊಂಡ ಸಂಶೋಧಕರು ಕ್ರೀಡಾಕೂಟವೊಂದರಲ್ಲಿ ಪಾಲ್ಗೊಳ್ಳುವ ಜನರ ಮೇಲೆ ಉಪ್ಪು ಹಾಗೂ ಅದರ ಪರ್ಯಾಯಗಳು ಬೀರುವ ಪ್ರಭಾವವನ್ನು ಪತ್ತೆ ಹಚ್ಚಿದರು.ಕ್ರೀಡೆಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿ, ಒಂದು ಗುಂಪಿಗೆ ಸ್ಪೋಟ್ಸ್ ಡ್ರಿಂಕ್ ಹಾಗೂ ಉಪ್ಪಿನ ಮಾತ್ರೆಗಳನ್ನು ನೀಡಲಾಯಿತು. ಇನ್ನೊಂದು ಗುಂಪಿಗೆ ಸ್ಪೋಟ್ಸ್ ಡ್ರಿಂಕ್ ಹಾಗೂ ಉಪ್ಪು ರಹಿತ ಮಾತ್ರೆಗಳನ್ನು ನೀಡಲಾಯಿತು. ಕೊನೆಯಲ್ಲಿ ಉಪ್ಪಿನ ಮಾತ್ರೆಗಳನ್ನು ಸೇವಿಸಿದ ತಂಡ ಓಟವನ್ನು ಇತರ ಗುಂಪಿಗಿಂತ 26 ನಿಮಿಷ ಮೊದಲು ಪೂರ್ಣಗೊಳಿಸಿರುವುದು ಕಂಡುಬಂತು.

ದಿನವಿಡೀ ಕಂಪ್ಯೂಟರ್ ನೋಡ್ತೀರಾ?

ಉಪ್ಪು ಹೇಗೆ ಕಾರ್ಯನಿರ್ವಹಿಸುತ್ತದೆ?:  ಮಿತಿಮೀರಿದ ಸೋಡಿಯಂ ರಕ್ತದೊತ್ತಡ ಹೆಚ್ಚಿಸುತ್ತದೆ ಹಾಗೂ ಹೃದಯ ಸಂಬಂಧಿ ಕಾಯಿಲೆ ಜೊತೆಗೆ ಪಾಶ್ರ್ವವಾಯುಗೂ ಕಾರಣವಾಗುತ್ತದೆ.ಅದೇ ಉಪ್ಪನ್ನು ಸಮರ್ಪಕ ವಿಧಾನದಲ್ಲಿ ಸೇವಿಸಿದರೆ, ಅದು ದೇಹಕ್ಕೆ ಸಹಾಯ ಕೂಡ ಮಾಡಬಲ್ಲದು. ಕ್ರೀಡೆಯಲ್ಲಿ ಭಾಗವಹಿಸಿದಾಗ ನಮ್ಮ ದೇಹದಿಂದ ಎಲೆಕ್ಟ್ರೋಲೈಟ್ ನಷ್ಟವಾಗುತ್ತವೆ,ಇದರಿಂದ ನಮಗೆ ಸುಸ್ತಾಗುತ್ತದೆ. ಸಹಜವಾಗಿ ನಮ್ಮ ವೇಗ ತಗ್ಗುತ್ತದೆ. ಸ್ಪೋಟ್ಸ್ ಡ್ರಿಂಕ್ಸ್ ಕುಡಿಯುವುದರಿಂದ ಸುಸ್ತು ದೂರವಾಗುತ್ತದೇನೋ ನಿಜ.ಆದರೆ, ತುಂಬಾ ದೂರ ಓಡಬೇಕಾಗಿ ಬಂದಾಗ ಉಪ್ಪಿನಂಶ ಹೊಂದಿರುವ ನಟ್ಸ್ ಆಗಾಗ ಬಾಯಿಗೆ ಹಾಕಿಕೊಳ್ಳುತ್ತಿದ್ರೆ ಸುಸ್ತು ದೂರವಾಗುವ ಜೊತೆಗೆ ಶಕ್ತಿ ಹೆಚ್ಚಿ ವೇಗವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.ಹಾಗಂತ ಗೊತ್ತುಗುರಿಯಿಲ್ಲದ ಮನಸೋಇಚ್ಛೆ ಉಪ್ಪಿನಂಶ ಹೊಂದಿರುವ ತಿನಿಸುಗಳನ್ನು ಬಾಯಿಗೆ ಹಾಕೊಂಡ್ರಿ, ಜೋಕೆ. ಆಮೇಲೆ ಇಲ್ಲಸಲ್ಲದ ಕಾಯಿಲೆಗಳು ನಿಮ್ಮ ದೇಹವನ್ನು ಆವರಿಸಿಕೊಳ್ಳಬಹುದು, ಎಚ್ಚರ. ಓಡುತ್ತಿರುವಾಗ ನೀವೆಷ್ಟು ಬೆವರುತ್ತೀರಿ, ನಿಮ್ಮ ವೇಗ ಹಾಗೂ ಕ್ರಮಿಸಬೇಕಾದ ದೂರ ಇವೆಲ್ಲವನ್ನೂ ಪರಿಗಣಿಸಿ ಎಷ್ಟು ಉಪ್ಪು ಸೇವಿಸಬೇಕು ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ಹಾಗಾಗಿ ಉಪ್ಪು ತಿಂದ್ರೆ ರೇಸ್‍ನಲ್ಲಿ ಫಸ್ಟ್ ಬರಬಹುದೆಂದು ಭಾವಿಸಿ ಉಪ್ಪಿನಂಶವಿರುವ ಸಿಕ್ಕಿದ ತಿನಿಸುಗಳನ್ನೆಲ್ಲ ಬಾಯಿಗೆ ಹಾಕೊಳ್ಳಬೇಡಿ. 

ದಿನಾ ಶುಂಠಿ ನೀರು ಕುಡಿದ್ರೆ ಎಷ್ಟೆಲ್ಲ ಲಾಭಗಳಿವೆ ಗೊತ್ತಾ?