Omicron Effects: ಹೊಟ್ಟೆಯ ಮೇಲೆ ಒಮಿಕ್ರಾನ್ ದಾಳಿ
ಒಮಿಕ್ರಾನ್ ಲಕ್ಷಣಗಳು ಹಿಂದಿನ ಕೋವಿಡ್ ಲಕ್ಷಣಕ್ಕಿಂತ ಭಿನ್ನವಾಗಿರಬಹುದು. ಹೊಟ್ಟೆಯ ಮೇಲೆ ದಾಳಿ ಇಡುವ ಒಮಿಕ್ರಾನ್ ನಿಂದ ಹೊಟ್ಟೆನೋವು, ವಾಂತಿ, ನುಲಿತ, ಭೇದಿಯೂ ಕಂಡುಬರಬಹುದು.

ಕೋವಿಡ್ -19 ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಒಂದಾದ ಮೇಲೆ ಒಂದರಂತೆ ವಿಭಿನ್ನ ಪ್ರಭೇದಗಳು, ರೂಪಾಂತರಿಗಳ ಜಾಲವೇ ವಿಶ್ವದ ಮೇಲೆ ದಾಳಿ ಇಡುತ್ತಿವೆ. ಕೊರೋನಾ 2ನೇ ಅಲೆಯಲ್ಲಿ ದೇಶ ಸಾಕಷ್ಟು ಕಷ್ಟನಷ್ಟವನ್ನು ಕಂಡಿತ್ತು. ಸಾವುನೋವಿನ ಸಂಖ್ಯೆ ಅಧಿಕವಾಗಿತ್ತು. ಇತ್ತೀಚೆಗೆ ದೇಶದಲ್ಲಿ ದಿನದಿಂದ ದಿನಕ್ಕೆ ಒಮಿಕ್ರಾನ್ (Omicron) ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಒಮಿಕ್ರಾನ್ ಸೋಂಕಿನಿಂದ ಉಸಿರಾಟಕ್ಕೆ ತೊಂದರೆ ಉಂಟಾಗುವ ಜತೆಗೆ ಹೊಟ್ಟೆಯೂ ಸಮಸ್ಯೆಗೆ ತುತ್ತಾಗುತ್ತದೆ ಎನ್ನುವುದು ತಿಳಿದುಬಂದಿದೆ. ಹೊಟ್ಟೆಯಲ್ಲಿ ನೋವು(Pain), ಕಿರಿಕಿರಿ (Irritation) ಹಾಗೂ ನುಲಿದಂತೆ ಆಗುವುದು ಮತ್ತು ಹಸಿವಾಗದಿರುವ ಸಮಸ್ಯೆಯೂ ತಲೆದೋರುತ್ತದೆ.
ಒಮಿಕ್ರಾನ್ ಸೋಂಕು ಸಾಕಷ್ಟು ವೇಗ(Fast)ವಾಗಿ ಎಲ್ಲೆಡೆ ವರ್ಧಿಸುತ್ತಿದೆ. ಒಮಿಕ್ರಾನ್ ನಿಂದ ಕಂಡುಬರುವ ಪ್ರತಿಯೊಂದು ಲಕ್ಷಣದ ಬಗ್ಗೆ ತೀವ್ರ ಗಮನವಿಡಲಾಗುತ್ತಿದೆ. ಏಕೆಂದರೆ, ಒಂದಲ್ಲ ಒಂದು ಲಕ್ಷಣದೊಂದಿಗೆ ಬೇಗ ಸೋಂಕನ್ನು ಗುರುತಿಸುವಂತಾದರೆ ಅನುಕೂಲ ಎಂದು.
ಒಮಿಕ್ರಾನ್ ರೂಪಾಂತರಿ(Mutant)ಯ ಸಾಮಾನ್ಯ ಲಕ್ಷಣಗಳನ್ನು ನಾವೆಲ್ಲರೂ ಕೇಳಿ ಅರಿತಿದ್ದೇವೆ. ಕೆಲವರು ಜನರಿಗೆ ನೆಗಡಿ (Cold), ತಲೆನೋವು(Headache), ಶೀತ, ಕೆಮ್ಮು(Cough), ಗಂಟಲು ಕಿರಿಕಿರಿ ಸಾಮಾನ್ಯವಾಗಿದೆ. ಆದರೆ, ಇದರ ಲಕ್ಷಣ ಇಷ್ಟಕ್ಕೇ ಸೀಮಿತವಾಗಿಲ್ಲ. ಹೊಟ್ಟೆ(Stomach)ಯ ಮೇಲೂ ಪ್ರಭಾವ ಬೀರುತ್ತದೆ.
ಹೊಟ್ಟೆಯ ಮೇಲೆ ಒಮಿಕ್ರಾನ್ ದಾಳಿ (Attack)
ಹೊಟ್ಟೆಯ ಮೇಲೆ ಒಮಿಕ್ರಾನ್ ಸೋಂಕಿನ ಪ್ರಭಾವವಾದಾಗ ವಾಂತಿ ಬರಬಹುದು. ಹೊಟ್ಟೆಯಲ್ಲಿ ನುಲಿದಂತೆ ಆಗಬಹುದು, ಹೊಟ್ಟೆನೋವು ಸಹ ಕಾಣಿಸಿಕೊಳ್ಳಬಹುದು. ಹೀಗಾಗಿ, ಜ್ವರ(Fever), ನೆಗಡಿ, ತಲೆನೋವು, ತಲೆಭಾರ ಯಾವುದೂ ಇಲ್ಲದೆ ಕೇವಲ ಹೊಟ್ಟೆಯೊಂದೇ ನೋಯುತ್ತಿದ್ದರೂ ನಿರ್ಲಕ್ಷ್ಯ ಮಾಡಬಾರದು. ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಈ ರೂಪಾಂತರಿ ವೈರಸ್ ಪೀಡಿತರಾಗಿರುವ ಹಲವಾರು ಜನರಲ್ಲಿ ಕೇವಲ ಹೊಟ್ಟೆ ನೋವೊಂದೇ ಕಂಡುಬಂದಿದೆ. ಅಷ್ಟೇ ಅಲ್ಲ, ಹೊಟ್ಟೆಯ ಸಮಸ್ಯೆ ತೀವ್ರವಾಗಿದೆ. ಎರಡೂ ಲಸಿಕೆಗಳನ್ನು ಪಡೆದುಕೊಂಡಿದ್ದರೂ ಈ ಲಕ್ಷಣಗಳು ಕಂಡುಬರುತ್ತವೆ ಎನ್ನುವುದು ವೈದ್ಯರ ಅಭಿಮತ. ಒಮಿಕ್ರಾನ್ ಸೋಂಕು ಬಂದಾಗ ಪದೇ ಪದೆ ಭೇದಿಯಾಗುವುದು ಸಾಮಾನ್ಯವಾಗಿದೆ.
ಹೊಸ ಲಕ್ಷಣಗಳು (New Symptoms)
ಕೋವಿಡ್-19 ಸೋಂಕಿನ ಕೆಲವು ಹೊಸ ಲಕ್ಷಣಗಳಲ್ಲಿ ವಾಂತಿಯಾಗುವುದು, ತಲೆ ಸುತ್ತುವುದು, ಹೊಟ್ಟೆಯಲ್ಲಿ ನೋವು, ಹಸಿವೆ ಆಗದಿರುವುದು ಮುಂತಾದವುಗಳನ್ನು ಗುರುತಿಸಲಾಗಿದೆ. ಎದೆ ಮತ್ತು ಹೊಟ್ಟೆಯಲ್ಲಿ ನೋವು ಕಂಡುಬರಲು ಒಮಿಕ್ರಾನ್ ಸೋಂಕು ಹೊಟ್ಟೆಯ ಮ್ಯೂಕಸ್ ಗಳ ಮೇಲೆ ಪರಿಣಾಮ ಬೀರುವುದು ಕಾರಣವಾಗುತ್ತದೆ. ಲಸಿಕೆ ಪಡೆದವರಿಗೂ ಈ ಲಕ್ಷಣಗಳು ಕಂಡುಬರುತ್ತವೆ. ಆದರೆ, ಗಂಭೀರವಾಗಿರುವುದಿಲ್ಲ ಎನ್ನುತ್ತಾರೆ ವೈದ್ಯರು.
ನಿರ್ಲಕ್ಷ್ಯ (Negligence) ಬೇಡ
ಯಾವುದೇ ಕಾರಣಕ್ಕೂ ಕೋವಿಡ್ ಸೋಂಕನ್ನು ನಿರ್ಲಕ್ಷಿಸುವಂತಿಲ್ಲ. ಹೊಟ್ಟನೋವು, ಹಸಿವಾಗದಿರುವುದು ಹಾಗೂ ನುಲಿದಂತೆ ಆಗುವುದನ್ನು ಸಾಮಾನ್ಯವೆಂದು ಭಾವಿಸಬಾರದು. ಈ ಲಕ್ಷಣಗಳು ಕಂಡುಬಂದರೆ ತಕ್ಷಣ ಪ್ರತ್ಯೇಕವಾಗಿರಬೇಕು. ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧ ಸೇವಿಸಬಾರದು. ಈ ಸಮಯದಲ್ಲಿ ಉತ್ತಮ ಪೌಷ್ಟಿಕಾಂಶ ಇರುವ ಆಹಾರ ಸೇವನೆ ಮಾಡಬೇಕು. ಚೆನ್ನಾಗಿ ನಿದ್ರೆ ಮಾಡಬೇಕು. ಮಸಾಲೆಯುಕ್ತ ಆಹಾರ ಹಾಗೂ ಆಲ್ಕೋಹಾಲ್ ಸೇವನೆಯನ್ನು ಕಡ್ಡಾಯವಾಗಿ ಮಾಡಬಾರದು. ಜಂಕ್ ಫುಡ್ ಬೇಡವೇ ಬೇಡ. ಚಿಕ್ಕಪುಟ್ಟ ಲಕ್ಷಣಗಳಿಗೆ ಗಾಬರಿಯಾಗಬೇಕಾಗಿಲ್ಲ. ಆದರೆ, ಲಕ್ಷಣ ತೀವ್ರವಾಗಿದ್ದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು.
ಲಕ್ಷಣ ಕಂಡರೆ ಹೀಗ್ಮಾಡಿ
ಒಮಿಕ್ರಾನ್ ಲಕ್ಷಣಗಳು ಕಂಡುಬಂದವರನ್ನು ಸ್ವಚ್ಛವಾಗಿಡುವುದು ಮುಖ್ಯ. ಒಂದೊಮ್ಮೆ ಸೋಂಕಿತರಾಗಿದ್ದರೂ ಸ್ವಚ್ಛತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಇವರಿಗೆ ತಾಜಾ ಹಾಗೂ ಬಿಸಿಯಾದ ಆಹಾರ ನೀಡಬೇಕು. ಜನರೊಂದಿಗೆ ಬೆರೆಯುವುದನ್ನು ಬಿಡಬೇಕು, ಆಹಾರವನ್ನು ಹಂಚಿಕೊಳ್ಳಬಾರದು. ತಿನ್ನುವ ಮೊದಲು ಎಲ್ಲ ತರಕಾರಿ ಅಥವಾ ಹಣ್ಣುಗಳನ್ನು ಚೆನ್ನಾಗಿ ತೊಳೆಯಿರಿ. ಹೊರಗಿನ ಆಹಾರ ಸೇವಿಸಬಾರದು. ಐಸೋಲೇಷನ್ ಅವಧಿ ಪೂರ್ಣಗೊಂಡ ನಂತರವೇ ಕೋಣೆಯಿಂದ ಹೊರಬನ್ನಿ.