ಪುರುಷರ ಕಣ್ಣಲ್ಲಿ ನೀರು ನೋಡೋದು ಅಪರೂಪ. ಭಾವನೆಗಳನ್ನು ಹಿಡಿದಿಡುವ ಪ್ರಯತ್ನವನ್ನು ಪುರುಷರು ಮಾಡ್ತಾರೆ. ಅತ್ತು ಮನಸ್ಸು ಹಗುರ ಮಾಡುವ ಬದಲು ಅದನ್ನು ಮುಚ್ಚಿಟ್ಟು, ಮುಂದೆ ಸಮಸ್ಯೆ ಎದುರಿಸುತ್ತಾರೆ. 

ಅಳು (Cry), ಮಗು ಇಲ್ಲವೆ ಮಹಿಳೆಗೆ ಸೀಮಿತ ಎಂಬ ನಂಬಿಕೆ (Faith) ನಮ್ಮದು. ಮಹಿಳೆಯರು ಎಷ್ಟೇ ಭಾವನಾತ್ಮಕವಾಗಿ ಬಲಶಾಲಿಯಾಗಿದ್ದರೂ ಅವರಿಗೆ ಅಳುವುದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಪುರುಷರು ಅಳೋದು ತುಂಬಾ ಅಪರೂಪ. ಅಳುವುದು ದೌರ್ಬಲ್ಯದ ಸಂಕೇತ ಎಂದು ನಂಬಲಾಗಿದೆ . ಪುರುಷರು ತಮ್ಮನ್ನು ತಾವು ದುರ್ಬಲರಾಗಿ ತೋರಿಸಲು ಬಯಸುವುದಿಲ್ಲ. ಹಾಗಂತ, ಪುರುಷರಿಗೆ ಅಳು ಬರೋದಿಲ್ಲ, ಅವರು ಮಾನಸಿಕ ಸಮಸ್ಯೆ (Psychological Problem) ಗಳನ್ನು ಎದುರಿಸುವುದಿಲ್ಲ ಎಂದಲ್ಲ. 

ಪುರುಷರು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವುದಿಲ್ಲ : 
ಪುರುಷರು ಮತ್ತು ಮಹಿಳೆಯರು ಇಬ್ಬರೂ ಒತ್ತಡ, ಆತಂಕ, ಖಿನ್ನತೆ ಇತ್ಯಾದಿಗಳಿಂದ ಬಳಲುತ್ತಿದ್ದಾರೆ. ಆದರೆ ಹೆಚ್ಚಿನ ಪುರುಷರು ಮಹಿಳೆಯರಿಗೆ ಹೋಲಿಸಿದರೆ ತಮ್ಮ ಮಾನಸಿಕ ಸ್ಥಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಲು ಹಿಂಜರಿಯುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ವರ್ಷ ಮಹಿಳೆಯರಿಗಿಂತ ಪುರುಷರು ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದು ಅತ್ಯಂತ ಕಳವಳಕಾರಿ ವಿಷಯವಾಗಿದೆ. ಕೊರೊನಾ ಕಾಲದಲ್ಲಿ ಮಾನಸಿಕ ಆರೋಗ್ಯವೇ ದೊಡ್ಡ ಸಮಸ್ಯೆಯಾಗಿತ್ತು. 

ಮಲಗೋ ಟೈಮಲ್ಲಿ ಮಲಗ್ಲಿಲ್ಲ ಅಂದ್ರೆ ಮುಂದೆ ನಿದ್ರೆಯೇ ಬರೋಲ್ಲ ನೋಡಿ!

ಒತ್ತಡ ಮತ್ತು ಖಿನ್ನತೆಯು ಮೇಲುಗೈ :  ಜನರನ್ನು ಒಳಗೊಳಗೇ ಉಸಿರುಗಟ್ಟಿಸುವ ರೋಗ ಮಾನಸಿಕ ಖಾಯಿಲೆ. ನಿಮ್ಮ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ. ಒತ್ತಡ ಮತ್ತು ಖಿನ್ನತೆ ಅವರನ್ನು ಆವರಿಸುತ್ತದೆ. ಇದ್ರಿಂದ ಅವರ ಜೀವನ ಕೊನೆಗೊಳ್ಳುತ್ತದೆ. ಸಮೀಕ್ಷೆಯೊಂದರ ಪ್ರಕಾರ, 1999ರ ಕೊನೆಯ ವರದಿಗಿಂತ ಈಗ ಪುರುಷರ ಆತ್ಮಹತ್ಯೆ ಪ್ರಮಾಣ ನಾಲ್ಕು ಪಟ್ಟು ಹೆಚ್ಚಾಗಿದೆ. ಈ ಸಾವುಗಳಿಗೆ ಅವರ ಮಾನಸಿಕ ಸ್ಥಿತಿಯೇ ಕಾರಣ.

ಪುರುಷರು ಏನು ಮಾಡ್ಬೇಕು ? : 

ಭಾವನೆಗಳನ್ನು ಹಂಚಿಕೊಳ್ಳಿ : ಬಾಲ್ಯದಿಂದಲೂ ಅಳು ಹುಡುಗಿಯರಿಗೆ ಎಂದು ಕಲಿಸಲಾಗುತ್ತದೆ. ಅತ್ತರೆ ನೀನು ಹುಡುಗಿನಾ ಎಂದು ಪ್ರಶ್ನೆ ಮಾಡ್ತಾರೆ. ಆದರೆ ಇದು ಸತ್ಯವಲ್ಲ. ಅಳು ಹುಡುಗಿಗೆ ಸೀಮಿತವಾಗಿಲ್ಲ. ಅಳುವುದು ಮಾನಸಿಕ ಸಂವೇದನೆಯಾಗಿದ್ದು ಅದು ಒತ್ತಡವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಆದರೆ ಪುರುಷ ಅಳುವುದನ್ನು ತಡೆ ಹಿಡಿದಾಗ ಮನಸ್ಸಿನ ಭಾವನೆ ಹೊರ ಬರುವುದಿಲ್ಲ. ಇದ್ರಿಂದ ಅವನು ಪ್ರಕ್ಷುಬ್ಧನಾಗಿರುತ್ತಾನೆ. ಇದು ಅಪಾಯಕಾರಿ. ಈ ಸಂದರ್ಭದಲ್ಲಿ ಪುರುಷ, ಭಾವನೆಗಳನ್ನು ಹಂಚಿಕೊಳ್ಳುವುದು ಮತ್ತು ಧ್ಯಾನ ಮಾಡುವುದು ಮುಖ್ಯವಾಗುತ್ತದೆ. 

Health Tips: ಅತಿಯಾದ ಫೈಬರ್ ಸೇವನೆಯಿಂದ ಯಾವ ಸಮಸ್ಯೆ ಕಾಡುತ್ತೆ?

ಪುರುಷರಿಗೂ ಗಮನ ಬೇಕು : ಮಾನಸಿಕ ಆರೋಗ್ಯ ಕೇವಲ ಮಹಿಳೆಯರಿಗೆ ಸೀಮಿತವಲ್ಲ. ಮನಸ್ಸು ಹದಗೆಟ್ಟಾಗ ಪುರುಷರು ಕೂಡ ವೈದ್ಯರನ್ನು ಸಂಪರ್ಕಿಸಬೇಕು. ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಪುರುಷರು ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು.

ಮದ್ಯಪಾನಕ್ಕೆ ದಾಸರಾಗ್ತಾರೆ ಪುರುಷರು : ವಿಚ್ಛೇದಿತ ಪುರುಷರಲ್ಲಿ ಖಿನ್ನತೆಯು ಹೆಚ್ಚು ಸಾಮಾನ್ಯವಾಗಿದೆ ಮತ್ತು ತೀವ್ರವಾಗಿರುತ್ತದೆ. ಒಂಟಿಯಾಗಿರುವಾಗ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಮಾನಸಿಕ ಆರೋಗ್ಯದ ವಿಷಯಕ್ಕೆ ಬಂದರೆ, ಇತರರ ಸಹಾಯವನ್ನು ತೆಗೆದುಕೊಳ್ಳುವ ಬದಲು, ಪುರುಷರು ಹೆಚ್ಚು ಮದ್ಯಪಾನ, ಧೂಮಪಾನ ಇತ್ಯಾದಿಗಳನ್ನು ಸೇವಿಸುತ್ತಾರೆ. ಮದ್ಯಪಾನ ಮಾಡುವುದರಿಂದ ಆಯಾಸ, ಒತ್ತಡ, ಮಾನಸಿಕ ಸಮಸ್ಯೆ ದೂರವಾಗುತ್ತದೆ ಎಂಬ ಮಿಥ್ಯೆ ಸಮಾಜದಲ್ಲಿ ಹಬ್ಬಿದೆ. ಆದರೆ ಇದು ಸತ್ಯವಲ್ಲ. ಒತ್ತಡ ನಿಯಂತ್ರಣಕ್ಕೆ ಧೂಮಪಾನ, ಮದ್ಯ ಪಾನ ಮಾಡುವುದು ಒಳ್ಳೆಯದಲ್ಲ. 

ಕಿರಿಕಿರಿ, ಏಕಾಗ್ರತೆಯ ತೊಂದರೆ, ಸುಸ್ತು ಅಥವಾ ಚಡಪಡಿಕೆ, ತಲೆನೋವು, ಮದ್ಯಪಾನ ಅಥವಾ ಮಾದಕ ದ್ರವ್ಯದ ಮಿತಿಮೀರಿದ ಸೇವನೆ, ಪುರುಷರಲ್ಲಿ ಮಾನಸಿಕ ಅಸ್ವಸ್ಥತೆಯ ಚಿಹ್ನೆಯಾಗಿದೆ. ಆದರೆ ಪುರುಷರು ಈ ರೋಗ ಲಕ್ಷಣವನ್ನು ನಿರ್ಲಕ್ಷ್ಯಿಸುತ್ತಾರೆ. ಇದು ಭವಿಷ್ಯದಲ್ಲಿ ಅಪಾಯವನ್ನುಂಟು ಮಾಡುತ್ತದೆ. ಸಂತೋಷದ ಜೀವನ ನಡೆಸುವ ಪುರುಷರ ಸಂಖ್ಯೆ ತೀರಾ ಕಡಿಮೆ ಎಂದು ಸಂಶೋಧನೆಯೊಂದರಲ್ಲಿ ಹೇಳಲಾಗಿದೆ. ಬಿಡುವಿಲ್ಲದ ಜೀವನ ನಡೆಸುವ ಪುರುಷರು ಮಾನಸಿಕವಾಗಿ ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಾರೆ.

ಈ ರೀತಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ : ಮಾನಸಿಕ ಆರೋಗ್ಯದ ಬಗ್ಗೆ ನಾಚಿಕೆ ಬೇಡ. ಮಾನಸಿಕ ಸಮಸ್ಯೆಯಿಂದ ನಿದ್ದೆ ಬರುತ್ತಿಲ್ಲ. ಮನಸಿನಲ್ಲಿ ಕ್ಷೋಭೆಯಿದೆ, ಕೆಲಸದಲ್ಲಿ ಏಕಾಗ್ರತೆಯಿಲ್ಲ ಎಂದೆನಿಸಿದ್ರೆ ನೀವು ನಂಬುವ ವ್ಯಕ್ತಿ ಮುಂದೆ ನಿಮ್ಮ ಸಮಸ್ಯೆ ಹೇಳಿಕೊಳ್ಳಿ. ಅದರಿಂದ ಹೊರ ಬರುವ ಮಾರ್ಗವನ್ನು ಕಂಡುಕೊಳ್ಳಿ. ಅನೇಕ ಬಾರಿ, ಜೋರಾಗಿ ಅತ್ತರೂ ನಿಮ್ಮ ನೋವು, ಒತ್ತಡ ಕಡಿಮೆಯಾಗುತ್ತದೆ.