ಬದಲಾಗಿದೆ ವಿಮ್ಸ್‌, ಬಡವರಿಗೆ ತಕ್ಷಣ ಚಿಕಿತ್ಸೆ . ಬೋಧನಾ ಕೊಠಡಿಗಳು, ಎಂಆರ್‌ಐ ಸ್ಕ್ಯಾ‌ನಿಂಗ್‌ ಯಂತ್ರ ಅಳವಡಿಕೆ

ಬಳ್ಳಾರಿ (ಆ.16): ಇಲ್ಲಿನ ವಿಮ್ಸ್‌ ಸಮಗ್ರ ಅಭಿವೃದ್ಧಿಯಲ್ಲಿ ಸಂಸ್ಥೆಯ ನಿರ್ದೇಶಕ ಡಾ. ಟಿ. ಗಂಗಾಧರ ಗೌಡ ಅವರ ಪಾತ್ರ ದೊಡ್ಡದಿದೆ. ಅವರು ವಿಮ್ಸ್‌ನ ನಿರ್ದೇಶಕರಾದ ಮೇಲೆ ನಡೆದ ಅಭಿವೃದ್ಧಿ ಕಾರ್ಯಗಳನ್ನು ಜನತೆ ಇಂದು ಗುರುತಿಸುವಂತಾಗಿದೆ. ದೂರದ ಊರುಗಳಿಂದ ಬರುವ ರೋಗಿಗಳಿಗೆ ಇಲ್ಲಿ ಸುಲಭದಲ್ಲಿ ಚಿಕಿತ್ಸೆ ಸಿಗುತ್ತಿದೆ. ಡಾ.ಗಂಗಾಧರ ಗೌಡ ಅವರು ಕಷ್ಟಪಟ್ಟು ಕಲಿತು, ವೈದ್ಯರಾದವರು. ಇವರು ನಿರ್ದೇಶಕರಾಗಿ ಬಂದ ಮೇಲೆ ವಿಮ್ಸ್‌ ಚಹರೆಯೇ ಬದಲಾಗಿದೆ. ವೈದ್ಯಕೀಯ ಬೋಧನಾ ಕೊಠಡಿಗಳು, ಎಂಆರ್‌ಐ ಸ್ಕ್ಯಾ‌ನಿಂಗ್‌ ಯಂತ್ರ ಅಳವಡಿಕೆ, ವಿಮ್ಸ್‌ ಆಸ್ಪತ್ರೆಯಲ್ಲಿ 4 ಮಹಡಿಗಳ ಹೊಸ ಚಿಕಿತ್ಸೆ ಸಂಕೀರ್ಣ, ಹೃದಯ ರೋಗಗಳ ವಿಭಾಗ, ಸ್ತನ ಕ್ಯಾನ್ಸರ್‌ ಪತ್ತೆ ಹಚ್ಚುವ ಮ್ಯಾಮೊಗ್ರಫಿ ಪರೀಕ್ಷೆ ಸೌಲಭ್ಯ, ಪ್ಲಾಸ್ಟಿಕ್‌ ಸರ್ಜರಿ, ಅಸ್ಥಿ ಮತ್ತು ಮೂಳೆ ಚಿಕಿತ್ಸೆ ವಿಭಾಗ ಮುಂತಾದ ಅಗತ್ಯ ಆರೋಗ್ಯ ಸೌಲಭ್ಯಗಳು ಲಭಿಸಿವೆ. ವಿಮ್ಸ್‌ನ ಟ್ರಾಮಾಕೇರ್‌ ಆಸ್ಪತ್ರೆಯಲ್ಲೂ ಅವರ ಕಾರ್ಯಗಳು ಅಪಾರ. 60 ಹಾಸಿಗೆಗಳಿದ್ದ ಟ್ರಾಮಾಕೇರ್‌ ಆಸ್ಪತ್ರೆ 100 ಹಾಸಿಗೆಗೆ ವಿಸ್ತಾರವಾಗಿದೆ. 8 ಶಸ್ತ್ರಚಿಕಿತ್ಸೆ ಕೊಠಡಿಗಳನ್ನು ನಿರ್ಮಿಸಲಾಗಿದೆ. ಆಯುಷ್ಮಾನ್‌ ಭಾರತ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ರೋಗಿಗಳಿಗೆ ಇದರಿಂದ ಅನುಕೂಲವಾಗಿದೆ. ಇಲ್ಲದೇ, 500 ಲೀಟರ್‌ ನೀರು ಸಂಸ್ಕರಣ ಘಟಕವನ್ನು ಪ್ರಾರಂಭಿಸಲಾಗಿದೆ.

173 ಎಕರೆ ವಿಸ್ತಾರದ ವಿಮ್ಸ್‌ ಕ್ಯಾಂಪಸ್‌ನಲ್ಲಿ ಸಂಚರಿಸಿದರೆ ಬದಲಾವಣೆಯ ಗುರುಗಳಿವೆ. ಇದಕ್ಕೆಲ್ಲ ಇವರ ದೂರದೃಷ್ಟಿಮತ್ತು ಇಚ್ಛಾಶಕ್ತಿ ಕಾರಣ. ಎಂಆರ್‌ಐ ಮಾಡಬೇಕೆಂದರೆ ಖಾಸಗಿ ಆಸ್ಪತ್ರೆಯಲ್ಲಿ ಅಪಾರ ವೆಚ್ಚವಾಗುತ್ತಿತ್ತು. ಇದೀಗ ಕಡಿಮೆ ವೆಚ್ಚದಲ್ಲಿ ವಿಮ್ಸ್‌ ಈ ಸೇವೆ ಒದಗಿಸುತ್ತಿದೆ. ಇಲ್ಲಿ 200ಕ್ಕೂ ಹೆಚ್ಚು ಪ್ಲಾಸ್ಟಿಕ್‌ ಸರ್ಜರಿಗಳು ಪ್ರತಿ ತಿಂಗಳು ನಡೆಯುತ್ತಿವೆ. ದೂರದ ರಾಯಚೂರು, ಕೊಪ್ಪಳ, ಹಾವೇರಿಯಿಂದಲೂ ಚಿಕಿತ್ಸೆಗೆ ಬರುತ್ತಾರೆ. ಕಲ್ಯಾಣ ಕರ್ನಾಟಕದ ಮೊದಲ ಕೇಂದ್ರ ಎಂಬ ಹೆಗ್ಗಳಿಕೆಗೆ ಈ ಟ್ರಾಮಾಕೇರ್‌ ಸೆಂಟರ್‌ ಪಾತ್ರವಾಗಿದೆ. ಕಿವಿ ಜೋಡಣೆ, ಸುಟ್ಟಗಾಯ, ಆ್ಯಸಿಡ್‌, ಸ್ತನ ಸರ್ಜರಿ, ಕೈ ಜೋಡಣೆ ಮುಂತಾದ ಶಸ್ತ್ರ ಚಿಕಿತ್ಸೆಗಳು ಇಲ್ಲಿ ನಡೆಯುತ್ತಿವೆ.

ಕ್ಯಾನ್ಸರ್‌ ಜಾಗೃತಿ, ಮೊಟ್ಟಮೊದಲ ಬಾರಿಗೆ ವೈದ್ಯಕೀಯ ವಿದ್ಯಾರ್ಥಿಗಳ ಕಾನ್ವೆಕೇಷನ್‌ ಆಯೋಜನೆ, ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಶಿಕ್ಷಣ ಸಂಸ್ಥೆಗಳೊಂದಿಗೆ 60 ಸಾವಿರ ಜನರಿಗೆ ಕೋವಿಡ್‌ ಲಸಿಕೆ ನೀಡುವುದು ಮುಂತಾದ ಕಾರ್ಯಗಳನ್ನು ಸಾಧಿಸಲಾಗಿದೆ. ಪ್ಲಾಸ್ಟಿಕ್‌ ಸರ್ಜರಿ ಕೋರ್ಸ್‌ಗೆ ಎನ್‌ಎಂಸಿ (ರಾಷ್ಟ್ರೀಯ ವೈದ್ಯಕೀಯ ಪರಿಷತ್ತು) ಕೊಡ ಮಾಡುವ 3 ಸೀಟ್‌ ಅನ್ನು ವಿಮ್ಸ್‌ಗೆ ತರುವಲ್ಲಿ ಡಾ.ಗಂಗಾಧರ ಗೌಡರ ಶ್ರಮವಿದೆ.

Ballari: ಖಾಸಗಿ ಸೇವೆ ಮಾಡುವ ವಿಮ್ಸ್‌ ವೈದ್ಯರುಗಳಿಗೆ ಬಿಸಿ..!

ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಲ್ಲರಿಗೂ ಸುಲಭವಾಗಿ ಚಿಕಿತ್ಸೆಗಳು ದೊರಕುವಂತಾಗಬೇಕು. ಮುಂದಿನ ದಿನಗಳಲ್ಲಿ 2ನೇ ಹಂತದ ವೈದ್ಯಕೀಯ ಆಸ್ಪತ್ರೆ ಕಟ್ಟಡ ನಿರ್ಮಾಣ, ವೆಲ್ಲೆಸ್ಲಿ ಕ್ಷಯ ಮತ್ತು ಎದೆರೋಗಗಳ ಆಸ್ಪತ್ರೆಯ ಪುನರುಜ್ಜೀವನದ ಕನಸಿದೆ.

ಡಾ. ಟಿ. ಗಂಗಾಧರ ಗೌಡ, ನಿರ್ದೇಶಕರು ವಿಮ್ಸ್‌

ಬಳ್ಳಾರಿ: ವಿಮ್ಸ್‌ ರೋಗಿಗಳಿಗೆ ಉಚಿತ ಬ್ಯಾಟರಿ ಚಾಲಿತ ವಾಹನ ಸೇವೆ..!

ವಿಮ್ಸ್‌ ಮೈದಾನದಲ್ಲಿ ಬೃಹತ್‌ ಯೋಗಥಾನ್‌ ಆ.28ರಂದು: 75ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಅಜಾದಿ ಕಾ ಅಮೃತ್‌ ಮಹೋತ್ಸವ್‌ ಅಂಗವಾಗಿ ನಗರದ ವಿಮ್ಸ್‌ ಮೈದಾನದಲ್ಲಿ ಆ. 28ರಂದು ಬೆಳಗ್ಗೆ 6ಕ್ಕೆ ಬೃಹತ್‌ ಯೋಗಥಾನ್‌ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗಿನ್ನಿಸ್‌ ಹಾಗೂ ವಿಶ್ವ ದಾಖಲೆ ನಿರ್ಮಾಣಕ್ಕಾಗಿ ರಾಜ್ಯಾದ್ಯಂತ ಬೃಹತ್‌ ಯೋಗಥಾನ್‌ ಕಾರ್ಯಕ್ರಮ ನಡೆಯುತ್ತಿದ್ದು, ಜಿಲ್ಲೆಯಲ್ಲಿಯೂ ಏಕ ಕಾಲಕ್ಕೆ 20 ಸಾವಿರ ಯೋಗಾಸಕ್ತರಿಂದ ಯೋಗಾಭ್ಯಾಸ ಮಾಡಲಿದ್ದಾರೆ. ಈಗಾಗಲೇ ನಗರದ ಬಿಡಿಎ ಫುಟ್ಬಾಲ್‌ ಮೈದಾನದಲ್ಲಿ ಮತ್ತು ನಗರದ ವಿಶ್ವ ವಿದ್ಯಾಲಯಗಳಲ್ಲಿ ಮತ್ತು ಪಿಯು ಕಾಲೇಜುಗಳಲ್ಲಿ ಯೋಗ ತರಬೇತಿಯನ್ನು ಪತಂಜಲಿಯವರು ನೀಡುತ್ತಿದ್ದು, ಆಸಕ್ತ ಯೋಗಾಸ್ತಕರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಮೊ. 7899935141ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.