ಬೆಂಗಳೂರು(ಏ.02): ಎಚ್‌ಐವಿ ಪೀಡಿತ ವ್ಯಕ್ತಿಯ ಜೀವನಿರೋಧಕ ಕೋಶದಲ್ಲಿರುವ ಎಚ್‌ಐವಿ ಕೋಶಗಳು ಮತ್ತೆ ಸಕ್ರಿಯವಾಗುವುದನ್ನು ತಡೆಯುವ ಕೃತಕ ಕಿಣ್ವವನ್ನು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. 

ವಿಜ್ಞಾನಿಗಳು ವ್ಯನಡಿಯಂ ಪೆಂಟಾಕ್ಸೈಡ್‌ ಬಳಸಿ ರೂಪಿಸಿರುವ ‘ನ್ಯಾನೋಜೈಮ್‌’ಗಳು ಎಚ್‌ಐವಿ ವೈರಸ್‌ ಅನ್ನು ನಿಯಂತ್ರಣದಲ್ಲಿಡುವ ಸಾಮರ್ಥ್ಯ ಹೊಂದಿರುವ ಗ್ಲುಟೋಥಿಯನ್‌ ಪೆರೋಕ್ಸೈಡೇಸ್‌ ರೀತಿಯಲ್ಲಿ ವರ್ತಿಸುತ್ತವೆ. ಐಐಎಸ್‌ಸಿಯ ಅಸೋಸಿಯೇಟ್‌ ಪ್ರೊಫೆಸರ್‌ ಅಮಿತ್‌ ಸಿಂಗ್‌ ಮತ್ತು ಪ್ರೊ.ಗೋವಿಂದಸಾಮಿ ಮುಗೇಶ್‌ ಅವರು ಇಎಂಬಿಒ ಮಾಲಿಕ್ಯುಲರ್‌ ಮೆಡಿಸಿನ್‌ ಎಂಬ ನಿಯತಕಾಲಿಕದಲ್ಲಿ ತಮ್ಮ ಸಂಶೋಧನೆಯ ಮಾಹಿತಿಯನ್ನು ಪ್ರಕಟಿಸಿದ್ದಾರೆ.

ಈ ನ್ಯಾನೋಜೈಮ್ಸ್‌ ಮನುಷ್ಯನ ಜೈವಿಕ ಸಂರಚನೆಯಲ್ಲಿ ಸ್ಥಿರವಾಗಿದ್ದು, ಯಾವುದೇ ಅಡ್ಡ ಪರಿಣಾಮ ಸೃಷ್ಟಿಸುವುದಿಲ್ಲ. ಈ ನ್ಯಾನೋಜೈಮ್‌ಗಳನ್ನು ಪ್ರಯೋಗಾಲಯದಲ್ಲಿ ಸೃಷ್ಟಿಸುವುದು ಕೂಡ ಸುಲಭ ಎಂದು ಗೋವಿಂದಸಾಮಿ ಮುಗೇಶ್‌ ಹೇಳಿದ್ದಾರೆ.

ಕೊರೋನಾ ಔಷಧ ಕಂಡು ಹಿಡಿಯುವ ಪೈಪೋಟಿ ಮಧ್ಯೆ ಸಿಕ್ತು ಏಡ್ಸ್‌ಗೆ ಮದ್ದು!

ಎಚ್‌ಐವಿ ರೋಗಿಯೊಬ್ಬನ ದೇಹದಲ್ಲಿರುವ ಸೋಂಕನ್ನು ಸಂಪೂರ್ಣವಾಗಿ ಹೊರಹಾಕಲು ಪ್ರಸ್ತುತ ಯಾವುದೇ ದಾರಿಗಳಿಲ್ಲ. ಎಚ್‌ಐವಿ ನಿರೋಧಕ ಔಷಧಗಳು ವೈರಾಣುಗಳನ್ನು ಹತ್ತಿಕ್ಕುತ್ತವೆ. ಹತ್ತಿಕ್ಕಲ್ಪಟ್ಟವೈರಾಣು ರೋಗಿಯ ಜೀವ ನಿರೋಧಕ ಕೋಶದಲ್ಲಿ ಸುಪ್ತವಾಗಿರುತ್ತದೆ. ರೋಗಿಯ ಜೀವಕೋಶದಲ್ಲಿ ಹೈಡ್ರೋಜನ್‌ ಪೆರಾಕ್ಸೈಡ್‌ ಮಟ್ಟಏರುತ್ತಿದ್ದಂತೆ ಸುಪ್ತವಾಗಿದ್ದ ವೈರಾಣು ಜಾಗೃತಗೊಂಡು ಬೆಳೆಯಲು ಪ್ರಾರಂಭಿಸುತ್ತದೆ. ಆದ್ದರಿಂದ ವೈರಾಣುವನ್ನು ಸುಪ್ತಾವಸ್ಥೆಯಲ್ಲೇ ಇಡಲು ಗ್ಲುಟೋಥಿಯನ್‌ ಪೆರೋಕ್ಸೈಡೇಸ್‌ ಅವಶ್ಯಕ.

ಹೀಗಾಗಿ ವಿಜ್ಞಾನಿಗಳು ವ್ಯನಡಿಯಂ ಪೆಂಟಾಕ್ಸೈಡ್‌ನ ಅತ್ಯಂತ ತೆಳುವಾದ ನ್ಯಾನೋಹಾಳೆಗಳನ್ನು ತಯಾರಿಸಿ ಅದರಲ್ಲಿ ಎಚ್‌ಐವಿ ವೈರಾಣುವಿನ ವರ್ತನೆಯನ್ನು ಪ್ರಯೋಗಕ್ಕೆ ಒಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ನೈಸರ್ಗಿಕ ಕಿಣ್ವಗಳ ರೀತಿಯಲ್ಲೇ ಅತ್ಯಂತ ಪರಿಣಾಮಕಾರಿಯಾಗಿ ಕೋಶದಲ್ಲಿನ ಹೈಡ್ರೋಜನ್‌ ಪೆರಾಕ್ಸೈಡ್‌ ಮಟ್ಟವನ್ನು ಈ ಕೃತಕ ಕಿಣ್ವ ಕಡಿಮೆ ಮಾಡಿದ್ದು ಎಚ್‌ಐವಿ ವೈರಾಣುವಿಗೆ ಸಕ್ರಿಯಗೊಳ್ಳಲು ಅವಕಾಶ ನೀಡಿಲ್ಲ.

ಪ್ರಯೋಗಾಲಯದಲ್ಲಿ ಈ ಕೃತಕ ಕಿಣ್ವವು ಮನುಷ್ಯನ ಜೀವಕೋಶಕ್ಕೆ ಹಾನಿ ಮಾಡಿಲ್ಲ. ಆದರೆ ಮನುಷ್ಯನ ದೇಹದಲ್ಲಿ ಇದರ ವರ್ತನೆಯ ಬಗ್ಗೆ ಇನ್ನಷ್ಟು ಸಂಶೋಧನೆ ಅಗತ್ಯವಿದೆ ಎಂದು ಮುಗೇಶ್‌ ಹೇಳಿದ್ದಾರೆ.