Asianet Suvarna News Asianet Suvarna News

ಹುತ್ತದಲ್ಲಿ ಬೆಳೆಯುವ ಅಣಬೆಗೆ ಭಾರೀ ಬೇಡಿಕೆ..!

* 100 ಹೆಗ್ಗಲಿಗೆ 700ರಿಂದ 900 ವರೆಗೂ ದರ
* ಅಣಬೆ ಸಂಗ್ರಹ ಈಗ ಕೆಲವರಿಗೆ ಉದ್ಯೋಗ
* ವರ್ಷದಲ್ಲಿ ಎರಡ್ಮೂರು ತಿಂಗಳು ಮಾತ್ರ ಸಿಗುವ ರುಚಿಕರ ಅಣಬೆ
 

Huge Demand for Mushroom in Uttara Kannada grg
Author
Bengaluru, First Published Jul 29, 2021, 8:17 AM IST
  • Facebook
  • Twitter
  • Whatsapp

ರಾಘವೇಂದ್ರ ಹೆಬ್ಬಾರ್‌

ಭಟ್ಕಳ(ಜು.29):  ಹುತ್ತದಲ್ಲಾಗುವ ಹೆಗ್ಗಲಿಗೆ (ಅಣಬೆ) ವರ್ಷಂಪ್ರತಿಯಂತೆ ಈ ಬಾರಿಯೂ ಪಟ್ಟಣದಲ್ಲಿ ಭಾರೀ ಬೇಡಿಕೆ ಬಂದಿದೆ. ತಾಜಾ ನೂರು ಹೆಗ್ಗಲಿಗೆ 700ರಿಂದ 900 ವರೆಗೂ ಮಾರಾಟವಾಗುತ್ತಿದೆ. ವರ್ಷದಿಂದ ವರ್ಷಕ್ಕೆ ದರ ಹೆಚ್ಚುತ್ತಿದ್ದರೂ ಅಣಬೆಪ್ರಿಯರು ಮಾತ್ರ ಅದನ್ನು ಮುಗಿಬಿದ್ದು ಖರೀದಿಸುತ್ತಿರುವುದು ವಿಶೇಷ.

ತಾಲೂಕಿನಲ್ಲಿ ಮಳೆಗಾಲದ ಸಂದರ್ಭದಲ್ಲಿ ಹುತ್ತದಲ್ಲಿ ಏಳುವ ಅಣಬೆಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಈ ಅಣಬೆಗಳು ಪ್ರತಿ ವರ್ಷ ಜುಲೈ, ಆಗಸ್ಟ್‌ ತಿಂಗಳಲ್ಲಿ ಬೆಳೆಯುತ್ತಿದ್ದು, ಇದರಲ್ಲಿ ಹೆಚ್ಚಿನ ಪೌಷ್ಟಿಕಾಂಶ ಇರುತ್ತದೆ. ಜತೆಗೆ ರುಚಿಕರವೂ ಹೌದು. ಈ ಕಾರಣಕ್ಕೆ ಜನರು ಅದನ್ನು ಮುಗಿಬಿದ್ದು ಖರೀದಿಸುತ್ತಾರೆ.

ವರ್ಷದಲ್ಲಿ ಎರಡು ತಿಂಗಳು ಮಾತ್ರ ಹುತ್ತದ ಅಣಬೆಗಳು ಸಿಗುತ್ತವೆ. ಹಂಗಾಮಿನಲ್ಲಿ ಅವು ತಾನಾಗಿಯೇ ಬೆಳೆಯುತ್ತವೆ. ಯಾವುದೇ ಆರೈಕೆ ಅಗತ್ಯವಿರುವುದಿಲ್ಲ. ಗ್ರಾಮಾಂತರ ಭಾಗದ ಎಷ್ಟೋ ಜನರು ಮಳೆಗಾಲದ ಎರಡು ತಿಂಗಳು ಇದನ್ನೇ ಹುಡುಕಿ ತಂದು ಮಾರಾಟ ಮಾಡಿ ಸಾವಿರಾರು ರುಪಾಯಿ ಸಂಪಾದನೆ ಮಾಡುತ್ತಾರೆ. ಹಾಗಂತ ಅಣಬೆ ಹುಡುಕುವುದು ಅಷ್ಟುಸುಲಭದ ಕೆಲಸವಲ್ಲ. ಹುತ್ತದಲ್ಲಿ ಬೆಳೆಯುವುದರಿಂದ ಕೀಳುವಾಗ ಭಯ ಇದ್ದೇ ಇರುತ್ತದೆ. ಅಣಬೆಗೆ ಬಟ್ಟೆತಗುಲಿದರೆ ಮುಂದಿನ ವರ್ಷ ಆ ಜಾಗದಲ್ಲಿ ಮತ್ತೆ ಬೆಳೆಯುವುದಿಲ್ಲ ಎಂಬ ನಂಬಿಕೆಯೂ ಇದೆ. ಹೀಗಾಗಿ ಅನುಭವ ಇರುವವರು ಮಾತ್ರ ಅದನ್ನು ಕೀಳಲು ಹೋಗುತ್ತಾರೆ. ದೊಡ್ಡದಾಗಿರುವ ಹಾಗೂ ತಾಜಾ ಅಣಬೆಗೆ ಮಾರುಕಟ್ಟೆಯಲ್ಲಿ ಗರಿಷ್ಠ ದರವಿದೆ. ಸಣ್ಣ ಅಣಬೆಗೆಗಳನ್ನು 500 ವರೆಗೆ ಮಾರಾಟ ಮಾಡುತ್ತಾರೆ.

ಅಡುಗೆ ಮನೆಯ ಹೊಸ ಅತಿಥಿ ‘ಬಾಕಾಹು’..!

ಅಣಬೆಯಿಂದ ಸಾಂಬಾರು, ಪಲ್ಯ, ಸೂಪ್‌ ಮತ್ತಿತರ ಬಗೆ ಬಗೆಯ ಪದಾರ್ಥಗಳನ್ನು ಮಾಡುತ್ತಾರೆ. ಯಾವುದೇ ಪದಾರ್ಥವಿರಲಿ ಅಣಬೆಪ್ರಿಯರಿಗೆ ಇಷ್ಟವೇ ಆಗಿರುತ್ತದೆ. ಹಿಂದೆಲ್ಲ ಅಣಬೆಗೆ ಹೆಚ್ಚಿನ ದರವಿರುತ್ತಿರಲಿಲ್ಲ. ಗ್ರಾಮಾಂತರ ಭಾಗದಿಂದ ಕೆಲವೇ ಜನರು ಅಣಬೆ ತಂದು ಪೇಟೆಯಲ್ಲಿ ನೂರಕ್ಕೆ 100-150ರ ವರೆಗೆ ಮಾರಾಟ ಮಾಡಿ ಹೋಗುತ್ತಿದ್ದರು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಕೆಲವರಿಗೆ ಮಳೆಗಾಲದ ಎರಡು ತಿಂಗಳು ಅಣಬೆ ಹುಡುಕುವುದೇ ಕಾಯಕ. ಜತೆಗೆ ಸಾಕಷ್ಟುಹಣವನ್ನೂ ಸಂಪಾದಿಸುತ್ತಾರೆ. ವಿಪರ್ಯಾಸವೆಂದರೆ ಪಟ್ಟಣದಲ್ಲಿ ಕೆಲವರು ಹಳ್ಳಿಗರಿಂದ ಕಡಿಮೆ ಬೆಲೆಗೆ ಅಣಬೆ ಖರೀದಿಸಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ತರಕಾರಿ ಸೇರಿದಂತೆ ಎಲ್ಲ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದರಿಂದ ಅಣಬೆಯ ದರವೂ ಸಹಜವಾಗಿ ಏರಿಕೆ ಕಂಡಿದೆ. ಹಳ್ಳಿಯಿಂದ ಪೇಟೆಗೆ ಅಣಬೆ ತಂದರೆ ನಾಲ್ಕು ಕಾಸು ಸಂಪಾದಿಸಬಹುದು ಎನ್ನುವ ಕಾರಣದಿಂದ ಇದನ್ನು ಮಾರಾಟಕ್ಕೆ ತರುವವರ ಸಂಖ್ಯೆಯೂ ಏರಿದೆ. ವರ್ಷದಲ್ಲಿ ಎರಡ್ಮೂರು ತಿಂಗಳು ಮಾತ್ರ ಸಿಗುವ ಈ ರುಚಿಕರ ಅಣಬೆಗೆ ದರ ಸಾವಿರದ ವರೆಗೆ ಏರಿಕೆಯಾದರೂ ಖರೀದಿಸುವವರಿಗೇನೂ ಕಡಿಮೆ ಇಲ್ಲ.
 

Follow Us:
Download App:
  • android
  • ios