Asianet Suvarna News Asianet Suvarna News

ಬೆಂಬಿಡದೇ ಕಾಡುತ್ತಿದೆ ಒತ್ತಡ, ಮಾನಸಿಕ ನೆಮ್ಮದಿಗಿಲ್ಲ ಜಾಗ

ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಮಾನಸಿಕ ಸಮಸ್ಯೆಯಿಂದ ಬಳಲ್ತಿದ್ದಾರೆ. ಒತ್ತಡ ಸಾಮಾನ್ಯ ಎನ್ನುವಂತಾಗಿದೆ. ಖಿನ್ನತೆ ಬೆಂಬಿಡದೆ ಕಾಡ್ತಿದೆ. ಇದು ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
 

How To Reduce Mental Stress And Depression Problem In Youth
Author
First Published Sep 19, 2022, 4:30 PM IST

ಆರೋಗ್ಯ ಎಂಬ ವಿಷ್ಯ ಬಂದಾಗ ನಾವು ದೈಹಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನ  ನೀಡ್ತೇವೆ. ಆದ್ರೆ ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯ ಕೂಡ ಬಹಳ ಮುಖ್ಯವಾಗುತ್ತದೆ. ದೈಹಿಕ ಹಾಗೂ ಮಾನಸಿಕ ಎರಡೂ ಆರೋಗ್ಯ ಚೆನ್ನಾಗಿರುವುದು ಬಹಳ ಅಗತ್ಯ. ಇದ್ರಲ್ಲಿ ಒಂದು ಆರೋಗ್ಯ ಹದಗೆಟ್ಟರೂ ಇನ್ನೊಂದು ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಜನರು ಜ್ವರ, ನೆಗಡಿ, ಮೈ ಕೈ ನೋವಿಗೂ ಆಸ್ಪತ್ರೆಗೆ ಹೋಗ್ತಾರೆ. ಆದ್ರೆ ಮನಸ್ಸು ಬೇಸರಗೊಂಡಾಗ, ಮಾನಸಿಕ ಸಮಸ್ಯೆ ಕಾಣಿಸಿಕೊಂಡಾಗ ವೈದ್ಯರ ಬಳಿ ಹೋಗುವುದಿಲ್ಲ. ಮಾನಸಿಕ ತಜ್ಞರ ಬಳಿ ಹೋಗೋದನ್ನು ಕೆಲವರು ಅವಮಾನ ಎಂದುಕೊಳ್ತಾರೆ. 

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಮತ್ತು ಮಕ್ಕಳಲ್ಲಿ ಮಾನಸಿಕ (Mental)ಸಮಸ್ಯೆ ಹೆಚ್ಚಾಗ್ತಿದೆ. ಕೊರೊನಾ ನಂತ್ರ ದೊಡ್ಡ ಮಟ್ಟದಲ್ಲಿ ಮಾನಸಿಕ ಸಮಸ್ಯೆ ಯುವ ಜನರನ್ನು ಕಾಡ್ತಿದೆ. ಖಿನ್ನತೆ (Depression), ಒತ್ತಡ (Stress) ಸಮಸ್ಯೆಯಿಂದ ಬಳಲುತ್ತಿರುವ ಯುವ ಜನರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಗುರುತಿಸುವುದು ಬಹಳ ಕಷ್ಟ. ಕೊನೆ ಹಂತದಲ್ಲಿ ಮಾನಸಿಕ ರೋಗ ಪತ್ತೆಯಾಗ್ತಿದೆ. ದೀರ್ಘಕಾಲದವರೆಗೆ ಜನರು ಮಾನಸಿಕ ಒತ್ತಡಕ್ಕೆ ಒಳಗಾದ್ರೆ ಅವರಿಗೆ ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಖಾಯಿಲೆ ಕಾಡುತ್ತದೆ. ರೋಗ ನಿರೋಧಕ ಶಕ್ತಿ ಕೂಡ ಕಡಿಮೆಯಾಗುತ್ತದೆ. ಹಾಗಾಗಿ ಯುವಜನತೆ ಮಾನಸಿಕ ಆರೋಗ್ಯ (Health) ಕ್ಕೂ ಮಹತ್ವ ನೀಡುವ ಅಗತ್ಯವಿದೆ. 

ಮಾನಸಿಕ ಸಮಸ್ಯೆ ಹಾಗೂ ಖಿನ್ನತೆ ಲಕ್ಷಣ : 
ಕೋಪ – ಕಿರಿಕಿರಿ :
ಒತ್ತಡ –ಖಿನ್ನತೆ ಕಾಡಿದಾಗ ಅದನ್ನು ವ್ಯಕ್ತಪಡಿಸಲು ಕೆಲವರು ಅಸಮರ್ಥರಾಗ್ತಾರೆ. ಇದ್ರಿಂದ ಅವರಿಗೆ ಕಿರಿಕಿರಿ, ಕೋಪ ಕಾಣಿಸಿಕೊಳ್ಳುತ್ತದೆ. ನಡವಳಿಕೆಯಲ್ಲಿನ ಬದಲಾವಣೆಗಳಾಗುತ್ತವೆ. ಕೆಲಸದಲ್ಲಿ ಆಸಕ್ತಿ ಇರುವುದಿಲ್ಲ. ಜನರೊಂದಿಗೆ ಬೆರೆಯಲು ಹಾಗೂ ಸಮಯ ಕಳೆಯಲು ಕಷ್ಟವಾಗುತ್ತದೆ. ನಿಮಗೂ ಇದೆಲ್ಲ ಕಾಡ್ತಿದ್ದರೆ ನೀವು  ಒತ್ತಡಕ್ಕೆ ಒಳಗಾಗಿದ್ದೀರಿ ಎಂದರ್ಥ. ತಕ್ಷಣ ನೀವು ಮನೋ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಸೂಕ್ತ. ಒತ್ತಡ, ಖಿನ್ನತೆ ಹೆಚ್ಚಾದ್ರೆ ನಂತ್ರ ಅದನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ.

ತೂಕ ಇಳಿಸಲು ಫ್ಯಾಟ್ ಬರ್ನರ್ ಬಳಸ್ತೀರಾ? ಎಚ್ಚರ ತಪ್ಪಿದ್ರೆ ಅಪಾಯ

ನಿದ್ರಾಹೀನತೆ : ಒತ್ತಡ – ಖಿನ್ನತೆಯಂತ ಮಾನಸಿಕ ಸಮಸ್ಯೆಯಿಂದ ನೀವು ಬಳಲುತ್ತಿದ್ದೀರಿ ಎಂದಾದ್ರೆ ನಿಮಗೆ ನಿದ್ರಾ ಹೀನತೆ ಕಾಡುವುದು ಸಾಮಾನ್ಯ ಸಂಗತಿಯಾಗಿದೆ. ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲವೆಂದ್ರೆ  ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು. ಹದಿಹರೆಯದ ಮಕ್ಕಳು ಸದಾ ದಣಿವನ್ನು ಅನುಭವಿಸುತ್ತಿದ್ದರೆ, ಅಗತ್ಯಕ್ಕಿಂತ ಹೆಚ್ಚು ನಿದ್ರೆ ಮಾಡ್ತಿದ್ದರೆ ಅಥವಾ ರಾತ್ರಿ ಸರಿಯಾಗಿ ನಿದ್ರೆ ಮಾಡ್ತಿಲ್ಲ ಎಂದಾದರೆ ಅವರಿಗೆ ಚಿಕಿತ್ಸೆಯ ಅಗತ್ಯವಿದೆ. ಯಾಕೆಂದ್ರೆ ಇದು ಒತ್ತಡದ ಆರಂಭಿಕ ಚಿಹ್ನೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಚಿಕಿತ್ಸೆ ನೀಡಬೇಕಾಗುತ್ತದೆ.

ಆಹಾರ ಸೇವನೆ ಬಗ್ಗೆ ಗಮನವಿರಲಿ : ಅತಿಯಾಗಿ ಆಹಾರ ಸೇವನೆ ಮತ್ತು ಕಡಿಮೆ ಆಹಾರ ಸೇವನೆ ಎರಡೂ ಒಳ್ಳೆಯದಲ್ಲ. ಇದೆರಡೂ ಒತ್ತಡದ ಲಕ್ಷಣವಾಗಿದೆ. ನಿಮ್ಮ ಆಹಾರ ಸೇವನೆಯಲ್ಲಿ ಬದಲಾವಣೆ ಯಾಗಿದ್ದರೆ ನೀವು ಮನೋ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ಇದ್ರ ಜೊತೆ ಮಕ್ಕಳು ತಲೆ ನೋವು, ಹೊಟ್ಟೆ ನೋವು ಎನ್ನುತ್ತಿದ್ದರೂ ನೀವು ಇದನ್ನು ಗಂಭೀರವಾಗಿ ಪರಿಗಣಿಸಿ. ಇದು ಕೂಡ ಒತ್ತಡ ಹಾಗೂ ಖಿನ್ನತೆಯ ಲಕ್ಷಣವಾಗಿರುವ ಸಾಧ್ಯತೆಯಿದೆ.

ಬೆಳಗ್ಗೆದ್ದು ಬರೀ ಹೊಟ್ಟೆಗೆ ಹಾಲು ಕುಡಿಯೋ ಅಭ್ಯಾಸ ಒಳ್ಳೆಯದಾ ?

ಖಾಲಿ ಮನಸ್ಸು : ಎಷ್ಟೇ ಕೆಲಸದಲ್ಲಿ ತೊಡಗಿದ್ರೂ ಮನಸ್ಸಿನಲ್ಲಿ ಸಣ್ಣ ನೋವು ಅಥವಾ ನೆಮ್ಮದಿ ಇಲ್ಲದಿರುವುದು ಕೂಡ ಖಿನ್ನತೆಯ ಲಕ್ಷಣವಾಗಿದೆ. ಸದಾ ಮನಸ್ಸಿನಲ್ಲಿ ಬೇಸರ, ಯಾವುದ್ರಲ್ಲೂ ಉತ್ಸಾಹ ಇಲ್ಲದೆ ಇರುವುದು ಖಿನ್ನತೆಯ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ.

ಖಿನ್ನತೆ – ಒತ್ತಡ ನಿವಾರಣೆ ಹೇಗೆ? : ಇದು ಆರಂಭದಲ್ಲಿ ಗಂಭೀರ ಎನ್ನಿಸದೆ ಹೋದ್ರೂ ದಿನ ಕಳೆದಂತೆ ಸಮಸ್ಯೆ ಉಲ್ಬಣಿಸುತ್ತದೆ. ಹಾಗಾಗಿ ಇದನ್ನು ನಿಯಂತ್ರಿಸಲು ಉತ್ತಮ ನಿದ್ರೆ, ಪೌಷ್ಟಿಕ ಆಹಾರ ಸೇವನೆ ಜೊತೆಗೆ ಮನಸ್ಸಿಗೆ ಹಿತ ನೀಡುವ ಕೆಲಸ ಮಾಡುವುದು ಅವಶ್ಯಕ. ವೈದ್ಯರ ಭೇಟಿಯಾಗಿ ಚಿಕಿತ್ಸೆ ಜೊತೆ ನಿಯಮಿತ ವ್ಯಾಯಾಮ, ಧ್ಯಾನ ಕೂಡ ಖಿನ್ನತೆ ಕಡಿಮೆ ಮಾಡಲು ನೆರವಾಗುತ್ತದೆ.
 

Follow Us:
Download App:
  • android
  • ios