ಬೇಸಿಗೆಯಲ್ಲಿ ಚಿಕನ್ ಎಷ್ಟು ಸೇಫ್‌? ಚಿಕನ್ ಶವರ್ಮಾ ತಿಂದ 19 ವರ್ಷದ ತರುಣ ಸಾವು, ಐವರು ಅಸ್ವಸ್ಥ

ಚಿಕನ್ ಶವರ್ಮಾ ತಿಂದ 19 ವರ್ಷದ ತರುಣನೋರ್ವ ಸಾವಿಗೀಡಾದ ಘಟನೆ ಮಹಾನಗರಿ ಮುಂಬೈನಲ್ಲಿ ನಡೆದಿದೆ. ವಾರದೊಳಗೆ ನಡೆದ 2ನೇ ಪ್ರಕರಣ ಇದಾಗಿದ್ದು, ಮುಂಬೈ ನಗರಾಡಳಿತವೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. 

How safe is eating chicken in summer 19 year old boy dies after eating chicken shawarma in Mumbai akb

ಮುಂಬೈ: ಚಿಕನ್ ಶವರ್ಮಾ ತಿಂದ 19 ವರ್ಷದ ತರುಣನೋರ್ವ ಸಾವಿಗೀಡಾದ ಘಟನೆ ಮಹಾನಗರಿ ಮುಂಬೈನಲ್ಲಿ ನಡೆದಿದೆ. ವಾರದೊಳಗೆ ನಡೆದ 2ನೇ ಪ್ರಕರಣ ಇದಾಗಿದ್ದು, ಮುಂಬೈ ನಗರಾಡಳಿತವೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಮೃತ ಯುವಕ ರಸ್ತೆಬದಿಯ ಆಹಾರ ಮಳಿಗೆಯಲ್ಲಿ ಮೇ 3 ರಂದು ಶವರ್ಮಾ ಸೇವಿಸಿದ್ದ ಆದರೆ ಮಾರನೇ ದಿನ ಈತನಿಗೆ ಫುಡ್ ಪಾಯ್ಸನ್ (ವಿಷಾಹಾರ) ಆಗಿ ಈತ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ವ್ಯಾಪಾರಿಗಳನ್ನು ಬಂಧಿಸಲಾಗಿದ್ದು, ಇವರು ಕೆಟ್ಟು ಹೋದ ಕೋಳಿ ಮಾಂಸವನ್ನು ಶವರ್ಮಾ ಮಾಡುವುದಕ್ಕೆ ಪೂರೈಸಿದರು ಇದರಿಂದಲೇ ಈ ಸಾವು ಸಂಭವಿಸಿದೆ ಎಂದು ವರದಿ ಆಗಿದೆ. ಮುಂಬೈನ ತ್ರೊಂಬೆಯಲ್ಲಿ ಘಟನೆ ನಡೆದಿದೆ.  ಇಲ್ಲಿ ಚಿಕನ್ ಶವರ್ಮಾ ಸೇವಿಸಿದ್ದ ಇನ್ನೂ ಐವರು ಅಸ್ವಸ್ಥರಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ತ್ರೊಂಬೆ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಮಹಾರಾಷ್ಟ್ರ ನಗರ ನಿವಾಸಿಗಳಾದ 19 ವರ್ಷದ ಪ್ರಥಮೇಶ್ ಭೋಕ್ಸೆ, ಹಾಗೂ ಈತನ ಅಂಕಲ್ 40 ವರ್ಷದ ಹಮೀದ್ ಅಬ್ಬಾಸ್ ಸೈಯದ್ ಅವರು ಮೇ 3 ರಂದು ಹನುಮಾನ್ ಛಲಿ ಬಳಿ ಇರುವ ಬೀದಿ ಬದಿಯ ಸ್ಟಾಲ್ ಒಂದರಲ್ಲಿ ಚಿಕನ್ ಶವರ್ಮಾ ಸೇವಿಸಿದ್ದಾರೆ. ಈ ಆಹಾರ ಮಳಿಗೆಯನ್ನು ಆನಂದ್ ಕಾಂಬ್ಳೆ ಹಾಗೂ ಮೊಹಮ್ಮದ್ ಶೇಖ್ ಎಂಬುವವರು ನಡೆಸುತ್ತಿದ್ದರು. 

ಕೇರಳದಲ್ಲಿ ಚಿಕನ್ ಶವರ್ಮ ತಿಂದು 22 ವರ್ಷದ ಯುವಕ ಸಾವು: ಹೊಟೇಲ್‌ ಬಂದ್ ಮಾಡಿಸಿದ ಅಧಿಕಾರಿಗಳು

ಮಾರನೇ ದಿನ ಪ್ರಥಮೇಶ್‌ಗೆ ತೀವ್ರವಾಗಿ ಹೊಟ್ಟೆನೋವು ಶುರುವಾಗಿದ್ದು, ಆತ ವಾಂತಿ ಮಾಡಲು ಶುರು ಮಾಡಿದ್ದಾನೆ. ಇದಾದ ನಂತರ ಆತನನ್ನು ಸಮೀಪದ ಸರ್ಕಾರಿ ಮುನ್ಸಿಪಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಬಳಿಕ ಆತ ಚೇತರಿಸಿಕೊಂಡಿದ್ದಾನೆ. ಆದರೆ ಮೇ.5 ರಂದು ಮತ್ತೆ ಆತನಿಗೆ ಡಯೇರಿಯಾ ಕಾಣಿಸಿಕೊಂಡಿದ್ದು, ಆತನನ್ನು ಪಾರೆಲ್‌ನಲ್ಲಿರುವ ಕೆಇಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಆತನಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದರು. ಆದರೆ ಸೋಮವಾರ ಬೆಳಗ್ಗೆ ಆತನಲ್ಲಿ ನಿತ್ರಾಣ ಕಾಣಿಸಿಕೊಂಡಿದ್ದು, ಮತ್ತೆ ಕುಟುಂಬದವರು ಕೆಇಎಂ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ವೇಳೆ ಆತ ಸಾವನ್ನಪ್ಪಿದ್ದಾನೆ. 

ನಾವು ಆತನ ಚೇತರಿಕೆಗೆ ಪ್ರಯತ್ನಿಸಿದೆವು ಆದರೆ ಆತ ಸಾವನ್ನಪ್ಪಿದ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.  ಜನ ಚಿಕನ್ ಶವರ್ಮಾ ತಿಂದು ಅಸ್ವಸ್ಥರಾಗುತ್ತಿರುವುದು ಇದೇ ಮೊದಲಲ್ಲ,  ಕೇರಳ, ತಮಿಳುನಾಡಿನಲ್ಲಿ ಚಿಕನ್ ಶವರ್ಮಾ ತಿಂದು ಈಗಾಗಲೇ ಕ್ರಮವಾಗಿ ಒಂದು ಎರಡು ಸಾವು ಸಂಭವಿಸಿದೆ. ಕಳೆದ ಏಪ್ರಿಲ್‌ನಲ್ಲಿ ಮಹಾರಾಷ್ಟ್ರದ ಗೋರಗಾಂವ್‌ ಬಳಿ ರಸ್ತೆ ಬದಿ ಚಿಕನ್ ಶವರ್ಮಾ ತಿಂದ 12 ಜನ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದರು.

ಚಿಕನ್ ಶವರ್ಮ ತಿಂದ ಬಾಲಕಿ ಸಾವು : ಶವರ್ಮ, ಗ್ರಿಲ್ಡ್‌ ಚಿಕನ್‌ಗೆ ತಾತ್ಕಾಲಿಕ ನಿಷೇಧ

ಇತ್ತ ಯುವಕನ ಅಂಕಲ್ ಹೇಳಿಕೆ ಹಾಗೂ ಆಸ್ಪತ್ರೆ ವರದಿ ಆಧರಿಸಿ ತ್ರೊಂಬೆ ಪೊಲೀಸರು ಶವರ್ಮಾ ಶಾಪ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ, ಅಲ್ಲದೇ ಶಾಪ್‌ನ ಇಬ್ಬರು ಮಾಲೀಕರನ್ನು ಕೂಡ ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಅಮೊಲ್ ಛಾಟೆ ಹೇಳಿದ್ದಾರೆ.

ಚಿಕನ್ ಶವರ್ಮಾ ಅಥವಾ ಚಿಕನ್ ರೋಲ್ ಯುವ ಸಮೂಹದ ಫೇವರೇಟ್ ಆಹಾರವಾಗಿದೆ. ಆದರೆ ಬೇಸಿಗೆಯ ಸಮಯದಲ್ಲಿ ರಸ್ತೆ ಬದಿಯ ಆಹಾರ ಮಳಿಗೆಗಳಲ್ಲಿ ಕೋಳಿ ಮಾಂಸದಿಂದ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ತೀವ್ರವಾದ ಆಹಾರ ವಿಷ ಮತ್ತು ಮಾರಣಾಂತಿಕ ಆರೋಗ್ಯ ಸಮಸ್ಯೆ ಕಾಡಬಹುದು.  ಬೇಸಿಗೆ ಹೆಚ್ಚಿನ ತಾಪಮಾನ ಮತ್ತು ಅನಿಯಂತ್ರಿತ ಆಹಾರ ನಿರ್ವಹಣೆಯ ಸಂಯೋಜನೆಯು ಬ್ಯಾಕ್ಟೀರಿಯಾದ ಮಾಲಿನ್ಯದ ಸಾಧ್ಯತೆಯನ್ನು ಹೆಚ್ಚಿಸುತ್ತದೆ, ಇದು ಜಠರಗರುಳಿನ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಕೆಇಎಂ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಅಕ್ರಮ ಆಹಾರ ಮಳಿಗೆಗಳಿಗೆ ಬೀಗ ಜಡಿಯುವ ಕಾರ್ಯ ಶುರು ಮಾಡಿದೆ.

ಚಿಕನ್ ಶವರ್ಮಾ ತಿಂದು ಕಾಸರಗೋಡಿನ ಯುವತಿ ಸಾವು; ಶಿಗೆಲ್ಲಾ ಬ್ಯಾಕ್ಟಿರೀಯಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ್ದಿಷ್ಟು

Latest Videos
Follow Us:
Download App:
  • android
  • ios