Asianet Suvarna News Asianet Suvarna News

ಉತ್ತರ ಕನ್ನಡಕ್ಕೆ ಉತ್ಕೃಷ್ಟ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ಧ: ಸಚಿವ ಸುಧಾಕರ

  • ಉತ್ತರ ಕನ್ನಡಕ್ಕೆ ಉತ್ಕೃಷ್ಟಆರೋಗ್ಯ ಸೇವೆ ನೀಡಲು ಸರ್ಕಾರ ಬದ್ಧ: ಸಚಿವ ಸುಧಾಕರ
  • ವೈದ್ಯರ ಕೊರತೆ ಶೀಘ್ರ ನೀಗಿಸುತ್ತೇವೆ
  • ರಾಜ್ಯದಲ್ಲಿ 38 ಲಕ್ಷ ಜನರಿಂದ ಆಯುಷ್ಮಾನ್‌ ಕಾರ್ಡ್‌ ಪ್ರಯೋಜನ
Government is committed provide excellent healthcare services says Minister Sudhakar rav
Author
First Published Oct 12, 2022, 10:13 AM IST

ಕಾರವಾರ (ಅ.12) : ಕಾರವಾರ ವೈದ್ಯಕೀಯ ಕಾಲೇಜಿಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸೌಲಭ್ಯ, ಕುಮಟಾದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಗೆ ಸರ್ಕಾರವು ಉತ್ಕೃಷ್ಟಆರೋಗ್ಯ ಸೇವೆ ನೀಡಲು ಬದ್ಧವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಭರವಸೆ ನೀಡಿದರು.

Ayushmann Khurrana 25 ಕೋಟಿಯಿಂದ 15 ಕೋಟಿಗೆ ಸಂಬಳ ಇಳಿಸಿಕೊಂಡ ನಟ; ಕಾರಣ ಕೇಳಿ ಶಾಕ್ ಆಗ್ಬೇಡಿ

ನಗರದಲ್ಲಿ ಮಂಗಳವಾರ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ಪ್ರಮುಖ 7 ವಿಭಾಗಕ್ಕೆ ತಜ್ಞವೈದ್ಯರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಒಂದು ವಿಭಾಗಕ್ಕೆ ಮಾತ್ರ ವೈದ್ಯರು ಬಂದಿದ್ದಾರೆ. ಉಳಿದ ವಿಭಾಗಕ್ಕೂ ನೇಮಕ ಮಾಡಲಾಗುತ್ತದೆ. ವೈದ್ಯರು ಬಾರದೇ ಇದ್ದರೆ ನಿಮ್ಹಾನ್ಸ್‌, ಕಿದ್ವಾಯಿ, ಜಯದೇವದಂತಹ ಆಸ್ಪತ್ರೆಗಳಿಂದ ವೈದ್ಯರನ್ನು ಕಾರವಾರ ವೈದ್ಯಕೀಯ ಕಾಲೇಜಿಗೆ ಹಬ್‌ ಆ್ಯಂಡ್‌ ಸ್ಪೋಕ್‌ ಮಾದರಿಯಲ್ಲಿ ವೈದ್ಯರ ನೇಮಕ ಮಾಡಲು ಚರ್ಚೆ ಮಾಡಲಾಗುತ್ತದೆ. ಆದಷ್ಟುಶೀಘ್ರದಲ್ಲಿ ವೈದ್ಯರ ಕೊರತೆಯನ್ನು ನೀಗಿಸುತ್ತೇವೆ. ಜಿಲ್ಲಾಸ್ಪತ್ರೆಯಲ್ಲಿ ಕ್ರಿಟಿಕಲ್‌ ಕೇರ್‌ ಸರ್ವಿಸ್‌, ಎಂಆರ್‌ಐ ಸ್ಕ್ಯಾ‌ನಿಂಗ್‌ ಈಗಾಗಲೇ ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 38.75 ಲಕ್ಷ ಜನರು ಪ್ರಯೋಜನ ಪಡೆದಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರದ ಈ ಯೋಜನೆ ಸಾಕಷ್ಟುಜನರಿಗೆ ಆರ್ಥಿಕವಾಗಿ ಉಪಯೋಗವಾಗಿದೆ. ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಈ ಕಾರ್ಡ್‌ ಮಾಡಿಸಿಕೊಳ್ಳಬೇಕು ಎಂದು ಕೋರಿದರು.

ದಾಂಡೇಲಿ ಸಿಎಚ್‌ಸಿ ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಕ್ಯಾಸಲ್‌ರಾಕ್‌ನಲ್ಲಿ ಆರೋಗ್ಯ ಬಂಧು ಯೋಜನೆಯಲ್ಲಿ ವೈದ್ಯಕೀಯ ಸೇವೆ ನೀಡಲಾಗುತ್ತದೆ. ಈ ಹಿಂದಿನಂತೆ ಜೋಯಿಡಾ, ಅಂಕೋಲಾ, ಯಲ್ಲಾಪುರ, ಸಿದ್ದಾಪುರ, ಕಾರವಾರಕ್ಕೆ ಆರೋಗ್ಯ ಸಂಚಾರ ಘಟಕ (ಮೆಡಿಕಲ್‌ ಮೊಬೈಲ್‌ ಯುನಿಟ್‌) ಮಾಡಲಾಗುತ್ತದೆ. ಎಲ್ಲ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಪ್ಲಾಂಟ್‌ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

ಆರ್‌ಟಿಪಿಸಿಆರ್‌ ಎರಡು ಲ್ಯಾಬ್‌ ಮಾಡಲಾಗಿದೆ. 27 ತಜ್ಞವೈದ್ಯರ ಕೊರತೆಯಿದೆ. ಶೀಘ್ರದಲ್ಲಿ ಹಣಕಾಸು ಇಲಾಖೆ ಜತೆಗೆ ಚರ್ಚೆ ಮಾಡಲಿ ನೇಮಕ ಮಾಡಲಾಗುತ್ತದೆ. ತಾಲೂಕು ಆಸ್ಪತ್ರೆಗೆ ಅಗತ್ಯವಿರುವಷ್ಟುಡಯಾಲಿಸಿಸ್‌ ಯಂತ್ರದ ಮಾಹಿತಿ ಪಡೆದಿದ್ದು, ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರಿಗೆ ಕನಿಷ್ಠ ವೇತನ, ಪಿಎಫ್‌ ಇತ್ಯಾದಿ ಸರ್ಕಾರದ ನಿಯಮದಂತೆ ನೀಡಬೇಕು. ಶೋಷಣೆ ಮಾಡುತ್ತಿದ್ದರೆ ಕಾರ್ಮಿಕ ಕಾನೂನಿನಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸ್ಥಳ ಯೋಗ್ಯವಾದಲ್ಲಿ ಕುಮಟಾದಲ್ಲಿ ಸುಸಜ್ಜಿತ ಆಸ್ಪತ್ರೆ

ಕುಮಟಾ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳ ಪರಿಶೀಲನೆ ನಡೆಸಿ, ಸ್ಥಳ ನಿಗದಿಯಾದಲ್ಲಿ, ಯೋಗ್ಯವಾಗಿದ್ದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸಿಎಂ ಜತೆಗೆ ಚರ್ಚಿಸಿ ಮಂಜೂರು ನೀಡಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಸಚಿವ ಡಾ. ಸುಧಾಕರ ಹೇಳಿದರು.

ಕೇಂದ್ರದ ಯೋಜನೆ ಜನರಿಗೆ ತಲುಪಿಸುವಲ್ಲಿ ಅಂಚೆ ಇಲಾಖೆ ಪಾತ್ರ ಮಹತ್ವದ್ದು: ಡಿವಿಎಸ್‌

ಖಾಸಗಿ ಬಗ್ಗೆ ನಾವೆಲ್ಲೂ ಮಾತನಾಡಿಯೇ ಇಲ್ಲ. ಖಾಸಗಿಯವರು ನೋಡಿಕೊಂಡು ಹೋಗಿದ್ದರೆ ಅದು ತಮಗೆ ಗೊತ್ತಿಲ್ಲ. ಆದರೆ ಒಟ್ಟಾರೆ ಜನತೆಯ ಬೇಡಿಕೆಯಂತೆ ಅಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ. ಈ ಬಗ್ಗೆ ಜಿಲ್ಲೆಯ ಸಭಾಧ್ಯಕ್ಷರನ್ನೊಳಗೊಂಡು ಎಲ್ಲ ಜನಪ್ರತಿನಿಧಿಗಳ ಜತೆಯೂ ಚರ್ಚೆ ಮಾಡುತ್ತೇನೆ ಎಂದರು.

ಅನಗತ್ಯ ಸಿಜೇರಿಯನ್‌ ಹೆರಿಗೆ ಬೇಡ

ಸಿಜೇರಿಯನ್‌ ಹೆರಿಗೆ ಜಿಲ್ಲೆಯಲ್ಲಿ ಶೇ.41ರಷ್ಟಿದ್ದು, ಏಕೆ ಈ ರೀತಿ ಆಗುತ್ತಿದೆ. ಈ ಬಗ್ಗೆ ಪರಿಶೀಲಿಸಬೇಕು. ಅನಗತ್ಯವಾಗಿ ಸಿಜೇರಿಯನ್‌ ಮಾಡಬಾರದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳಿಗೂ ಈ ಬಗ್ಗೆ ಸೂಚನೆ ನೀಡಬೇಕು. ಪ್ರತಿ ಪ್ರಕರಣದ ಮಾಹಿತಿಯನ್ನು ಕಾರಣ ಸಹಿತ ಮಾಹಿತಿ ಪಡೆದು ತಮಗೆ ನೀಡಿ ಎಂದು ಸೂಚನೆ ನೀಡಿದರು.

ಆಯುಷ್ಮಾನ್‌ ಭಾರತ್‌ ಕಾರ್ಡ್‌ 11.5 ಲಕ್ಷ ಬಾಕಿ ಉಳಿದಿದೆ. ಜನರಿಗೆ ಈ ಸೌಲಭ್ಯದ ಅಗತ್ಯತೆ ಮನವರಿಕೆ ಮಾಡಿ, ಗ್ರಾಮ ಒನ್‌ಗಳಲ್ಲೂ ಈ ಕಾರ್ಡ್‌ ಮಾಡಿಸಲು ಅವಕಾಶ ನೀಡಿದ್ದು, ಗ್ರಾಮೀಣ ಭಾಗದಲ್ಲಿ ಸ್ಥಳೀಯ ಪಿಡಿಒಗಳಿಗೆ ಸೂಚನೆ ನೀಡಿ ಆಭಾ ಕಾರ್ಡ್‌ ಮಾಡಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಡಿಸೆಂಬರ್‌ ಅಂತ್ಯದೊಳಗೆ ಜಿಲ್ಲೆಯ ಎಲ್ಲರಿಗೂ ಈ ಕಾರ್ಡ್‌ ಮಾಡಿಸಲು ಅಗತ್ಯ ಕ್ರಮ ವಹಿಸುವುದಾಗಿ ಸಚಿವರಿಗೆ ತಿಳಿಸಿದರು.

ಶಾಸಕ ದಿನಕರ ಶೆಟ್ಟಿಮಾತನಾಡಿ, ಉಡುಪಿಯ ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಕಾರ್ಡ್‌ ಅಡಿಯಲ್ಲಿ ಸೇವೆ ನೀಡುತ್ತಿಲ್ಲ. ಇದರಿಂದ ಉತ್ತರ ಕನ್ನಡದ ಜನರಿಗೆ ತೊಂದರೆ ಆಗುತ್ತಿದೆ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಸಚಿವರು, ಉಡುಪಿಯ ಖಾಸಗಿ ಆಸ್ಪತ್ರೆಗಳ ಜತೆಗೆ ಸಭೆ ನಡೆಸಿ ಈ ಕಾರ್ಡ್‌ ಅಡಿಯಲ್ಲಿ ಚಿಕಿತ್ಸೆ ನೀಡಲು ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಕೇವಲ 2 ತಾಲೂಕು ಆಸ್ಪತ್ರೆಯಲ್ಲಿ ಜನೌಷಧ ಕೇಂದ್ರವಿದ್ದು, ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯವಾಗಿ ಜನೌಷಧಿ ಕೇಂದ್ರಗಳನ್ನು ಕೂಡಲೇ ಪ್ರಾರಂಭಿಸಬೇಕು ಎಂದು ತಾಕೀತು ಮಾಡಿದರು.

ಅಧಿಕಾರಿಗಳ ಮಾತಿಗೆ ಸಚಿವ ಕೆಂಡಾಮಂಡಲ

ಸಿಂಕ್‌, ನಲ್ಲಿ, ಬೇಸಿನ್‌, ಕಮೋಡ್‌ ಹಾಳಾಗಿದೆ ಎಂದು ಇಲಾಖಾ ಸಚಿವರ ಸಭೆಯಲ್ಲಿ ಹೇಳುತ್ತೀರಾ? ನಾವು ಅದನ್ನು ಸರಿಪಡಿಸಬೇಕೇ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಅಧಿಕಾರಿಗಳ ಮಾತಿಗೆ ಅಸಮಾಧಾನ ಹೊರಹಾಕಿದರು. ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಕೆಲವು ಕಡೆ ಡಯಾಲಿಸಿಸ್‌ ಯಂತ್ರದ ಬಿಡಿಭಾಗಗಳ ಸರಿಯಿಲ್ಲ ಎನ್ನುತ್ತಿದ್ದಂತೆ ಕೋಪಗೊಂಡ ಸಚಿವರು, ಎಎಂಒ ಇರುವುದು ಏಕೆ? ಇಂತಹ ಚಿಕ್ಕ ವಿಷಯವನ್ನು ಸಚಿವರ ಸಭೆಯಲ್ಲಿ ಹೇಳುತ್ತೀರಾ? ದುರಸ್ತಿ ಮಾಡಿಸಲು ಆಗುವುದಿಲ್ಲವೇ? ನಾವೇ ಮಾಡಿಸಬೇಕೇ ಎಂದು ಕಿಡಿಕಾರಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ, ಆರೋಗ್ಯ ಇಲಾಖೆಯ ಆಯುಕ್ತ ಡಿ. ರಂದೀಪ್‌, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜಿಪಂ ಸಿಇಒ ಪ್ರಿಯಾಂಗಾ ಎಂ., ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಬದರಿನಾಥ ಮೊದಲಾದವರು ಇದ್ದರು.

Follow Us:
Download App:
  • android
  • ios