ಕೊರೋನಾ ವೈರಸ್ ಹೇಗೆ ವಿಪರೀತ ಹರಡುತ್ತಿದೆಯೋ ಹಾಗೆಯೇ ಆ ಕುರಿತ ಸುಳ್ಳು ಮಾಹಿತಿಗಳೂ ಹಬ್ಬುತ್ತಿವೆ. ಗೋಮೂತ್ರ ಸೇವನೆಯಿಂದ ಕೊರೋನಾ ಓಡಿಸ್ಬೋದು, ಬಿಸಿಲಿದ್ರೆ ವೈರಸ್ ಸತ್ತೇ ಹೋಗತ್ತೆ, ಮನೆ ಮುಂದೆ ಸಗಣಿ ಬಳಿದ್ರೆ ಕೊರೋನಾ ಒಳಬರಲ್ಲ ಇತ್ಯಾದಿ ಇತ್ಯಾದಿ ಸುಳ್ಳು ಸುದ್ದಿಗಳು ಪ್ರತಿದಿನ ರೆಕ್ಕೆಪುಕ್ಕ ಕಟ್ಟಿಕೊಂಡು ವಾಟ್ಸಾಪ್, ಫೇಸ್ಬುಕ್‌ನಲ್ಲಿ ಹರಿದಾಡಿ ಜನರನ್ನು ದಾರಿ ತಪ್ಪಿಸುತ್ತಿವೆ. ಜನರೂ ಗೂಗಲ್‌ನಲ್ಲಿ ಇಂಥ ಹಲವು ಡೌಟ್‌ಗಳನ್ನು ಸರ್ಚ್ ಮಾಡಿ ಕ್ಲಿಯರ್ ಮಾಡಿಕೊಳ್ಳಲು ಒದ್ದಾಡುತ್ತಿದ್ದಾರೆ. ಅಂಥ ಕೆಲವಾರು ಕೊರೊನಾ ಮೂಢನಂಬಿಕೆಗಳನ್ನಿಲ್ಲಿ ಒಡೆಯಲಾಗಿದೆ. 

1. ಬೆಳ್ಳುಳ್ಳಿ ತಿಂದವನಿಗೆ ವೈರಸ್ ಅಂಟಲ್ಲ
ಬೆಳ್ಳುಳ್ಳಿಯನ್ನು ಯದ್ವಾತದ್ವಾ ತಿಂದರೆ ಕೊರೋನಾ ವೈರಸ್ ದೇಹಕ್ಕೆ ನುಗ್ಗಲ್ಲ ಅಂತಾರೆ ಒಂದಿಷ್ಟು ಮಂದಿ. ಬೆಳ್ಳುಳ್ಳಿಯಿಂದ ಹಲವಾರು ಆರೋಗ್ಯ ಲಾಭಗಳಿವೆ ನಿಜ. ಆದರೆ, ಕೊರೋನಾ ವೈರಸ್ ಬೆಳ್ಳುಳ್ಳಿ ನೋಡಿ ಓಡಿ ಹೋಗೋದಕ್ಕೆ ಮಾತ್ರ ಯಾವ ಸಾಕ್ಷ್ಯವೂ ಇಲ್ಲ. 

ಮನೆಯೇ ಮಂತ್ರಾಲಯ ಅಂತ ಪ್ರೂವ್‌ ಮಾಡಿದ ಕೊರೋನಾ...

2. ಚೀನಾದಿಂದ ಉತ್ಪನ್ನಗಳನ್ನು ಆರ್ಡರ್ ಮಾಡಿದರೆ ಅದರಿಂದ ವೈರಸ್ ಬರಬಹುದು
ಸುಳ್ಳು. ಇಂಥ ಪ್ಯಾಕೇಜ್ ಮೇಲೆ ವೈರಸ್ ಹೆಚ್ಚು ಕಾಲ ಜೀವಂತವಾಗಿ ಇರಲು ಸಾಧ್ಯವಿಲ್ಲ. ಚೀನಾದಿಂದ ಬರುವ ಪ್ಯಾಕೇಜ್‌ಗಳು ಗ್ರಾಹಕನ ಕೈ ತಲುಪಲು ಕೆಲವು ದಿನಗಳಿಂದ ಹಿಡಿದು ವಾರದ ಕಾಲ ತೆಗೆದುಕೊಳ್ಳಬಹುದಾದ್ದರಿಂದ ಹೀಗೆ ಚೀನಾದ ಉತ್ಪನ್ನಗಳನ್ನು ತರಿಸಿ ನಿಮಗೆ ಕೊರೋನಾ ಬರುತ್ತದೆನ್ನುವುದು ಸುಳ್ಳು. ಗ್ರಹಚಾರ ಕೆಟ್ಟಿದ್ದರೆ ಇಲ್ಲಿಯೇ ಪಕ್ಕದ ಶಾಪ್‌ನಿಂದ ಗಂಟೆಯ ಮೊದಲು ಆರ್ಡರ್ ಮಾಡಿದ ವಸ್ತುವನ್ನು ಕೊರೋನಾ ಸೋಂಕಿತರು ಮುಟ್ಟಿದರೆ ಆಗ ವೈರಸ್ ನಿಮ್ಮ ಮನೆಯೊಳಗೆ ಬರಬಹುದು.

3. ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು
ಆರೋಗ್ಯವಂತವಾಗಿರುವ ಯಾವ ವ್ಯಕ್ತಿಯೂ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಆದರೆ, ಕಾಯಿಲೆ ಇರುವವರು, ಕಾಯಿಲೆ ಲಕ್ಷಣಗಳಿರುವವರು, ಆಸ್ಪತ್ರೆ ಸಿಬ್ಬಂದಿ, ಸೋಂಕಿತರೊಂದಿಗೆ ಇರುವವರು ಮಾಸ್ಕ್ ಧರಿಸುವುದು ಅಗತ್ಯ. 

4. ವಿಟಮಿನ್ ಸಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತದೆ
ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆರೋಗ್ಯಕ್ಕೆ ಒಳ್ಳೆಯದು ಕೂಡಾ. ಹಾಗಂಥ ಅತಿಯಾದರೆ ಅದು ಹೊಟ್ಟೆ ಹಾಗೂ ಕಿಡ್ನಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೊರೋನಾ ವಿರುದ್ಧ ಹೋರಾಟಕ್ಕೆ ವಿಟಮಿನ್ ಸಿ ಸೇವನೆ ಸಾಕು ಎಂಬುದು ಸುಳ್ಳು. 

5. ಮಕ್ಕಳಿಗೆ ಕೊರೊನಾ ಬರಲ್ಲ
ಮಕ್ಕಳಿಗೂ ಕೊವಿಡ್ 19 ತಗುಲಬಹುದು. ಆದರೆ, ದೊಡ್ಡವರಿಗೆ ಹೋಲಿಸಿದರೆ ಮಕ್ಕಳಲ್ಲಿ ಕೊರೋನಾ ವೈರಸ್ ಕಂಡುಬಂದ ಪ್ರಕರಣಗಳು ಅಪರೂಪ. 

ಕೊರೋನಾ ಭಯ ಬೇಡ: ಯಾವುದಕ್ಕೂ ಈ ವಸ್ತುಗಳ ಸ್ಟಾಕ್ ಇರಲಿ...

6. ಸಾರ್ವಜನಿಕ ಸ್ಥಳಗಳಲ್ಲಿ ಏನಾದರೂ ಮುಟ್ಟುವ ಮುನ್ನ ಗ್ಲೌಸ್ ಧರಿಸಿ
ಗ್ಲೌಸ್ ಧರಿಸಿದ ಕೂಡಲೇ ಕೈಗೆ ವೈರಸ್ ತಗುಲದೆ ಇರಬಹುದು. ಆದರೆ, ಗ್ಲೌಸ್‌ಗೆ ತಗಲುತ್ತದೆ. ಹಾಗೆ ಗ್ಲೌಸ್‌ನಿಂದ ಯಾವುದಾದರೂ ವೈರಸ್ ಇರುವ ಎಲಿವೇಟರ್ ಬಟನ್ನನ್ನೋ, ಮತ್ತೊಂದು ಜಾಗವನ್ನೋ ಮುಟ್ಟಿ ನಂತರ ಮುಖ ಮುಟ್ಟಿಕೊಂಡರೆ ವೈರಸ್ ದೇಹ ಸೇರುತ್ತದೆ. 

7. ಸ್ಟೀರಾಯ್ಡ್ ತೆಗೆದುಕೊಳ್ಳುವುದರಿಂದ ಅಥವಾ ಬ್ಲೀಚ್‌ನಿಂದ ಗಾಗಲಿಂಗ್ ಮಾಡುವುದರಿಂದ ವೈರಸ್ ತಡೆಯಬಹುದು.
ಬ್ಲೀಚ್‌ನಿಂದ ಗಾಗಲ್ ಮಾಡಿದರೆ ಬಾಯಿ ಸುಟ್ಟಿಕೊಂಡೀರಿ ಜೋಕೆ. ಇಂಥ ತಲೆಬುಡವಿಲ್ಲದ ಹೇಳಿಕೆಗಳನ್ನೆಲ್ಲ ನಂಬಿ ಟ್ರೈ ಮಾಡಬೇಡಿ. 

8. ಕೆಲ ಬ್ಲಡ್ ಗ್ರೂಪ್‌ಗಳಿಗೆ ಮಾತ್ರ ಕೊರೊನಾ ತಗಲುತ್ತದೆ
ಎ ಬ್ಲಡ್ ಗ್ರೂಪ್ ಹೊಂದಿದವರೇ ಕೊರೊನಾದ ಸೋಂಕಿತರಲ್ಲಿ ಹೆಚ್ಚಿನವರು ಹಾಗೂ ಹೆಚ್ಚು ಸಾವಿಗೀಡಾದವರ ಪೈಕಿ ಎ ರಕ್ತ ಗುಂಪು ಹೊಂದಿದ್ದವರು ಹೆಚ್ಚು ಎಂದು ಚಾನಾದ ಸಂಶೋಧಕರು ಹೇಳಿದ್ದಾರೆ. ಒ ಬ್ಲಡ್ ಗ್ರೂಪ್ ಹೊಂದಿದವರಲ್ಲಿ ಸೋಂಕಿತರು ಹಾಗೂ ಸಾವನ್ನಪ್ಪಿದವರ ಸಂಖ್ಯೆ ಕಡಿಮೆ ಎಂದಿದ್ದಾರೆ. ಆದರೆ, ಇದೇ ಸತ್ಯ ಎಂದು ನಂಬಿ ಎ ಬ್ಲಡ್ ಗ್ರೂಪ್ ಹೊಂದಿದವರು ಭಯ ಬೀಳಬೇಕಿಲ್ಲ, ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ. ಹಾಗಾಗಿ, ಪ್ರತಿಯೊಬ್ಬರೂ ಸಮನಾಗಿ ಎಚ್ಚರಿಕೆ ವಹಿಸಬೇಕು ಎಂದೂ ಅವರು ಹೇಳಿದ್ದಾರೆ.