ಕೊರೋನಾ ವೈರಸ್‌ನ ಮೊದಲ ಏಟಿನಿಂದ ಕೆಲವು ದೇಶಗಳಲ್ಲಿ ಊಹೆಗೂ ಮೀರು ಸಾವುಗಳು ಸಂಭವಿಸಿವೆ. ಇನ್ನು ಕೆಲವು ದೇಶಗಳಲ್ಲಿ ಅದು ಅಷ್ಟೇನೂ ಬಾಧೆ ಕೊಟ್ಟಿಲ್ಲ. ಆದರೆ ಕೇಸುಗಳ ಸಂಖ್ಯೆ ಏರುತ್ತಲೇ ಇದೆ. ಆದರೆ ಕಳೆದ ಹದಿನೈದು ದಿನಗಳ ಹಿಂದಿನ ಡೇಟಾ ನೋಡಿದಾಗ, ಅದೇ ಏರುಗತಿಯಲ್ಲಿ ಕೊರೋನಾ ಕೇಸುಗಳೂ ಈಗ ಇಲ್ಲ. ಹಾಗಾದರೆ ಕೊರೋನಾ ಇಳಿಮುಖವಾಗುತ್ತಿದೆಯೇ? ಸ್ವಲ್ಪ ಮಟ್ಟಿಗೆ ಇದು ನಿಜ. ಭಾರತದಲ್ಲೂ ಕೂಡ ಲಾಕ್‌ಡೌನ್‌, ಸಾಮಾಜಿಕ ಅಂತರ ಮತ್ತಿತರ ಕ್ರಮಗಳ ಪರಿಣಾಮ ಕೊರೋನಾ ತಕ್ಕಮಟ್ಟಿಗೆ ಹಿಮ್ಮೆಟ್ಟಿದೆ. ಆದರೆ ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ಕೊರೋನಾದ ಎರಡನೇ ಅಲೆ ಅಪ್ಪಳಿಸಬಹುದು ಎಂದು.

ಏನಿದು ಎರಡನೇ ಅಲೆ?

ಕೊರೋನಾ ಸೋಂಕಿನ ಮೊದಲ ಅಲೆ ಈಗಾಗಲೇ ಸಾಕಷ್ಟು ದೇಶಗಳಲ್ಲಿ ಹಬ್ಬಿ ತನ್ನ ದುಷ್ಪ್ರಭಾವ ತೋರಿಸಿಬಿಟ್ಟಿದೆ. ಈಗ ಬಹುತೇಕ ಎಲ್ಲ ದೇಶಗಳಲ್ಲೂ ಲಾಕ್‌ಡೌನ್‌ ವಿಧಿಸಲಾಗಿದೆ. ಲಾಕ್‌ಡೌನ್‌ ಮಾಡಿರುವುದರಿಂದ ಜನ ಅವಶ್ಯಕ ಸೇವೆಗಳಿಗೆ ಮಾತ್ರ ಹೊರಗೆ ಬರುತ್ತಿದ್ದಾರೆ. ಒಮ್ಮೆ ಈ ನಿರ್ಬಂಧ ಸಡಿಲಿಸಿದರೆ ಜನ ಓಡಾಡಲು ಆರಂಭಿಸುತ್ತಾರೆ. ಆಗ, ಈಗಾಗಲೇ ಇನ್‌ಕ್ಯುಬೇಶನ್‌ ಪೀರಿಯಡ್‌ನಲ್ಲಿರುವವರ ದೇಹದಲ್ಲಿರುವ, ಅಥವಾ ಗೊತ್ತೇ ಇಲ್ಲದಂತೆ ನಿಷ್ಕ್ರಿಯವಾಗಿ ಇರಬಹುದಾದವರ ದೇಹದಿಂದ ವೈರಸ್‌ಗಳು ಇನ್ನೊಬ್ಬರ ದೇಹಗಳಿಗೆ ರವಾನೆಯಾಗಲು ಆರಂಭಿಸುತ್ತವೆ. ಆಗ ಇನ್ನೊಂದು ಸುತ್ತಿನ  ಸೋಂಕಿನ ಆಟ ಆರಂಭವಾಗುತ್ತದೆ. ಇದೇ ಆತಂಕಕ್ಕೆ ಕಾರಣ.

ಚೀನಾದಲ್ಲಿ ಕಂಡುಬಂತು ಎರಡನೇ ಅಲೆ

ಚೀನಾದಲ್ಲಿ ಈಗಾಗಲೇ ಎರಡನೇ ಅಲೆಯ ಕೊರೋನಾ ಕಂಡುಬಂದಿದೆ. ಕೋವಿಡ್‌ನ ಸೃಷ್ಟಿಮೂಲ ಆಗಿದ್ದ ವುಹಾನ್‌ನಲ್ಲಿ ಲಾಕ್‌ಡೌನ್‌ ತೆಗೆಯಲಾಗಿದೆ. ವುಹಾನ್‌ನಲ್ಲಿ ಈಗ ಕೊರೊನಾ ಕೇಸ್‌ಗಳು ಇಲ್ಲ. ಆದರೆ ಚೀನಾ ದೇಶದ ವಿವಿಧೆಡೆ ಇನ್ನೂರಕ್ಕೂ ಅಧಿಕ ಹೊಸ ಕೊರೋನಾ ಕೇಸ್‌ಗಳು ಪತ್ತೆಯಾಗಿದೆ. ಇವು ಎಲ್ಲಿಂಧ ಬಂದವು? ಎಂದು ಪತ್ತೆದಾರಿಕೆಗೆ ಈಗ ಚೀನಾದವರು ಇಳಿದಿದ್ದಾರೆ. ಇವರಲ್ಲಿ ಹೆಚ್ಚಿನವರು ವಿದೇಶಗಳಿಂದ ಬಂದವರು. ಲಾಕ್‌ಡೌನ್‌ ತೆರವಾದ ಬಳಿಕ ವಿದೇಶದಿಂದ ಬಂದವರ ದೇಹದಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಅಂದರೆ ಚೀನಾ ತನ್ನೊಳಗಿನ ವೈರಸ್‌ ನಾಶಪಡಿಸಿದರೂ ಮತ್ತೆ ಮತ್ತೆ ಅದು ಬರುವ ಚಾನ್ಸ್‌ ಇದ್ದೇ ಇದೆ. 

ಕೊರೋನಾ ಜನ್ಮ ಸ್ಥಳ ವುಹಾನ್‌ ಈಗ ಸೋಂಕಿತರಿಂದ ಮುಕ್ತ!

ಈಗ ಇನ್ನೂ ಕೆಲವು ದೇಶಗಳಲ್ಲಿ ಕೋವಿಡ್‌ ಮೊದಲನೇ ಅಲೆಯ ಭಯಂಕರ ತಾಂಡವವನ್ನೇ ಇನ್ನೂ ಸರಿಯಾಗಿ ಆರಂಭಿಸಿಲ್ಲ. ಉದಾಹರಣೆಗೆ ಆಫ್ರಿಕಾ ಖಂಡ ಹಾಗೂ ದಕ್ಷಿಣ ಅಮೆರಿಕದ ಕೆಲವು ದೇಶಗಳು. ಇಲ್ಲೆಲ್ಲ ಅಂತಾರಾಷ್ಟ್ರೀಯ ಪ್ರಯಾಣೀಕ ಸಮುದಾಯ ಕಡಿಮೆ ಆದ್ದರಿಂದ ಇದುವರೆಗೆ ಕೇಸುಗಳು ಕಡಿಮೆ ಇದ್ದವು. ಈಗ ಅಲ್ಲಿ ನಿಧಾನವಾಗಿ ಪ್ರಕರಣಗಳು ಏರುಗತಿಯತ್ತ ಸಾಗುತ್ತಿವೆ. ಭಾರತ, ಚೀನಾದಂಥ ದೇಶಗಳಲ್ಲಿ ಮೊದಲನೇ ಅಲೆಯ ಇಳಿಕೆ ಆದ ಬಳಿಕ, ಆಫ್ರಿಕಾದ ದೇಶಗಳಲ್ಲಿ ಮೊದಲೇ ಅಲೆ ಪ್ರಬಲವಾಗಬಹುದು. ಆಗ ಮತ್ತೆ ಅಂತಾರಾಷ್ಟ್ರೀಯ ಪ್ರಯಾಣ ಇತ್ಯಾದಿಗಳ ಪರಿಣಾಮ ಅಲ್ಲಿಂದ ಭಾರತಕ್ಕೋ ಚೀನಾಕ್ಕೋ ಸೋಂಕು ಹರಡುವುದು ಸಾಧ್ಯ ಇದೆ.

ಅತಿ ಶೀಘ್ರದಲ್ಲೇ ಕೊರೋನಾಗೆ ಮೇಡ್‌ ಇನ್ ಇಂಡಿಯಾ ಲಸಿಕೆ..? 

ಒಂದನ್ನಂತೂ ಜಗತ್ತಿನ ವಿಜ್ಞಾನಿಗಳು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಅದೇನೆಂದರೆ ಈ ವೈರಸ್‌ ರಕ್ತಬೀಜಾಸುರನಂಥದು. ಇದನ್ನು ಪೂರ್ತಿ ನಿರ್ಮೂಲನ ಮಾಡುವುದು ಸಾಧ್ಯವಿಲ್ಲ. ಹೀಗಾಗಿ ಎರಡನೇ ಅಲೆ, ಮೂರನೇ ಅಲೆ, ನಾಲ್ಕನೇ ಅಲೆಗಳನ್ನೂ ನಾವು ನೋಡುವುದು ಅನಿವಾರ್ಯ ಆಗಬಹುದು.