Health Tips : ಹುಷಾರ್..! ಬಾಯಿ ದುರ್ವಾಸನೆ ಅಂತ ಬಳಸೋ ಮೌತ್ ವಾಶ್ ರಕ್ತದೊತ್ತಡ ಹೆಚ್ಚಿಸುತ್ತೆ
ನಮ್ಮ ಉಸಿರಿನಲ್ಲಿ ನಮ್ಮ ಆರೋಗ್ಯದ ಗುಟ್ಟು ಅಡಗಿದೆ. ಬಾಯಿಂದ ಕೆಟ್ಟ ವಾಸನೆ ಬರ್ತಿದ್ದರೆ ಅದನ್ನು ಮೂಲದಿಂದ ಕಿತ್ತೆಸೆಯಬೇಕೆ ವಿನಃ ಮೌತ್ ವಾಶ್ ನಿಂದ ತಾತ್ಕಾಲಿಕ ಪರಿಹಾರದ ಮೊರೆ ಹೋಗ್ಬಾರದು. ಹೆಚ್ಚು ಮೌತ್ ವಾಶ್ ಅಪಾಯಕಾರಿ.
ನಮ್ಮ ಬಾಯಿ ವಾಸನೆ ಬರೋದು ಬರೀ ನಮ್ಮ ಬಾಯಿಯಲ್ಲಿರುವ ಸಮಸ್ಯೆಯಿಂದ ಅಲ್ಲ. ಬಹುತೇಕರು ತಾವು ತಿನ್ನುವ ಆಹಾರದಿಂದ ಬಾಯಲ್ಲಿ ವಾಸನೆ ಬರುತ್ತೆ ಎಂದುಕೊಳ್ತಾರೆ. ನಿಮ್ಮ ಹೊಟ್ಟೆ ಸರಿಯಾಗಿಲ್ಲದೆ ಹೋದಲ್ಲಿ, ಜೀರ್ಣಕ್ರಿಯೆ ಸಮಸ್ಯೆ ಸೇರಿದಂತೆ ಕೆಲ ರೋಗಗಳಿದ್ದಾಗ ನಿಮ್ಮ ಬಾಯಿ ವಾಸನೆ ಬರುತ್ತದೆ. ಕಾರಣ ಏನೇ ಇದ್ರೂ ಬಾಯಿ ವಾಸನೆ ಬಂದಾಗ ಮುಂದಿರುವವರು ಒಂದು ಹೆಜ್ಜೆ ಹಿಂದೆ ಹೋಗ್ತಾರೆ. ಇದು ನಮ್ಮನ್ನು ಮುಜುಗರಕ್ಕೀಡು ಮಾಡುತ್ತದೆ. ಕೆಲ ದಂಪತಿ ಮಧ್ಯೆ ಅಂತರ ಹೆಚ್ಚಾಗಲು ಕೂಡ ಇದೇ ಕಾರಣ.
ಬಾಯಿ (Mouth) ಯಿಂದ ವಾಸನೆ ಬರಬಾರದು ಎನ್ನುವ ಕಾರಣಕ್ಕೆ ಜನರು ಮೌತ್ ವಾಶ್ (Wash) ಮೊರೆ ಹೋಗ್ತಾರೆ. ಈಗಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಮೌತ್ ವಾಶ್ ಇದ್ದೇ ಇರುತ್ತದೆ. ಕೆಲವರು ತಮ್ಮ ಬ್ಯಾಗ್ ನಲ್ಲಿಯೇ ಮೌತ್ ವಾಶ್ ಇಟ್ಟುಕೊಂಡು ತಿರುಗುತ್ತಾರೆ. ಅವಕಾಶ ಸಿಕ್ಕಾಗೆಲ್ಲ ಮೌತ್ ವಾಶ್ ಬಳಸಿ, ಬಾಯಿ ಮುಕ್ಕಳಿಸಿ ಫ್ರೆಶ್ ಆಗ್ತಾರೆ.
HEALTH TIPS: ವಯಸ್ಸಾಯ್ತು 20, ಯುವತಿಯರು ಈ ಆಹಾರ ತಿನ್ನೋದ ಮರೀಬಾರದು!
ಮತ್ತೆ ಮತ್ತೆ ನಾವು ಬಾಯಿಯನ್ನು ಮುಕ್ಕಳಿಸುವುದರಿಂದ ಬಾಯಿಯ ದುರ್ವಾಸನೆಯೇನೋ ಹೋಗುತ್ತೆ ನಿಜ. ಆದರೆ ಅದರಿಂದ ಬಾಯಿಯಲ್ಲಿರುವ ಕೆಲವು ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಮನುಷ್ಯನ ಶರೀರಕ್ಕೆ ಬೇಕಾಗುವ ನೈಟ್ರಿಕ್ ಆಕ್ಸೈಡ್ ಅನ್ನು ಉತ್ಪತ್ತಿ ಮಾಡುವ ಬ್ಯಾಕ್ಟೀರಿಯಾಗಳು ಮೌತ್ ವಾಶ್ ನಿಂದ ಸಾಯುತ್ತವೆ. ಇದರಿಂದ ರಕ್ತದೊತ್ತಡ ಕೂಡ ಹೆಚ್ಚುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಹಲವು ಬಾರಿ ಮೌತ್ ವಾಶ್ ಮಾಡೋದ್ರಿಂದ ಕಾಡುತ್ತೆ ಈ ಸಮಸ್ಯೆ :
ಶುಷ್ಕತೆ : ನಿಮ್ಮ ಬಾಯಿ ನಿರಂತರವಾಗಿ ಒಣಗುತ್ತಿದ್ದರೆ ಅದಕ್ಕೆ ಮೌತ್ ವಾಶ್ ಕಾರಣವಾಗಿರಬಹುದು. ಬಾಯಿಯ ವಾಸನೆಯನ್ನು ಹೋಗಲಾಡಿಸಬೇಕೆಂದು ನೀವು ಮತ್ತೆ ಮತ್ತೆ ಮೌತ್ ವಾಶ್ ಬಳಸುತ್ತೀರಿ. ಮೌತ್ ವಾಶ್ ಗಳಲ್ಲಿ ಆಲ್ಕೋಹಾಲ್ ಇರುತ್ತದೆ. ಅದು ನಿಮ್ಮ ಬಾಯಿಯನ್ನು ಶುಷ್ಕಗೊಳಿಸುತ್ತದೆ.
ಬಾಯಿಯಲ್ಲಿ ನೋವು : ಮೌತ್ ವಾಶ್ ಉಪಯೋಗಿಸುವ ಮೊದಲೇ ನೀವು ಬಾಯಿಯ ನೋವು, ಸೆಳೆತ ಮುಂತಾದ ಸಮಸ್ಯೆಯನ್ನು ಹೊಂದಿದ್ದರೆ ಆಲ್ಕೋಹಾಲ್ ನಿಂದ ಕೂಡಿದ ಮೌತ್ ವಾಶ್ ಬಳಸುವುದರಿಂದ ನೋವು ಉಲ್ಬಣವಾಗುತ್ತದೆ.
ಆರೋಗ್ಯಕರ ಸೂಕ್ಷ್ಮ ಜೀವಿಗಳ ನಾಶ : ಬಾಯಿಯ ವಾಸನೆಗೆ ಕಾರಣವಾಗಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸಲು ಮೌತ್ ವಾಶ್ ಅನ್ನು ಬಳಸಲಾಗುತ್ತದೆ. ಆದರೆ ಮೌತ್ ವಾಶ್ ಕೆಟ್ಟ ಬ್ಯಾಕ್ಟೀರಿಯಾಗಳ ಜೊತೆಗೆ ನಮ್ಮ ಹಲ್ಲು ಮತ್ತು ವಸಡುಗಳ ಆರೋಗ್ಯಕ್ಕೆ ಅಗತ್ಯವಿರುವ ಸೂಕ್ಷ್ಮಜೀವಿಗಳನ್ನು ಕೂಡ ನಾಶಮಾಡುತ್ತದೆ.
ಹಲ್ಲಿನ ಕಲೆಗಳು : ಹೆಚ್ಚಿನ ಪ್ರಮಾಣದಲ್ಲಿ ಮೌತ್ ವಾಶ್ ಅನ್ನು ಬಳಕೆ ಮಾಡುವುದರಿಂದ ನಿಧಾನವಾಗಿ ಹಲ್ಲಿನ ಮೇಲೆ ಕಲೆಗಳು ಉಂಟಾಗಲು ಆರಂಭವಾಗುತ್ತದೆ. ಮೌತ್ ವಾಶ್ ಗಳಲ್ಲಿ ಬಳಕೆ ಮಾಡಲಾಗುವ ಕೆಲವು ರಾಸಾಯನಿಕಗಳು ಹಂತ ಹಂತವಾಗಿ ನಮ್ಮ ಹಲ್ಲುಗಳನ್ನು ಹಾಳುಮಾಡುತ್ತವೆ.
ಕ್ಯಾನ್ಸರ್ : ಪ್ರತಿನಿತ್ಯ ಮೌತ್ ವಾಶ್ ಅನ್ನು ಬಳಕೆ ಮಾಡುವುದರಿಂದ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯೂ ಹೆಚ್ಚಿಗೆ ಇದೆ.
ಮೌತ್ ವಾಶ್ ಬಳಸುವ ಬದಲು ಹೀಗೆ ಮಾಡಿ
• ಮೌತ್ ವಾಶ್ ಬಳಸುವ ಬದಲು ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಬಳಸಿ ಬಾಯಿಯನ್ನು ಸ್ವಚ್ಛಗೊಳಿಸಬಹುದು
• ಫ್ಲೋರೈಡ್ ಹೊಂದಿರುವ ಟೂತ್ ಪೇಸ್ಟ್ ನಿಂದ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು
• ಲವಂಗ, ಕಹಿ ಬೇವು ಮುಂತಾದ ಗಿಡಮೂಲಿಕೆಗಳಿಂದ ಬಾಯಿ ತೊಳೆಯಬೇಕು
• ಆ್ಯಂಟಿ ಬ್ಯಾಕ್ಟೀರಿಯಾ ಹೊಂದಿರುವ ಮೌತ್ ವಾಶ್ ಬಳಕೆ ಮಾಡಬೇಕು.
• ಬಾಯಿ ವಾಸನೆ ಬರುವಂತಹ ಪದಾರ್ಥಗಳಿಂದ ದೂರವಿರುವುದು
• ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು
• ವೈದ್ಯರ ಸಲಹೆ ಪಡೆದು ಬಾಯಿಯ ವಾಸನೆಯನ್ನು ಹೋಗಲಾಡಿಸುವಂತಹ ಔಷಧಿ ಅಥವಾ ಸ್ಪ್ರೇ ತೆಗೆದುಕೊಳ್ಳುವುದು
• ಬಾಯಿಯ ವಾಸನೆಯನ್ನು ಹೋಗಲಾಡಿಸಲು ಸೋಂಪಿನ ಕಾಳು, ಪುದೀನ ಅಥವಾ ತುಳಸಿ ಎಲೆಯನ್ನು ಸೇವಿಸಬಹುದು.