ಮನೆಯ ಮುಖ್ಯ ಜಾಗವನ್ನು ವೈಫೈ ಆವರಿಸಿದೆ. ಎಲ್ಲರಿಗೂ ಅತ್ಯಗತ್ಯವಾಗಿರುವ ವೈ ಫೈ ರಾತ್ರಿ – ಹಗಲು ಉರಿಯುತ್ತೆ. ಈ ವೈ ಫೈ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಇಂದಿನ ದಿನಗಳಲ್ಲಿ ಇಂಟರ್ನೆಟ್ ಇಲ್ಲದೆ ನಮ್ಮ ಜೀವನವನ್ನು ಊಹಿಸಿಕೊಳ್ಳುವುದೇ ಕಷ್ಟ. ಬೆಳಗ್ಗೆಯಿಂದ ರಾತ್ರಿ ಮಲಗುವವರೆಗೂ ಪ್ರತಿಯೊಂದು ಕೆಲಸಕ್ಕೂ ನಾವು ಇಂಟರ್ನೆಟ್ ಬಳಸ್ತಿದ್ದೇವೆ. ವೇಗವಾದ ಇಂಟರ್ನೆಟ್ ಸಂಪರ್ಕಕ್ಕಾಗಿ ಬಹುತೇಕ ಮನೆಗಳು ಮತ್ತು ಕಚೇರಿಗಳಲ್ಲಿ ವೈ-ಫೈ ರೂಟರ್ಗಳನ್ನು ಬಳಸಲಾಗುತ್ತಿದೆ. ಮೊಬೈಲ್, ಲ್ಯಾಪ್ಟಾಪ್, ಸ್ಮಾರ್ಟ್ ಟಿವಿ ಸೇರಿದಂತೆ ಹಲವು ಸಾಧನಗಳಿಗೆ ವೈ-ಫೈ ಮೂಲಕ ಸುಲಭವಾಗಿ ಇಂಟರ್ನೆಟ್ ಸಂಪರ್ಕ ಪಡೆಯಬಹುದು. ಹೀಗಾಗಿ ವೈ-ಫೈ ರೂಟರ್ಗಳು ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿವೆ. ಆದರೆ, ಈ ವೈ-ಫೈ ರೂಟರ್ಗಳಿಂದ ಹೊರಬರುವ ಸಿಗ್ನಲ್ಗಳು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿರುತ್ತವೆಯೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ವೈ-ಫೈ ಸಿಗ್ನಲ್ಗಳಿಂದ ಆರೋಗ್ಯಕ್ಕೆ ಅಪಾಯವಿದೆಯೇ?

ವೈ-ಫೈ ರೂಟರ್ಗಳು ರೇಡಿಯೋ ಫ್ರೀಕ್ವೆನ್ಸಿ (Radio Frequency) ಸಿಗ್ನಲ್ಗಳನ್ನು ಬಳಸಿಕೊಂಡು ಇಂಟರ್ನೆಟ್ ಸಂಪರ್ಕ ಒದಗಿಸುತ್ತವೆ. ಇವು ನಾನ್-ಅಯಾನೈಸಿಂಗ್ (Non-Ionizing) ವಿಕಿರಣದ ವ್ಯಾಪ್ತಿಗೆ ಬರುತ್ತವೆ. ಅಂದರೆ, ಎಕ್ಸ್ರೇ ಅಥವಾ ಗಾಮಾ ಕಿರಣಗಳಂತೆ ದೇಹದ ಜೀವಕೋಶಗಳ ಡಿಎನ್ಎಗೆ ಹಾನಿ ಮಾಡುವಷ್ಟು ಶಕ್ತಿಯನ್ನು ಇವು ಹೊಂದಿರುವುದಿಲ್ಲ. ಸಾಮಾನ್ಯವಾಗಿ ವೈ-ಫೈ ರೂಟರ್ಗಳಿಂದ ಹೊರಬರುವ ರೇಡಿಯೋ ಫ್ರೀಕ್ವೆನ್ಸಿ ವಿಕಿರಣದ ಪ್ರಮಾಣ ತುಂಬಾ ಕಡಿಮೆ ಇರುತ್ತದೆ.

ನಿದ್ರೆಯ ಮೇಲೂ ಪರಿಣಾಮ

ವೈ-ಫೈ ರೂಟರ್ಗಳಿಂದ ಹೊರಬರುವ ಸಿಗ್ನಲ್ಗಳು ನಿದ್ರೆಗೆ ಅಡ್ಡಿಯಾಗುತ್ತವೆ ಅಥವಾ ನಿದ್ರೆಯ ಗುಣಮಟ್ಟವನ್ನು ಹಾಳು ಮಾಡುತ್ತವೆ ಎನ್ನುವುದಕ್ಕೆ ಇದುವರೆಗೆ ಸಾಕಷ್ಟು ವೈಜ್ಞಾನಿಕ ಪುರಾವೆಗಳು ಲಭ್ಯವಾಗಿಲ್ಲ. ಹಾಗಾಗಿ ವೈ-ಫೈ ರೂಟರ್ ಅನ್ನು ಆನ್ನಲ್ಲಿ ಇಟ್ಟುಕೊಂಡೇ ಮಲಗುವುದರಿಂದ ಆರೋಗ್ಯಕ್ಕೆ ಅಪಾಯ ಎಂದು ಭಯಪಡುವ ಅಗತ್ಯವಿಲ್ಲ. ಆದರೆ, ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವಿದೆ. ವೈ-ಫೈ ಸಂಪರ್ಕ ಇರುವುದರಿಂದ ಅನೇಕರು ರಾತ್ರಿ ತಡವಾಗುವವರೆಗೂ ಮೊಬೈಲ್, ಲ್ಯಾಪ್ಟಾಪ್ಗಳಲ್ಲಿ ಸಮಯ ಕಳೆಯುತ್ತಾರೆ. ಮೊಬೈಲ್ನಿಂದ ಹೊರಬರುವ ಬೆಳಕು, ನಿರಂತರವಾಗಿ ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸುವುದು ಮತ್ತು ತಡರಾತ್ರಿಯವರೆಗೂ ಎಚ್ಚರವಾಗಿರುವ ಅಭ್ಯಾಸ ನಿದ್ರೆಯ ಮೇಲೆ ಪರಿಣಾಮ ಬೀರಬಹುದು.

ರಾತ್ರಿ ವೈ-ಫೈ ಆಫ್ ಮಾಡಬೇಕೇ?

ನೀವು ರಾತ್ರಿ ಇಂಟರ್ನೆಟ್ ಬಳಸುವುದಿಲ್ಲ ಎಂದಾದರೆ ವೈ-ಫೈ ರೂಟರ್ ಅನ್ನು ಆಫ್ ಮಾಡಬಹುದು. ಇದರಿಂದ ವಿದ್ಯುತ್ ಉಳಿತಾಯವೂ ಆಗುತ್ತದೆ. ಆದರೆ ಆರೋಗ್ಯದ ದೃಷ್ಟಿಯಿಂದ ಪ್ರತಿದಿನ ರಾತ್ರಿ ವೈ-ಫೈ ಆಫ್ ಮಾಡಲೇಬೇಕು ಎಂಬ ಕಡ್ಡಾಯ ನಿಯಮವಿಲ್ಲ. ಒಟ್ಟಿನಲ್ಲಿ, ವೈ-ಫೈ ರೂಟರ್ಗಳ ಸಿಗ್ನಲ್ಗಳ ಬಗ್ಗೆ ಅನಗತ್ಯ ಆತಂಕ ಬೇಡ. ಉತ್ತಮ ನಿದ್ರೆಗಾಗಿ ರಾತ್ರಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ನಿಗದಿತ ಸಮಯಕ್ಕೆ ಮಲಗುವ ಅಭ್ಯಾಸ ಬೆಳೆಸಿಕೊಳ್ಳುವುದು ಹೆಚ್ಚು ಮುಖ್ಯ.