Asianet Suvarna News Asianet Suvarna News

ಕಿಮ್ಸ್‌ನಲ್ಲಿ ಶೀಘ್ರ cochlear implant ; ಉತ್ತರ ಕರ್ನಾಟಕದಲ್ಲೇ ಮೊದಲ ಬಾರಿ ಚಿಕಿತ್ಸೆ ಲಭ್ಯ!

  • ಕಿಮ್ಸ್‌ನಲ್ಲಿ ಶೀಘ್ರ ಕಾಕ್ಲಿಯರ್‌ ಇಂಪ್ಲಾಂಟ್‌
  • ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿ ಈ ಚಿಕಿತ್ಸೆ ಲಭ್ಯ
  • ಶ್ರವಣದೋಷವುಳ್ಳವರಿಗೆ ಸಿಗಲಿದೆ ಸೂಕ್ತ ಚಿಕಿತ್ಸೆ
cochlear implant at KIMS soon hubballi rav
Author
First Published Oct 12, 2022, 9:50 AM IST

ಬಾಲಕೃಷ್ಣ ಜಾಡಬಂಡಿ

ಹುಬ್ಬಳ್ಳಿ (ಅ.12) : ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್‌)ಯಲ್ಲಿ ಶ್ರವಣದೋಷವುಳ್ಳವರಿಗೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ‘ಕಾಕ್ಲಿಯರ್‌ ಇಂಪ್ಲಾಂಟ್‌’ ಸೌಲಭ್ಯ ಶೀಘ್ರದಲ್ಲಿ ಆರಂಭಗೊಳ್ಳಲಿದೆ. ಉತ್ತರ ಕರ್ನಾಟಕದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಇದೇ ಮೊದಲ ಬಾರಿ ಇಂತಹ ಸೌಲಭ್ಯ ದೊರೆಯಲಿದೆ. 2022-23ರ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಹುಬ್ಬಳ್ಳಿಯ ಕಿಮ್ಸ್‌, ಬೆಂಗಳೂರಿನ ಕೆಸಿ ಜನರಲ್‌ ಆಸ್ಪತ್ರೆ, ಬೆಂಗಳೂರಿನ ಮೆಡಿಕಲ್‌ ಕಾಲೇಜಿನಲ್ಲಿ ಕಾಕ್ಲಿಯರ್‌ ಇಂಪ್ಲಾಂಟ್‌ ಸೌಲಭ್ಯ ಕಲ್ಪಿಸುವುದಾಗಿ ಘೋಷಿಸಿತ್ತು. ಅದರಂತೆ ಈಗಾಗಲೇ ಬೆಂಗಳೂರಿನಲ್ಲಿ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಆರಂಭಗೊಂಡಿದೆ. ಕಳೆದ ತಿಂಗಳು ಸರ್ಕಾರ ಹಾಗೂ ಆರೋಗ್ಯ ಇಲಾಖೆ ಗ್ರೀನ್‌ ಸಿಗ್ನಲ್‌ ನೀಡಿದ್ದು, ಈಗಾಗಲೇ ಶಸ್ತ್ರಚಿಕಿತ್ಸಾ ಕೊಠಡಿಗೆ ಬೇಕಾದ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ನವೆಂಬರ್‌ ಅಂತ್ಯದೊಳಗೆ ಕಿಮ್ಸ್‌ನಲ್ಲಿ ಕಾಕ್ಲಿಯರ್‌ ಇಂಪ್ಲಾಂಟ್‌ ಸೌಲಭ್ಯ ಆರಂಭವಾಗಲಿದೆ.

Hubballi KIMS: ಸತತ 6 ಗಂಟೆ ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಿದ ವೈದ್ಯರು!

ಹುಟ್ಟುವ ಸಾವಿರ ಮಕ್ಕಳಲ್ಲಿ 2ರಿಂದ 3 ಮಕ್ಕಳಲ್ಲಿ ಶ್ರವಣದೋಷ ಕಂಡುಬರುತ್ತದೆ. ಜತೆಗೆ ಹುಟ್ಟಿದ ಬಳಿಕ ವಿವಿಧ ಆರೋಗ್ಯದ ಸಮಸ್ಯೆಯಿಂದ ಬಳಲಿದ 5 ವರ್ಷದೊಳಗಿನ ಮಕ್ಕಳು ಹೆಚ್ಚಾಗಿ ಶ್ರವಣದೋಷಕ್ಕೆ ತುತ್ತಾಗುತ್ತಾರೆ. ಅಪಘಾತ ಹಾಗೂ ಇತರ ಅವಘಡದಲ್ಲಿಯೂ ಶ್ರವಣಕ್ಕೆ ಹಾನಿಯಾಗುತ್ತದೆ. ಅಂತಹವರಿಗೆ ಶಸ್ತ್ರಚಿಕಿತ್ಸೆಯ ಮೂಲಕ ಕೃತಕ ಕೋಕ್ಲಿಯಾ ಅಳವಡಿಸಲಾಗುತ್ತದೆ. ಈ ಶ್ರವಣ ಸಾಧನವು ಕಿವಿಗೆ ವರ್ಧಿತ ಧ್ವನಿ ಶಕ್ತಿ ಒದಗಿಸುತ್ತದೆ. ಕಾಕ್ಲಿಯರ್‌ ಇಂಪ್ಲಾಂಟ್‌ ಮೂಲಕ ಕೋಕ್ಲಿಯಾದಲ್ಲಿನ ನರ ತುದಿಗಳಿಗೆ ವಿದ್ಯುತ್‌ ಪ್ರಚೋದನೆ ಒದಗಿಸಲಾಗುತ್ತದೆ. ಬಳಿಕ ಶಬ್ದ ಕೇಳುವುದನ್ನು ಪ್ರಾರಂಭಿಸಲು 1 ವರ್ಷ ತರಬೇತಿ(ಸ್ಪಿಚ್‌ ಥೆರಪಿ) ನೀಡಲಾಗುತ್ತದೆ. ಕ್ರಮೇಣವಾಗಿ ಅವರು ಸರಿಯಾಗುತ್ತಾರೆ.

ಕಾಕ್ಲಿಯರ್‌ ಇಂಪ್ಲಾಂಟ್‌ ಸೌಲಭ್ಯ ಅಳವಡಿಸಲು ಸುಮಾರು .10 ಲಕ್ಷ ವೆಚ್ಚವಾಗುತ್ತದೆ. ಚಿಕಿತ್ಸಾ ವೆಚ್ಚ, ನಿರ್ವಹಣೆಯೂ ಅತ್ಯಂತ ದುಬಾರಿಯಾಗಿದೆ. ಹಾಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಈ ಸೌಲಭ್ಯ ಅತ್ಯಂತ ವಿರಳ. ಬೆಂಗಳೂರಿನ ಕೆಲವು ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ ಕಾಕ್ಲಿಯರ್‌ ಇಂಪ್ಲಾಂಟ್‌ ಮೂಲಕ ಶ್ರವಣದೋಷವುಳ್ಳವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಈ ಚಿಕಿತ್ಸೆ ಪಡೆದರೆ ಲಕ್ಷಗಟ್ಟಲೇ ಖರ್ಚಾಗಲಿದೆ. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತ. ಇದೇ ಮೊದಲ ಬಾರಿ ಉತ್ತರ ಕರ್ನಾಟಕದ ಬಡವರ ಸಂಜೀವಿನಿ ಎಂದೇ ಖ್ಯಾತಿ ಪಡೆದ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಈ ಚಿಕಿತ್ಸಾ ಸೌಲಭ್ಯ ಪ್ರಾರಂಭಗೊಳ್ಳುತ್ತಿದ್ದು, ಸುತ್ತಮುತ್ತಲಿನ ಜಿಲ್ಲೆಯ ಬಡಜನರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.

ಶ್ರವಣದೋಷವಿದ್ದವರಿಗೆ ಶ್ರವಣ ಸಾಧನ ನೀಡಿ 3 ತಿಂಗಳು ನಿಗಾ ಇಡಲಾಗುತ್ತದೆ. ಯಾವುದೇ ಸುಧಾರಣೆ ಇಲ್ಲದಿದ್ದರೆ ಅವರನ್ನು ಕಾಕ್ಲಿಯರ್‌ ಇಂಪ್ಲಾಂಟ್‌ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುವುದು. ಈಗಾಗಲೇ 3 ಮಕ್ಕಳಿಗೆ ಶ್ರವಣ ಸಾಧನ ಅಳವಡಿಸಲಾಗಿದೆ. ಅವರ ಬಗ್ಗೆ ಗಮನ ವಹಿಸಲಾಗುತ್ತಿದೆ ಎನ್ನುತ್ತಾರೆ ಕಿಮ್ಸ್‌ನ ಕಿವಿ, ಮೂಗು, ಗಂಟಲು ವಿಭಾಗದ ಮುಖ್ಯಸ್ಥ ಡಾ. ರವೀಂದ್ರ ಗದಗ.

ಏನಿದು ಕಾಕ್ಲಿಯರ್‌ ಇಂಪ್ಲಾಂಟ್‌

ಕಾಕ್ಲಿಯರ್‌ ಇಂಪ್ಲಾಂಟ್‌ ಎನ್ನುವುದು ಶ್ರವಣ ನಷ್ಟಹೊಂದಿರುವ ವ್ಯಕ್ತಿಗೆ ಶಸ್ತ್ರಚಿಕಿತ್ಸೆಯ ಮೂಲಕ ಧ್ವನಿಗ್ರಹಿಕೆ ಸಾಧನ ಅಳವಡಿಸುವ ವಿಧಾನವಾಗಿದೆ. ಶ್ರವಣ ದೋಷವುಳ್ಳವರಿಗೆ ಕೋಕ್ಲಿಯಾ ಹಾನಿಯಾಗಿರುತ್ತದೆ. ಅಂತಹವರಿಗೆ ಶಸ್ತ್ರಚಿಕಿತ್ಸೆ ಮೂಲಕ ಕೃತಕ ಕೋಕ್ಲಿಯಾ(ಎಲೆಕ್ಟ್ರಾನಿಕ್‌) ಅಳವಡಿಸಿ ಮಾತು ಮತ್ತು ಧ್ವನಿ ಅರ್ಥೈಸಿಕೊಳ್ಳಲು ಸಹಾಯ ಮಾಡಲಾಗುತ್ತದೆ. ಈ ಶಸ್ತ್ರಚಿಕಿತ್ಸೆಯಿಂದ ಅಪಾಯ ಕಡಿಮೆ ಮತ್ತು ಹೆಚ್ಚಿನ ಕಾಲ ವಿಶ್ರಾಂತಿ ಅಗತ್ಯವಿಲ್ಲ ಎನ್ನುತ್ತಾರೆ ವೈದ್ಯರು.

Hubballi: ಮಹಿಳೆಯ ಕಣ್ಣಿನ ಕೆಳಗೆ ಸಿಲುಕಿದ್ದ ಮುರಿದ ಟೂತ್ ಬ್ರಶ್ ಹೊರ ತೆಗೆದ ವೈದ್ಯರು

ಉತ್ತರ ಕರ್ನಾಟಕದಲ್ಲಿ ಇದುವರೆಗೆ ಇಂತಹ ಚಿಕಿತ್ಸೆಯ ಸೌಲಭ್ಯ ಇರಲಿಲ್ಲ. ಕಿಮ್ಸ್‌ನಲ್ಲಿ ಕಾಕ್ಲಿಯರ್‌ ಇಂಪ್ಲಾಂಟ್‌ ಸೌಲಭ್ಯಕ್ಕಾಗಿ ಹಲವು ವರ್ಷಗಳಿಂದ ಮನವಿ ಸಲ್ಲಿಸಲಾಗಿತ್ತು. 2022-23ರ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇದರಿಂದ ಉತ್ತರ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳ ಜನರಿಗೆ ಸಹಾಯವಾಗಲಿದೆ.

ಡಾ. ರವೀಂದ್ರ ಗದಗ, ಕಿಮ್ಸ್‌ನ ಕಿವಿ, ಮೂಗು, ಗಂಟಲು ವಿಭಾಗದ ಮುಖ್ಯಸ್ಥ

ಕಿಮ್ಸ್‌ನಲ್ಲಿ ಕಾಕ್ಲಿಯರ್‌ ಇಂಪ್ಲಾಂಟ್‌ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈಗಾಗಲೇ ಎಲ್ಲ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ. ನವೆಂಬರ್‌ ಅಂತ್ಯದೊಳಗೆ ಚಿಕಿತ್ಸೆ ನೀಡಲು ಪ್ರಾರಂಭಿಸಲಾಗುವುದು.

ಡಾ. ರಾಮಲಿಂಗಪ್ಪ ಅಂಟರತಾನಿ, ಕಿಮ್ಸ್‌ ನಿರ್ದೇಶಕ

Follow Us:
Download App:
  • android
  • ios