ತೂಕ ಇಳಿಸಿಕೊಳ್ಳಲು ಹಲವರು ಹಲವು ವಿಧಾನ ಅನುಸರಿಸುತ್ತಾರೆ. ಇದರಲ್ಲಿ ಜಪಾನೀಯರ ಸಂಪ್ರದಾಯ ವಿಭಿನ್ನ. ಅವರು ಈ ನಿಟ್ಟಿನಲ್ಲಿ ಅಪ್ಪಟ ವೈಜ್ಞಾನಿಕ ವಿಧಾನ ಪಾಲನೆ ಮಾಡುತ್ತಾರೆ. ಅದನ್ನು ಅನುಸರಿಸಿದರೆ ತೂಕ ಇಳಿಸಿಕೊಳ್ಳುವುದು ಸುಲಭ.
ಸಮಯ ಕಳೆದಂತೆ ಜೀವನದಲ್ಲಿ ಮತ್ತೇನೂ ಸಾಧ್ಯವಾಗದಿದ್ದರೂ ದೇಹದಲ್ಲಿ ಬೊಜ್ಜು ಬೆಳೆದುಬಿಡುತ್ತದೆ. ಸೊಂಟದ ಸುತ್ತ ಮಡಿಕೆಗಳು ಉಂಟಾಗುತ್ತವೆ. ಎದೆ, ತೋಳು, ತೊಡೆಗಳಲ್ಲಿ ಕೊಬ್ಬು ಶೇಖರಣೆಯಾಗಿ ಇಡೀ ದೇಹದ ತೂಕ ಹೆಚ್ಚಾಗುತ್ತದೆ. ಏರಿದ ತೂಕವನ್ನು ಇಳಿಕೆ ಮಾಡಿಕೊಳ್ಳುವುದು ಎಲ್ಲರ ಬಯಕೆ. ಆದರೆ, ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ತೂಕ ಕಡಿಮೆ ಮಾಡಿಕೊಳ್ಳಲು ಎಲ್ಲಕ್ಕಿಂತ ಮುಖ್ಯವಾಗಿ ಬೇಕಿರುವುದು ದೃಢ ಸಂಕಲ್ಪ ಹಾಗೂ ಬದ್ಧತೆ. ನಿಮಗೆ ತಿಳಿದಿರಬಹುದು, ಇಡೀ ಏಷ್ಯಾ ಖಂಡದಲ್ಲಿ ಎಲ್ಲರಿಗಿಂತ ಹೆಚ್ಚು ಆರೋಗ್ಯವಾಗಿರುವವರೆಂದರೆ ಜಪಾನೀಯರು. ಅವರು ದೀರ್ಘ ಸಮಯ ಬದುಕುತ್ತಾರೆ. ಹಾಗೆಯೇ ದೈಹಿಕ ಫಿಟ್ ನೆಸ್ (Fitness) ಕಾಯ್ದುಕೊಳ್ಳುವಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ. ಇದರ ಗುಟ್ಟು ಅವರ ಜೀವನಶೈಲಿಯಲ್ಲಿಯೇ ಅಡಗಿದೆ ಎಂದರೆ ತಪ್ಪಿಲ್ಲ. ಏಕೆಂದರೆ, ಅವರು ಆರೋಗ್ಯಕರ ಸಂಪ್ರದಾಯ, ಲಘು ವ್ಯಾಯಾಮಗಳಿಗೆ ಬದ್ಧರಾಗಿರುತ್ತಾರೆ. ಕೊಬ್ಬು ಇಳಿಸಿಕೊಳ್ಳಲು ಜಪಾನೀಯರು ಅನುಸರಿಸುವ ತಂತ್ರಗಳನ್ನು ನೀವೂ ಅರಿತುಕೊಂಡು ಅವರಂತೆ ಫಿಟ್ ಆಗಿರಲು ಯತ್ನಿಸಿ.
• ತರಕಾರಿ ಮೊದಲು (First Vegetables)
ಜಪಾನ್ ದೇಶದ ಊಟದಲ್ಲಿ ಮೊದಲಿಗೆ ತರಕಾರಿ ಇದ್ದೇ ಇರುತ್ತದೆ. ಅವರ ಆಹಾರ ಸಂಸ್ಕೃತಿ (Tradition) ತರಕಾರಿ ಸೇವನೆಯನ್ನು ಪ್ರೋತ್ಸಾಹಿಸುತ್ತದೆ. ಊಟಕ್ಕೆ ಮೊದಲು ತರಕಾರಿಗಳನ್ನು ತಿನ್ನುವುದರಿಂದ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಇದರಿಂದ ಹೆಚ್ಚುವರಿ ಆಹಾರ ಹೊಟ್ಟೆ (Stomach) ಸೇರುವುದು ತಪ್ಪುತ್ತದೆ. ಅಲ್ಲದೆ, ತರಕಾರಿ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆ (Sugar) ಮಟ್ಟ ಹೆಚ್ಚುವುದಿಲ್ಲ. ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ. ಈ ಮೂಲಕ ಸುಲಭವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.
ಆರೋಗ್ಯಕ್ಕೆ ಬೆಣ್ಣೆ ಮದ್ದು
• ಆಹಾರವನ್ನು ಸರಿಯಾಗಿ ಅಗಿದು (Chewing) ತಿನ್ನುವುದು
ಆರೋಗ್ಯಕರ ವಿಧಾನದಲ್ಲಿ ಆಹಾರ (Food) ಸೇವನೆ ಮಾಡುವುದು ಸಹ ಮುಖ್ಯ. ಈ ಬಗ್ಗೆ ಜಪಾನೀಯರು ಅನುಸರಿಸುವ ವಿಧಾನ ಅತ್ಯಂತ ವೈಜ್ಞಾನಿಕವಾಗಿದೆ. ದೇಹದ ಮೆಟಬಾಲಿಸಂ ಕಾಯ್ದುಕೊಳ್ಳಲು ಅವರು ನಿಧಾನವಾಗಿ, ಸರಿಯಾಗಿ ಆಹಾರವನ್ನು ಅಗಿದು ತಿನ್ನುವ ಸಂಪ್ರದಾಯ ಪಾಲನೆ ಮಾಡುತ್ತಾರೆ. ಹೆಚ್ಚು ಪ್ರಮಾಣದ ಆಹಾರ ಸೇವನೆ ಮಾಡುವ ಅಭ್ಯಾಸವುಳ್ಳವರಿಗೆ ಇದು ನಿಜಕ್ಕೂ ಅನುಕೂಲಕರ ವಿಧಾನವಾಗಿದೆ. ಏಕೆಂದರೆ, ಆಹಾರವನ್ನು ಸರಿಯಾಗಿ ಅಗಿದು ತಿನ್ನುವುದರಿಂದ ಹೆಚ್ಚು ತೃಪ್ತಿ ಸಿಗುತ್ತದೆ. ದೀರ್ಘಕಾಲ ಹಸಿವೆಯೂ ಆಗುವುದಿಲ್ಲ. ಜೀರ್ಣವಾಗುವುದು ಸುಲಭ. ಒಂದೊಮ್ಮೆ ನಾವು ಸರಿಯಾಗಿ ಅಗಿದು ನುಂಗುವ ಅಭ್ಯಾಸ ಹೊಂದಿಲ್ಲದೆ ಇದ್ದರೆ ಅದು ಜೀರ್ಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಆಹಾರವನ್ನು ಸರಿಯಾಗಿ ವಿಘಟಿಸಲು ಸಲೈವಾಕ್ಕೆ ಸಮಯ ಸಾಕಾಗುವುದಿಲ್ಲ. ಪ್ರತಿ ತುತ್ತನ್ನು ಮೂವತ್ತು ಬಾರಿ ಅಗಿದು ತಿನ್ನುವುದು ಅಗತ್ಯ ಎನ್ನಲಾಗುತ್ತದೆ.
• ಬಿಸಿನೀರಿನ ಸ್ನಾನ (Hot Bath)
ಬಿಸಿ ನೀರಿನ ಸ್ನಾನ ಮಾಡುವುದರಿಂದ ದೇಹದಲ್ಲಿ ರಕ್ತಸಂಚಾರ ಉತ್ತಮವಾಗುತ್ತದೆ. ಮೆಟಬಾಲಿಸಂ ವ್ಯವಸ್ಥೆ ಸದೃಢಗೊಳ್ಳುತ್ತದೆ. ಜೀರ್ಣಕಾರ್ಯ ಸರಿಯಾಗಿ ಆಗುತ್ತದೆ. ಅಲ್ಲದೆ, ಬಿಸಿನೀರಿನ ಸ್ನಾನದಿಂದ ದೇಹ ಡಿಟಾಕ್ಸ್ ಆಗುತ್ತದೆ. ಸ್ನಾನದ ವಿಚಾರದಲ್ಲಿ ಜಪಾನೀಯರ ವಿಧಾನ ಇನ್ನೂ ವಿಶಿಷ್ಟ. ಅವರು ಬಾತ್ ಟಬ್ ನಲ್ಲಿ ಅರ್ಧ ನೀರು ತುಂಬಿಸಿಕೊಂಡು ಸ್ನಾನಕ್ಕಿಳಿಯುತ್ತಾರೆ. ಅಂದರೆ ಟಬ್ ನಲ್ಲಿನ ನೀರು ಹೃದಯ ಮಟ್ಟಕ್ಕಿಂತ ಕಡಿಮೆ ಇರಬೇಕು. ಹೀಗೆ ಸುಮಾರು 20-30 ನಿಮಿಷ ನೀರಿನಲ್ಲಿದ್ದು ದೇಹವನ್ನು ರಿಲ್ಯಾಕ್ಸ್ ಗೊಳಿಸುತ್ತಾರೆ. ಇದರಿಂದ ಉತ್ತಮ ನಿದ್ದೆ ಬರುತ್ತದೆ ಹಾಗೂ ತೂಕ ಇಳಿಸಿಕೊಳ್ಳಲು ಭಾರೀ ಸಹಾಯವಾಗುತ್ತದೆ.
ಈ ರೀತಿ ಆಹಾರ ತಯಾರಿಸಿದ್ರೆ ತೂಕ ಇಳಿಸೋದು ಗ್ಯಾರಂಟಿ
• ಊಟದ ಮಧ್ಯೆ ನೀರು (No Water Between Meals) ಕುಡಿಯೋದಿಲ್ಲ
ಊಟದ ಮಧ್ಯೆ ಹಾಗೂ ಊಟದ ತಕ್ಷಣ ನೀರು ಕುಡಿಯಬಾರದು. ಇದರಿಂದ ಜೀರ್ಣಕಾರ್ಯಕ್ಕೆ ಧಕ್ಕೆಯಾಗುತ್ತದೆ ಎನ್ನುವುದನ್ನು ನಾವು ಕೇಳಿದ್ದೇವೆ. ಆದರೆ, ಜಪಾನೀಯರು ಇದನ್ನು ಅಕ್ಷರಶಃ ಪಾಲನೆ ಮಾಡುತ್ತಾರೆ. ಆಹಾರದ ಮಧ್ಯೆ ನೀರು ಕುಡಿಯುವುದರಿಂದ ಹೊಟ್ಟೆಯ ಪಿಎಚ್ ಮಟ್ಟ ಕುಸಿಯುತ್ತದೆ.
