ಶಂಕರ್‌ ಪರಂಗಿ

ಬೆಂಗಳೂರು[ಡಿ.08]: ಕಳೆದ ಒಂದು ವಾರದಿಂದ ನಗರದಲ್ಲಿ ಚಳಿಯ ಪ್ರಮಾಣ ಹೆಚ್ಚಾಗ ತೊಡಗಿದ್ದು, ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕಿದೆ.

ಚಳಿ ಹೆಚ್ಚುತ್ತಿದ್ದಂತೆಯೇ ಉಸಿರಾಟ, ಚರ್ಮದ ತೊಂದರೆ ಮಾತ್ರವಲ್ಲ ಪ್ರಾಣಕ್ಕೆ ಸಂಚಕಾರ ತರಬಲ್ಲ ಹೃದಯಾಘಾತ ಪ್ರಕರಣಗಳೂ ಹೆಚ್ಚಾಗುವ ಸಾಧ್ಯತೆಯಿದೆ. ಚಳಿಗಾಲದಲ್ಲಿ ಮುಂಜಾನೆ ವೇಳೆ ಅತಿ ಹೆಚ್ಚು ಹೃದಯಾಘಾತ ಉಂಟಾಗುವುದರಿಂದ ಈ ಬಗ್ಗೆ ತೀವ್ರ ಎಚ್ಚರಿಕೆ ವಹಿಸಬೇಕೆಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಚಳಿಗಾಲದಲ್ಲಿ ಕೊಬ್ಬರಿ ಎಣ್ಣೆ ಗಟ್ಟಿಯಾಗುವುದನ್ನು ಗಮನಿಸಿದ್ದೇವೆ. ಅದೇ ರೀತಿ ತೀವ್ರ ಚಳಿಯಿಂದ ತಾಪಮಾನ ಕಡಿಮೆಯಾಗಿ ಅಪಧಮನಿಗಳು ಪೆಡಸಾಗುತ್ತವೆ. ಇದರಿಂದ ರಕ್ತದೊತ್ತಡ ಹಾಗೂ ಪ್ರೋಟೀನ್‌ಗಳ ಪ್ರಮಾಣ ಹೆಚ್ಚಳ ಆಗುತ್ತದೆ. ಇವೆಲ್ಲ ಕ್ರೋಡೀಕರಣಗೊಂಡು ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚು. ಇದರಿಂದ ಹೆಚ್ಚಿನ ಹೃದಯಾಘಾತಗಳು ಚಳಿಗಾಲದ ನಸುಕಿನಲ್ಲೇ ಸಂಭವಿಸುತ್ತವೆ ಎನ್ನುತ್ತಾರೆ ವೈದ್ಯರು.

ಚಳಿಗಾಲದ ಅವಧಿಯಲ್ಲಿ ವೈರಲ್‌ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುವುದರಿಂದ, ಉಸಿರಾಟ ಹಾಗೂ ಶ್ವಾಸಕೋಶದ ತೊಂದರೆಗಳು ಉಂಟಾಗಿ ಹೃದಯ ಸಮಸ್ಯೆಗಳು ಉಲ್ಬಣಿಸುವ ಸಾದ್ಯತೆ ಇದೆ. ಚಳಿಗಾಲದಲ್ಲಿ ಹೆಚ್ಚಿನ ಪ್ರಮಾಣದ ಸಿಂಥೇಜಿಕ್‌ ಡಿಸ್ಚಾರ್ಜ್ ಅಂದರೆ ಅಡ್ರಿನಾಲಿನ್‌ ಪಂಪಿಂಗ್‌ ಹೆಚ್ಚಾಗಿರುತ್ತದೆ. ಇದರಿಂದ ಹೃದಯದ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ಅದು ಹೆಚ್ಚು ಕಠಿಣವಾಗಿ ಕೆಲಸದಲ್ಲಿ ತೊಡಗುವಂತಾಗುತ್ತದೆ. ಹೀಗಾಗಿ ಚಳಿಗಾಲದಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ಮುಂಜಾನೆ ಹೊತ್ತು ಅಪಧಮನಿಗಳು ಸಂಕುಚಿತವಾಗುತ್ತವೆ. ಹೀಗಾಗಿ ಹೃದಯ ಸಮಸ್ಯೆ ಉಳ್ಳವರು ತಮ್ಮ ಜೀವನ ಶೈಲಿ ಬದಲಿಸಿಕೊಂಡು ಸದಾ ಬೆಚ್ಚಗಿರಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

ಹೆಚ್ಚಾಗುತ್ತಿದೆ ‘ಇನ್‌ಫ್ಲ್ಯುಯೆಂಜಾ’:

ಕಳೆದ ಒಂದು ವಾರದಿಂದ ಚಳಿಗಾಲದ ತೀವ್ರತೆ ಹೆಚ್ಚಾಗಿದ್ದರಿಂದ ಇನ್‌ಫ್ಲ್ಯುಯೆಂಜಾ ಎಂಬ ವೈರಾಣುವಿನಿಂದ ಹರಡುವ ಜ್ವರ ಹಾಗೂ ವೈರಲ್‌ ಸೋಂಕು ಹೆಚ್ಚಾಗುತ್ತಿದೆ. ಅದರಲ್ಲೂ 12 ತಿಂಗಳೊಳಗಿನ ಮಕ್ಕಳಲ್ಲಿ ಹಾಗೂ 65 ವರ್ಷಕ್ಕಿಂತ ಹೆಚ್ಚು ವಯಸ್ಸಿನವರನ್ನು ಹೆಚ್ಚಾಗಿ ಕಾಡುತ್ತಿವೆ. ಇದರಿಂದ ಉಸಿರಾಟಕ್ಕೂ ತೊಂದರೆ ಉಂಟಾಗುತ್ತಿದೆ.

ಇದಲ್ಲದೆ ವೈರಾಣುಗಳಿಂದ ಹರಡುವ ಎಚ್‌1ಎನ್‌1, ಹಕ್ಕಿ ಜ್ವರ, ವೈರಲ್‌ ನ್ಯುಮೋನಿಯಾ, ತೀವ್ರ ಉಸಿರಾಟದ ತೊಂದರೆ (ಎಸ್‌ಎಆರ್‌ಎಸ್‌) ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ಸೋಂಕುಗಳು ಹೆಚ್ಚಾಗುತ್ತಿವೆ. ಹೀಗಾಗಿ ತೀವ್ರ ಮುನ್ನೆಚ್ಚರಿಕೆ ವಹಿಸಬೇಕು ಎನ್ನುತ್ತಾರೆ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅನ್ಸರ್‌ ಅಹಮದ್‌.

ಜ್ವರ-ಗಂಟಲು ಕೆರೆತ -ಕೆಮ್ಮು ಸಾಮಾನ್ಯ.

ಮಳೆಗಾಲದ ಶೀತದ ಗಾಳಿಯಲ್ಲಿ ತೇವಾಂಶ ಇರುತ್ತದೆ. ಆದರೆ, ಚಳಿಗಾಲದಲ್ಲಿ ಬೀಸುವ ಶೀತದ ಗಾಳಿಯಲ್ಲಿ ತೇವಾಂಶ ಇರುವುದಿಲ್ಲ. ವಾತಾವರಣ ಈ ರೀತಿ ಬದಲಾಗುವುದರಿಂದ ಜ್ವರ, ಗಂಟಲು ಕೆರೆತ ಹಾಗೂ ಕೆಮ್ಮು ಸಾಮಾನ್ಯವಾಗಿರುತ್ತದೆ. ಶೀತವಂತೂ ಒಬ್ಬರಿಂದ ಒಬ್ಬರಿಗೆ ಬಹುಬೇಗ ಹರಡುತ್ತದೆ. ಇಂತಹ ಸೋಂಕಿಗೆ ತುತ್ತಾದವರು ವೈದ್ಯರ ಸಲಹೆ ಪಡೆಯುವುದು ಉತ್ತಮ. ಸೋಂಕಿಗೆ ತುತ್ತಾದವರ ಕೈ ಕುಲಕದೇ ಇರುವುದು ಹಾಗೂ ಕೆಮ್ಮುವಾಗ ಮೂಗು-ಬಾಯಿಗೆ ಕರವಸ್ತ್ರ ಹಿಡಿದುಕೊಳ್ಳುವುದು ಉತ್ತಮ ಎನ್ನುತ್ತಾರೆ ಕೆ.ಸಿ. ಜನರಲ್‌ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಮೋಹನ್‌. ಚಳಿಗಾಲದಲ್ಲಿ ಧೂಳು ಹಾಗೂ ಮಾಲಿನ್ಯದಿಂದ ಅಸ್ತಮಾ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಾಗಿರುವ ಕಾರಣ, ಅಸ್ತಮಾ ರೋಗಿಗಳು ಸಾಕಷ್ಟುಜಾಗ್ರತೆ ವಹಿಸಬೇಕಾಗಿದೆ.

ಚಳಿಯಿಂದ ರಕ್ಷಣೆಗೆ ವೈದ್ಯರ ಸಲಹೆ

* ತೀರಾ ನಸುಕಿನಲ್ಲಿ ವಾಕಿಂಗ್‌ ಹೋಗಬೇಡಿ. ಹಾಗೆಂದು ಸುಮ್ಮನೆ ಮಲಗಬೇಡಿ, ಚಳಿಗಾಲದಲ್ಲಿ ಕ್ರಿಯಾಶೀಲ ಶಿಸ್ತಿನ ಬದುಕು ಅಗತ್ಯ

* ಬೆಚ್ಚಗಿನ ಬಟ್ಟೆಗಳನ್ನು ಧರಿಸಿ. ಲಘು ಆಹಾರ ಸೇವಿಸಿ, ಕೊಬ್ಬಿನಾಂಶ ಹೆಚ್ಚಿರುವ ಆಹಾರ, ಮದ್ಯ, ಧೂಮಪಾನ ತ್ಯಜಿಸಿ

* ಶ್ವಾಸಕೋಶದ ಸೋಂಕುಗಳಿಗೆ ತಜ್ಞ ವೈದ್ಯರಿಂದ ಸಕಾಲದಲ್ಲಿ ಚಿಕಿತ್ಸೆ ಪಡೆಯಿರಿ

* ತೂಕದ ಬಗ್ಗೆ ನಿಗಾ ಇರಲಿ, ಶುದ್ಧ ಹವೆ ಇರುವ ಕೋಣೆಯಲ್ಲಿ ನಿದ್ರಿಸಿ

5 ಡಿಗ್ರಿ ಉಷ್ಣಾಂಶ ಇಳಿಕೆ

ಹಿಂಗಾರು ಮಳೆ ಪ್ರಬಲಗೊಂಡು ಮೋಡ ಕವಿದ ವಾತಾರಣ ಉಂಟಾಗಿರುವುದರಿಂದ ಚಳಿಗಾಲ ಆರಂಭಕ್ಕೂ ಮುನ್ನವೇ ಚಳಿ ತೀವ್ರಗೊಂಡಿದ್ದು, ಕಳೆದ ಐದು ದಿನದಲ್ಲಿ ನಗರದಲ್ಲಿ ಉಷ್ಣಾಂಶ ಐದು ಡಿಗ್ರಿ ಸೆಲ್ಸಿಯಸ್‌ ಇಳಿಕೆಯಾಗಿದೆ.

ಕಳೆದೊಂದು ವಾರದಿಂದ ಹಿಂಗಾರು ಮತ್ತೆ ಚುರುಕುಕೊಂಡಿದೆ. ಹೀಗಾಗಿ ದಕ್ಷಿಣ ಒಳನಾಡು ಸೇರಿದಂತೆ ರಾಜ್ಯದ ಹಲವೆಡೆ ತುಂತುರು ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣ ಉಂಟಾಗಿದೆ. ಇದರಿಂದ ಕನಿಷ್ಠ ಉಷ್ಣಾಂಶದ ಪ್ರಮಾಣದಲ್ಲಿ ಇಳಿಕೆಯಾಗಿ ಚಳಿಯ ಪ್ರಮಾಣ ಹೆಚ್ಚಾಗಿದೆ. ಡಿ.3ರಂದು ಬೆಂಗಳೂರು ನಗರದಲ್ಲಿ ಗರಿಷ್ಠ ಉಷ್ಣಾಂಶ 25.4, ಕನಿಷ್ಠ ಉಷ್ಣಾಂಶ 19.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಆದರೆ, ಶನಿವಾರದ ವೇಳೆಗೆ ಕನಿಷ್ಠ ಉಷ್ಣಾಂಶದಲ್ಲಿ ಬರೋಬ್ಬರಿ ಐದು ಡಿಗ್ರಿ ಸೆಲ್ಸಿಯಸ್‌ನಷ್ಟುಕಡಿಮೆಯಾಗಿದ್ದು, ಕನಿಷ್ಠ 14.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಇದರಿಂದ ರಾತ್ರಿ ವೇಳೆಯಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದೆ.

ಮಕ್ಕಳ ಬಗ್ಗೆ ಇರಲಿ ವಿಶೇಷ ಕಾಳಜಿ

ಮಕ್ಕಳು ತುಂಬಾ ಸೂಕ್ಷ್ಮವಾಗಿರುವುದರಿಂದ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಚಳಿಗಾಲದಲ್ಲಿ ಮಕ್ಕಳು ಬಹುಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಶೀತ, ಕೆಮ್ಮು, ಜ್ವರ ಚಳಿಗಾಲದಲ್ಲಿ ಸಾಮಾನ್ಯ. ಹೀಗಾಗಿ, ಮಕ್ಕಳಿಗೆ ಮೈತುಂಬಾ ಬಟ್ಟೆಹಾಕಿ.

ಸಣ್ಣ ಮಕ್ಕಳಿಗೆ ಎರಡು-ಮೂರು ದಿನಗಳಿಗೊಮ್ಮೆ ಸ್ನಾನ ಮಾಡಿಸಿ. ಬೆಚ್ಚಗಿನ ನೀರಿನಲ್ಲಿ ಸ್ವಚ್ಛ ಬಟ್ಟೆಯನ್ನು ಅದ್ದಿ ಮಕ್ಕಳ ಮೈ ಒರೆಸಬೇಕು. ತಣ್ಣನೆ ಗಾಳಿ ಬರುವ ಪ್ರದೇಶದಲ್ಲಿ ಮಕ್ಕಳಿಗೆ ಸ್ನಾನ ಮಾಡಿಸಬೇಡಿ. ಪ್ರತಿದಿನ ಮಕ್ಕಳಿಗೆ ಮಸಾಜ್‌ ಮಾಡುವುದು ಹಾಗೂ ಬೆಳಗ್ಗೆ ಅಥವಾ ಸಂಜೆ ಸೂರ್ಯನ ಕಿರಣ ಬೀಳುವಂತೆ ಮಾಡಿ.

ಚಳಿಗಾಲದಲ್ಲಿ ಅದರಲ್ಲೂ ಮುಂಜಾನೆಯ ನಸುಕಿನ ವಾತಾವರಣದಲ್ಲಿ ಹೃದಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಹೃದಯ ಸಮಸ್ಯೆಗಳ ಬಗ್ಗೆ ಗಮನ ನೀಡಬೇಕು. ಆಗಾಗ್ಗೆ ಪರೀಕ್ಷೆ ಮಾಡಿಸಿಕೊಂಡು ಎಲ್ಲಾ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

- ಡಾ. ಸಿ.ಎನ್‌. ಮಂಜುನಾಥ್‌, ಜಯದೇವ ಆಸ್ಪತ್ರೆ ನಿರ್ದೇಶಕ