ಕೋವಿಶೀಲ್ಡ್ ವ್ಯಾಕ್ಸಿನ್ ತಗೊಂಡಿದ್ರಾ? ಚಿಂತೆ ಪಡೋ ಅಗತ್ಯವಿದ್ಯಾ?
ತನ್ನ ಕೋವಿಡ್-19 ಲಸಿಕೆಯಿಂದ ಟಿಟಿಎಸ್ ಎಂದು ಕರೆಯಲಾಗುವ ಅಪರೂಪದ ಸೈಡ್ ಎಫೆಕ್ಟ್ ಉಂಟಾಗಲಿದೆ ಎಂದು ಆಸ್ಟ್ರಾಜೆನಿಕಾ ಒಪ್ಪಿಕೊಂಡಿರುವುದು ಭಾರತದಲ್ಲೂ ಆತಂಕಕ್ಕೆ ಕಾರಣವಾಗಿದೆ. ಭಾರತದಲ್ಲಿ ಆಸ್ಟ್ರಾಜೆನಿಕಾ ಸಂಸ್ಥೆಯ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗಿತ್ತು.
ನವದೆಹಲಿ (ಏ.30): ಬ್ರಿಟಿಷ್ ಫಾರ್ಮಾಸ್ಯುಟಿಕಲ್ ದೈತ್ಯ ಕಂಪನಿ, ಅಸ್ಟ್ರಾಜೆನೆಕಾ, ಕೋವಿಡ್ -19 ವಿರುದ್ಧ ತಾನು ತಯಾರಿಸಿದ್ದ ಎರಡು ಲಸಿಕೆಯಲ್ಲಿ ಬ್ಲಡ್ ಕ್ಲಾಟ್ ಅಂದರೆ ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಸೈಡ್ ಎಫೆಕ್ಟ್ ಆದ ಟಿಟಿಎಸ್ ಉಂಟು ಮಾಡಲಿದೆ ಎಂದು ಒಪ್ಪಿಕೊಂಡಿದೆ. ಕೋರ್ಟ್‌ನ ಎದುರು ಆಸ್ಟ್ರಾಜೆನಿಕಾ ಇದನ್ನು ಒಪ್ಪಿಕೊಂಡ ಬೆನ್ನಲ್ಲಿಯೇ ಭಾರತದಲ್ಲೂ ಆತಂಕ ಶುರುವಾಗಿದೆ. ಟಿಟಿಎಸ್ ಅಥವಾ ಥ್ರಂಬೋಸಿಸ್ ಜೊತೆಗೆ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ ಮತ್ತು ರಕ್ತದಲ್ಲಿ ಕಡಿಮೆ ಪೇಟ್ಲೆಟ್ಸ್‌ಗೂ ಕಾರಣವಾಗುತ್ತದೆ. ಆಸ್ಟ್ರಾಜೆನಿಕಾ ಕಂಪನಿ ಒಟ್ಟು 51 ಮೊಕದ್ದಮೆಗಳನ್ನು ಎದುರಿಸುತ್ತಿದೆ. 12ಕ್ಕೂ ಅಧಿಕ ಕೇಸ್‌ಗಳಲ್ಲಿ ಆಸ್ಟ್ರಾಜೆನಿಕಾ ವ್ಯಾಕ್ಸಿನ್‌ನಿಂದಾಗಿಯೇ ಸಾವು ಹಾಗೂ ಶಾಶ್ವತ ಗಾಯದಂತ ಸಮಸ್ಯೆ ಎದುರಾಗಿದೆ ಎನ್ನುವ ಕಾರಣ ನೀಡಿ ಕ್ಲಾಸ್ ಆಕ್ಷನ್ ಮೊಕದ್ದಮೆ ಹೂಡಲಾಗಿದೆ.
ಈ ಸುದ್ದಿಯು ಭಾರತದ ಜನರನ್ನು ಒಳಗೊಂಡಂತೆ ವಿಶ್ವದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿದೆ. ಭಾರತದಲ್ಲಿ ಆಸ್ಟ್ರಾಜೆನಿಕಾ ಕಂಪನಿಯು ಕೋವಿಶೀಲ್ಡ್ ಬ್ರ್ಯಾಂಡ್ ಹೆಸರಿನಲ್ಲಿ ಕೋವಿಡ್-19 ಲಸಿಕೆಯನ್ನು ಮಾರಾಟ ಮಾಡಿತ್ತು.
ಚಿಂತೆ ಪಡೋ ಅಗತ್ಯವಿದ್ಯಾ? ವೈದ್ಯರು ಏನ್ ಹೇಳ್ತಾರೆ: ಆಸ್ಟ್ರಾಜೆನಿಕಾ ಕಂಪನಿ ಸೈಡ್ ಎಫೆಕ್ಟ್ ಒಪ್ಪಿಕೊಂಡ ಬಳಿಕ ಭಾರತದಲ್ಲಿ ಆತಂಕ ಶುರುವಾಗಿದ್ದು, ಈ ಬಗ್ಗೆ ವೈದ್ಯರು ಕೂಡ ಪ್ರತಿಕ್ರಿಯಿಸಿದ್ದಾರೆ. "ಲಸಿಕೆಗೆ ಸಂಬಂಧಿಸಿದ ಸೈಡ್ ಎಫೆಕ್ಟ್‌ಗಳು ಸಾಮಾನ್ಯವಾಗಿ ಲಸಿಕೆ ನೀಡಿದ ನಂತರದ ಕೆಲವು ವಾರಗಳಲ್ಲಿ (1-6 ವಾರಗಳು) ಸಂಭವಿಸುತ್ತವೆ. ಆದ್ದರಿಂದ, 2 ವರ್ಷಗಳ ಹಿಂದೆ ಲಸಿಕೆ ತೆಗೆದುಕೊಂಡ ಭಾರತದ ಜನರು ಚಿಂತಿಸಬೇಕಾಗಿಲ್ಲ" ಎಂದು ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯ ನರರೋಗ ತಜ್ಞ ಡಾ ಸುಧೀರ್ ಕುಮಾರ್ ಹೇಳಿದ್ದಾರೆ.
ರಾಷ್ಟ್ರೀಯ ಭಾರತೀಯ ವೈದ್ಯಕೀಯ ಸಂಘದ ಸಹ-ಅಧ್ಯಕ್ಷರಾದ ಡಾ ರಾಜೀವ್ ಜಯದೇವನ್, ಈ ನಿರ್ದಿಷ್ಟ ಫಲಿತಾಂಶವು ಮೊದಲ ಡೋಸ್ ನಂತರದ ಮೊದಲ ತಿಂಗಳಲ್ಲಿ ಮಾತ್ರ ವರದಿಯಾಗಿದೆ. ನಂತರದ ದಿನಗಳ ಡೋಸ್‌ಗಳಲ್ಲಿ ಇವು ವರದಿಯಾಗಿಲ್ಲ ಎನ್ನಲಾಗಿದೆ. ಭಾರತದಲ್ಲಿ, ಲಸಿಕೆ ನಂತರ ಟಿಟಿಎಸ್ ಆಗಿರುವ ಕೇಸ್‌ಗಳ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. "ಕೇವಲ ಪ್ರತ್ಯೇಕ ಪ್ರಕರಣ ವರದಿಗಳು ವರದಿಯಾಗಿವೆ. ಆದ್ದರಿಂದ, ಕೋವಿಡ್ ವ್ಯಾಕ್ಸಿನೇಷನ್ ನಂತರ ಟಿಟಿಪಿ ಅತ್ಯಂತ ಅಪರೂಪವಾಗಿದೆ, ಲಕ್ಷಾಂತರ ಲಸಿಕೆ ಡೋಸ್‌ಗಳನ್ನು ನಿರ್ವಹಿಸಲಾಗಿದೆ" ಎಂದು ವೈದ್ಯರು ಹೇಳಿದ್ದಾರೆ.
Breaking: ಕೋವಿಶೀಲ್ಡ್ ಲಸಿಕೆಯಿಂದ ಅಡ್ಡಪರಿಣಾಮ ಒಪ್ಪಿಕೊಂಡ ಆಸ್ಟ್ರಾಜೆನಿಕಾ ಕಂಪನಿ!
ಇಂಥ ವರದಿಗಳು ಹೊಸದೇನಲ್ಲ ಎಂದು ತಜ್ಞರು ಹೇಳಿದ್ದಾರೆ. ವಾಸ್ತವವಾಗಿ, ಕೋವಿಡ್-19 ವ್ಯಾಕ್ಸಿನೇಷನ್‌ಗಳ ನಂತರ ವಿಶ್ವದ ವಿವಿಧ ಭಾಗಗಳಿಂದ TTS ನ ಪ್ರತ್ಯೇಕ ಪ್ರಕರಣ ವರದಿಗಳನ್ನು 2021 ರಿಂದ ಪ್ರಕಟಿಸಲಾಗಿದೆ. "ಟಿಟಿಎಸ್ ಕಳೆದ 100 ವರ್ಷಗಳಿಂದ ಗುರುತಾಗಿರುವ ಕಾಯಿಲೆಯಾಗಿದೆ, ಏಕೆಂದರೆ 1924 ರಲ್ಲಿ 16 ವರ್ಷದ ಹುಡುಗಿಯಲ್ಲಿ ಎಲಿ ಮೊಸ್ಕೊವಿಟ್ಜ್ ಅವರು ಮೊದಲ ಪ್ರಕರಣವನ್ನು ವರದಿ ಮಾಡಿದರು. TTP ಯ ಆಧಾರವಾಗಿರುವ ಕಾರ್ಯವಿಧಾನಗಳು 1982 ರಿಂದ ತಿಳಿದುಬಂದಿದೆ ಮತ್ತು ಕಳೆದ 4 ದಶಕಗಳಲ್ಲಿ ವೈದ್ಯಕೀಯ ಪಠ್ಯಕ್ರಮದ ಭಾಗವಾಗಿದೆ" ಎಂದು ಡಾ ಕುಮಾರ್ ಹೇಳಿದ್ದಾರೆ. "ಭಾರತ ಮತ್ತು ಇತರ ದೇಶಗಳಿಂದ ಪ್ರಕಟವಾದ ಅನೇಕ ವೈಜ್ಞಾನಿಕ ಅಧ್ಯಯನಗಳಲ್ಲಿ ಇದು ಸಾಬೀತಾಗಿದೆ. ಕೇವಲ ಮಾಹಿತಿಗಾಗಿ ಹೇಳುತ್ತಿದ್ದೇನೆ. ಕೋವಿಡ್ ಲಸಿಕೆಗಿಂತ, ಕೋವಿಡ್ ವೈರಸ್ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ' ಎಂದಿದ್ದಾರೆ.
ಕೋವಿಡ್ ಲಸಿಕೆಯಿಂದ್ಲೇ ಹೆಚ್ಚಾಗ್ತಿದ್ಯಾ ಹೃದಯಾಘಾತ? ಅಧ್ಯಯನ ವರದಿ ಹೇಳಿದ್ದೀಗೆ..