ಲಾಕ್ಡ್‌ಡೌನ್ ಎಲ್ಲರನ್ನೂ ಮನೆಯಲ್ಲಿ ಬಂಧಿಯಾಗಿಸಿದೆ. ಈ ಗೃಹಬಂಧನ ನಮ್ಮದೇ ಒಳಿತಿಗಾಗಿ. ಹಾಗಿದ್ದೂ, ಕೆಲವರು ಸುಖಾಸುಮ್ಮನೆ ರಸ್ತೆಯಲ್ಲಿ ಸುತ್ತುವ ಉದ್ಧಟತನ ತೋರುತ್ತಾರೆ. ಮನೆಯೊಳಗೇ ಕುಳಿತಿರಬೇಕಾದ ಪರಿಸ್ಥಿತಿಯನ್ನು ಹಳಿಯುತ್ತಿದ್ದಾರೆ. ಸುಮ್ಮನೆ ಅವರಿವರನ್ನು ದೂರುತ್ತಾ, ಎಲ್ಲಕ್ಕೂ ಕಂಪ್ಲೇಂಟ್ ಮಾಡುತ್ತಾ ಕಾಲ ಸವೆಸುತ್ತಿದ್ದಾರೆ. ಇಂಥವರ ವರ್ತನೆಯ ಬಗ್ಗೆ ಬೇಸತ್ತ ಸೈನಿಕರ ಪತ್ನಿಯೊಬ್ಬರು ತಮ್ಮ ಕಾಶ್ಮೀರದ ಅನುಭವ ಹಾಗೂ ಲಾಕ್‌ಡೌನ್ ಕುರಿತು ಪತ್ರವೊಂದನ್ನು ಬರೆದಿದ್ದಾರೆ. ಅದನ್ನು ಓದಿದರೆ ಖಂಡಿತಾ ನಮ್ಮ ಸ್ಥಿತಿ ಹದಗೆಟ್ಟಿಲ್ಲ ಎಂಬುದು ಅರ್ಥವಾಗುತ್ತದೆ. ಪತ್ರದ ಅನುವಾದ ಇಲ್ಲಿದೆ ಓದಿ....

ಬಹಳಷ್ಟು ಜನಕ್ಕೆ ನನ್ನ ಪತಿ ಮಿಲಿಟರಿಯಲ್ಲಿರುವುದು ಗೊತ್ತೇ ಇದೆ. ನಾವು ಕಾಶ್ಮೀರದಲ್ಲಿ ಕೂಡಾ ಇದ್ದೆವು.
ಕಾಶ್ಮೀರವು ಬುರ್ಹಾನ್ ವಾನಿಯ ಸಾವಿನಿಂದಾಗಿ ಹೊತ್ತಿ ಉರಿಯುತ್ತಿದ್ದ ಸಂದರ್ಭದಲ್ಲೇ ನಾವಲ್ಲಿಗೆ ಹೋಗಬೇಕಾಗಿ ಬಂತು. ವಾನಿಯ ಸಾವಿನ ಎರಡು ವಾರದ  ಬಳಿಕ ಅಲ್ಲಿಗೆ  ಹೋಗಿದ್ದಷ್ಟೇ. ಲಾಕ್‌ಡೌನ್‌. ಹೌದು, ಕಾಶ್ಮೀರದ ಮೊದಲ ಅನುಭವವೇ ಲಾಕ್‌ಡೌನ್. ನನ್ನ ಪತಿ ಡ್ಯೂಟಿಗೆ ಹೋಗಿದ್ದರು. ನಾನು ಮಾತ್ರ ಕ್ಯಾಂಟ್  ಒಳಗೆಯೇ ಉಳಿಯಬೇಕಾಯಿತು. ಇಂಟರ್ನೆಟ್ ಇಲ್ಲ, ಗಂಡ ಅಥವಾ ಕುಟುಂಬಸ್ಥರ ಜೊತೆ ಸಂಪರ್ಕವಿಲ್ಲ. ಯಾರದೂ ಪರಿಚಯವಿಲ್ಲ. ಅಲ್ಲಿ ಫುಡ್ ಡೆಲಿವರಿಯಾಗಲೀ, ಅಮೇಜಾನ್, ಮಿಂತ್ರಾವಾಗಲೀ- ಯಾವುದೇ ಆನ್‌ಲೈನ್ ಶಾಪಿಂಗಿಗೆ ಕೂಡಾ ಆಸ್ಪದವಿರಲಿಲ್ಲ. 

ಏಪ್ರಿಲ್ 14 ರ ನಂತರ ದೇಶದಲ್ಲಿ ಹೇಗಿರುತ್ತೆ ಪರಿಸ್ಥಿತಿ?

ಅಡುಗೆ, ಸ್ವಚ್ಛತೆ. 3 ನಾಯಿಗಳ ಜವಾಬ್ದಾರಿಯನ್ನು ನಾನು ನಿಭಾಯಿಸಿದೆ. ಎಲ್ಲರಂತೆ ನಾನೂ ಕೂಡಾ ಇಂಟರ್ನೆಟ್ ಕನೆಕ್ಷನ್ ಯಾವಾಗ ಮರಳಿ ಬರುತ್ತದೋ ಎಂದು ಕಾಯುತ್ತಿದ್ದೆ. ವಾರಕ್ಕೊಮ್ಮೆ ತರಕಾರಿ ವ್ಯಾನ್ ಬರುತ್ತಿತ್ತು. ಆದರೆ, ತರಕಾರಿ ಹಾಗೂ ಇತರೆ ದಿನಸಿಗಳನ್ನು ಪಡೆಯಲು ನಾವು ಕ್ಯೂನಲ್ಲಿ ನಿಲ್ಲಬೇಕಾಗುತ್ತಿತ್ತು. ಈ ಸಂದರ್ಭದಲ್ಲಿ ಅಕ್ಕಪಕ್ಕದ ಮನೆಯ ಜನರೊಂದಿಗೆ ಸ್ನೇಹ ಸಾಧಿಸಿದೆ. ಪ್ರತಿಯೊಬ್ಬರೂ ಬೆಂಬಲ ಹಾಗೂ ಸಮುದಾಯದಲ್ಲಿ ಬದುಕುವ ಇಚ್ಛೆ ಹೊಂದಿದ್ದರಿಂದ ಇದು ಸುಲಭವಾಯಿತು. ನೆಟ್ವರ್ಕ್ ಬಂದಾಗ ಮಾತ್ರ ಪೋಷಕರಿಗೆ ಫೋನ್ ಮಾಡಿ ಮಾತನಾಡುತ್ತಿದ್ದೆವು.  ಹೀಗೆಯೇ ಜೀವನ ಕಳೆಯುತ್ತಿತ್ತು. 

ಹೊರಗೆ ಹೋಗಲಾರದ ಅನಿವಾರ್ಯತೆಯಿಂದಾಗಿ ನಮ್ಮ ನಾಯಿಗಳು ಮನೆಯ ವಾಶ್‌ರೂಂನ್ನೇ ಬಳಸುವುದನ್ನು ಕಲಿತುಕೊಂಡವು. ಅಲ್ಲದೆ, ಕಾಶ್ಮೀರದಲ್ಲಿ ಹಿಮಪಾತವಾದಾಗ ಹಾಗೂ ಚಳಿಗಾಲದಲ್ಲಿ ಹೊರ ಹೋಗುವುದು ಸಾಧ್ಯವಿರಲಿಲ್ಲ. ಅಲ್ಲದೆ, ಆಗಾಗ  ಬೆದರಿಕೆಗಳು ಬರುತ್ತಿದ್ದುದ್ದರಿಂದ ಇಡೀ ಪ್ರದೇಶವನ್ನು ಮತ್ತೆ ಮತ್ತೆ ಲಾಕ್‌ಡೌನ್‌ಗೆ ಒಳಪಡಿಸುತ್ತಿದ್ದರು. ಕೆಲವೊಮ್ಮೆ ಅಲ್ಲಿ ಪೂರ್ತಿ ಪವರ್ ಆಫ್ ಮಾಡುತ್ತಿದ್ದರೆ ಮತ್ತೆ ಕೆಲವೊಮ್ಮೆ ಮನೆಯೊಳಗೆ ಡಿಮ್ ಲೈಟ್ ಹಾಕಿ ಜನಜೀವನವೇ ಇಲ್ಲವೇನೋ ಎಂದು ಬಿಂಬಿಸುವಂತೆ ಬದುಕಬೇಕಾಗಿತ್ತು. ಹೊರಗೆ ಆಡಲು ಹಪಹಪಿಸುತ್ತಿದ್ದ ಮಕ್ಕಳನ್ನು ಮನೆಯೊಳಗೇ ಬಂಧಿಯಾಗಿಸುವುದು ಸಾಹಸವಾಗಿತ್ತು. ಇನ್ನೊಂದು ದಿನ ಬದುಕನ್ನು ನೋಡಲು ಸಾಧ್ಯವಾಗಲಿ ಎಂದೇ ಪ್ರಾರ್ಥಿಸುತ್ತಿದ್ದೆವು. ಡ್ಯೂಟಿಯಲ್ಲಿದ್ದ ಪತಿಯ ಜೀವಕ್ಕಾಗಿ ದೇವರಲ್ಲಿ ಮೊರೆ ಇಡುತ್ತಿದ್ದೆವು. 

ಕೊರೋನಾ ವೈರಸ್‌ಗೆ ಅರಳುತ್ತಿವೆ ಆನ್‌ಲೈನ್ ಅಫೇರ್ಸ್

ರಿಲ್ಯಾಕ್ಸೇಶನ್ ಇದ್ದ ಸಂದರ್ಭದಲ್ಲಿ ನಾವು ಹೊರ ಹೋದರೆ ಆರ್ಮಿ ಗೋ ಬ್ಯಾಕ್, ಭಾರತೀಯರೇ ಹಿಂತಿರುಗಿ ಹೋಗಿ, ನಾಯಿಗಳೇ ಹೋಗಿ ಎಂಬೆಲ್ಲ ಸ್ಲೋಗನ್‌ಗಳು ಕಿವಿಗಡಚಿಕ್ಕುತ್ತಿದ್ದವು. ಇದು ನನ್ನ ಜೀವನದ ಬಹಳ ಕಷ್ಟದಾಯಕ ದಿನಗಳು. ಇಂಥ ಸಂದರ್ಭದಲ್ಲಿ ನಾನು ಪ್ರಗ್ನೆಂಟ್ ಆದೆ. ಒಂದು ನಾರ್ಮಲ್ ಚೆಕಪ್‌ಗೆ ಹೋಗಬೇಕೆಂದರೆ ಬುಲೆಟ್‌ಪ್ರೂಫ್ ಜಾಕೆಟ್ ಹಾಕಿಕೊಂಡು ಮಿಲಿಟರಿ ವಾಹನದಲ್ಲಿ ಕುಳಿತುಕೊಳ್ಳಬೇಕಾದಂಥ ಪರಿಸ್ಥಿತಿ ಇತ್ತು. ಕಡೆಗೂ 8ನೇ ತಿಂಗಳ ಪ್ರಗ್ನೆನ್ಸಿಯಲ್ಲಿ ಮೆಡಿಕಲ್ ಸರ್ಟಿಫಿಕೇಟ್ ಹಿಡಿದು ಒಬ್ಬಳೇ ವಿಮಾನ ಹತ್ತಿ ಊರಿಗೆ ಬಂದೆ. ಏಕೆಂದರೆ ಆ ಸಂದರ್ಭದಲ್ಲಿ ಕರ್ಫ್ಯೂ ಇದ್ದು, ಮತ್ತೆ ಸಂಪೂರ್ಣ ಲಾಕ್‌ಡೌನ್ ಆದರೆ ಹೆರಿಗೆ ಸಂದರ್ಭದಲ್ಲಿ ಕಷ್ಟವಾಗುತ್ತದೆನ್ನುವ ಭಯ ಕಾಡುತ್ತಿತ್ತು.  

ಈ ಸಂದರ್ಭದಲ್ಲಿ ನಮ್ಮ ಮಾತುಕತೆ, ತರಬೇತಿ ಪ್ರತಿಯೊಂದೂ ಏನಾಗಿತ್ತು ಗೊತ್ತಾ?- ವಾಯುದಾಳಿಯಾದರೆ ಹೇಗೆ ತಪ್ಪಿಸಿಕೊಳ್ಳುವುದು, ಯಾರಾದರೂ ಬಾಂಬ್ ಹಾಕಿದರೆ ಹೇಗೆ ತಪ್ಪಿಸಿಕೊಳ್ಳುವುದು, ಟೆರರಿಸ್ಟ್ ಅಟ್ಯಾಕ್ ಆದರೆ ಏನು ಮಾಡಬೇಕು, ಭಯೋತ್ಪಾದಕರು ಕ್ಯಾಂಟ್ ಒಳ ನುಗ್ಗಿದರೆ ಏನು ಮಾಡಬೇಕು?!

ಅಂತೂ ನಾನು ಬದುಕುಳಿದಿದ್ದೆ. ನಂತರದಲ್ಲಿ ಕಾಲ ಬದಲಾಯಿತು. ಸ್ವಲ್ಪ ವಿಭಿನ್ನ ರೀತಿಯ ಕಾಶ್ಮೀರವನ್ನು ನೋಡುವುದು ಸಾಧ್ಯವಾಯಿತು. ಕಾಶ್ಮೀರಿಗಳ ಪ್ರೀತಿ, ಕಾಶ್ಮೀರದ ಸೌಂದರ್ಯ... ನಾವಲ್ಲಿ ಗುಡ್, ಬ್ಯಾಡ್ ಆ್ಯಂಡ್ ದದ ಅಗ್ಲಿ ಎಲ್ಲವನ್ನೂ ನೋಡಿದೆವು. 

ಹೌದು, ಇಷ್ಟೆಲ್ಲವನ್ನೂ ಈಗೇಕೆ ಹೇಳುತ್ತಿದ್ದೇನೆ ಗೊತ್ತಾ? ಕೊರೋನಾ ತಡೆಯಲು ದೇಶಕ್ಕೆ ದೇಶವೇ ಲಾಕ್‌ಡೌನ್‌ಗೆ ಒಳಪಟ್ಟಿರುವ ಸಂದರ್ಭದಲ್ಲಿ ಜನರು ತಮ್ಮ ಬದುಕಿನ ಕುರಿತು ದೂರುಗಳ ಸುರಿಮಳೆಯನ್ನೇ ಹರಿಸುತ್ತಿರುವುದನ್ನು ನೋಡಿ ನೋವಾಗುತ್ತಿದೆ. ಅಯ್ಯೋ ದಿನಸಿ ಇಲ್ಲ, ಕೆಲಸದವರು ಬರುತ್ತಿಲ್ಲ, ಮಕ್ಕಲಿಗೆ ಹೊರ ಹೋಗಲಾಗುತ್ತಿಲ್ಲ.... ಎಲ್ಲದಕ್ಕೂ ದೂರು...

ಒಮ್ಮೆ ಯೋಚಿಸಿ, ಇದು ಕೊರೋನಾ ವೈರಸ್ ಕಾರಣಕ್ಕಲ್ಲದೆ, ನಿಜವಾದ ಯುದ್ಧದ ಕಾರಣಕ್ಕಾಗಿ ಹೇರಿದ ಲಾಕ್‌ಡೌನ್ ಆಗಿದ್ದರೆ ಏನು ಮಾಡುತ್ತಿದ್ದಿರಿ? ಬದುಕು ಹೇಗಿರುತ್ತಿತ್ತು ಎಂದು. ಆಗ ಕೂಡಾ ಮಕ್ಕಳನ್ನು ಕರೆದುಕೊಂಡು ರಸ್ತೆಗಿಳಿವ ಧೈರ್ಯ ಮಾಡುತ್ತಿದ್ದಿರೇ? ಆಗ ಕೂಡಾ ವಾಕ್ ಮಾಡುತ್ತಿದ್ದಿರೇ? ಆಗಲೂ ದಿನಸಿ ಸ್ವಲ್ಪವೇ ಇದೆ ಎಂದು ಗೋಳಾಡುತ್ತಾ ಕೂರುತ್ತಿದ್ದಿರೇ? 
ಖಂಡಿತಾ ಇಲ್ಲ ಅಲ್ಲವೇ? ಈಗ ಪರಿಸ್ಥಿತಿ ಅಷ್ಟೆಲ್ಲ ಬಿಗಡಾಯಿಸಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ದೂರುವುದನ್ನು ಬಿಡಿ. ಇಷ್ಟಕ್ಕೂ ನಾನೇನು ಕಾಶ್ಮೀರದಲ್ಲಿದ್ದಾಗ ಹೀರೋಯಿಕ್ ಆದುದೇನನ್ನೋ ಮಾಡಲಿಲ್ಲ. ಬದುಕುಳಿಯಲು ಏನು ಅಗತ್ಯವೋ ಅಷ್ಟನ್ನೇ ಮಾಡಿದ್ದು. ನಾನು ಯೋಧನನ್ನು ವಿವಾಹವಾಗುವ ಆಯ್ಕೆ ಮಾಡಿಕೊಂಡು ಅದರ ಸಾಧಕಬಾಧಕಗಳೆಲ್ಲವನ್ನೂ ಒಪ್ಪಿಕೊಂಡೆ. 

ಈಗ ಕೂಡಾ ಮಾಡಬೇಕಾಗಿರುವುದು ಅದೇ. ಮೊದಲು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನಿಮಗಾಗಿ, ನಿಮ್ಮ ಮಕ್ಕಳಿಗಾಗಿ ಒಪ್ಪಿಕೊಂಡು ಬಿಡಿ. ನೀವೂ ನಾವೆಲ್ಲರೂ ಈಗ ಯೋಧರೇ. ಸರಿಯಾದ ಕರ್ತವ್ಯ ನಿಭಾಯಿಸಿ ಜವಾಬ್ದಾರಿ ಮೆರೆಯಬೇಕಿದೆ. ಈ ಸನ್ನಿವೇಶದ ವಿರುದ್ಧ ಹೋರಾಡಿ, ಮುಂದೊಂದು ದಿನ ಮೊಮ್ಮಕ್ಕಳಿಗೆ ಹೇಳಲು ನಿಮ್ಮಲ್ಲಿ ಕತೆಗಳಿರುತ್ತವೆ. 

ಉತ್ತರ ಕೊರಿಯಾದಲ್ಲೇಕಿಲ್ಲ ಕೊರೋನಾ ಕೇಸ್

ಈ ಎಲ್ಲ ಕಾರಣಕ್ಕಾಗಿ ಒಮ್ಮೆ ರಾಜಕೀಯವನ್ನು, ನಮ್ಮ ಸ್ವಂತ ನಿಲುವುಗಳನ್ನು ಬಿಟ್ಟು ಮುಂದೆ ನಡೆಯೋಣವೇ? ನಿಮ್ಮ ಮಕ್ಕಳು ಮುಂದೊಮ್ಮೆ ಇಂದು ಯಾವ ರಾಜಕೀಯ ಪಕ್ಷ ಇತ್ತು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳೋಲ್ಲ. ಇಂಥ ಸಂದರ್ಭದಲ್ಲಿ ತನ್ನ ಪೋಷಕರು ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ನೆನಪಿಟ್ಟುಕೊಳ್ಳುತ್ತಾರೆ. ಇಷ್ಟಕ್ಕೂ ಮನೆಯಲ್ಲಿರೋಕೆ  ಬಜೆಟ್ ತೆಗೆದಿಡುವುದೇನೂ ಬೇಡವಲ್ಲ? ಸೋಷ್ಯಲ್ ಡಿಸ್ಟೆನ್ಸಿಂಗ್‌ಗೆ  ಹಣ ತೆರಬೇಕಾಗಿಲ್ಲ. ಇದೇ ಸರಿಯಾದ ಸಮಯ. ನೀವು ಮಾದರಿಯಾಗುವ ಮೂಲಕ ನಿಮ್ಮ ಮಕ್ಕಳಿಗೆ ಬದುಕುಳಿವ ಕಲೆ ಕಲಿಸಿ, ಜೀವನ ಕೌಶಲ್ಯ ಕಲಿಸಿ, ತಾಳ್ಮೆ ಕಲಿಸಿ, ತಮ್ಮ ಆಶೀರ್ವಾದಗಳನ್ನು ಲೆಕ್ಕ ಹಾಕಲು ಕಲಿಸಿ. ಅದು ಬಿಟ್ಟು ಎಲ್ಲವನ್ನೂ ದೂರುತ್ತಾ ಕೂರುವುದನ್ನು ಕಲಿಸಬೇಡಿ. ಬ್ಲೇಮ್ ಗೇಮ್ ಹಾಗೂ ಚಲ್ತಾ ಹೈ ಆ್ಯಟಿಟ್ಯೂಡ್ ಕಲಿಸಬೇಡಿ. 

ಇನ್ನೂ ಕೂಡಾ ನೀವು ಸರ್ಕಾರದ ಮೇಲೆ ಸಿಟ್ಟಾಗಿದ್ದರೆ ಆ ಬಗ್ಗೆ ಬರೆಯಿರಿ, ಗೆಳೆಯರಿಗೆ ಕರೆ ಮಾಡಿ ನಿಮ್ಮೆಲ್ಲ ಸಿಟ್ಟನ್ನು ಹೊರಹಾಕಿ. ಆದರೆ ಹೊರ ಹೋಗುವ ಮೂಲಕ ಸಿಟ್ಟು ತೋರಿಸಿ ನಿಮ್ಮ ಹಾಗೂ ಇತರರ ಬದುಕನ್ನು ಅಪಾಯಕ್ಕೆ ತಳ್ಳಬೇಡಿ. ಮನೆಯಲ್ಲೇ ಕಚೇರಿ ಕೆಲಸ ಮಾಡುವುದು ಕಷ್ಟ ನಿಜ. ಆದರೆ, ಪ್ರೀತಿಪಾತ್ರರನ್ನು ಡೆತ್ ಬೆಡ್‌ನಲ್ಲಿ ನೋಡುವುದಕ್ಕಿಂತಾ ಸುಲಭವಲ್ಲವೇ? ನೀವು ಮನೆಯಲ್ಲಿರಲಾರಿರಿ ಎಂಬ ಕಾರಣಕ್ಕೆ ಇತರರನ್ನು ಕೊಲ್ಲುವ ಮಟ್ಟಕ್ಕಿಳಿಯುವ ಮನಸ್ಥಿತಿಯಿಂದ ಹೊರಬನ್ನಿ. ಕಾಲ ಬದಲಾಗುತ್ತದೆ. ಎಲ್ಲ ಸರಿಯಾಗುತ್ತದೆ. ನಾವು ಪಾಸಿಟಿವಿಟಿಯೊಂದಿಗೆ, ದೇಶದ ಒಳಿತಿಗಾಗಿ ಪ್ರಾರ್ಥಿಸೋಣ.

ನಾನು ಅಕ್ಷರಶಃ ಕಣ್ಣೀರು ಹಾಕಿಕೊಂಡು ನಡುಗುವ ಕೈಗಳಲ್ಲಿ ಇದನ್ನು ಬರೆದಿದ್ದೇನೆ. ಹಾಗಾಗಿ, ನನ್ನ ಭಾವನೆಗಳಿಗೆ ಬೆಲೆ ಕೊಡಿ. ಕಾಮೆಂಟ್‌ನಲ್ಲಿ ರಾಜಕೀಯ ವಾದಗಳಿಗೆ ಎಳೆಯಬೇಡಿ. 

ಪ್ರೀತಿಯಿಂದ,
ನ್ಯಾನ್ಸಿ ಸಿಂಗ್

"