ಹಾವೇರಿ ಜಿಲ್ಲೆಯ ಹಳ್ಳಿಯೊಂದರಲ್ಲಿ, 80ನೇ ಸ್ವಾತಂತ್ರ್ಯ ದಿನದಂದೇ ಶಾಲಾ ಮಕ್ಕಳು ಮೂಲಸೌಕರ್ಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. ಶಾಲೆಗೆ ಹೋಗುವ ರಸ್ತೆ ಕೆಸರು ಗದ್ದೆಯಂತಾಗಿದ್ದರಿಂದ ಆಕ್ರೋಶಗೊಂಡ ಮಕ್ಕಳು, ರಸ್ತೆಯಲ್ಲೇ ಭತ್ತ ನಾಟಿ ಮಾಡಿ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ.

ಹಾವೇರಿ (ಆ.15): ದೇಶದೆಲ್ಲೆಡೆ 2026ರ 80ನೇ ಸ್ವಾತಂತ್ರ್ಯ ದಿನಾಚರಣೆಯ (80th Independence Day) ಸಡಗರ ಮನೆಮಾಡಿದ್ದರೆ, ಹಾವೇರಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಶಾಲಾ ಮಕ್ಕಳು ಮೂಲಸೌಕರ್ಯಕ್ಕಾಗಿ ಸ್ವಾತಂತ್ರ್ಯ ದಿನದಂದೇ ರಸ್ತೆಗಿಳಿದು ಕಣ್ಣೀರು ಹಾಕಿದ ಮನಕಲಕುವ ಘಟನೆ ನಡೆದಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 8 ದಶಕಗಳು ಕಳೆದರೂ ಶಾಲೆಗೆ ಹೋಗಲು ಸಮರ್ಪಕ ರಸ್ತೆಯಿಲ್ಲ ಎಂದು ಆಕ್ರೋಶಗೊಂಡ ಪುಟಾಣಿ ಮಕ್ಕಳು, ಕೆಸರು ಗದ್ದೆಯಂತಾಗಿದ್ದ ರಸ್ತೆಯಲ್ಲೇ ಭತ್ತ ನಾಟಿ ಮಾಡಿ ಆಡಳಿತ ವ್ಯವಸ್ಥೆಗೆ ಛೀಮಾರಿ ಹಾಕಿದ್ದಾರೆ.

ಎಲ್ಲಿ ನಡೆದಿದೆ ಘಟನೆ?

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಎಚ್. ಆರೇಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸಂಪೂರ್ಣ ಕೆಸರು ಗದ್ದೆಯಂತಾಗಿದೆ.

80ನೇ ಸ್ವಾತಂತ್ರ್ಯ ದಿನದಂದು ಧ್ವಜಾರೋಹಣಕ್ಕೆ ಅಡ್ಡಿ:

ಆಗಸ್ಟ್ 15ರಂದು 80ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದಲ್ಲಿ ಭಾಗಿಯಾಗಲು ಮಕ್ಕಳು ಶುಭ್ರವಾದ ಸಮವಸ್ತ್ರ ಧರಿಸಿ ಶಾಲೆ ಮತ್ತು ಅಂಗನವಾಡಿಗೆ ಹೊರಟಿದ್ದರು. ಆದರೆ, ಮಾರ್ಗಮಧ್ಯೆ ರಸ್ತೆಯುದ್ದಕ್ಕೂ ಮೊಣಕಾಲುದ್ದ ಕೆಸರು ತುಂಬಿದ್ದರಿಂದ ಮಕ್ಕಳು ಮುಂದೆ ಸಾಗಲು ಸಾಧ್ಯವಾಗಲಿಲ್ಲ. ಇದರಿಂದ ತೀವ್ರ ನಿರಾಶೆ ಹಾಗೂ ಆಕ್ರೋಶಗೊಂಡ ಮಕ್ಕಳು, ಕೈಯಲ್ಲಿ ಭತ್ತದ ಸಸಿಗಳನ್ನು ಹಿಡಿದು ಕೆಸರು ರಸ್ತೆಯಲ್ಲೇ ನಾಟಿ ಮಾಡುವ ಮೂಲಕ '80 ವರ್ಷಗಳ ಸ್ವಾತಂತ್ರ್ಯದ ನಂತರವೂ ನಮ್ಮ ಹಳ್ಳಿಯ ದುಸ್ಥಿತಿ ಇದೇನಾ?' ಎಂದು ಪ್ರಶ್ನಿಸಿ ವಿನೂತನ ಪ್ರತಿಭಟನೆ ನಡೆಸಿದರು.

ದಿನವೂ ಜಾರಿ ಬೀಳುತ್ತಿರುವ ಪುಟಾಣಿ ಕಂದಮ್ಮಗಳು:

ನಿತ್ಯವೂ ಗಾಯ: ಅಂಗನವಾಡಿ ಕಂದಮ್ಮಗಳು ಹಾಗೂ ಪ್ರಾಥಮಿಕ ಶಾಲಾ ಮಕ್ಕಳು ಇದೇ ಕೆಸರು ರಸ್ತೆಯಲ್ಲಿ ನಿತ್ಯವೂ ನಡೆದುಕೊಂಡು ಹೋಗಬೇಕು. ದಿನಕ್ಕೆ ಕನಿಷ್ಠ ಒಬ್ಬರಾದರೂ ಜಾರಿ ಬಿದ್ದು ಗಾಯಗೊಳ್ಳುತ್ತಿದ್ದಾರೆ.

ಬಟ್ಟೆ, ಬ್ಯಾಗ್ ಕೆಸರುಮಯ: ಶಾಲೆಗೆ ಹೋಗುವ ಮುನ್ನವೇ ಸಮವಸ್ತ್ರ ಮತ್ತು ಪುಸ್ತಕದ ಚೀಲಗಳು ಕೆಸರು ಪಾಲಾಗುತ್ತಿವೆ.

ಜನಪ್ರತಿನಿಧಿಗಳಿಗೆ ಮುಖಭಂಗ: ರಸ್ತೆ ಅತಿಯಾಗಿ ಹದಗೆಟ್ಟಿರುವ ಕಾರಣ, ಸ್ವಾತಂತ್ರ್ಯ ದಿನದ ಧ್ವಜಾರೋಹಣಕ್ಕೆ ಬರಲು ಸ್ಥಳೀಯ ಜನಪ್ರತಿನಿಧಿಗಳೇ ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ತುಪ್ಪ ಸುರಿದಿದೆ.

ಅಧಿಕಾರಿಗಳ ಮೌನಕ್ಕೆ ಗ್ರಾಮಸ್ಥರ ಆಕ್ರೋಶ:

'ದೇಶವು 80ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿರುವ ಈ ಕಾಲಘಟ್ಟದಲ್ಲೂ ನಮ್ಮ ಮಕ್ಕಳಿಗೆ ಶಾಲೆಗೆ ಹೋಗಲು ಒಂದು ಸುಸಜ್ಜಿತ ರಸ್ತೆ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಹಲವು ಬಾರಿ ಮನವಿ ಸಲ್ಲಿಸಿದರೂ ಶಾಸಕರು, ಜನಪ್ರತಿನಿಧಿಗಳು ಹಾಗೂ ತಾಲೂಕು ಆಡಳಿತ ಕಣ್ಣು ಮುಚ್ಚಿ ಕುಳಿತಿದೆ' ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಕೂಡಲೇ ಈ ರಸ್ತೆಯನ್ನು ಡಾಂಬರೀಕರಣ ಅಥವಾ ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.