ರಾಣಿಬೆನ್ನೂರು(ಅ.20): ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್‌ ಕಟ್ಟಡದ ಎರಡನೇ ಮಹಡಿ ಮೇಲಿಂದ ಬಿದ್ದು ಮೃತಪಟ್ಟ ಘಟನೆ ಕುರಿತಂತೆ ಸೂಕ್ತ ತನಿಖೆ ನಡೆಸಬೇಕು ಎಂಬ ಕೂಗು ವಿವಿಧ ಸಂಘಟನೆಗಳಿಂದ ಕೇಳಿಬಂದಿದೆ

ಇಲ್ಲಿಯ ವಿಶ್ವಬಂಧು ನಗರದಲ್ಲಿರುವ ಬಿಸಿಎಂ ಇಲಾಖೆಗೆ ಸೇರಿದ ಬಾಲಕಿಯರ ಮೆಟ್ರಿಕ್‌ ನಂತರದ ಹಾಸ್ಟೆಲ್‌ನಲ್ಲಿ ಸೂಕ್ತ ಭದ್ರತೆಯಿಲ್ಲ. ಇದರಿಂದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಕೂಡಲೇ ಸಾವಿನ ಪ್ರಕರಣ ಕುರಿತಂತೆ ತನಿಖೆಯಾಗಬೇಕು ಎಂಬುದು ಒತ್ತಾಯಿಸಲಾಗಿದೆ.

2ನೇ ಮಹಡಿಯಲ್ಲಿ ಭದ್ರತೆಯಿಲ್ಲ:

ಸುಮಾರು 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರುವ ಈ ವಸತಿ ನಿಲಯದಲ್ಲಿ ಎರಡು ಮಹಡಿಗಳಿವೆ. ಎರಡನೇ ಮಹಡಿಯಲ್ಲಿ ವಿದ್ಯಾರ್ಥಿಗಳಿಗೆ ವಸತಿ ನಿಲಯದ ಕೊನೆಯ ಭಾಗದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಶೌಚಾಲಯ ಪಕ್ಕದಲ್ಲಿ ಯಾವುದೇ ಗ್ರಿಲ್‌ (ಕಬ್ಬಿಣದ ಸಲಾಕೆ) ಹಾಕಿಲ್ಲ. ಹೀಗಾಗಿ ಇಂತಹ ಅನಾಹುತ ನಡೆದಿದೆ ಎಂಬುದು ಕೆಲವರು ಆರೋಪಿಸಿದ್ದಾರೆ.

ಓದಿನಲ್ಲಿ ಮುಂದೆ:

ಮೃತ ವಿದ್ಯಾರ್ಥಿನಿ ಕಾವ್ಯಾ ಓದಿನಲ್ಲಿ ಮುಂದೆ ಇದ್ದಳು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿನಿ ರಾಜರಾಜೇಶ್ವರಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಳು. ಪರೀಕ್ಷಾ ಸಮಯವಾಗಿದ್ದರಿಂದ ಬೆಳಗಿನ ಜಾವ 4.30ಕ್ಕೆ ಎದ್ದು, ಶೌಚಾಲಯಕ್ಕೆ ತೆರಳಿದ ವೇಳೆ ಇಂತಹ ಘಟನೆ ಸಂಭವಿಸಿದೆ.

ಪೋಷಕರ ಆಕ್ರಂದನ:

ಮಗಳ ಸಾವಿನ ಸುದ್ದಿ ಕೇಳಿ ದಿಗ್ಭ್ರಾಂತರಾಗಿದ್ದ ತಂದೆ- ತಾಯಿ ರೋದನ ಹೇಳತೀರದಾಗಿತ್ತು. ತಂದೆ ಹಾಗೂ ತಾಯಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ತಾನು ವ್ಯಾಸಂಗ ಮುಗಿಸಿದ ನಂತರ ಎಲ್ಲಿಯಾದರೂ ಅರ್ಜಿ ಹಾಕಿ ನಿಮ್ಮನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಮಗಳು ಪದೆ ಪದೇ ಹೇಳುತ್ತಿದ್ದನ್ನು ಪ್ರಸ್ತಾಪಿಸಿ ತಾಯಿ ಅಳುತ್ತಿದ್ದ ದೃಶ್ಯ ಎಲ್ಲರ ಮನಕಲುಕುವಂತಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಜಿಪಂ ಉಪಾಧ್ಯಕ್ಷೆ ಗಿರಿಜಮ್ಮ ಬ್ಯಾಲದಹಳ್ಳಿ, ಸದಸ್ಯ ಏಕನಾಥ ಭಾನುವಳ್ಳಿ, ತಾಪಂ ಅಧ್ಯಕ್ಷೆ ಗೀತಾ ಲಮಾಣಿ, ಸದಸ್ಯ ಪುಟ್ಟಪ್ಪ ಭಿಕ್ಷಾವತಿಮಠ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಪಂ ಸಿಇಒ, ಎಸ್‌ಪಿ ಕೆ. ದೇವರಾಜ, ಎಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್‌ಪಿ ಟಿ.ವಿ. ಸುರೇಶ, ಡಿಡಿಪಿಯು ಎಸ್‌.ಸಿ. ಪೀರಜಾದೆ, ಬಿಸಿಎಂ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಘಟನೆ ಕುರಿತು ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಬಿಸಿಎಂ ಇಲಾಖೆಯ ತಾಲೂಕು ಅಧಿಕಾರಿ ವಿ.ಎಸ್‌. ಹಿರೇಮಠ ಅವರು, ವಸತಿ ನಿಲಯದಲ್ಲಿ ಬಿದ್ದು ವಿದ್ಯಾರ್ಥಿನಿ ಕಾವ್ಯಾ ಮೃತಪಟ್ಟಪ್ರಕರಣ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ತನಿಖೆ ಮುಗಿದ ಮೇಲೆ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.