ಹಾನಗಲ್ಲ[ಅ.24]: ತಾಲೂಕಿನಲ್ಲಿ ಮತ್ತೆ ಆನೆಗಳ ದಾಳಿ ಆರಂಭವಾಗಿದ್ದು ಮಂತಗಿ ಕೊಳಗಿ ಅರಣ್ಯ ಪ್ರದೇಶದಲ್ಲಿ ಆನೆಗಳ ಓಡಾಟದ ಗುರುತುಗಳು ಸಿಕ್ಕಿದ್ದಾಗಿ ಅರಣ್ಯ ಇಲಾಖೆಯಲ್ಲಿ ವರದಿಯಾಗಿದ್ದು ಅರಣ್ಯ ಸಂರಕ್ಷಕರು ಗದ್ದೆಗಳಿಗೆ ಆನೆಗಳು ಬಾರದಂತೆ ಕಾವಲು ಕಾಯುತ್ತಿದ್ದಾರೆ.

ಕಳೆದ 2-3 ದಿನಗಳಿಂದ ಆನೆಗಳು ಹಾನಗಲ್ಲ ತಾಲೂಕಿನ ಪ್ರದೇಶದಲ್ಲಿ ತಿರುಗಾಡುತ್ತಿರುವ ಸುಳಿವು ಇದೆ. ಆನೆಗಳು ಸುತ್ತಾಡಿದ ಹೆಜ್ಜೆ ಗುರುತುಗಳು ಕಂಡು ಬಂದಿವೆ. ನೆರೆ ಹಾವಳಿಯಿಂದಾಗಿ ಹಾಳಾಗಿ ಉಳಿದ ಒಂದಷ್ಟು ಪೈರು ಕೂಡ ಆನೆಗಳ ಪಾಲಾಗುತ್ತಿರುವ ಭೀತಿ ರೈತರನ್ನು ಕಾಡುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬುಧವಾರ ಬೆಳಗಿನ ಜಾವ ಮಂತಗಿ ಹಾಗೂ ಕೊಳಗಿ ಗ್ರಾಮಗಳ ಪರಿಸರದಲ್ಲಿ ಆನೆಗಳು ತಿರುಗಾಡಿರುವ ಬಾತ್ಮಿ ಅರಣ್ಯ ಇಲಾಖೆಗೆ ಲಭ್ಯವಾಗಿದೆ. ಹೀಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಕಟ್ಟೆಚ್ಚರದಲ್ಲಿ ಆನೆಗಳ ಆಗಮನ- ನಿರ್ಗಮನವನ್ನು ಗಮನಿಸುತ್ತಿದ್ದಾರೆ.

ದಶಕಗಳಿಂದ ಆನೆಯ ದಾಳಿ ಹಾನಗಲ್ಲ ತಾಲೂಕಿಗೆ ಸಾಮಾನ್ಯವಾಗಿದ್ದು, ಕಳೆದ ಒಂದೆರಡು ವರ್ಷಗಳಲ್ಲಿ ಆನೆ ದಾಳಿ ಕಾಡಿರಲಿಲ್ಲ. ಆಗ ಕಾಡಿನಲ್ಲಿ ನೀರಿನ ಆಭಾವ ಕಾರಣವಾಗಿ ಅನೆಗಳು ಹಾನಗಲ್ಲ ತಾಲೂಕಿನ ನೀರಿರುವ ಪ್ರದೇಶಗಳಿಗೆ ಬರುತ್ತಿವೆ ಎಂಬ ವಿಚಾರ ಜನರು ಹಾಗೂ ಅರಣ್ಯ ಇಲಾಖೆಯದಾಗಿತ್ತು. ಪ್ರಸ್ತುತ ವರ್ಷ ಎಲ್ಲೆಡೆ ಭಾರೀ ಮಳೆಯಾದರೂ ಆನೆಗಳ ಕಾಟದಿಂದ ಮಾತ್ರ ತಾಲೂಕು ಮುಕ್ತವಾಗಿಲ್ಲ ಎಂಬ ಆತಂಕ ಮನೆ ಮಾಡಿದೆ.

ಜಮೀನಿನಲ್ಲಿ ಪೈರು ನಾಶ

ಕಬ್ಬು, ಭತ್ತ, ಬಾಳೆಯಂತಹ ಬೆಳೆಗಳು ಆನೆಗಳ ದಾಳಿಗೆ ತುತ್ತಾಗುವ ಆತಂಕ ನಿರ್ಮಾಣವಾಗಿದೆ. ಸೋಮವಾರ ಶಿವಪುರ ಗ್ರಾಮದ ಜಮೀನುಗಳಲ್ಲಿ ತಿರುಗಾಡಿವೆ. 18 ಕ್ಕೂ ಅಧಿಕ ರೈತರ ಜಮೀನಿನಲ್ಲಿ ಪೈರು ನಾಶ ಮಾಡಿವೆ. ಅಲ್ಲಿಯೇ ಪಕ್ಕದಲ್ಲಿರುವ ಧರ್ಮಾ ನದಿಯನ್ನು ದಾಟಲಾಗದೇ ಅಲ್ಲಿಂದ ಮರಳಿ ಹೋಗಿರುವ ಶಂಕೆ ಇಲ್ಲಿನ ರೈತರದ್ದಾಗಿದೆ. ದೊಡ್ಡ ಆನೆಗಳೊಂದಿಗೆ ಸಣ್ಣ ಮರಿ ಆನೆಗಳೂ ಇರುವ ಶಂಕೆ ಇದೆ. ಕೆಲವರು ಪ್ರತ್ಯಕ್ಷವಾಗಿ ಆನೆಯನ್ನು ನೋಡಿರುವುದಾಗಿ ಅರಣ್ಯ ಇಲಾಖೆಗೆ ತಿಳಿಸಿದ್ದಾರೆ.

ಆನೆಗಳ ದಾಳಿಯನ್ನು ತಡೆಯಲು ಅರಣ್ಯ ಸಂರಕ್ಷಣಾಧಿಕಾರಿ ಕೆ.ಬಿ. ಬಸವರಾಜಪ್ಪ, ವಲಯ ಅರಣ್ಯಾಧಿಕಾರಿ ರಮೇಶ ಪೇಲನವರ ಹಾಗೂ ಸಿಬ್ಬಂದಿ ಹರ ಸಾಹಸ ಮಾಡುತ್ತಿದ್ದು, ಆನೆಗಳನ್ನು ಇಲ್ಲಿಂದ ಹೆಮ್ಮೆಟ್ಟಿಸಲು ಮದ್ದು ಸಿಡಿಸುವುದು, ಕೇಕೆ ಹಾಕಿ ಬೆದರಿಸುವುದು ಮುಂತಾದ ಪ್ರಕ್ರಿಯೆಗಳಿಗೆ ಮುಂದಾಗಿದ್ದಾರೆ. ಆನೆಗಳು ಹೊಲಕ್ಕೆ ಆಗಮಿಸಿರುವುದು ಶುಭ ಫಲ ಎಂದು ತಿಳಿದ ಹಲವರು ಆನೆಗಳ ಹೆಜ್ಜೆ ಗುರುತುಗಳಿಗೆ ಪೂಜೆ ಸಲ್ಲಿಸುತ್ತಿರುವುದು ಕೂಡ ಕಂಡುಬಂದಿದೆ.