ಹಾವೇರಿ: ಗುತ್ತಲದ ದೊಡ್ಡ ಕೆರೆಗೆ ಶಿವಣ್ಣನವರ ಬಾಗಿನ ಅರ್ಪಣೆ
ಗುತ್ತಲದ ಐತಿಹಾಸಿಕ ದೊಡ್ಡ ಕೆರೆಗೆ ಬಾಗಿನ ಅರ್ಪಿಸಿದ ಮಾಜಿ ಸಚಿವ ಬಸವರಾಜ ಶಿವಣ್ಣನವರ| ಸಿದ್ದರಾಮಯ್ಯ ಸರ್ಕಾರ ಇದ್ದಾಗ ಈ ಕೆರೆಗೆ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಯ ಹೆಚ್ಚುವರಿ ನೀರನ್ನು ಕಾಲುವೆಗಳ ಮೂಲಕ ಹರಿಸಿತ್ತು| ಇದರ ಫಲವಾಗಿ ಪ್ರತಿ ವರ್ಷ ಈ ಕೆರೆ ತುಂಬುತ್ತಿದೆ| ವಾಡಿಕೆಗಿಂತ ಕಡಿಮೆ ಮಳೆಯಾದರೂ ಈ ಕೆರೆ ಸದಾ ತುಂಬುವಂತಹ ಯೋಜನೆ ಕಾಂಗ್ರೆಸ್‌ನ ಮಹತ್ವಾಕಾಂಕ್ಷಿ ಯೋಜನೆ|
ಗುತ್ತಲ(ಅ.19): ಗುತ್ತಲದ ಐತಿಹಾಸಿಕ ದೊಡ್ಡ ಕೆರೆ ಮನಮೋಹಕವಾಗಿದ್ದು, ಈ ಕೆರೆ ತುಂಬಿರುವುದು ರೈತರಿಗೆ ವರದಾನವಾಗಿದೆ ಎಂದು ಮಾಜಿ ಸಚಿವ ಬಸವರಾಜ ಶಿವಣ್ಣನವರ ಅವರು ಹೇಳಿದ್ದಾರೆ.
ಪಟ್ಟಣದ ಐತಿಹಾಸಿಕ ದೊಡ್ಡ ಕೆರೆಗೆ ಶುಕ್ರವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಕಳೆದ ನಮ್ಮ ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ ಈ ಕೆರೆಗೆ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಯ ಹೆಚ್ಚುವರಿ ನೀರನ್ನು ಕಾಲುವೆಗಳ ಮೂಲಕ ಹರಿಸುವ ಯೋಜನೆ ಮಾಡಿದ್ದರ ಫಲವಾಗಿ ಪ್ರತಿ ವರ್ಷ ಈ ಕೆರೆ ತುಂಬುತ್ತಿದೆ. ವಾಡಿಕೆಗಿಂತ ಕಡಿಮೆ ಮಳೆಯಾದರೂ ಈ ಕೆರೆ ಸದಾ ತುಂಬುವಂತಹ ಯೋಜನೆ ಕಾಂಗ್ರೆಸ್‌ನ ಮಹತ್ವಾಕಾಂಕ್ಷಿ ಯೋಜನೆ. ಈ ಕೆರೆ ತುಂಬುತ್ತಿರುವ ಕಾರಣ ಅಂತರ್ಜಲ ಮಟ್ಟ ಹೆಚ್ಚಾಗಿ ಗುತ್ತಲ ಪಟ್ಟಣದ ಅನೇಕ ಬೋರ್‌ವೆಲ್‌ಗಳು ತುಂಬಿ ತುಳುಕುತ್ತಿವೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಈರಪ್ಪ ಲಮಾಣಿ ಮಾತನಾಡಿ, ಈ ಕೆರೆಯ ತುಂಬಲಿಕ್ಕೆ ಮುಖ್ಯ ಕಾರಣ ಬಸಾಪುರ ಗ್ರಾಮದ ರೈತರ ತ್ಯಾಗ. ಬಸಾಪುರ ಗ್ರಾಮದ ರೈತರ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು ಕಾಲುವೆ ನಿರ್ಮಾಣ ಮಾಡಿ, ಅದೇ ಕಾಲುವೆ ಮೂಲಕ ತುಂಗಾ ಮೇಲ್ದಂಡೆ ಯೋಜನೆಯ ಹೆಚ್ಚುವರಿ ನೀರನ್ನು ಈ ಕೆರೆಗೆ ಹರಿಸಿ ತುಂಬಿಸಲಾಗುತ್ತಿದೆ. ಭೂಮಿಯನ್ನು ಕಳೆದುಕೊಂಡ ಬಸಾಪುರ ಗ್ರಾಮದ ರೈತರಿಗೆ ತುಂಗಾ ಮೇಲ್ದಂಡೆ ಯೋಜನೆಯಿಂದ ಇನ್ನೂ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ನಾಗರಾಜ ಎರಿಮನಿ, ಲಿಂಗೇಶ ಬೆನ್ನೂರ, ರಮೇಶ ಮಠದ, ಪ್ರೇಮಾ ಸಾಲಗೇರಿ, ಅನ್ನಪೂರ್ಣಾ ಬಂಡಿವಡ್ಡರ, ಕೋಟೆಪ್ಪ ಬನ್ನಿಮಟ್ಟಿ, ಲಿಂಗರಾಜ ನಾಯಕ, ಗುಡ್ಡಪ್ಪ ಗೊರವರ, ಪ್ರಕಾಶ ಪಠಾಡೆ, ತಾಪಂ ಮಾಜಿ ಸದಸ್ಯ ಬಸಣ್ಣ ಕಂಬಳಿ, ವಿಎಸ್‌ಎಸ್ ಬ್ಯಾಂಕ್ ಅಧ್ಯಕ್ಷ ಅಜ್ಜಪ್ಪ ತರ್ಲಿ, ಶಿವಣ್ಣ ಬಂಡಿವಡ್ಡರ, ಯುವ ಕಾಂಗ್ರೆಸ್‌ನ ಹನುಮಂತ ಅಗಸಿಬಾಗಿಲದ, ಶಿವನಗರದ ಲಕ್ಷ್ಮಣ ಲಮಾಣಿ, ರಮೇಶ ಲಮಾಣಿ, ರಾಮಪ್ಪ ಲಮಾಣಿ ಸೇರಿದಂತೆ ಅನೇಕರಿದ್ದರು.