ನಾರಾಯಣ ಹೆಗಡೆ

ಹಾವೇರಿ[ನ.14]: ಶಾಸಕರ ಅನರ್ಹತೆ ಕುರಿತು ಎದುರು ನೋಡುತ್ತಿದ್ದ ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದಿದ್ದು, ಜಿಲ್ಲೆಯ ಹಿರೇಕೆರೂರು ಮತ್ತು ರಾಣಿಬೆನ್ನೂರು ಕ್ಷೇತ್ರಗಳ ಅನರ್ಹ ಶಾಸಕರ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ದೊರತಿದೆ. ಉಪ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವುದರಿಂದ ಮತದಾರರನ್ನು ಸೆಳೆಯುವ ಸವಾಲನ್ನು ಅನರ್ಹ ಶಾಸಕರು ಎದುರಿಸಬೇಕಿದೆ.

ಹಿರೇಕೆರೂರು ಕ್ಷೇತ್ರ ಬಿ.ಸಿ. ಪಾಟೀಲ ಮತ್ತು ರಾಣಿಬೆನ್ನೂರು ಕ್ಷೇತ್ರ ಆರ್. ಶಂಕರ್ ಅವರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದ ಇವರಿಬ್ಬರಿಗೂ ಉಪಚುನಾವಣೆಯಲ್ಲಿ ಎದುರಿಸಲು ಅವಕಾಶ ಸಿಗುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಇದ್ದ ಆತಂಕ ದೂರವಾಗಿದೆ. ಆದರೆ, ರಾಣಿಬೆನ್ನೂರು ಕ್ಷೇತ್ರದ ಲೆಕ್ಕಾಚಾರ ತಲೆಕೆಳಗಾಗಿದೆ. ಅಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿತ್ತು. ಆದರೆ, ಸುಪ್ರೀಕೋರ್ಟ್ ಉಳಿದ ಅನರ್ಹ ಶಾಸಕರಿಗೆ ನೀಡಿದಂತೆ ಆರ್. ಶಂಕರ್ ಪ್ರಕರಣದಲ್ಲೂ ತೀರ್ಪು ನೀಡಿದೆ. ಆದ್ದರಿಂದ ಉಪಚುನಾವಣೆ ನಡೆಯಲಿದ್ದು, ಆರ್. ಶಂಕರ್ ಸ್ಪರ್ಧೆಗೆ ಅವಕಾಶ ನೀಡಿದೆ. ಆದ್ದರಿಂದ ಉಪಚುನಾವಣೆ ಬಗ್ಗೆ ಇದ್ದ ಗೊಂದಲ ನಿವಾರಣೆ ಯಾದಂತಾಗಿದ್ದು, ಪ್ರಚಾರದ ಅಬ್ಬರ ಇನ್ನು ಶುರುವಾಗಲಿದೆ.

ಚುನಾವಣೆ ಎದುರಿಸಬೇಕು ಶಂಕರ್:

ರಾಣಿಬೆನ್ನೂರು ಕ್ಷೇತ್ರದಿಂದ ಒಂದೂವರೆ ವರ್ಷಗಳ ಹಿಂದಷ್ಟೇ ಕೆಪಿಜೆಪಿಯಿಂದ ಗೆದ್ದಿದ್ದ ಆರ್. ಶಂಕರ್ ಅವರಿಗೆ ಈಗ ಮತ್ತೆ ಚುನಾವಣೆ ಎದುರಿಸುವ ದೊಡ್ಡ ಸವಾಲು ಎದುರಾಗಿದೆ. ಉಳಿದ ಅನರ್ಹ ಶಾಸಕರ ಪ್ರಕರಣಕ್ಕೂ, ಆರ್. ಶಂಕರ್ ಅನರ್ಹತೆ ಪ್ರಕರಣಕ್ಕೂ ವ್ಯತ್ಯಾಸವಿದ್ದುದರಿಂದ ರಾಣಿಬೆನ್ನೂರು ಕ್ಷೇತ್ರಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿತ್ತು. ಕಾಂಗ್ರೆಸ್‌ನೊಂದಿಗೆ ಕೆಪಿಜೆಪಿ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳದ್ದರಿಂದ ತಮ್ಮನ್ನು ಅನರ್ಹಗೊಳಿಸಿರುವ ಸ್ಪೀಕರ್ ಆದೇಶ ಅಸಿಂಧುಗೊಳಿಸಬೇಕು ಎಂಬುದು ಶಂಕರ್ ಅವರ ವಾದವಾಗಿತ್ತು. ಇದನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡು ತಮ್ಮ ಶಾಸಕತ್ವ ಉಳಿಯುತ್ತದೆ ಎಂದೇ ಅವರು ಭಾವಿಸಿದ್ದರು. ಆದರೆ, ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪು ಶಂಕರ್ ಅವರ ಅಭಿಮಾನಿಗಳನ್ನು ಥಂಡಾ ಹೊಡೆಸಿದೆ. ಆದರೆ, ಇದನ್ನೇ ಎದುರು ನೋಡುತ್ತಿದ್ದ ಕಾಂಗ್ರೆಸ್ ನಗು ಬೀರುವಂತಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೆ.ಬಿ. ಕೋಳಿವಾಡ ಮತ್ತು ಆರ್. ಶಂಕರ್ ನಡುವಿನ ಸೆಣಸಾಟಕ್ಕೆ ಕ್ಷೇತ್ರದ ಜನ ಸಾಕ್ಷಿಯಾಗಲಿದ್ದಾರೆ. ಆದರೆ, ಶಂಕರ್ ಅವರು ಬಿಜೆಪಿಯಿಂದ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬುದು ಗೊತ್ತಾಗಬೇಕಿದೆ.

ಬಿಸಿಪಿ ರಿಲೀಫ್: 

ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರಾಗಿ ಬಳಿಕ ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದ ಬಿ.ಸಿ. ಪಾಟೀಲರ ಸ್ಪರ್ಧೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ವಿಪ್ ಉಲ್ಲಂಘನೆ ಕಾರಣಕ್ಕಾಗಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದ ಪಾಟೀಲರಿಗೆ ಸುಪ್ರೀಂ ಕೋರ್ಟ್ ತೀರ್ಪು ಸಮಾಧಾನ ತಂದಿದೆ. ಸ್ಪೀಕರ್ ಆದೇಶವನ್ನು ನ್ಯಾಯಾಲಯ ಎತ್ತಿ ಹಿಡಿದರೆ ಎಂಬ ಆತಂಕ ಅವರನ್ನು ಕಾಡುತ್ತಿತ್ತು. ಒಂದು ವೇಳೆ ಹಾಗಾದರೆ ಸ್ಪರ್ಧೆಗೆ ಅವಕಾಶವಿಲ್ಲದೇ ರಾಜಕೀಯ ಭವಿಷ್ಯವೇ ಮಂಕಾಗುವ ಸಾಧ್ಯತೆಯಿತ್ತು. 

ಈಗ ಚುನಾವಣೆ ಸ್ಪರ್ಧೆಗೆ ಅವಕಾಶ ದೊರೆತಿರುವುದು ಹಿರೇಕೆರೂರು ಕ್ಷೇತ್ರದ ಬಿ.ಸಿ. ಪಾಟೀಲರ ಅಭಿಮಾನಿಗಳಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ಉಪಚುನಾವಣೆಗೆ ಈಗಾಗಲೇ ತಯಾರಿ ನಡೆಸಿರುವ ಪಾಟೀಲ ಅವರು ಬಿಜೆಪಿಯಿಂದ ಸ್ಪರ್ಧಿಸಿರುವುದು ಈಗಾಗಲೇ ಖಚಿತವಾಗಿದೆ. ಇದೇ ಕಾರಣಕ್ಕಾಗಿ ವಾರದ ಹಿಂದಷ್ಟೇ ಸಿಎಂ ಯಡಿಯೂರಪ್ಪ ಅವರು ಆಗಮಿಸಿ ನೂರಾರು ಕೋಟಿ ರುಪಾಯಿಗಳ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದರು. ಅಲ್ಲದೇ ಮಾಜಿ ಶಾಸಕ ಯು.ಬಿ. ಬಣಕಾರ ಅವರ ಮುನಿಸನ್ನು ಶಮನಗೊಳಿಸಿದ್ದರಿಂದ ನೇರವಾಗಿ ಪ್ರಚಾರದ ಅಖಾಡಕ್ಕೆ ಇಳಿಯಲು ಬಿ.ಸಿ. ಪಾಟೀಲರಿಗೆ ಯಾವುದೇ ತೊಂದರೆಯಿಲ್ಲ. ಡಿ. 5 ರಂದು ಮತದಾನ ನಡೆಯಲಿದ್ದು, ಪ್ರಚಾರಕ್ಕೆ ಇನ್ನು ಕೇವಲ 15 ದಿನಗಳು ಬಾಕಿ ಉಳಿದಿವೆ. ಇಷ್ಟು ವರ್ಷ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಒಡನಾಟವಿದ್ದ ಅವರು ಈಗ ಏಕಾಏಕಿಯಾಗಿ ಬಿಜೆಪಿಯವರೊಂದಿಗೆ ಹೊಂದಿಕೊಳ್ಳಬೇಕಿದೆ. ಅಲ್ಲದೇ ಮತದಾರರನ್ನು ಓಲೈಸುವ ಸವಾಲು ಕೂಡ ಇದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅನರ್ಹ ಶಾಸಕರ ಪ್ರಕರಣದ ತೀರ್ಪು ಏನಾಗುತ್ತದೋ ಎಂದು ಕಾಂಗ್ರೆಸ್‌ನವರೂ ಕಾದು ಕುಳಿತಿದ್ದರು. ಇದೇ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಿದ್ದರೂ ಪ್ರಚಾರದ ಅಬ್ಬರ ಹೆಚ್ಚಿರಲಿಲ್ಲ. ರಾಣಿಬೆನ್ನೂರಿನಲ್ಲಿ ಕೆ.ಬಿ. ಕೋಳಿವಾಡ, ಹಿರೇಕೆರೂರಿನಲ್ಲಿ ಬಿ.ಎಚ್. ಬನ್ನಿಕೋಡ ಅವರು ಅನರ್ಹ ಶಾಸಕರಿಗೆ ಪೈಪೋಟಿ ನೀಡಲು ಸಜ್ಜಾಗಿದ್ದರೂ ಬಿಜೆಪಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದನ್ನೇ ಕಾದು ಕುಳಿತಿದ್ದರು. ಇನ್ನು ಅಖಾಡ ರಂಗೇರಲಿದ್ದು, ಎಲ್ಲಾ ಪಕ್ಷಗಳ ನಾಯಕರು ಜಿಲ್ಲೆಯ ಎರಡು ಕ್ಷೇತ್ರಗಳತ್ತ ಮುಖ ಮಾಡಲಿದ್ದಾರೆ. ಚುನಾವಣೆ, ಪ್ರಚಾರ, ಆರೋಪ ಪ್ರತ್ಯಾರೇಪಗಳು ಮತ್ತೆ ತಾರಕಕ್ಕೇರಲಿವೆ. ಇಡೀ ರಾಜಕೀಯ ಪ್ರಹಸನಗಳನ್ನೆಲ್ಲ ನೋಡುತ್ತಿದ್ದ ಮತದಾರರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಡಿ. 9 ರಂದು ಗೊತ್ತಾಗಲಿದೆ. ಜಿಲ್ಲೆಯ ಎರಡು ಕ್ಷೇತ್ರಗಳಿಗೆ ಡಿ. ೫ರಂದು ನಡೆಯಲಿದೆ ಚುನಾವಣೆ, ತಲೆಕೆಳಗಾದ ರಾಣಿಬೆನ್ನೂರು ಕ್ಷೇತ್ರದ ಲೆಕ್ಕಾಚಾರ

ಬಿ.ಸಿ. ಪಾಟೀಲ್ ಬಿಜೆಪಿಗೆ

ಗುರುವಾರ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಬಿ.ಸಿ. ಪಾಟೀಲ ಅವರು ಅದೇ ದಿನ ಬಿಜೆಪಿ ಸೇರುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹಾಕಿದ್ದು, ಅಭಿಮಾನಿ ಬಂಧುಗಳು ಮತ್ತು ಕಾರ್ಯಕರ್ತರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಇಷ್ಟು ದಿನ ತಾಲೂಕಿನ ಅಭಿವೃದ್ಧಿಗೆ ನನ್ನೊಂದಿಗೆ ಕೈಜೋಡಿಸಿ ಕಷ್ಟ ಕಾಲದಲ್ಲೂ ಜೊತೆಗಿದ್ದೀರಿ. ತಾಲೂಕಿನ ಅಭಿವೃದ್ಧಿ ಕಾರ್ಯದಲ್ಲಿ ಹಿನ್ನಡೆ ಉಂಟುಮಾಡಿದ ಹಿಂದಿನ ಸರ್ಕಾರದ ವಿರುದ್ಧ ಹೋರಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವುದು ನಿಮಗೆಲ್ಲ ಗೊತ್ತಿರುವ ಸಂಗತಿ. ಈಗ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ. ಸದ್ಯದಲ್ಲೇ ನಡೆಯಲಿರುವ ಉಪಚುನಾವಣೆಯಲ್ಲಿ ಗೆಲುವು ಸಾಧಿಸಬೇಕಿದೆ. ಅದಕ್ಕಾಗಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ಬೆಳಗ್ಗೆ 10 ಗಂಟೆಗೆ ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ. ಸಂಜೆ 3 ಗಂಟೆಗೆ ಕ್ಷೇತ್ರಕ್ಕೆ ಬರುತ್ತಿದ್ದೇನೆ ಎಂದು ತಿಳಿಸಿದ್ದಾರೆ.