ಬೆಂಗಳೂರು/ ಹಾಸನ (ಅ.23): ಒಂದು ಕಡೆ ರೈತರು ಬ್ಯಾಂಕ್ ನೊಟೀಸ್‌ಗಳಿಂದ ಹೈರಾಣಾಗಿದ್ದರೆ, ಇನ್ನೊಂದು ಕಡೆ ಶೈಕ್ಷಣಿಕ ಸಾಲ ಪಡೆದ ನಿರುದ್ಯೋಗಿ ಯುವಕರ ಅವಸ್ಥೆಯೂ ಭಿನ್ನವಾಗಿಲ್ಲ. ಹಾಸನ ಜಿಲ್ಲೆಯ ಅರಸೀಕೆರೆಯ ವಿಶೇಷಚೇತನ ‘ನಿರುದ್ಯೋಗಿ’ ಯುವಕನೊಬ್ಬನಿಗೆ ಬ್ಯಾಂಕೊಂದು ಲಾಯರ್ ಮೂಲಕ ನೋಟಿಸ್ ಕಳುಹಿಸಿ ಎಚ್ಚರಿಕೆ ನೀಡಿದೆ.

ನವೀನ್ ರಾವ್ ಮಾಳ್ವೆ ಎಂಬ ವಿದ್ಯಾರ್ಥಿ ತನ್ನ ಇಂಜಿನಿಯರಿಂಗ್ ಶಿಕ್ಷಣಕ್ಕಾಗಿ ಸ್ಥಳೀಯ ಬ್ಯಾಂಕ್‌ನಿಂದ ಶೈಕ್ಷಣಿಕ ಸಾಲ ಪಡೆದಿದ್ದರು. 2 ಲಕ್ಷವಿದ್ದ ಸಾಲದ ಮೊತ್ತ, ಪದವಿ ಮುಗಿದಾಗ ಬಡ್ಡಿ ಸೇರಿ ಈಗ 2.87 ಲಕ್ಷವಾಗಿತ್ತು. ನಿಯಮದಂತೆ, ಒಂದು ವರ್ಷದ ಬಳಿಕ ನವೀನ್ ಮರುಪಾವತಿಸಲು ಆರಂಭಿಸಿದ್ದರು. ಶಿಕ್ಷಕರಾಗಿದ್ದ ಅಪ್ಪ ನಿವೃತ್ತಿ ಹೊಂದಿದ ಕಾರಣ ಮನೆಯಲ್ಲಿ ಹಣಕಾಸು ಸಮಸ್ಯೆ ಎದುರಾಗಿದೆ. ಬಳಿಕ ಕಂತು ಪಾವತಿಸಲು ನವೀನ್‌ಗೆ ಸಾಧ್ಯವಾಗಲಿಲ್ಲ. ನವೀನ್ ಅಪ್ಪ ಕೃಷ್ಣೋಜಿ ರಾವ್ ಕೂಡಾ ದಿವ್ಯಾಂಗರು..  

ಮೂರು ವರ್ಷದ ಬಳಿಕ, ಈಗ ಬಾಕಿ ಮೊತ್ತ 2,37,798 ಆಗಿದೆ. ಇನ್ನೊಂದು ಕಡೆ ಕೆಲಸಕ್ಕಾಗಿ ಅಲೆದು ಅಲೆದು ನವೀನ್ ಸುಸ್ತಾಗಿದ್ದಾರೆ. ಇಂಜಿನಿಯರಿಂಗ್ ಮುಗಿಸಿ 3 ವರ್ಷಗಳಾದರೂ ಇನ್ನೂ ಕೆಲ್ಸ ಸಿಕ್ಕಿಲ್ಲ. ಕಂಡುಕಂಡವರು, ಅಧಿಕಾರಿಗಳು, ಜನಪ್ರತಿನಿಧಿಗಳ ಬಳಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಎಂದು ನವೀನ್ ಸುವರ್ಣನ್ಯೂಸ್.ಕಾಂ ಜೊತೆ ಅಳಲು ತೋಡಿಕೊಂಡಿದ್ದಾರೆ. 

ಇದನ್ನೂ ಓದಿ | ರಾಯಬಾಗದ ವಿಕಲಚೇತನಿಗೆ ಎರಡು ವರ್ಷದಿಂದ ಮಾಸಾಶನವೇ ಇಲ್ಲ!...

ಗಾಯದ ಮೇಲೆ ಬರೆ ಎಂಬಂತೆ, ಸಾಲ ನೀಡಿರುವ ಬ್ಯಾಂಕ್ ಈಗ ಲಾಯರ್ ಮೂಲಕ ನೋಟಿಸ್ ಕಳುಹಿಸಿದೆ. 10 ದಿನದೊಳಗೆ ಒಟ್ಟು ಬಾಕಿ ಮೊತ್ತ ಪಾವತಿಸಿ, ಇಲ್ಲದಿದ್ದರೆ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ನೋಟಿಸ್ ಮೂಲಕ ಎಚ್ಚರಿಸಲಾಗಿದೆ. ಅದರ ಮೇಲೆ, ಈ ಜಾರಿ ಮಾಡಿರುವ ನೋಟಿಸ್‌ನ 300 ರೂ. ಶುಲ್ಕ ಸೇರಿದಂತೆ ಕಾನೂನು ಹೋರಾಟದ ಖರ್ಚುವೆಚ್ಚಗಳನ್ನು ಕೂಡಾ ಆ ನವೀನ್ ತನ್ನ ಜೇಬಿನಿಂದ ಪಾವತಿಸಬೇಕು ಎಂದು ಸೂಚಿಸಲಾಗಿದೆ.  

ಹುಟ್ಟಿನಿಂದ ಲೋಕೋಮೋಟರ್ ಡಿಸಾರ್ಡರ್ (ನಿಶಕ್ತ ಕಾಲುಗಳು) ಕಾಯಿಲೆಯಿಂದ ಬಳಲುತ್ತಿರುವ ನವೀನ್‌ಗೆ ಜಿಲ್ಲೆಯ ಹೊರಗೆ ಅಥವಾ ಬೆಂಗಳೂರಿಗೆ ಬಂದು ಕೆಲಸ ಮಾಡೋದು ಕಷ್ಟ. ಓಡಾಡಬೇಕಾದ್ರೆ ಯಾರಾದಾದ್ರೂ ಸಹಾಯ ಬೇಕೆ ಬೇಕು. ಹಾಸನದ ಪ್ರತಿಷ್ಠಿತ ಮಲ್ನಾಡ್ ಇಂಜಿನಿಯರಿಂಗ್‌ ಕಾಲೇಜ್ನಿಂದ ನವೀನ್ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.

ಅದಾಗ್ಯೂ ಬಹಳಷ್ಟು ಕಡೆ ಅರ್ಜಿ ಸಲ್ಲಿಸಿದ್ದೆ. ಆನ್‌ಲೈನ್,ಆಫ್‌ಲೈನ್ ಎಲ್ಲಾ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಯಾರೂ ಕೆಲ್ಸ ಕೊಡಲು ಮುಂದೆ ಬಂದಿಲ್ಲ, ಈಗ ಎಲ್ಲಿ ಬೇಕಾದ್ರೂ, ಯಾವ ಕೆಲಸ ಬೇಕಾದ್ರೂ ಮಾಡುವ ಅನಿವಾರ್ಯತೆ ಇದೆ. ಯಾವುದಾದರೂ ಸರ್ಕಾರಿ ನೌಕರಿ ಸಿಕ್ಕರೆ ಚೆನ್ನಾಗಿತ್ತು ಎಂದು ನವೀನ್ ನೋವನ್ನು ತೊಡಿಕೊಂಡರು. 

ಇದನ್ನೂ ಓದಿ | ಅಂಚೆ ಇಲಾಖೆಯಲ್ಲಿ ನೇಮಕಾತಿ: 2707 ಹುದ್ದೆಗಳಿಗೆ ಅರ್ಜಿ ಆಹ್ವಾನ...

ಮೊದಲೇ ಕೆಲ್ಸ ಇಲ್ಲ, ಕಂತು ತುಂಬೋದಿಕ್ಕೆ ಹಣ ಇಲ್ಲ, ಅದರ ಮೇಲೆ ಈ ಕೋರ್ಟ್ ಕಚೇರಿ....  ನೋಟಿಸ್ ಕಂಡು ನವೀನ್ ಕಂಗಾಲಾಗಿದ್ದಾರೆ. ಟ್ವಿಟರ್ ಮೂಲಕ  ಸಿಎಂ, ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಮಾಡಿದ್ದಾರೆ. 

ಅದಕ್ಕೆ IAS ಅಧಿಕಾರಿ ಕ್ಯಾ. ಮಣಿವಣ್ಣನ್ ಅದಕ್ಕೆ ಪ್ರತಿಕ್ರಯಿಸಿದ್ದು, ಯಾವುದಾದರೂ ಸರ್ಕಾರಿ ಯೋಜನೆಯ ಮೂಲಕ ನೆರವು ನೀಡಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದ್ದಾರೆ. ಮುಂದೇನಾಗುತ್ತೋ ಕಾದುನೋಡಬೇಕು.