ಹಾಸನ [ಅ.21]:  ಹೇಮಾವತಿ, ಯಗಚಿ ಮತ್ತು ವಾಟೆಹೊಳೆ ಜಲಾಶಯಗಳ ನಿರ್ಮಾಣಕ್ಕಾಗಿ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಜಮೀನು ಮುಂಜೂರು ಮಾಡುವಲ್ಲಿ ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿ, 17 ದಿನಗಳಾದರೂ ಕ್ರಮ ಜರುಗಿಸಿಲ್ಲ ಎಂದು ಜೆಡಿಎಸ್‌ ಹಿರಿಯ ಮುಖಂಡ, ಮಾಜಿ ಸಚಿವ ಎಚ್‌.ಡಿ. ರೇವಣ್ಣ ಕಿಡಿಕಾರಿದ್ದಾರೆ.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಮೇಲೆ ಕಾಣದ ಕೈಗಳು ಒತ್ತಡ ಹಾಕಿರುವ ಕಾರಣ ಮೊಕದ್ದಮೆ ಹೂಡುತ್ತಿಲ್ಲ. ಅ.3 ರಂದು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳು ಕ್ರಿಮಿನಲ್‌ ಮೊಕದ್ದಮೆ ಹೂಡಲು ಆದೇಶ ಮಾಡುತ್ತಾರೆ. ಇನ್ನೂ ತೆಗೆದುಕೊಂಡಿಲ್ಲ. ಕೂಡಲೇ ಕ್ರಮ ಜರುಗಿಸದಿದ್ದರೇ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶ್ರೀಹಾಸನಾಂಬ ದೇವಿ ದರ್ಶನ ಮಾಡಿದ ನಂತರ ಅಧಿಕಾರಿಗಳ ಸಭೆ ಮಾಡಿದ ನಂತರ ಜಿಲ್ಲಾಧಿಕಾರಿಗಳಿಗೆ ಕ್ರಮ ತೆಗೆದುಕೊಳ್ಳಬಾರದೆಂದು ಮೌಖಿಕವಾಗಿ ಸೂಚಿಸಲಾಗುತ್ತದೆ ಎಂದು ಹೇಳಿದ ರೇವಣ್ಣ, ಹಾಗೇ ಹೇಳಿದವರು ಯಾರೆಂಬುದನ್ನು ಬಹಿರಂಗ ಮಾಡಲಿಲ್ಲ. ಜಿಲ್ಲಾಧಿಕಾರಿಗಳೇ ಯಾರೆಂದು ಹೇಳಬೇಕು, ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರಿಗೆ ಲಿಖಿತ ದೂರು ನೀಡಲಾಗುವುದು ಎಂದರು.

ಒಟ್ಟು 1561 ಎಕರೆ ಭೂಮಿಯನ್ನು ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿ ಅನರ್ಹರಿಗೆ ನೀಡಲಾಗಿದೆ. ಆ ಪೈಕಿ 1000 ಎಕರೆ ಸಕಲೇಶಪುರ ತಾಲೂಕುವೊಂದರಲ್ಲೇ ಅಕ್ರಮವಾಗಿ ನೀಡಲಾಗಿದೆ. ಅದನ್ನು ಬಿಟ್ಟರೆ ಅರಕಲಗೂಡು ತಾಲೂಕಿನಲ್ಲಿ ಹೆಚ್ಚು ಅಕ್ರಮ ನಡೆದಿದೆ. ಸಂತ್ರಸ್ತರ ಹೆಸರಿನಲ್ಲಿ ಪ್ರಭಾವಿ ರಾಜಕಾರಣಿ, ಅಧಿಕಾರಿಗಳು ಭೂಮಿ ಪಡೆದಿದ್ದಾರೆ. ಹೀಗೆ ಭೂಮಿ ಪಡೆದು ಹೋಂಸ್ಟೇ, ಹೊಟೇಲ್‌ಗಳನ್ನು ಮಾಡಲಾಗಿದೆ ಎಂದು ಆರೋಪಿಸರು.

ಎಲ್ಲೂ ಸಲ್ಲದ ಭ್ರಷ್ಟರ ನೇಮಕ

ರಾಜ್ಯದ ಎಲ್ಲೆಲ್ಲೂ ಸಲ್ಲದ ಕಡು ಭ್ರಷ್ಟಅಧಿಕಾರಿಗಳನ್ನು ಜಿಲ್ಲೆಗೆ ವರ್ಗಾವಣೆ ಮಾಡಿ, ಸಂತ್ರಸ್ತರ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿರುವ ಕಡತಗಳನ್ನು ತಿದ್ದುವ ಕುಕೃತ್ಯ ಮಾಡಲಾಗುತ್ತಿದೆ. ಸಂತ್ರಸ್ತರಿಗೆ ಭೂಮಿ ನೀಡುವಲ್ಲಿ ಆಗಿರುವ ಅಕ್ರಮಗಳ ಬಗ್ಗೆ ವರದಿ ನೀಡಿದ ಉಪ ವಿಭಾಗಾಧಿಕಾರಿ ಡಾ.ಎಚ್‌.ಎಲ್‌. ನಾಗರಾಜ್‌, ಸಕಲೇಶಪುರ ತಹಸೀಲ್ದಾರ್‌ ರಕ್ಷಿತ್‌ ಮತ್ತು ಅರಕಲಗೂಡು ತಹಸೀಲ್ದಾರ್‌ ಶಿವರಾಜ್‌ ಅವರನ್ನು ತಕ್ಷಣೆ ವರ್ಗಾವಣೆ ಮಾಡಲಾಗಿದೆ ಎಂದು ಟೀಕಿಸಿದರು.

ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವ

ಮಾರುಕಟ್ಟೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿಗೆ ಬೆಲೆ ನಿಗದಿ ಪಡಿಸುವಂತೆ ಅಧಿಕಾರಿಗಳಿಂದ ಹಣ ಪಡೆದು ಹಾಸನಕ್ಕೆ ವರ್ಗಾವಣೆ ಮಾಡಲಾಗುತ್ತಿದೆ. ಈಗ ಸರ್ಕಾರಿ ದಾಖಲೆ ನಾಶ ಪಡಿಸಲು ತಹಶೀಲ್ದಾರ್‌ ಮಂಜುನಾಥ್‌ ಎಂಬುವರನ್ನು ಸರ್ಕಾರ ನೇಮಿಸಿದೆ. ಆತ ಅನೇಕ ಬಾರಿ ಸೇವೆಯಿಂದ ಅಮಾನತುಗೊಂಡಿದ್ದ. ಇಂತಹವರೆಗೆ ಜಿಲ್ಲೆಗೆ ನೇಮಕ ಮಾಡುವ ಮೂಲಕ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುವಂತೆ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.