ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ವಿದ್ಯಾರ್ಥಿ ಭೂಮಿಕ್ ಅಂತ್ಯಕ್ರಿಯೆ ವೇಳೆ ಮುದ್ದಿನ ಸಾಕು ನಾಯಿ ಮುದ್ದಾಡಿದ ದೃಶ್ಯ ಮನಕಲುಕುವಂತಿದೆ. ಕೊನೆಯ ಬಾರಿಗೆ ಮಾಲೀಕನ ಮುದ್ದಾಡಿದ ಶ್ವಾನ ಮೂಕವೇದನೆ, ಪೋಷಕರ ಆಕ್ರಂದನ ಎಲ್ಲರ ಕಣ್ಣಾಲಿ ತೇವಗೊಳಿಸಿದೆ.
ಹಾಸನ(ಜೂ.05) ಆರ್‌ಸಿಬಿ ವಿಜಯೋತ್ಸವ ದುರಂತವಾಗಿ ಪರಿಣಮಿಸಿದೆ. ಟ್ರೋಫಿ ಗೆಲುವಿನ ಸಂಭ್ರಮಾಚರಣೆಯಿಂದ ಚಿನ್ನಸ್ವಾಮಿಯಲ್ಲಿ ಭಾರಿ ಕಾಲ್ತುಳಿತಕ್ಕೆ ಕಾರಣವಾಗಿತ್ತು. ಇದರ ಪರಿಣಾಮ 11 ಆರ್‌ಸಿಬಿ ಅಭಿಮಾನಿಗಳು ಮೃತಪಟ್ಟಿದ್ದಾರೆ. 56 ಅಭಿಮಾನಿಗಳು ಗಾಯಗೊಂಡಿದ್ದಾರೆ. ಮಕ್ಕಳು, ವಿದ್ಯಾರ್ಥಿಗಳು ಯುವಕರು ಸೇರಿ 11 ಮಂದಿ ಮೃತಪಟ್ಟ ಘಟನೆ ಆಘಾತ ತಂದಿದೆ. ಈ ಘಟನೆಯಲ್ಲಿ ಮೃತಪಟ್ಟ ಹಾಸನ ಜಿಲ್ಲೆಯ ಬೇಲೂರಿನ 20 ವರ್ಷದ ಭೂಮಿಕ್ ಅಂತ್ಯಸಂಸ್ಕಾರ ನಡೆದಿದೆ. ಈ ವೇಳೆ ಕೊನೆಯದಾಗಿ ಮನೆಯ ಮುದ್ದಿನ ನಾಯಿ ಭೂಮಿಕ್ ಮೃತದೇಹ ಮುದ್ದಾಡಿದ ಘಟನೆ ನಡೆದಿದೆ. ಈ ದೃಶ್ಯ ಮನಕಲುಕುವಂತಿದೆ.
ಭೂಮಿಕ್ ಮುದ್ದಾಡಿದ ನಾಯಿ
ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಭೂಮಿಕ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಜರಾಗಿದ್ದ. ಆದರೆ ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಭೂಮಿಕ್ ಮೃತಪಟ್ಟಿದ್ದ. ಘಟನೆ ನಡೆದ ಸಮಯದಿಂದ ಕಣ್ಣೀರಿಡುತ್ತಿರುವ ಪೋಷಕರು ಅಂತ್ಯಕ್ರಿಯೆ ವೇಳೆ ಅಸ್ವಸ್ಥರಾಗಿದ್ದರು. ಮುದ್ದಿನಿಂದ ಸಾಕಿದ ಸಾಕು ನಾಯಿ ಕೊನೆಯದಾಗಿ ಭೂಮಿಕ್ ದರ್ಶನ ಪಡೆದಿದೆ. ಅಂತ್ಯಕ್ರಿಯೆ ವೇಳೆ ಮುದ್ದಿನ ನಾಯಿಯನ್ನು ಕರೆದುಕೊಂಡು ಬರಲಾಗಿತ್ತು. ಶವವಾಗಿ ಮಲಗಿದ್ದ ಭೂಮಿಕ್‌ನ ನೋಡಿದ ನಾಯಿ ಮುದ್ದಾಡಿದೆ.
ಭೂಮಿಕ್‌ಗೆ ನಾಯಿ ಎಂದರೆ ಪಂಚ ಪ್ರಾಣ. ಮುದ್ದಿನಿಂದ ಭೂಮಿಕ್ ಸಿವಿ, ಚಿಂಟು, ಜೆರಿ ಎಂಬ ನಾಯಿಗಳನ್ನು ಸಾಕಿದ್ದ. ಪ್ರತಿ ದಿನ ಇದರ ಆರೈಕೆ ಮಾಡುತ್ತಿದ್ದ. ಭೂಮಿಕ್ ಅಂದರೆ ನಾಯಿಗಳಿಗೂ ಪಂಚಪ್ರಾಣ, ಭೂಮಿಕೆ ಹೇಳಿದ ಗೆರೆಯನ್ನು ಈ ಶ್ವಾನಗಳು ದಾಟುತ್ತಿರಲಿಲ್ಲ. ಇದೀಗ ಮುದ್ದಿನಿಂದ ಸಾಕಿದ ಮಾಲೀಕ ಶವವಾಗಿ ಮಲಗಿರುವುದು ನೋಡಿ ಮರುಗಿದೆ.
ಹುಟ್ಟೂರಿನಲ್ಲಿ ಅಂತ್ಯಕ್ರಿಯೆ
ಬೇಲೂರು ತಾಲ್ಲೂಕಿನ ಕುಪ್ಪಗೋಡು ಗ್ರಾಮದಲ್ಲಿ ನಡೆದ ಭೂಮಿಕ್ ಅಂತ್ಯಕ್ರಿಯೆ ನಡೆದಿದೆ. ಮನೆ ಪಕ್ಕದಲ್ಲಿರುವ ಕಾಫಿ ತೋಟದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಮಗನ ಅಂತ್ಯಕ್ರಿಯೆ ವೇಳೆ ಪೋಷಕರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಕಡೆ ಕ್ಷಣ ಮಗನ ಮುಖ ನೋಡಿ ಪೋಷಕರು ಗೋಳಾಡಿದ್ದಾರೆ.
11 ಕುಟುಂಬದ ಶಾಪ ಸರ್ಕಾರಕ್ಕೆ ತಟ್ಟುತ್ತೆ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ. 11 ಕುಟುಂಬ ಕಣ್ಣೀರಿಡುತ್ತಿದೆ. ಮಗನ ಕಳೆದುಕೊಂಡು ಮಾತನಾಡಿದ ಭೂಮಿಕ್ ತಂದೆ ಲಕ್ಷ್ಮಣ್ ಸರ್ಕಾರದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 11 ಕುಟುಂಬಗಳ ಶಾಪ ನಿಮಗೆ ತಟ್ಟುತ್ತೆ ಎಂದು
11 ಕುಟುಂಬಗಳ ಶಾಪ ನಿಮಗೆ ತಟ್ಟೆ ತಟ್ಟುತ್ತೆ ಎಂದು ಲಕ್ಷ್ಮಣ್ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರವೇ ಅಮಾಯಕರ ಜೀವ ತೆಗೆದಿದೆ. ಯಾವುದೇ ತಯಾರಿ ಮಾಡಿಕೊಂಡಿಲ್ಲ. ನಿರ್ಲಕ್ಷವಹಿಸಿದ್ದೇ ಈ ಘಟನೆಗೆ ಕಾರಣ. ನಿಮ್ಮ ಮನಗೆ ಈ ಪರಿಸ್ಥಿತಿ ಬಂದರೆ ನೋವು ಅರ್ಥವಾಗುತ್ತೆ. 11 ಕುಟುಂಬಗಳ ನಮ್ಮ ನೋವು ಕಣ್ಣೀರ ಶಾಪ ತಟ್ಟದೇ ಬಿಡಲ್ಲ ಎಂದು ಭೂಮಿಕ್ ತಂದೆ ಸರ್ಕಾರದ ವಿರುದ್ದ ಅಕ್ರೋಶ ಹೊರಹಾಕಿದ್ದಾರೆ.
