ಹೊಳೆನರಸೀಪುರ [ನ.01]  : ಇಲ್ಲಿನ ಪುರಸಭೆ 4 ನೇ ವಾರ್ಡ್‌ನಿಂದ ಆಯ್ಕೆಯಾಗಿದ್ದ ಸುದರ್ಶನ್ ಅವರ ನಿಧನದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ನ.12 ರಂದು ಉಪಚುನಾವಣೆ ನಡೆಯಲಿದ್ದು, ಈ ಸ್ಥಾನಕ್ಕೆ ಆಕಾಂಕ್ಷಿಗಳಾಗಿ ಈಗಾಗಲೇ ಐವರು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.

ಉಪ-ಚುನಾವಣೆ ಪ್ರಕ್ರಿಯೆಯ ಚುನಾವಣಾಧಿ ಕಾರಿ ಕೆ.ಆರ್. ಶ್ರೀನಿವಾಸ್ ಹಾಗೂ ಸಹಾಯಕ ಚುನಾವಣಾಧಿಕಾರಿ ಸಿದ್ಲಿಂಗು ಅವರು ಕಾರ್ಯನಿರ್ವಹಿಸಿ ದರು. ಅ.26  ರಿಂದ ನಾಮಪತ್ರ ಸ್ವೀಕರಿಸಲಾಯಿತು. ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಗುರುವಾರ ಅಂತಿಮವಾಗಿ ಐವರು ಅಭ್ಯರ್ಥಿಗಳು ಆರು ನಾಮಪತ್ರ ಸಲ್ಲಿಸಿದ್ದಾರೆ.

ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಮಧು, ಬಿಜೆಪಿಯಿಂದ ನಗರ ಘಟಕದ ಅಧ್ಯಕ್ಷ ಎಚ್. ಜೆ.ನಾಗರಾಜೇಗೌಡ, ಕಾಂಗ್ರೆಸ್‌ನಿಂದ ಎಚ್.ಡಿ.ರವಿ, ಪಕ್ಷೇತರ ಅಭ್ಯರ್ಥಿಗಳಾಗಿ ರಾಮಣ್ಣ ಮತ್ತು ಮಂಜುನಾಥ ಎಂಬುವವರು ನಾಮಪತ್ರ ಸಲ್ಲಿಸಿದ್ದಾರೆ. ನ. 2 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.4  ರಂದು ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ ಮತ್ತು ನ. 12 ರಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾನ ನಡೆಯಲಿದೆ ಎಂದು ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್ ಮಾಹಿತಿ ನೀಡಿದರು.

ಇಲ್ಲಿನ ಪುರಸಭೆಯ 23 ಸ್ಥಾನಗಳಿಗೆ ಈಗಾಗಲೇ ಚುನಾವಣೆ ನಡೆದು ಎಲ್ಲ ಸ್ಥಾನಗಳಲ್ಲಿಯೂ ಜೆಡಿಎಸ್‌ನ ಸದಸ್ಯರೇ ಆಯ್ಕೆಯಾಗಿ ಒಂದು ವರ್ಷವೇ ಕಳೆದರೂ ಇದುವರೆಗೂ ಇನ್ನೂ ಅಧ್ಯಕ್ಷರ ಆಯ್ಕೆ ನಡೆಯದೇ ಇರುವ ನಡುವೆಯೇ 4 ನೇ ವಾರ್ಡ್‌ನ ಸದಸ್ಯ ಸುದರ್ಶನ್ ಅಕಾಲಿಕ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಇದೀಗ ಮತ್ತೊಮ್ಮೆ ಚುನಾವಣೆ ನಡೆಯಲಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ ಚುನಾವಣೆಯಲ್ಲಿ ಇದೇ ಸುದರ್ಶನ್ ವಿರುದ್ಧ ಅತ್ಯಲ್ಪ ಮತಗಳಿಂದ ಪರಾಭವಗೊಂಡಿದ್ದ ಬಿಜೆಪಿ ನಗರ ಘಟಕದ ಅಧ್ಯಕ್ಷ ಎಚ್. ಜೆ.ನಾಗರಾಜೇಗೌಡ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಗುರುವಾರ ತಮ್ಮ ನಾಮಪತ್ರವನ್ನು ಜಿಲ್ಲೆ ಹಾಗೂ ತಾಲೂಕಿನ ವಿವಿಧ ಮುಖಂಡರ ಜೊತೆಗೂಡಿ ಆಗಮಿಸಿ ಸಲ್ಲಿಸಿದರು. 

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ನವಿಲೆ ಅಣ್ಣಪ್ಪ, ವಕೀಲ ಕೆ.ಆರ್.ಸುದರ್ಶನ್, ಮಾಯಣ್ಣ, ಮೈಲಾರಯ್ಯ, ಡಿ.ಆರ್ ಶಿವಣ್ಣ, ಎಂ.ಎನ್ ರಾಜು, ದೀಪಕ್, ಪಟೇಲ್, ರಂಗಣ್ಣ, ರೋಹಿತ್, ಸುರೇಶ, ಮೋಹನ ಇತರರು ಇದ್ದರು.