ಜಮೀನಿಲ್ಲದೇ ನನ್ನ ಜೀವನ ಸಾಗಿಸುವುದು ಅಸಾಧ್ಯವಾಗಿದ್ದು, ನನಗೆ ದಯಾಮರಣ ನೀಡಬೇಕು ಎಂದು ರೈತರೋರ್ವರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. 

ಬೇಲೂರು [ನ.02]: ತಾಲೂಕಿನ ರಾಜನಶಿರಿಯೂರು ಗ್ರಾಮದ ಜಯಶಂಕರ್ ಎಂಬವರು ರಾಜ್ಯಪಾಲರಿಗೆ ದಯಾಮರಣಕ್ಕೆ ಪತ್ರ ಬರೆದು ಅದನ್ನು ಪಟ್ಟಣದ ತಾಲೂಕು ಕಚೇರಿ ಮುಂದೆ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ಈ ಬಗ್ಗೆ ಜಯಶಂಕರ್ ಮಾತನಾಡಿ, ಯಗಚಿ ಮುಳುಗಡೆ ಸಂತ್ರಸ್ತರಿಗೆ ಸರ್ಕಾರ ನೀಡಿದ ಜಮೀನನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಸ್ವಾಧೀನಕ್ಕೆ ನೀಡದೆ, ನನ್ನನ್ನು ಹೆದರಿಸಿ ಬಂದೂಕು ದೊಣ್ಣೆಗಳನ್ನು ತೋರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಮೀನಿಗೆ ಹೋಗದಂತೆ ತಡೆಯುತ್ತಿದ್ದಾರೆ. ನಾನು ಅಸಹಾಯಕ ನಾಗಿ ಸಂಬಂಧ ಪಟ್ಟ ಕಂದಾಯ ಮತ್ತು ಪೊಲೀಸ್ ಇಲಾಖೆಗಳಿಗೆ ಹತ್ತಾರು ಬಾರಿ ಲಿಖಿತ ರೂಪದಲ್ಲಿ ಮನವಿ ಅರ್ಜಿ ನೀಡಿದರೂ ಯಾವ ಪ್ರಯೋಜವಾಗಿಲ್ಲಎಂದು ದೂರಿದರು. ನಮಗೆ ಭೂಮಿ ಇಲ್ಲದೆ ಬದುಕು ಸಾಗಿಸುವುದು ಕಷ್ಟಕರವಾಗಿದ್ದ ಕಾರಣ ದಿಂದಲೇ ನಾನು ರಾಜ್ಯಪಾಲರಿಗೆ ದಯಾಮರಣಕ್ಕೆ ಕೋರಿ ಪತ್ರ ಬರೆಯಲಾಗಿದೆ ಎಂದರು.

ಯಗಚಿ ಜಲಾಶಯಕ್ಕೆ ಕೇಳಹಳ್ಳಿ ಗ್ರಾಮದ ಭೂಮಿ ಮುಳುಗಡೆಯಾದ ವೇಳೆ ನಮ್ಮ ತಂದೆ ಇಲ್ಲದ ನಿಟ್ಟಿನಲ್ಲಿ ರಾಜನಶಿರಿಯೂರು ಗ್ರಾಮದಲ್ಲಿ ವಾಸ ಮಾಡುತ್ತಿರುವ ಬಗ್ಗೆ ಹೇಳಿದರು. 

ಸರ್ಕಾರ ನಮ್ಮ ಭೂಮಿ ಮುಳುಗಡೆಯಾದ ಸಂದರ್ಭದಲ್ಲಿ ಪರ್ಯಾಯವಾಗಿ ನಮಗೆ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ಹೆಗ್ಗಡಿಹಳ್ಳಿ ಗ್ರಾಮದಲ್ಲಿ ಮುಳುಗಡೆಗೆ ಸೀಮಿತವಾದ ಸರ್ವೇ 1ರಲ್ಲಿ 4 ಎಕರೆ ಭೂಮಿ ನೀಡಿದೆ, ಈ ೪ ಎಕ್ಕರೆಗೆ ಭೂಮಿಗೆ ಸಂಬಂಧ ಪಟ್ಟ ಪಹಣಿ, ಖಾತೆ, ಪಟ್ಟೆಪುಸ್ತಕ ಸೇರಿದಂತೆ ಹತ್ತಾರು ದಾಖಲೆಗಳಿವೆ, ವಿಶೇಷವಾಗಿ ಈ ಭೂಮಿಯ ದಾಖಲೆಗಳೊಂದಿಗೆ ನಾನು ಈಗಾಗಲೇ ಬ್ಯಾಂಕ್‌ನಿಂದ ಸಾಲ ಪಡೆದಿರುತ್ತೇನೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಷ್ಟಾದರೂ ಅರೇಹಳ್ಳಿ ಹೋಬಳಿ ಹೆಗ್ಗಡಿಹಳ್ಳಿ ಗ್ರಾಮದ ನಮಗೆ ಸೇರಿದ ಭೂಮಿಯನ್ನು ಪಕ್ಕದ ಜಮೀನು ಮಾಲೀಕ ಕೆ.ಎಂ.ಗಣೇಶ್ ಒತ್ತುವರಿ ಮಾಡಿಕೊಂಡು ನಮಗೆ ಸ್ವಾಧೀನಕ್ಕೆ ನೀಡುತ್ತಿಲ್ಲ, ಈ ಬಗ್ಗೆ ಕೇಳಿದರೆ ನನ್ನನ್ನು ಹೆದರಿಸಿ ಬಂದೂಕು ದೊಣ್ಣೆ ತೋರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಮೀನಿಗೆ ಹೋಗದಂತೆ ತಡೆಯುತ್ತಿದ್ದಾರೆ ಎಂದು ಆರೋಪಿಸಿದರು. ನಮಗೆ ನ್ಯಾಯ ಬೇಕು ಇಲ್ಲವಾದರೆನಾನು ಯಗಚಿ ಜಲಾಶಯದ ಮುಂದೆ ಉಪವಾಸ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.