Asianet Suvarna News Asianet Suvarna News

ಹಾಸನ ವಿಭಾಗದಲ್ಲಿದೆ ಒಂದು ಅಪರೂಪದ ಬಸ್; ಪ್ರಯಾಣಿಕರಿಗೆ ಕನ್ನಡ ಪಾಠ!

ಕನ್ನಡದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿರುವ ಅಪರೂಪದ ಚಾಲಕ | ಪ್ರಯಾಣಿಕರಿಗೆ ಕನ್ನಡನಾಡು ನುಡಿ ಕುರಿತ ಅಪರೂಪದ ಮಾಹಿತಿ ನೀಡುವ ಚಾಲಕ ಬಾಬು | ಹಾಸನ ಡಿಪೋದಲ್ಲಿ ಕನ್ನಡ ಪ್ರಭ 

A Bus which promotes Kannada on its body in Hassana Depot
Author
Bengaluru, First Published Nov 6, 2019, 4:49 PM IST

ಹಾಸನ (ನ. 06): ಕನ್ನಡ ನಾಡುನುಡಿಯ ಸಮಗ್ರ ಮಾಹಿತಿ ಪರಿಚಯಿಸಿ ಪರಿಸರ ಸಂರಕ್ಷಣೆ ಜಾಗೃತಿ ಕೆಲಸವನ್ನು ಕೆಎಸ್‌ಆರ್‌ಟಿಸಿ ಸಂಸ್ಥೆಯ ಹಾಸನ ವಿಭಾಗದ ರಾಮನಾಥಪುರ ಘಟಕದ ಚಾಲಕ ಬಾಬು ಮಾಡುತ್ತಿದ್ದಾರೆ. ತಮ್ಮ ಸಹೋದ್ಯೋಗಿ ನಿರ್ವಾಹಕರೊಂದಿಗೆ ಕಳೆದ 12 ವರ್ಷಗಳಿಂದ ನಿರಂತರವಾಗಿಈ ಕೆಲಸ ಮಾಡುತ್ತಾ ಬಂದಿದ್ದು, ಪ್ರಯಾಣಿಕರು ಹಾಗೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮೂಲತಃ ಸಂಗೀತ ಗ್ರಾಮ ಖ್ಯಾತಿ ರುದ್ರಪಟ್ಟಣದ ಗ್ರಾಮದ ಬಾಬು 1992 ರಲ್ಲಿ ಸಾರಿಗೆ ಸಂಸ್ಥೆಯ ಚಾಲಕ ವೃತ್ತಿಯನ್ನು ಹಾಸನದಲ್ಲಿ ಮೊದಲು ಆರಂಭಿಸಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ರಾಮನಾಥಪುರ ಘಟಕಕ್ಕೆ ವರ್ಗಾವಣೆಯಾಗಿ ಬಂದು ಕಳೆದ 19 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಯಾಣಿಕರಿಗೆ ಕನ್ನಡ ನಾಡುನುಡಿಯ ಪರಿಚಯ ಹಾಗೂ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ತಾವು ಕರ್ತವ್ಯ ನಿರ್ವಹಿಸುವ ಸಾರಿಗೆ ವಾಹನಗಳನ್ನು ವಿಭಿನ್ನವಾಗಿ ಅಲಂಕರಿಸಿ ಮಾಹಿತಿ ನೀಡುತ್ತಿದ್ದಾರೆ.

ದಶಕಕ್ಕೂ ಹೆಚ್ಚು ಕಾಲದಿಂದ ಹಾಸನ- ಮೈಸೂರು ಜಿಲ್ಲೆಗಳ ನಡುವಿನ ಮಾರ್ಗಗಳಾದ ರಾಮನಾಥಪುರ- ರುದ್ರಪಟ್ಟಣ- ಮೈಸೂರು- ಹಾಸನ- ಕೇರಳಾಪುರ- ಬೆಟ್ಟದಪುರ- ಬೆಕ್ಕರೆ- ಭುವನಹಳ್ಳಿ-ಪಿರಿಯಾಪಟ್ಟಣ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಎರಡು ದಿನಕ್ಕೊಮ್ಮೆ ಪಿರಿಯಾಪಟ್ಟಣದಲ್ಲಿ ತಂಗುವ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತ ಪ್ರಯಾಣಿಕರಿಂದ ಉತ್ತಮ ಚಾಲಕನೆಂಬ ಹೆಸರು ಗಳಿಸಿದ್ದಾರೆ. ಇವರು ಸಂಚರಿಸುವ ಮಾರ್ಗಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಇವರ ಬಸ್‌ಗಾಗಿ ಕಾಯುವುದು ವಿಶೇಷ.

ಕೇವಲ ನವೆಂಬರ್‌ನಲ್ಲಿ ಮಾತ್ರ ಬಾಯಿ ಮಾತಲ್ಲಿ ಕನ್ನಡತನ ಪ್ರದರ್ಶಿಸುವವರು ಹಾಗೂ ಪರಿಸರ ಸಂರಕ್ಷಣೆ ಕುರಿತು ಮಾತನಾಡುವವರು ಮಧ್ಯೆ ವರ್ಷಪೂರ್ತಿ ಕನ್ನಡ ನಾಡು ನುಡಿಯ ಬಗ್ಗೆ ಗೌರವವಿಟ್ಟು ಇತರರಿಗೂ ಕನ್ನಡ ಭಾಷಾಭಿಮಾನ ಬೆಳೆಸಿ, ಗಿಡ ಮರಗಳನ್ನು ಸಂರಕ್ಷಿಸುವ ಅರಿವು ಮೂಡಿಸುತ್ತಿರುವ ಚಾಲಕ ಬಾಬು ಅಂತಹವರು ಸಿಗುವುದು ಬೆರಳೆಣಿಕೆಯಷ್ಟೇ, ತಮ್ಮ ವೇತನದ ಸ್ವಲ್ಪ ಭಾಗವನ್ನು ಪ್ರತಿ ತಿಂಗಳು ಕನ್ನಡಾಂಬೆಯ ಸೇವೆಗೆ ಮೀಸಲಿರಿಸಿ ತಮ್ಮ ಸಹೋದ್ಯೋಗಿ ನಿರ್ವಾಹಕರ ಸಹಾಯದೊಂದಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.

ನಿರ್ವಾಹಕರ ಸಾಥ್: ಬಾಬು ಅವರೊಂದಿಗೆ ಕರ್ತವ್ಯ ನಿರ್ವಹಿಸಿರುವ ನಿರ್ವಾಹಕರಾದ ರಮೇಶ್ ಜೈನ್, ನಟ ನಾಯಕ, ಗೋವಿಂದ, ಯತೀಶ್ ಅವರು ಸಹ ಅವರೊಂದಿಗೆ ಕೈಜೋಡಿಸಿ ತಮ್ಮ ಕೈಲಾದ ಸಹಾಯ ಮಾಡಿ ಕನ್ನಡ ತಾಯಿಯ ಸೇವೆ ಸಲ್ಲಿಸುತ್ತಿದ್ದಾರೆ. ಇವರೊಂದಿಗೆ ಒಟ್ಟಿಗೆ ಕರ್ತವ್ಯ ನಿರ್ವಹಿಸುವುದೇ ನಮ್ಮ ಸೇವಾವಧಿಯ ಅಮೂಲ್ಯ ಕ್ಷಣಗಳು ಎಂಬುದು ಹಲವು ನಿರ್ವಾಹಕರ ಮಾತಾಗಿದೆ.

ಭಾವ ಚಿತ್ರದೊಂದಿಗಿನ ಮಾಹಿತಿ ದರ್ಶನ: ತಮ್ಮ ವಾಹನದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತರು, ಸ್ವಾತಂತ್ರ್ಯ ಹೋರಾಟಗಾರರು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗಿನ ಅಧ್ಯಕ್ಷರುಗಳು, ನೃಪತುಂಗ ಪ್ರಶಸ್ತಿ ವಿಜೇತರು, ಸಾಹಿತಿಗಳು, ವಚನಕಾರರು, ದಾರ್ಶನಿಕರು, ಹಳಗನ್ನಡ ಕವಿಗಳು, ಹಾಸನ ಮೈಸೂರು ಸೇರಿದಂತೆ ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳ ಚಿತ್ರ ಸಹಿತ ಮಾಹಿತಿ ಫಲಕಗಳನ್ನು ಅಳವಡಿಸುವುದರ ಜೊತೆಗೆ ಕನ್ನಡ ನಾಡು-ನುಡಿ, ಪರಿಸರ ಸಂರಕ್ಷಣೆ ಕುರಿತ ಪದಗಳ ದರ್ಶನ ಮಾಡಬಹುದು. ಪ್ರತಿ ವರ್ಷ ನ. 1 ರಂದು ಕನ್ನಡ ರಾಜ್ಯೋತ್ಸವ ಅಂಗವಾಗಿ ವಿಶೇಷ ಮಾಹಿತಿಯನ್ನು ಪ್ರಯಾಣಿಕರಿಗೆ ನೀಡುವುದು ಮತ್ತೊಂದು ವಿಶೇಷವಾಗಿದೆ.

- ಬೆಕ್ಕರೆ ಸತೀಶ್ ಆರಾಧ್ಯ 

 

Follow Us:
Download App:
  • android
  • ios