ಬೆಂಗಳೂರು (ಜು. 17):  ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಡ್ರೋನ್  ಆಧಾರಿತ ಭೂಮಿ ಮತ್ತು ಆಸ್ತಿ ಸರ್ವೆ ಕಾರ್ಯಕ್ಕೆ ರಾಮನಗರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.

ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಿಗದಿತ ಕಾಲ ಮಿತಿಯಲ್ಲಿ ಪರಿಪೂರ್ಣ ಭೂ ದಾಖಲೆಗಳನ್ನು ಒದಗಿಸುವ ದೂರದರ್ಶಿತ್ವದ ಕನಸಿನಂತೆ ಭೂಮಿ, ಆಸ್ತಿಗಳ ಸರ್ವೆ ನಡೆಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಸರ್ವೆ ಆಫ್ ಇಂಡಿಯಾ ಸಹಭಾಗಿತ್ವದೊಂದಿಗೆ ರಾಜ್ಯ ಸರ್ಕಾರ ಡ್ರೋನ್ ಆಧಾರಿತ ಸರ್ವೇ ಕಾರ್ಯ ಕೈಗೆತ್ತಿಕೊಂಡಿದೆ ಎಂದು ತಿಳಿಸಿದರು. ರಾಮನಗರ ಟೌನ್ ಮತ್ತು ಅದಕ್ಕೆ ಹೊಂದಿಕೊಂಡಿರುವ ಕೃಷಿ ಭೂಮಿ ಗಳನ್ನು ಪ್ರಾಯೋಗಿಕ ಅಳತೆ ಕಾರ್ಯಕ್ಕೆ  ಒಳಪಡಿಸಲಾಗುವುದು. 

ಕರ್ನಾಟಕದ ಎರಡೂವರೆ ಕೋಟಿ ವ್ಯವಸಾಯದ ಜಮೀನು ಮತ್ತು ನಗರ ಪ್ರದೇಶಗಳ 50 ಲಕ್ಷ ಆಸ್ತಿಗಳನ್ನು ಮುಂದಿನ  ಎರಡು ವರ್ಷದಲ್ಲಿ ಅಳತೆ ಮಾಡುವ ಕಾರ್ಯ ಪೂರ್ಣವಾಗಲಿದೆ ಎಂದರು. ಈ ಮೂಲಕ ಪ್ರತಿಯೊಂದು ಭೂಮಿ ಮತ್ತು ಆಸ್ತಿಗಳ  ಮಾಲೀಕತ್ವದ ಶಾಸನಬದ್ಧ ದಾಖಲೆಗಳನ್ನು ಪ್ರತಿಯೊಬ್ಬ ಸಾರ್ವಜನಿಕರಿಗೂ ನೀಡಲು ಸಹಕಾರಿಯಾಗಲಿದೆ. ಈಗ ಕೈಗೊಳ್ಳುತ್ತಿರುವ ಪ್ರಾಯೋಗಿಕ ಅಳತೆ ಕಾರ್ಯ ಡ್ರೋನ್ ಆಧಾರಿತ ಪದ್ಧತಿಯ ಲಭ್ಯವಾಗಬಹುದಾದ ನಿಖರತೆಯನ್ನು  ಗುರುತಿಸಿ ಪರಿಕಲ್ಪನೆಯ ಪುರಾವೆಯ ಕ್ರಿಯಾತ್ಮಕ ಮಾದರಿಯನ್ನು ಸಿದ್ಧಪಡಿಸುವುದಾಗಿದೆ. ಆನಂತರ ಈ ಮಾದರಿಯನ್ನು ರಾಜ್ಯಕ್ಕೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದರು.

ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ  ಇಲಾಖೆ ಆಯುಕ್ತ ಮನೀಷ್ ಮೌದ್ಗಿಲ್ ಮಾತನಾಡಿ, ಸಾಂಪ್ರದಾಯಿಕ ಪದ್ಧತಿಯಲ್ಲಿ ದಶಕಗಳ ಕಾಲ ತೆಗೆದುಕೊಳ್ಳುವ ಅಳತೆ ಕಾರ್ಯ ಡ್ರೋನ್ ಅಳತೆಯ ಮೂಲಕ 1 ರಿಂದ 2 ವರ್ಷಗಳಲ್ಲಿ ಪೂರ್ಣಗೊಳಿಸಬಹುದಾಗಿದೆ. ಅಳತೆ ಕಾರ್ಯ ವಸ್ತು ನಿಷ್ಠವಾಗಿದ್ದು, ಸಾಂಪ್ರದಾಯಿಕ ಅಳತೆ ಪದ್ಧತಿಯಲ್ಲಿ ನುಸುಳಬಹುದಾದ ದೋಷ, ಮಾನವ ಕುತಂತ್ರ ಅಥವಾ ಪಕ್ಷಪಾತಕ್ಕೆ ಅವಕಾಶವಿರುವುದಿಲ್ಲ. ಪ್ರತಿ ಆಸ್ತಿಯ ಹೆಚ್ಚು ನಿಖರವಾದ ವಸ್ತುನಿಷ್ಠ ಮತ್ತು ಪ್ರಸ್ತುತ ಕಾಲೋಚಿತಗೊಂಡ ನಕ್ಷೆಗಳನ್ನು ಹತ್ತನೇ ಒಂದು ಭಾಗದ ಅವಧಿಯಲ್ಲಿ ಸಿದ್ಧಪಡಿಸಬಹುದಾಗಿದೆ. ಸಾಂಪ್ರದಾಯಿಕ ಅಳತೆ  ಪದ್ಧತಿಗಿಂತಲೂ ಡ್ರೋನ್ ಆಧಾರಿತ ಅಳತೆಯು ಕಡಿಮೆ ವೆಚ್ಚದಲ್ಲಿ ಪೂರ್ಣಗೊಳಿಸಬಹುದಾಗಿದೆ ಎಂದು ಹೇಳಿದರು.

ಉಪಯೋಗವೇನು?
- ಭೂಮಾಪಕರ  ವಿವೇಚನೆಗೆ ಇಲ್ಲಿ  ಅವಕಾಶವಿಲ್ಲ
- ಅಳತೆ ಕಾರ್ಯದಲ್ಲಿ ದೋಷ, ಪಕ್ಷಪಾತಕ್ಕೆ ಬ್ರೇಕ್
-ಎರಡು ತಿಂಗಳ ಕೆಲಸ ವನ್ನು 2 ದಿನಗಳಲ್ಲಿ ಮುಗಿಸಬಹುದು
- ಗಣನೀಯ ಪ್ರಮಾಣದಲ್ಲಿ ವೆಚ್ಚದ ಇಳಿಕೆ