-ಡಿಎಂಕೆ ನಾಯಕ ಎಂ.ಕರುಣಾನಿಧಿ ಆರೋಗ್ಯ ಗಂಭೀರ-ಅಘೋಷಿತ ಬಂದ್, ಸಂಚಾರ ಸ್ಥಗಿತ, ಜನರ ಪರದಾಟ, ಬಿಗಿಭದ್ರತೆ
ಚೆನ್ನೈ (ಆ. 08): ಕಳೆದ ಹಲವು ದಿನಗಳಿಂದ ಆಸ್ಪತ್ರೆಯಲ್ಲಿರುವ ಡಿಎಂಕೆ ನೇತಾರ ಎಂ. ಕರುಣಾನಿಧಿ (94) ಅವರ ದೇಹಸ್ಥಿತಿ ಸೋಮವಾರ ಪುನಃ ಚಿಂತಾಜನಕ ಹಂತಕ್ಕೆ ತಲುಪಿದೆ. ‘ಅವರ ದೇಹಾರೋಗ್ಯಕ್ಕೆ ಸಂಬಂಧಿಸಿದಂತೆ ಮುಂದಿನ 24 ತಾಸು ಮಹತ್ವದ್ದಾಗಿದೆ’ ಎಂದು ಚೆನ್ನೈನ ಕಾವೇರಿ ಆಸ್ಪತ್ರೆಯು ಸೋಮವಾರ ಸಂಜೆ ಹೇಳಿಕೆ ಬಿಡುಗಡೆ ಮಾಡಿದೆ.
ಈ ಹೇಳಿಕೆ ಬಿಡುಗಡೆಯಾದ ಬೆನ್ನಲ್ಲೇ ಕರುಣಾನಿಧಿ ಅವರ ಸಾವಿರಾರು ಅಭಿಮಾನಿಗಳು, ಕಾವೇರಿ ಆಸ್ಪತ್ರೆಯ ಮುಂದೆ ಜಮಾಯಿಸಿದ್ದು, ಕಣ್ಣೀರಿಡುತ್ತಾ, ತಮ್ಮ ನಾಯಕನ ಆರೋಗ್ಯ ಚೇತರಿಕೆಗಾಗಿ ಹಾರೈಸುತ್ತಾ ಕುಳಿತಿದ್ದಾರೆ. ಜೊತೆಗೆ ಕರುಣಾ ಆರೋಗ್ಯ ಹದಗೆಟ್ಟಿದೆ ಎಂಬ ಸುದ್ದಿಗಳ ಬೆನ್ನಲ್ಲೇ ಚೆನ್ನೈನಲ್ಲಿ ಅಂಗಡಿ ಮುಂಗಟ್ಟುಗಳು ಸಂಜೆ ವೇಳೆಗೆ ಮುಚ್ಚಲ್ಪಟ್ಟಿವೆ.
ಇದು ಡಿಎಂಕೆ ನಾಯಕನ ಆರೋಗ್ಯದ ಕುರಿತು ಅಭಿಮಾನಿಗಳ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಚೆನ್ನೈ ಸೇರಿದಂತೆ ಡಿಎಂಕೆ ಪ್ರಾಬಲ್ಯ ಇರುವ ರಾಜ್ಯದ ಹಲವು ನಗರಗಳಲ್ಲಿ ಸೋಮವಾರ ಸಂಜೆ ವೇಳೆಗೆ ಅಘೋಷಿತ ಬಂದ್ ರೀತಿಯ ವಾತಾವರಣ ನಿರ್ಮಾಣವಾಗಿದೆ. ಚೆನ್ನೈ ಸೇರಿದಂತೆ ಹಲವು ನಗರಗಳಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.
ಕರುಣಾನಿಧಿ ಅವರ ಆರೋಗ್ಯ ಉಲ್ಬಣಿಸಿದೆ ಎಂದು ಸೋಮವಾರ ಬೆಳಗ್ಗಿನಿಂದಲೇ ಸುದ್ದಿಯಾಗಿತ್ತು. ಇದರ ನಡುವೆ, ಅವರ ಪುತ್ರರಾದ ಎಂ.ಕೆ. ಸ್ಟಾಲಿನ್, ಎಂ.ಕೆ. ಅಳಗಿರಿ ಪುತ್ರಿ ಕನಿಮೋಳಿ ಸೇರಿದಂತೆ ಕುಟುಂಬದ ಸದಸ್ಯರನ್ನೆಲ್ಲ ಆಸ್ಪತ್ರೆಯವರು ಬರಹೇಳಿದ್ದು ಇದಕ್ಕೆ ಪುಷ್ಟಿ ನೀಡಿತು. ಇನ್ನು ಕರುಣಾನಿಧಿ ಆಸ್ಪತ್ರೆಗೆ ಸೇರಿಸಿದ ಬಳಿಕ ಮೊದಲ ಬಾರಿಗೆ ಅವರ ಪತ್ನಿ ದಯಾಳು ಅಮ್ಮಾಳ್ ಕೂಡಾ ಆಸ್ಪತ್ರೆಗೆ ಆಗಮಿಸಿದರು.
ಇದರ ಬೆನ್ನಲ್ಲೇ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಕಾವೇರಿ ಆಸ್ಪತ್ರೆ, ‘ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಂದ ಕರುಣಾನಿಧಿ ಅವರ ಪ್ರಮುಖ ಅಂಗಾಂಗಗಳ ಕಾರ್ಯನಿರ್ವಹಣೆ ಒಂದು ಸವಾಲಾಗಿದೆ. ಅವರ ದೇಹದ ಅಂಗಾಂಗಗಳು ಮುಂದಿನ 24 ಗಂಟೆಯಲ್ಲಿ ಯಾವ ರೀತಿ ಚಿಕಿತ್ಸೆಗೆ ಸ್ಪಂದಿಸುತ್ತವೆ ಎಂಬುದರ ಮೇರೆಗೆ ಮುಂದಿನದು ತೀರ್ಮಾನವಾಗಲಿದೆ’ ಎಂದಿದೆ.
ರಕ್ತದೊತ್ತಡ ಕುಸಿದ ಹಿನ್ನೆಲೆಯಲ್ಲಿ ಜುಲೈ 28 ರಂದು ಕರುಣಾನಿಧಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ಕರುಣಾ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ಜುಲೈ 31 ರಂದು ಹೇಳಿಕೆ ಬಿಡುಗಡೆ ಮಾಡಿದ್ದ ಕಾವೇರಿ ಆಸ್ಪತ್ರೆಯ ವೈದ್ಯರು, ಡಿಎಂಕೆ ಮುಖ್ಯಸ್ಥ ಇನ್ನಷ್ಟು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡುವುದು ಅನಿವಾರ್ಯ ಎಂದು ಹೇಳಿದ್ದರು.
ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಆಸ್ಪತ್ರೆಗೆ ಭೇಟಿ ಕರುಣಾ ಆರೋಗ್ಯ ವಿಚಾರಿಸಿದ್ದರು.
