ಬುರ್ಖಾಗೆ ನಿಷೇಧ ಹೇರಿದ ದೇಶಗಳಿವು: ಹಿಜಾಬ್ ಬ್ಯಾನ್‌ಗೆ ನೀಡಿದ ಕಾರಣ ಏನು?
ಯುರೋಪಿನ ಹಲವು ದೇಶಗಳು ಬುರ್ಖಾ, ನಿಕಾಬ್ ಮತ್ತು ಹಿಜಾಬ್‌ಗಳನ್ನು ನಿಷೇಧಿಸಿವೆ. ಈ ನಿಷೇಧಕ್ಕೆ ಆ ದೇಶಗಳು ನೀಡಿದ ಕಾರಣ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಬುರ್ಕಾಗೆ ನಿಷೇಧ ಹೇರಿದ ದೇಶಗಳು
ಭಾರತದಲ್ಲಿ ಶಾಲಾ ಕಾಲೇಜುಗಳಲ್ಲಿ ಬುರ್ಖಾ ಬ್ಯಾನ್ ಮಾಡಬೇಕು ಎಂಬ ಕೂಗು ಇತ್ತೀಚಿನ ಕೆಲವರ್ಷಗಳಲ್ಲಿ ತೀವ್ರವಾಗಿ ಕೇಳಿ ಬಂದಿತ್ತು. ಹೀಗಿರುವಾಗ ಬುರ್ಕಾವನ್ನು ಸಂಪೂರ್ಣವಾಗಿ ಬ್ಯಾನ್ ಮಾಡಿರುವ ದೇಶಗಳ ಬಗ್ಗೆ ನೋಡೋಣ.
ಈ ದೇಶಗಳಲ್ಲಿ ಬುರ್ಕಾ ನಿಷೇಧ
ಆಸ್ಟ್ರಿಯಾ, ಬೆಲ್ಜಿಯಂ, ಬಲ್ಗೇರಿಯಾ, ಡೆನ್ಮಾರ್ಕ್, ಇಟಲಿ, ನೆದರ್‌ಲ್ಯಾಂಡ್ಸ್ ಮತ್ತು ಸ್ಪೇನ್ ಬುರ್ಖಾಗಳನ್ನು ನಿಷೇಧಿಸಿವೆ. ಜರ್ಮನಿ ಬುರ್ಖಾಗಳ ವಿಷಯದಲ್ಲಿ ಭಿನ್ನಾಭಿಪ್ರಾಯವನ್ನು ಹೊಂದಿದ್ದು, ಕೆಲವು ರಾಜ್ಯಗಳು ಶಾಲೆಗಳಲ್ಲಿ ಮಾತ್ರ ಅವುಗಳನ್ನು ನಿಷೇಧಿಸಿದೆ.
ಈ ದೇಶಗಳಲ್ಲಿ ಇಲ್ಲ ಬುರ್ಕಾ
ಯುರೋಪಿನ ಹಲವಾರು ದೇಶಗಳು ಮುಸ್ಲಿಂ ಮಹಿಳೆಯರು ಧರಿಸುವ ಸಾಂಪ್ರದಾಯಿಕ ಉಡುಪು ಬುರ್ಖಾ, ನಿಕಾಬ್, ಹಿಜಾಬ್ ಮೇಲೆ ಬಹುತೇಕ ನಿಷೇಧ ಜಾರಿಗೆ ತಂದಿವೆ. ಭದ್ರತೆಯ ಬಗ್ಗೆ ಕಳವಳ, ಸಾಮಾಜಿಕ ಐಕ್ಯತೆ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಈ ನಿಷೇಧವನ್ನು ಪ್ರಾಥಮಿಕವಾಗಿ ಜಾರಿಗೊಳಿಸಲಾಗಿದೆ. ಹೀಗಿರುವಾಗ ಈ ದೇಶಗಳು ಯಾವ ಕಾರಣಕ್ಕೆ ಬುರ್ಕಾಗೆ ನಿಷೇಧ ಹೇರಿದೆ ಎಂಬುದನ್ನು ನೋಡೋಣ.
ಸ್ವಿಟ್ಜರ್ಲೆಂಡ್
2025ರ ಜನವರಿಯಿಂದಲೇ ಸ್ವಿಟ್ಜರ್ಲೆಂಡ್ ಅಧಿಕೃತವಾಗಿ ಬುರ್ಖಾ, ಹಿಜಾಬ್ ಮತ್ತು ಇತರ ಮುಖ ಮುಚ್ಚುವ ಬಟ್ಟೆಗಳನ್ನು ಸಾರ್ವಜನಿಕವಾಗಿ ನಿಷೇಧಿಸಿತು. 2021 ರಲ್ಲಿ ಈ ಬಗ್ಗೆ ಸ್ವಿಟ್ಜರ್ಲೆಂಡ್ ಜನಾಭಿಪ್ರಾಯ ಸಂಗ್ರಹ ಮಾಡಿದಾಗ ಸ್ವಿಸ್ ಜನರು ಹಿಜಾಬ್ ಮತ್ತು ಬುರ್ಖಾಗಳನ್ನು ನಿಷೇಧಿಸುವುದಕ್ಕೆ ಸಮ್ಮತಿ ಸೂಚಿಸಿದರು. ಹೀಗಾಗಿ ಸೆಪ್ಟೆಂಬರ್ 2023 ರಲ್ಲಿ ಅಲ್ಲಿನ ಸಂಸತ್ತಿನ ಕೆಳಮನೆ ನಿಷೇಧವನ್ನು ಫೆಡರಲ್ ಕಾನೂನಾಗಿ ಜಾರಿಗೆ ತಂದಿತು ಮತ್ತು ಈ ಕಾನೂನನ್ನು ಉಲ್ಲಂಘಿಸಿದವರಿಗೆ 1,000 ಫ್ರಾಂಕ್‌ಗಳವರೆಗೆ (ಸುಮಾರು $1,100) ದಂಡ ವಿಧಿಸಿತು.
ಫ್ರಾನ್ಸ್
ಫ್ರಾನ್ಸ್ ಸರ್ಕಾರವು ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಕಟ್ಟಡಗಳಲ್ಲಿ ಧಾರ್ಮಿಕ ಚಿಹ್ನೆಗಳ ಪ್ರದರ್ಶನದ ಮೇಲೆ ಕಟ್ಟುನಿಟ್ಟಿನ ನಿಷೇಧವನ್ನು ಜಾರಿಗೆ ತಂದಿದೆ. ಈ ಧಾರ್ಮಿಕ ಚಿಹ್ನೆಗಳು ಜಾತ್ಯತೀತ ಕಾನೂನುಗಳನ್ನು ಉಲ್ಲಂಘಿಸುತ್ತವೆ ಎಂದು ಫ್ರಾನ್ಸ್ ಸರ್ಕಾರ ವಾದಿಸಿದೆ. ಹೀಗಾಗಿ ಫ್ರಾನ್ಸ್ 2011 ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮುಖ ಮುಚ್ಚುವ ಹಿಜಾಬ್, ನಿಕಾಬ್ ಮುಂತಾದ ಶಿರಸ್ತ್ರಾಣಗಳನ್ನು ಧರಿಸುವುದನ್ನು ನಿಷೇಧಿಸಿದೆ. ಇದರಲ್ಲಿ ದೇಹವನ್ನು ಕೂಡ ಸಂಪೂರ್ಣವಾಗಿ ಮೇಲಿಂದ ಕೆಳಗಿನವರೆಗೆ ಮುಚ್ಚುವ ಬುರ್ಖಾ ಕೂಡ ಸೇರಿದೆ.
ಆಸ್ಟ್ರಿಯಾ
ಈ ಯುರೋಪಿಯನ್ ರಾಷ್ಟ್ರವು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ದೇಶದಲ್ಲಿ ಏಕ ಸಂಸ್ಕೃತಿಯನ್ನು ಉತ್ತೇಜಿಸಲು ಬುರ್ಖಾವನ್ನು ನಿಷೇಧಿಸಿದೆ. ಪೂರ್ಣವಾಗಿ ಮುಖ ಮುಚ್ಚಿಕೊಳ್ಳುವುದು ಸಂವಹನ ಮತ್ತು ಸಾಮಾಜಿಕ ಒಗ್ಗಟ್ಟಿಗೆ ಅಡ್ಡಿಯಾಗುತ್ತದೆ ಎಂದು ಈ ಕಾನೂನು ಜಾರಿಗೆ ತರುವ ವೇಳೆ ಸರ್ಕಾರ ವಾದಿಸಿದೆ. ಸರ್ಕಾರವು ದೇಶದಲ್ಲಿ ಜಾತ್ಯತೀತತೆಯ ಮಹತ್ವವನ್ನು ಒತ್ತಿ ಹೇಳುತ್ತಾ? ಧಾರ್ಮಿಕ ಚಿಹ್ನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಬಲ್ಯ ಸಾಧಿಸುವುದನ್ನು ತಡೆಯುವ ಗುರಿಯನ್ನು ಈ ಕಾನೂನು ಹೊಂದಿದೆ ಎಂದಿದೆ. ಈ ನಿಷೇಧವು ಲಿಂಗ ಸಮಾನತೆಯನ್ನು ರಕ್ಷಿಸುವ ಮತ್ತು ಸಾಮಾಜಿಕ ಏಕೀಕರಣವನ್ನು ಉತ್ತೇಜಿಸುತ್ತದೆ ಎಂದು ಆಸ್ಟ್ರಿಯಾ ದೇಶ ಉಲ್ಲೇಖಿಸಿದೆ.
ಬೆಲ್ಜಿಯಂ :
ಬುರ್ಕಾದಿಂದ ಸಾರ್ವಜನಿಕ ಸುರಕ್ಷತೆ ಮತ್ತು ಸಾಮಾಜಿಕ ಏಕೀಕರಣಕ್ಕೆ ಆತಂಕ ಎದುರಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ ಬೆಲ್ಜಿಯಂ ದೇಶವು ಬುರ್ಖಾ ನಿಷೇಧವನ್ನು ಜಾರಿಗೆ ತಂದಿದೆ. ಸಾರ್ವಜನಿಕ ಸ್ಥಳದಲ್ಲಿ ಸಂವಹನವನ್ನು ಸುಗಮಗೊಳಿಸುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವ್ಯಕ್ತಿಗಳು ತಮ್ಮ ಗುರುತನ್ನು ಮರೆಮಾಚುವುದನ್ನು ತಡೆಯುವುದು ಕಾನೂನಿನ ಉದ್ದೇಶವಾಗಿದೆ. ಸಮಾಜದಲ್ಲಿ ಎಲ್ಲಾ ನಾಗರಿಕರ ಪೂರ್ಣ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಇಂತಹ ಕ್ರಮಗಳು ಅತ್ಯಗತ್ಯ ಎಂದು ಬೆಲ್ಜಿಯಂ ಅಧಿಕಾರಿಗಳು ಹೇಳಿದ್ದಾರೆ.
ಬಲ್ಗೇರಿಯಾ:
ಸಾಮಾಜಿಕ ಒಗ್ಗಟ್ಟು ಮತ್ತು ಸಾರ್ವಜನಿಕ ಸ್ಥಳದಲ್ಲಿ ಭದ್ರತೆಯನ್ನು ಉತ್ತೇಜಿಸುವ ಉದ್ದೇಶದೊಂದಿಗೆ, ದೇಶವು ಬುರ್ಖಾಗಳ ಮೇಲೆ ಭಾಗಶಃ ನಿಷೇಧ ಹೇರಿದೆ. ಪ್ರಾಥಮಿಕವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಇಲ್ಲಿ ಬುರ್ಕಾ ಧರಿಸುವಂತಿಲ್ಲ. ಒಂದು ಸಮುದಾಯದ ಮುಖ ಮುಚ್ಚಿಕೊಳ್ಳುವಿಕೆಯು ವಿಶಾಲವಾದ ಬಲ್ಗೇರಿಯನ್ ಸಮಾಜದಲ್ಲಿ ಐಕ್ಯತೆಗೆ ಅಡ್ಡಿಯಾಗುತ್ತದೆ ಎಂದು ಸರ್ಕಾರ ಹೇಳಿದೆ. ಈ ಕಾನೂನು ಧಾರ್ಮಿಕ ಗುರುತಿಗಿಂತ ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಸಂರಕ್ಷಿಸುವ ಮತ್ತು ರಾಷ್ಟ್ರೀಯ ಗುರುತಿನ ಪ್ರಜ್ಞೆಯನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿದೆ.
ಡೆನ್ಮಾರ್ಕ್
ಸಾರ್ವಜನಿಕ ಸುರಕ್ಷತೆಯನ್ನು ರಕ್ಷಿಸುವ ಮತ್ತು ಬಹುಸಂಸ್ಕೃತಿಯ ಸಮಾಜದೊಳಗೆ ಏಕತೆಯನ್ನು ಉತ್ತೇಜಿಸುವ ಅಗತ್ಯವನ್ನು ಮುಂದಿಟ್ಟುಕೊಂಡು ನಾರ್ಡಿಕ್ ದೇಶವಾದ ಈ ಡೆನ್ಮಾರ್ಕ್ ಬುರ್ಖಾಗಳ ಮೇಲೆ ನಿಷೇಧ ಹೇರಿದೆ. . ಭದ್ರತಾ ಕಾರಣಗಳಿಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡುವ ವ್ಯಕ್ತಿಗಳನ್ನು ಗುರುತಿಸುವಂತಾಗಬೇಕು ಎಂಬ ಉದ್ದೇಶ ಈ ಕಾನೂನಿನ ಹಿಂದಿದೆ.
ಇಟಲಿ
ದೇಶದಲ್ಲಿ ಏಕತೆಯನ್ನು ಉತ್ತೇಜಿಸಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಎತ್ತಿಹಿಡಿಯಲು ಇಟಲಿಯೂ ತನ್ನ ದೇಶದ ಕೆಲವು ಪ್ರದೇಶಗಳಲ್ಲಿ ಬುರ್ಖಾಗಳ ಮೇಲೆ ನಿಷೇಧ ಹೇರಿದೆ. ಮುಖ ಮುಚ್ಚಿಕೊಳ್ಳುವುದರಿಂದ ಸ್ಪಷ್ಟವಾದ ಸಂವಹನ ನಡೆಸಲಾಗುವುದಿಲ್ಲ. ಹಾಗೂ ಜನರ ಸಾಮಾಜಿಕ ಭಾಗವಹಿಸುವಿಕೆಗೆ ಇದು ಅಡ್ಡಿಪಡಿಸುತ್ತದೆ ಎಂದು ಸ್ಥಳೀಯ ಅಧಿಕಾರಿಗಳು ವಾದಿಸಿದ್ದಾರೆ.
ನೆದರ್ಲ್ಯಾಂಡ್ಸ್
ಭದ್ರತೆಗೆ ತೊಂದರೆ ಹಾಗೂ ಸಾಮಾಜಿಕ ಐಕ್ಯತೆಗೆ ಅಡ್ಡಿಯ ಕಾರಣ ಹೇಳಿ ಹಾಲೆಂಡ್ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾದಂತಹ ಮುಖ ಮುಚ್ಚುವ ಬಟ್ಟೆಗಳನ್ನು ನಿಷೇಧಿಸಿದೆ. ಈ ನಿಷೇಧದಿಂದ ನಾಗರಿಕರಲ್ಲಿ ಉತ್ತಮ ಸಂವಹನ ಮತ್ತು ಏಕತೆಯ ಭಾವನೆಯನ್ನು ಮೂಡುತ್ತದೆ ಎಂದು ಆಗಿನ ಸರ್ಕಾರ ಹೇಳಿತ್ತು.
ಸ್ಪೇನ್
ಲಿಂಗ ಸಮಾನತೆಗೆ ಬೆಂಬಲಿಸುವ ಉದ್ದೇಶ ಹಾಗೂ ಭದ್ರತೆ ಕಾರಣಕ್ಕೆ ಸ್ಪೇನ್‌ನ ಕ್ಯಾಟಲೋನಿಯಾದ ಕೆಲವು ಭಾಗಗಳಲ್ಲಿ ಬುರ್ಖಾಗೆ ನಿಷೇಧ ಹೇರಲಾಗಿದೆ. ಇಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ಮುಖ ಮುಚ್ಚಿ ತಿರುಗಾಡುವುದಕ್ಕೆ ಸರ್ಕಾರ ನಿಷೇಧ ಹೇರಿದೆ.
ಜರ್ಮನಿ
ಪಶ್ಚಿಮ ಯುರೋಪಿಯನ್ ದೇಶವಾದ ಜರ್ಮನಿಯು ಬುರ್ಖಾ ಮತ್ತು ಹಿಜಾಬ್‌ಗಳನ್ನು ದೇಶದ ಕೆಲವು ರಾಜ್ಯಗಳಲ್ಲಿ ನಿಷೇಧಿಸಿದೆ. ದೇಶದ ಕೆಲವು ರಾಜ್ಯಗಳು ಭದ್ರತೆ ಮತ್ತು ಸಂವಹನವನ್ನು ಹೆಚ್ಚಿಸಲು ಶಾಲೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಭಾಗಶಃ ಬುರ್ಕಾ ನಿಷೇಧಗಳನ್ನು ಜಾರಿಗೆ ತಂದಿವೆ. ಕೆಲವು ಪ್ರದೇಶಗಳು ಐಕ್ಯತೆ ಮತ್ತು ಸಾಮಾಜಿಕ ಒಗ್ಗಟ್ಟಿಗೆ ಅಂತಹ ನಿಷೇಧಗಳು ಅಗತ್ಯವೆಂದು ಹೇಳಿವೆ.