ಹಮಾಸ್ ವಿರುದ್ಧ ಯುದ್ಧದಲ್ಲಿ ಭಾಗಿಯಾದ ಇಸ್ರೇಲ್ ಮಾಜಿ ಪ್ರಧಾನಿ: ಸೈನಿಕರ ಜತೆ ಯುದ್ಧಭೂಮಿಗಿಳಿದ ರಾಜಕಾರಣಿ!
ಸೈನಿಕರ ಜತೆ ಇಸ್ರೇಲ್ ಮಾಜಿ ಪ್ರಧಾನಿಯೊಬ್ಬರು ಸೇರಿಕೊಂಡಿದ್ದು, ಪ್ಯಾಲೆಸ್ತೀನ್ ಮೇಲಿನ ಯುದ್ಧದಲ್ಲಿ ಹೋರಾಡೋದಾಗಿ ಪಣ ತೊಟ್ಟಿದ್ದಾರೆ.
ಹಮಾಸ್ ಉಗ್ರರ ದಾಳಿಗೆ ಪ್ರತಿಯಾಗಿ ಇಸ್ರೇಲ್ ಹಮಾಸ್ ಮೇಲೆ ಯುದ್ಧವನ್ನೇ ಸಾರಿದೆ. ಇಸ್ರೇಲ್ ಸೈನಿಕರು ಯುದ್ಧಭೂಮಿಗೆ ಇಳಿದಿದ್ದು, ಉಗ್ರರನ್ನು ಹಾಗೂ ಅವರ ಅಡಗುತಾಣಗಳನ್ನು ನಾಶ ಮಾಡ್ತಿದೆ. ಆದರೆ, ಸೈನಿಕರ ಜತೆ ಇಸ್ರೇಲ್ ಮಾಜಿ ಪ್ರಧಾನಿಯೊಬ್ಬರು ಸೇರಿಕೊಂಡಿದ್ದು, ಯುದ್ಧದಲ್ಲಿ ಹೋರಾಡೋದಾಗಿ ಪಣ ತೊಟ್ಟಿದ್ದಾರೆ.
ಹಮಾಸ್‌ನೊಂದಿಗಿನ ದೇಶದ ಯುದ್ಧವು ಉಲ್ಬಣಗೊಂಡಿದ್ದು, ಇಸ್ರೇಲ್‌ನ ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್ ಯುದ್ಧಭೂಮಿಯಲ್ಲಿ ಸೈನಿಕರನ್ನು ಸೇರಿಕೊಂಡರು, ಎರಡೂ ಕಡೆಗಳಲ್ಲಿ ಕನಿಷ್ಠ 1,200 ಜನರು ಮೃತಪಟ್ಟಿದ್ದಾರೆ. ನಫ್ತಾಲಿ ಬೆನೆಟ್ ಅವರು ಮೀಸಲು ಕರ್ತವ್ಯಕ್ಕೆ ಆಗಮಿಸಿದಾಗ ಇಸ್ರೇಲಿ ಸೈನಿಕರೊಂದಿಗೆ ಹಸ್ತಲಾಘವ ಮಾಡುತ್ತಿರುವುದು ಕಂಡುಬಂದಿದೆ.
ಶನಿವಾರ ಪ್ಯಾಲೆಸ್ತೀನ್ ಗುಂಪು ನಡೆಸಿದ ಹಠಾತ್ ದಾಳಿಯ ನಂತರ ಇಸ್ರೇಲ್ ಹಮಾಸ್ ವಿರುದ್ಧ ಬೃಹತ್ ಪ್ರತಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ದಕ್ಷಿಣದ ಪಟ್ಟಣಗಳಲ್ಲಿ ನೆಲೆಗೊಂಡಿರೋ ಹಮಾಸ್‌ನೊಂದಿಗೆ ಇಸ್ರೇಲ್ ಹೋರಾಡುತ್ತಿದ್ದು, ಪ್ಯಾಲೆಸ್ತೀನ್ ಗುಂಪನ್ನು ಸೋಲಿಸಲು ಪ್ರತಿಜ್ಞೆ ಮಾಡಿದೆ. ಅಲ್ಲದೆ, ಗಾಜಾ ಪಟ್ಟಿಯ ಬಳಿ ಹತ್ತು ಸಾವಿರ ಸೈನಿಕರನ್ನು ಒಟ್ಟುಗೂಡಿಸಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಎಲ್ಲಾ ಹಮಾಸ್ ತಾಣಗಳಿಂದ ದೂರ ಹೋಗುವಂತೆ ಗಾಜಾ ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಅದನ್ನು "ಅವಶೇಷಗಳಾಗಿ" ಪರಿವರ್ತಿಸಲಾಗುವುದು ಎಂದೂ ಅವರು ಹೇಳಿದ್ದಾರೆ. 1973 ರ ಬಳಿಕ ಅಂದರೆ 5 ದಶಕಗಳ ಬಳಿಕ ಮೊದಲ ಬಾರಿಗೆ ಭಾರಿ ಪ್ರಮಾಣದ ಬೃಹತ್ ಕಾರ್ಯಾಚರಣೆ ಇದಾಗಿದೆ. ಹಮಾಸ್ ಸಾವಿರಾರು ರಾಕೆಟ್‌ಗಳಿಂದ ದಾಳಿ ಮಾಡಿದ್ದು, ಬಳಿಕ ಆಕ್ರಮಣ ನಡೆಸಿದ್ದು, ಯುದ್ಧಕ್ಕೆ ಕಾರಣವಾಗಿದೆ.
ಹಮಾಸ್ ಗುಂಪು ತನ್ನ ದಾಳಿಯನ್ನು "ಆಪರೇಷನ್ ಅಲ್-ಅಕ್ಸಾ ಪ್ರವಾಹ" ಎಂದು ಹೆಸರಿಸಿದ್ದು, "ಪಶ್ಚಿಮ ದಂಡೆಯಲ್ಲಿನ ಪ್ರತಿರೋಧ ಹೋರಾಟಗಾರರು" ಮತ್ತು "ಅರಬ್ ಹಾಗೂ ಇಸ್ಲಾಮಿಕ್ ರಾಷ್ಟ್ರಗಳು" ಕಾರ್ಯಾಚರಣೆಯಲ್ಲಿ ಭಾಗಿಯಾಗಲು ಕರೆ ನೀಡಿತ್ತು. ಅಲ್ಲದೆ, ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಗುಂಪು "ಮಹಾನ್ ವಿಜಯದ ಅಂಚಿನಲ್ಲಿದ್ದೇವೆ" ಎಂದೂ ಹೇಳಿಕೊಂಡಿದ್ರು.
ಇನ್ನೊಂದೆಡೆ, ಇಸ್ರೇಲ್‌ನ ಕೆಲ ಮಿತ್ರರಾಷ್ಟ್ರಗಳು ಬೆಂಬಲ ನೀಡುವ ವಾಗ್ದಾನವನ್ನೂ ನೀಡಿದ್ದವು. ಈ ಪೈಕಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸಹ ಹಮಾಸ್‌ನಿಂದ "ಅಭೂತಪೂರ್ವ ಭಯೋತ್ಪಾದಕ ದಾಳಿ" ಎಂದು ಟೀಕೆ ಮಾಡಿದ್ದಾರೆ. ಅಲ್ಲದೆ, ತಮ್ಮ ದೇಶದವರನ್ನೂ ಹಮಾಸ್ ಹತ್ಯೆ ಮಾಡಿದೆ ಎಂದು ಅಮೆರಿಕ ಯುದ್ಧನೌಕೆಗಳನ್ನೇ ಕಳಿಸಿದೆ.
ವಾಷಿಂಗ್ಟನ್ ಯುಎಸ್ಎಸ್ ಜೆರಾಲ್ಡ್ ಆರ್ ಫೋರ್ಡ್ ವಿಮಾನವಾಹಕ ನೌಕೆ ಮತ್ತು ಯುದ್ಧನೌಕೆಗಳ ಬ್ಯಾಚ್ ಅನ್ನು ಪೂರ್ವ ಮೆಡಿಟರೇನಿಯನ್‌ಗೆ ಕಳುಹಿಸಿದೆ. ಹಾಗೂ, ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಇನ್ನೂ ಹೆಚ್ಚಿನ ಉಪಕರಣಗಳು ಮತ್ತು ಸಂಪನ್ಮೂಲಗಳು ಹೋಗಲಿದೆ ಎಂದೂ ಹೇಳಿದ್ದಾರೆ.