- Home
- News
- World News
- ಇರಾನ್‌ನ 90 ಸ್ಥಳಗಳ ಮೇಲೆ ಯುಎಸ್ ದಾಳಿ, ಭಾರತದ ನೆರವಿನಲ್ಲಿ ನಿರ್ಮಿಸಿದ ಚಾಬಹಾರ್ ಬಂದರು ಮೇಲೂ ಅಮೆರಿಕದ ದಾಳಿ!
ಇರಾನ್‌ನ 90 ಸ್ಥಳಗಳ ಮೇಲೆ ಯುಎಸ್ ದಾಳಿ, ಭಾರತದ ನೆರವಿನಲ್ಲಿ ನಿರ್ಮಿಸಿದ ಚಾಬಹಾರ್ ಬಂದರು ಮೇಲೂ ಅಮೆರಿಕದ ದಾಳಿ!
ಅಮೆರಿಕ ಸತತ ಎರಡನೇ ದಿನವೂ ಇರಾನ್‌ನ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ, ಇರಾನ್ ಕೂಡಾ ಕುವೈತ್, ಬಹ್ರೈನ್ ಸೇರಿದಂತೆ ಟ್ರಂಪ್ ಮಿತ್ರದೇಶಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಪ್ರತಿದಾಳಿ ನಡೆಸಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಟ್ರಂಪ್ ಮಿತ್ರದೇಶಕ್ಕೆ ಇರಾನ್ ಪ್ರತಿದಾಳಿ
ದುಬೈ: ಸತತ 2ನೇ ದಿನವೂ ಅಮೆರಿಕ ಮತ್ತು ಇರಾನ್ ನಡುವೆ ಭೀಕರ ಯುದ್ಧ ನಡೆದಿದ್ದು, ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಉಲ್ಬಣವಾಗುವಂತೆ ಮಾಡಿದೆ. ಉಭಯ ದೇಶಗಳ ನಡುವಿನ ದಾಳಿಯ ತೀವ್ರತೆಯು ಶಾಂತಿ ಸ್ಥಾಪನೆಗಾಗಿ ನಡೆಯುತ್ತಿರುವ ಸಂಧಾನ ಮಾತುಕತೆಯನ್ನೇ ವಿಫಲಗೊಳಿಸುವ ಆತಂಕವನ್ನೂ ಹುಟ್ಟುಹಾಕಿದೆ.
ನಿಲ್ಲದ ಅಮೆರಿಕದ ದಾಳಿ
ಬುಧವಾರ ಇರಾನ್‌ನ 80ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ಮಾಡಿದ್ದ ಅಮೆರಿಕ ಸೇನೆ, ಅಧ್ಯಕ್ಷ ಟ್ರಂಪ್ ಎಚ್ಚರಿಕೆ ನೀಡಿದಂತೆ ಗುರುವಾರ ಇರಾನ್‌ನ 90ಕ್ಕೂ ಹೆಚ್ಚು ಆಯಕಟ್ಟಿನ ಪ್ರದೇಶಗಳ ಮೇಲೆ ಭೀಕರ ದಾಳಿ ನಡೆಸಿದೆ. ಇರಾನ್‌ನ ತೈಲ ಘಟಕ, ವಿಮಾನ ನಿಲ್ದಾಣದ ರನ್‌ವೇಗಳು, ಕ್ಷಿಪಣಿ ಲಾಂಚರ್‌ಗಳು, ಸೇತುವೆ, ರೈಲ್ವೆ ಸೇತುವೆಗಳ ಮೇಲೆ ದಾಳಿ ನಡೆಸಲಾಗಿದೆ.
ಚಾಬಹಾರ್ ಬಂದರೂ ಅಮೆರಿಕದ ದಾಳಿಗೆ ಗುರಿ
ಜೊತೆಗೆ ಬುಷೇರ್‌ನಲ್ಲಿರುವ ಇರಾನ್‌ನ ಏಕೈಕ ಪರಮಾಣು ವಿದ್ಯುತ್ ಉತ್ಪಾದನಾ ಘಟಕದ ಸಮೀಪವೂ ದಾಳಿ ನಡೆಸಲಾಗಿದೆ. ಜೊತೆಗೆ ಗೊಲೆಸ್ಟಾನ್ ಪ್ರಾಂತ್ಯದಲ್ಲಿ ಅಲಿ ಖಮೇನಿ ಅಂತ್ಯಸಂಸ್ಕಾರ ನಡೆಯುವ ಮಶಾದ್ ಪ್ರದೇಶಕ್ಕೆ ಸಾಗುವ ಮಾರ್ಗದಲ್ಲಿನ ಎರಡು ಸೇತುವೆಗಳು ಕೂಡಾ ದಾಳಿಗೆ ತುತ್ತಾಗಿವೆ ಎಂದು ಇರಾನ್ ಹೇಳಿದೆ. ಅಲ್ಲದೆ ಭಾರತದ ನೆರವಿನೊಂದಿಗೆ ನಿರ್ಮಿಸಲಾದ ಇರಾನ್ ಚಬಹಾರ್ ಬಂದರು ಕೂಡಾ ಅಮೆರಿಕದ ದಾಳಿಗೆ ತುತ್ತಾಗಿದೆ ಎನ್ನಲಾಗಿದೆ.
ಕ್ಷಿಪಣಿ ಲಾಂಚರ್ ಗುರಿಯಾಗಿಸಿ ದಾಳಿ
ಈ ನಡುವೆ ಹೋರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮುಕ್ತ ಸಂಚಾರಕ್ಕೆ ಅಡ್ಡಿ ಮಾಡುವ ಇರಾನ್‌ನ ಶಕ್ತಿಯನ್ನು ಕುಂದಿಸುವ ಸಲುವಾಗಿ ಈ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಹೇಳಿದೆ. ಜೊತೆಗೆ ಹೋರ್ಮುಜ್‌ನಲ್ಲಿ ಇರಾನ್ ಮತ್ತೆ ದಾಳಿ ನಡೆಸಿದರೆ ಈಗ ನಡೆಸಿದ್ದಕ್ಕಿಂತ 20 ಪಟ್ಟು ಹೆಚ್ಚು ತೀವ್ರತೆಯ ದಾಳಿ ನಡೆಸುವುದಾಗಿ ಅಧ್ಯಕ್ಷ ಟ್ರಂಪ್ ಎಚ್ಚರಿಸಿದ್ದಾರೆ. ಅಲ್ಲದೆ ಇರಾನ್‌ನ ವಿದ್ಯುತ್ ಪ್ರಸರಣಾ ಜಾಲ ಮತ್ತು ನೀರು ಶುದ್ಧೀಕರಣ ಘಟಕದ ಮೇಲೆ ದಾಳಿ, ಖಾರ್ಗ್ ದ್ವೀಪ ವಶಪಡಿಸಿಕೊಳುವ ಬೆದರಿಕೆಯನ್ನು ಪುನರುಚ್ಚಾರ ಮಾಡಿದ್ದಾರೆ. ಎರಡು ದಿನಗಳಲ್ಲಿ ಅಮೆರಿಕ ನಡೆಸಿದ ದಾಳಿಗೆ 14 ಜನರು ಬಲಿಯಾಗಿದ್ದು, 78 ಜನರು ಗಾಯಗೊಂಡಿದ್ದಾರೆ ಎಂದು ಇರಾನ್‌ನ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಭಿನ್ನಾಭಿಪ್ರಾಯ ಪ್ರತಿದಾಳಿ
ಭಿನ್ನಾಭಿಪ್ರಾಯ: ಈ ನಡುವೆ ಹೊಸ ದಾಳಿಯು ಇರಾನ್ ನಾಯಕತ್ವದಲ್ಲೇ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಕಟ್ಟರ್ ಮುಸ್ಲಿಂ ವಾದಿಗಳ ಬಣ ಹೋರ್ಮಜ್ ಮೇಲಿನ ಪಟ್ಟು ಮುಂದುವರೆಸುವ ಹಠ ಹಿಡಿದಿದ್ದರೆ ಮತ್ತೊಂದು ಬಣ ಖಾಯಂ ಶಾಂತಿಗೆ ಮುಂದಾಗುವ ಮೂಲಕ ಅಂತಾರಾಷ್ಟ್ರೀಯ ನಿರ್ಬಂಧ ತೆರವಿನತ್ತ ಹೆಜ್ಜೆ ಹಾಕಲು ಒಲವು ವ್ಯಕ್ತಪಡಿಸಿದೆ.
ಪ್ರತಿದಾಳಿ: ಕುವೈತ್, ಬಹ್ರೈನ್, ಕತಾರ್ ಮತ್ತು ಜೋರ್ಡಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಆತ್ಮಾಹುತಿ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

