ಸೌದಿ ಅರೇಬಿಯಾ ಭಾರತೀಯರಿಗೆ ಪ್ರಯಾಣ ನಿರ್ಬಂಧ ವಿಧಿಸಿದೆಯೇ? ಇಲ್ಲಿದೆ ನೋಡಿ ಅಸಲಿ ಸತ್ಯ
ಸೌದಿ ಅರೇಬಿಯಾ 14 ದೇಶಗಳಿಗೆ ವೀಸಾ ನೀಡುವುದನ್ನು ಸ್ಥಗಿತಗೊಳಿಸಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಸುದ್ದಿ ಸತ್ಯವೇ? ಸುಳ್ಳಾ ಎಂಬುದನ್ನು ನೋಡೋಣ ಬನ್ನಿ.

ಮಧ್ಯಪ್ರಾಚ್ಯದ ದೇಶವಾದ ಸೌದಿ ಅರೇಬಿಯಾ ಭಾರತ, ಇಂಡೋನೇಷ್ಯಾ, ಬಾಂಗ್ಲಾದೇಶ, ಈಜಿಪ್ಟ್, ಇರಾಕ್, ಜೋರ್ಡಾನ್, ಮೊರಾಕೊ, ನೈಜೀರಿಯಾ, ಇಥಿಯೋಪಿಯಾ, ಸುಡಾನ್, ಟುನೀಶಿಯಾ, ಅಲ್ಜೀರಿಯಾ, ಪಾಕಿಸ್ತಾನ, ಯೆಮೆನ್ ಸೇರಿದಂತೆ 14 ದೇಶಗಳಿಗೆ ವೀಸಾ ನೀಡುವುದನ್ನು ಸ್ಥಗಿತಗೊಳಿಸಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಲಕ್ಷಾಂತರ ಭಾರತೀಯರು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ, ಈ ಸುದ್ದಿ ಆತಂಕಕ್ಕೆ ಕಾರಣವಾಗಿತ್ತು.
ಭಾರತೀಯರಿಗೆ ಸೌದಿ ಅರೇಬಿಯಾ ಪ್ರಯಾಣ ನಿಷೇಧವೇ?
ಭಾರತೀಯರಿಗೆ ಸೌದಿ ಅರೇಬಿಯಾಕ್ಕೆ ಪ್ರಯಾಣ ನಿಷೇಧ ವಿಧಿಸಲಾಗಿದೆ ಎಂಬ ಸುದ್ದಿ ಸುಳ್ಳು. ಈ ಬಗ್ಗೆ ಸೌದಿ ಸರ್ಕಾರ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ ಎಂದು ಮೂಲಗಳು ಖಚಿತಪಡಿಸಿವೆ. ಹಜ್ ಯಾತ್ರಾರ್ಥಿಗಳನ್ನು ನಿಯಂತ್ರಿಸಲು ಮತ್ತು ನೂಕುನುಗ್ಗಲು ತಪ್ಪಿಸಲು ಅಲ್ಪಾವಧಿ ವೀಸಾಗಳ ಮೇಲೆ ತಾತ್ಕಾಲಿಕ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದು ಹಜ್ ಸಮಯದಲ್ಲಿ ಜಾರಿಗೊಳಿಸುವ ಸಾಮಾನ್ಯ ಕ್ರಮ ಎಂದು ಹೇಳಲಾಗಿದೆ.
ಸೌದಿ ಅರೇಬಿಯಾಕ್ಕೆ ಹಜ್ ಯಾತ್ರೆ
ಅನಗತ್ಯ ಪ್ರಯಾಣಗಳನ್ನು ನಿರ್ಬಂಧಿಸುವುದು, ಪವಿತ್ರ ಸ್ಥಳಗಳಿಗೆ ಅನಧಿಕೃತ ಪ್ರವೇಶಕ್ಕೆ ದಂಡ ವಿಧಿಸುವುದು ಮತ್ತು ನೋಂದಾಯಿತ ಯಾತ್ರಾರ್ಥಿಗಳನ್ನು ನಿರ್ವಹಿಸುವಲ್ಲಿ ಸಂಪನ್ಮೂಲಗಳನ್ನು ಕೇಂದ್ರೀಕರಿಸುವುದು ಇದರ ಉದ್ದೇಶ ಎಂದು ಹೇಳಲಾಗಿದೆ. ಪ್ರತಿ ವರ್ಷ ವಿವಿಧ ದೇಶಗಳಿಂದ ಲಕ್ಷಾಂತರ ಜನರು ಸೌದಿ ಅರೇಬಿಯಾಕ್ಕೆ ಹಜ್ ಯಾತ್ರೆ ಕೈಗೊಳ್ಳುತ್ತಾರೆ.
ಸೌದಿ ಅರೇಬಿಯಾ ಈ ವೀಸಾಗಳನ್ನು ಸ್ಥಗಿತಗೊಳಿಸಿದೆಯೇ?
ಪ್ರತಿ ದೇಶಕ್ಕೂ ನಿಗದಿತ ಸಂಖ್ಯೆಯ ವೀಸಾಗಳನ್ನು ಸೌದಿ ಅರೇಬಿಯಾ ನೀಡುತ್ತದೆ. ವೀಸಾ ನಿರ್ಬಂಧಗಳಿಲ್ಲದೆ ಹೆಚ್ಚಿನ ಜನರು ಹೋಗುವುದರಿಂದ ನೂಕುನುಗ್ಗಲು ಉಂಟಾಗಿ ಹಲವರು ಸಾವನ್ನಪ್ಪಿದ ಘಟನೆಗಳು ನಡೆದಿವೆ. ಇದನ್ನು ತಡೆಯುವ ಸಲುವಾಗಿ ಹಜ್ ಯಾತ್ರಾ ಸಮಯದಲ್ಲಿ ಮಾತ್ರ ವರ್ಕ್ ವೀಸಾ, ಉಮ್ರಾ, ಬಿಸಿನೆಸ್ ಮತ್ತು ಕುಟುಂಬ ವೀಸಾಗಳನ್ನು ಸೌದಿ ಅರೇಬಿಯಾ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.
ಸೌದಿ ಅರೇಬಿಯಾ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ
ವೀಸಾಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಬಗ್ಗೆ ಸೌದಿ ಅರೇಬಿಯಾ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಆದ್ದರಿಂದ, ಸರಿಯಾದ ವೀಸಾ ಹೊಂದಿರುವ ಭಾರತೀಯ ನಾಗರಿಕರು ಇನ್ನೂ ಪ್ರಯಾಣಿಸಬಹುದು. ಆದರೆ, ಪ್ರಯಾಣಕ್ಕೂ ಮುನ್ನ ಹತ್ತಿರದ ಸೌದಿ ರಾಯಭಾರ ಕಚೇರಿಯಲ್ಲಿ ಪ್ರವೇಶ ಅನುಮತಿಗಳನ್ನು ಪರಿಶೀಲಿಸಬೇಕು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.