ಪಾಕ್ ವಾಯುಸೇನೆಯಲ್ಲಿ ಮೊದಲ ಹಿಂದೂ ಪೈಲಟ್, 26ರ ಯುವಕನ ಕಮಾಲ್!
ಸೋಶಿಯಲ್ ಮೀಡಿಯಾದಲ್ಲಿ ಕಳೆದೆರಡು ದಿನಗಳಿಂದ ರಾಹುಲ್ ದೇವ್ ಎಂಬ ಹೆಸರು ಭಾರೀ ವೈರಲ್ ಆಗಿದೆ. ಈ 26 ವರ್ಷದ ಯುವಕ ನೆರೆ ರಾಷ್ಟ್ರ ಪಾಕಿಸ್ತಾನದ ವಾಯುಸೇನೆಯಲ್ಲಿ ಪೈಲಟ್ ಆಗಿ ನೇಮಕಗೊಂಡಿದ್ದಾನೆ. ಈ ಮೂಲಕ ಮುಸ್ಲಿಂ ರಾಷ್ಟ್ರ ಪಾಕಿಸ್ತಾನ ಏರ್‌ಫೋರ್ಸ್‌ನಲ್ಲಿ ಪೈಲಟ್ ಆದ ಮೊದಲ ಹಿಂದೂ ಯುವಕ ಎನಿಸಿಕೊಂಡಿದ್ದಾನೆ. ಇದಕ್ಕೂ ಮುನ್ನ ವಾಯುಸೇನೆಯಲ್ಲಿದ್ದ ಎಲ್ಲಾ ಪೈಲಟ್‌ಗಳು ಮುಸ್ಲಿಂ ಸಮುದಾಯದವರಾಗಿದ್ದರು. ಸದ್ಯ ಎಲ್ಲರಿಗೂ ರಾಹುಲ್ ಕುರಿತಾಗಿ ತಿಳಿದುಕೊಳ್ಳುವ ಕುತೂಹಲ, ಪಾಕಿಸ್ತಾನ ವಾಯುಸೇನೆಯಲ್ಲಿ ನೇಮಕಗಂಡಿದ್ದಾನೆಂದರೆ ಈತ ಅಸಾಮಾನ್ಯ ಪ್ರತಿಭೆ ಎಂಬುವುದು ಎಲ್ಲರ ಮಾತಾಗಿದೆ.
ಭಾರತ ಹಾಗೂ ಪಾಕಿಸ್ತಾನ ಎಂದು ವಿಭಜನೆಗೊಂಡ ಬಳಿಕ ಇತಿಹಾಸದಲ್ಲಿ ಮೊದಲ ಬಾರಿ ಪಾಕಿಸ್ತಾನದಲ್ಲಿ ಓರ್ವ ಹಿಂದೂ ನಾಗರಿಕ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ. ಇದೇ ಕಾರಣದಿಂದ 26 ವರ್ಷದ ರಾಹುಲ್ ದೇವ್ ಚರ್ಚೆಯಲ್ಲಿದ್ದಾರೆ. ರಾಹುಲ್ ಪಾಕಿಸ್ತಾನ ವಾಯುಸೆನೆಯಯಲ್ಲಿ ಜನರಲ್ ಡೆಪ್ಯೂಟಿ ಪೈಲಟ್ ಅಧಿಕಾರಿ ಹುದ್ದೆ ಅಲಂಕರಿಸಲಿದ್ದಾರೆ. ಇನ್ನು ಇವರು ಸಿಂಧ್ ಪ್ರಾಂತ್ಯದ ಥಾರಪರ್ಕರ್ ಜಿಲ್ಲೆ ನಿವಾಸಿಯಾಗಿದ್ದಾರೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ನಾಗರಿಕರಿದ್ದಾರೆ. ಈ ಜಿಲ್ಲೆಯ ನಿವಾಸಿಗರು ಆರ್ಥಿಕವಾಗಿಯೂ ಬಹಳ ದುರ್ಬಲರಾಗಿದ್ದಾರೆ.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಭಾರೀ ಸದ್ದು ಮಾಡುತ್ತಿರುವ ಈ ದಿನಗಳಲ್ಲಿ, ರಾಹುಲ್ ಇಲ್ಲಿನ ವಾಯುಸೇನೆಗೆ ನೆಮಕಗೊಂಡಿರುವುದು ಸಣ್ಣ ವಿಚಾರವಲ್ಲ. ರಾಹುಲ್ ದೇವ್‌ರನ್ನು ರಿಸಾಲ್‌ಪುರ್‌ನಲ್ಲಿರುವ ಪಾಕಿಸ್ತಾನ ವಾಯುಪಡೆ ಅಕಾಡೆಮಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಕಮೀಷನ್ಡ್ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ವಾಯುಸೇನೆಯ ಚೀಫ್ ಮಾರ್ಷಲ್ ಮುಜಾಹಿದ್ ಅನ್ವರ್ ಖಾನ್ ಕೂಡಾ ಭಾಗಿಯಾಗಿದ್ದರು.
(ಸಾಂದರ್ಭಿಕ ಚಿತ್ರ)
ರಾಹುಲ್ ದೇವ್ ಪೈಲಟ್ ಆದ ಸುದ್ದಿ ಎಲ್ಲಕ್ಕಿಂತ ಮೊದಲು ಪ್ರಿನ್ಸಿಪಲ್ ಸ್ಟಾಫ್ ಆಫೀಸರ್ ರಫೀಕ್ ಅಹಮದ್ ಖೋಕರ್ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದರು. ಇವರು ತಮ್ಮ ಟ್ವಿಟರ್ ಖಾತೆಯಲ್ಲಿ ರಾಹುಲ್‌ಗೆ ಶುಭಾಶಯ ಕೋರಿದ್ದರು.
ಈ ಹಂತಕ್ಕೇರಲು ರಾಹುಲ್ ಬಹಳಷ್ಟು ಸಂಘರ್ಷ ನಡೆಸಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಹಾಗೂ ಶಿಕ್ಷಣದಂತಹ ಸೌಲಭ್ಯ ಸಿಗುವುದು ಬಹಳ ಕಷ್ಟಕರವಾದ ವಾತಾವರಣದಲ್ಲಿದ್ದ ರಾಹುಲ್ ಪಾಕಿಸ್ತಾನದ ವಾಯುಸೇನೆಗೆ ನೇಮಕಗೊಂಡಿರುವುದು ಎಲ್ಲರಿಗೂ ಪ್ರೇರಣೆ ನೀಡುವಂತಹದ್ದು.
(ಸಾಂದರ್ಭಿಕ ಚಿತ್ರ)
ರಾಹುಲ್ ಪಾಕಿಸ್ತಾನದ ವಾಯುಸೇನೆಯಲ್ಲಿ ನೇಮಕಗೊಂಡ ಬಳಿಕ ನೆರೆ ರಾಷ್ಟ್ರದಲ್ಲಿ ಒಂದು ಬಗೆಯ ಭರವಸೆಯ ಬೆಳಕು ಹುಟ್ಟಿಕೊಂಡಿದೆ.
(ಸಾಂದರ್ಭಿಕ ಚಿತ್ರ)
ಆಲ್ ಪಾಕಿಸ್ತಾನ್ ಹಿಂದೂ ಪಂಚಾಯತ್‌ನ ಅಚಿವ ರವಿ ದವಾನಿಯವರೂ ರಾಹುಲ್ ನೇಮಕಾತಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು ಅಲದ್ಪಸಂಖ್ಯಾತ ಸಮಾಜದ ಅನೇಕ ಮಂದಿ ಸಿವಿಲ್ ಸರ್ವಿಸ್ ಸೇರಿದಂತೆ ಸೇನೆಯ ಇತರ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶೇಷವಾಗಿ ದೇಶದ ಅನೇಕ ಪ್ರಸಿದ್ಧ ವೈದ್ಯರು ಹಿಂದೂಗಳೇ ಆಗಿದ್ದಾರೆ. ಒಂದು ವೇಳೆ ಸರ್ಕಾರ ಅಲ್ಪಸಂಖ್ಯಾತರ ಮೇಲೆ ಗಮನಹರಿಸಿದರೆ ಮುಂದಿನ ದಿನಗಳಲ್ಲಿ ಇಂತಹ ಅನೆಕ ರಾಹುಲ್ ದೇವ್ ದೇಶದ ಸೇವೆ ಮಾಡಲು ತಯಾರಾಗುತ್ತಾರೆ ಎಂದಿದ್ದಾರೆ.
(ಸಾಂದರ್ಭಿಕ ಚಿತ್ರ)
ಸೋಶಿಯಲ್ ಮೀಡಿಯಾದಲ್ಲೂ ರಾಹುಲ್ ದೇವ್‌ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಅವರ ಪ್ರಯತ್ನ ಹಾಗೂ ಛಲಕ್ಕೆ ಸಲಾಂ ಎಂದಿದ್ದಾರೆ.